

ಆದರೆ ದಿವಾಕರರ ವಕೀಲರಾದ ತಾರ್ಖುಂಡೆಯವರು ಮಾತ್ರ ಹಾಜರಿದ್ದರು. ಸ್ವಲ್ಪ ಹೊತ್ತಿನ ನಂತರ ನಮ್ಮ ವಕೀಲರ ಸಹಾಯಕರಾದ ಕು.ನಂದಿನಿ (ಅವರೂ ವಕೀಲರೂ) ಬಂದರು. ಆಗ ನ್ಯಾ. ಮುಖರ್ಜಿಯವರು ತಾರ್ಖುಂಡೆಯವರ ಕಡೆಗೆ ತಿರುಗಿ 'ನಿಮ್ಮ ಕಕ್ಷಿದಾರನ ವರ್ತನೆ ಅತ್ಯಂತ ಹೀನಾಯವಾಗಿದೆ. ಮದುವೆಯಾಗಿ ಐವತ್ತು ವರ್ಷ ಸಂಸಾರ ಮಾಡಿ, ಮಕ್ಕಳು, ಮೊಮ್ಮಕ್ಕಳಾದ ಮೇಲೆ ಇವಳು ನನ್ನ ಹೆಂಡತಿಯೇ ಅಲ್ಲ, ಈ ಎಲ್ಲ ಆಸ್ತಿ ನನ್ನ ಸ್ವಂತದ್ದು. ಈ ಸಂಸ್ಥೆ ಸಾರ್ವಜನಿಕ ಟ್ರಸ್ಟ್ ಅಲ್ಲ. ಈ ಎಲ್ಲ ಆಸ್ತಿಗಳು ಟ್ರಸ್ಟಿನದಲ್ಲ. ನನ್ನ ಸ್ವಂತ ಆಸ್ತಿಗಳು, ಇವುಗಳನ್ನು ಅನುಭವಿಸುವ ಹಕ್ಕು ನನಗೆ ಮಾತ್ರ ಇದೆ. ಸಾರ್ವಜನಿಕರಿಗೆ ಇಲ್ಲ ಎಂದು ಹೇಳಿದ ಹಾಗೆ. ನಿಮ್ಮ ಕಕ್ಷಿದಾರನ ವರ್ತನೆ ತೀವ್ರ ನಾಚಿಕೆಗೇಡು' ಎಂದು ಛೀಮಾರಿ ಮಾಡಿದರು. 'ಐವತ್ತು ವರ್ಷ ಹಿಂದೆಯೇ ಇದು ಸಾರ್ವಜನಿಕ ಟ್ರಸ್ಟ್ ಎಂದು ರಿಜಿಸ್ಟರ್ ಆಗಿದೆ' ಎಂದು ಹೇಳಿ ದಿವಾಕರರ ಅರ್ಜಿಯನ್ನು ತಿರಸ್ಕರಿಸಿದರು. ವಿಚಾರಣೆಗೂ ಅದನ್ನು ಸ್ವೀಕರಿಸಲಿಲ್ಲ. ಅಲ್ಲಿಗೆ ನನ್ನ ಕಾನೂನು ಸಮರ ಮುಕ್ತಾಯವಾಯಿತು.
ಆಗ ನನಗಾದ ಸಂತೋಷ, ನನಗಿಂತ ನಮ್ಮ ವಕೀಲರಾದ ಕೆ.ಐ. ಭಟ್ಟರಿಗೆ ಮತ್ತು ಆತ್ಮೀಯ ಮಿತ್ರರಾಗಿದ್ದ ಹೆಚ್.ಕೆ. ಅಪರಂಜಿಯವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆ ದಿನ ರಾತ್ರಿಯೇ ನನ್ನ ಇಬ್ಬರು ಮಿತ್ರರು ಬೆಂಗಳೂರಿಗೆ ಹಿಂತಿರುಗಿದರು. ಆದರೆ ನಾನು ಮಾತ್ರ ದೆಹಲಿಯಲ್ಲಿಯೇ ಉಳಿದು, ಆಗ್ರಾ ಮಥುರಾ ಮತ್ತು ಕಾಶಿಗಳಿಗೆ ಮೂರು ದಿನ ಪ್ರವಾಸ ಹೋಗಿ ನಂತರ ಬೆಂಗಳೂರಿಗೆ ಹಿಂತಿರುಗಿದೆ.
ಸುಪ್ರೀಂ ಕೋರ್ಟಿನಲ್ಲಿ ದಿವಾಕರರ ಅರ್ಜಿ ವಿಚಾರಣೆಗೆ ಬರುವ ಮೊದಲೇ ಅಂದರೆ 1986ನೇ ಮಾರ್ಚ್ 10ರಂದು ನೂತನ ಧರ್ಮದರ್ಶಿಗಳ ಮಂಡಲಿಯ ಪರವಾಗಿ ಅದರ ಅಧ್ಯಕ್ಷ ಬಿ.ಡಿ. ಜತ್ತಿ ಅಧಿಕಾರ ವಹಿಸಿಕೊಂಡಿದ್ದರು. ಟ್ರಸ್ಟಿನ ಚರ ಆಸ್ತಿಗಳ ರಿಸೀವರ್ರಾಗಿದ್ದ ಆರ್.ಜೆ. ದೇಸಾಯಿ ತಮ್ಮ ಸ್ವಾಧೀನದಲ್ಲಿದ್ದ ಯಂತ್ರೋಪಕರಣ ಇತ್ಯಾದಿ ಚರ ಆಸ್ತಿ ಮತ್ತು ಪತ್ರಿಕೆಗಳ ಆಡಳಿತವನ್ನು ಮಾರ್ಚ್ 10ರಂದು ಜತ್ತಿಯವರ ಮನೆಯಲ್ಲಿ ವಹಿಸಿಕೊಟ್ಟರು. ಮುಂದೆ ಎರಡು ದಿನ ನಂತರ ಸ್ಥಿರ ಆಸ್ತಿಗಳ ರಿಸೀವರಾಗಿದ್ದ ಹುಬ್ಬಳ್ಳಿ ತಹಶೀಲ್ದಾರರು ಸಹ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿದ್ದ ಟ್ರಸ್ಟಿನ ಸ್ಥಿರ ಆಸ್ತಿಗಳನ್ನು ಟ್ರಸ್ಟಿನ ಅಧ್ಯಕ್ಷರಿಗೆ ವಹಿಸಿಕೊಟ್ಟರು.
ಇದರಿಂದ ಲೋಕಶಿಕ್ಷಣ ಟ್ರಸ್ಟ್ನ ಆಸ್ತಿ ಮತ್ತು ಪತ್ರಿಕೆಗಳನ್ನು 1974ನೇ ನವೆಂಬರ್ 4ರಂದು ಅಂದಿನ ಧರ್ಮದರ್ಶಿಗಳು, ಸೊಂಡೂರಿನ ಎಂ.ವೈ. ಘೋರ್ಪಡೆಯವರ ಬೆಂಬಲದಿಂದ ಪ್ರಾರಂಭವಾಗಿದ್ದ ಕರ್ನಾಟಕ ಪತ್ರಿಕಾ ಕಂಪೆನಿಗೆ ಮಾರಿದ ಬಗ್ಗೆ ನಡೆದ ಎಲ್ಲಾ ಕೋರ್ಟ್ ವ್ಯವಹಾರಗಳು ಮುಗಿದು, ಲೋಕ ಶಿಕ್ಷಣ ಟ್ರಸ್ಟ್ ನೂತನ ಧರ್ಮದರ್ಶಿಗಳ ಮಂಡಳಿ ತನ್ನ ಆಡಳಿತ ಪ್ರಾರಂಭಿಸುವುದಕ್ಕೆ ಸಾಧ್ಯವಾಯಿತು. ಇದರಿಂದ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಪುನರ್ಜನ್ಮ ಬಂದಂತಾಯಿತು.
ಇದೇ ಸಂದರ್ಭ ಇನ್ನೊಂದು ವಿಷಯ ಜ್ಞಾಪಕದಲ್ಲಿಟ್ಟುಕೊಳ್ಳುವುದು ಅವಶ್ಯ. ನೂತನ ಧರ್ಮದರ್ಶಿ ಮಂಡಲಿಗೆ ಹೈಕೋರ್ಟ್ನವರು ಜತ್ತಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರಲ್ಲದೆ, ಕೆ.ಎಸ್.ಎನ್. ಅಡಿಗ (ಕರ್ನಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷರು), ಆರ್.ಎ. ಮುಂಡಕೂರ್ (ನಿವೃತ್ತ ಪೊಲೀಸ್ ಡಿಐಜಿ) ಎಸ್.ಪಿ. ಭಟ್ (ನಿವೃತ್ತ ಚೀಫ್ ಇಂಜಿನಿಯರ್) ಮತ್ತು ಧಾರವಾಡದ ವಕೀಲ ಜಿ.ಎಂ. ಪಾಟೀಲರನ್ನು ಧರ್ಮದರ್ಶಿ ಸ್ಥಾನದಲ್ಲಿ ನೇಮಕ ಮಾಡಿದ್ದರು. ಮಂಡಲಿಯ ನಾಲ್ಕು ಜನ ಸದಸ್ಯರ ಹೆಸರುಗಳನ್ನು ನಾನೇ ಸೂಚಿಸಿದ್ದೆ. ಜಿ.ಎಂ. ಪಾಟೀಲರು ಆಗ ನನಗೆ ಅಪರಿಚಿತರಾಗಿದ್ದರು. ಅವರ ಹೆಸರನ್ನು ಕೋರ್ಟಿನವರೇ ಸೇರಿಸಿದ್ದರು.
ನೂತನ ಧರ್ಮದರ್ಶಿಗಳ ಮಂಡಳಿ 25-03-1986ರಂದು ಸಭೆ ಸೇರಿ ಹೈಕೋರ್ಟು ಆದೇಶದ ಮೇರೆಗೆ, ನನ್ನನ್ನು ಟ್ರಸ್ಟಿನ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ಸಂಪಾದಕರನ್ನಾಗಿ ನೇಮಿಸಿತು. ನನ್ನ ನೇಮಕಕ್ಕೆ ನಾಲ್ಕು ಜನ ಧರ್ಮದರ್ಶಿಗಳು ಒಮ್ಮತದಿಂದ ಒಪ್ಪಿದರು. ಆದರೆ ಜಿ.ಎಂ. ಪಾಟೀಲರು ಮಾತ್ರ ಮೊದಲು ಒಪ್ಪಲಿಲ್ಲ. ತಾವೇ ಕಾರ್ಯದರ್ಶಿಯಾಗಬೇಕೆಂದು ಹಠ ಹಿಡಿದರು. ಆದರೆ ಬೇರೆ ಧರ್ಮದರ್ಶಿಗಳು ಇದನ್ನು ಒಪ್ಪಲಿಲ್ಲ. ಧರ್ಮದರ್ಶಿ ಕಾರ್ಯದರ್ಶಿಯಾಗಲು ಬರುವುದಿಲ್ಲವೆಂದು ತಿಳಿದ ಮೇಲೆ ಪಾಟೀಲರೂ ಸುಮ್ಮನಿದ್ದರು. ಅಂದಿನಿಂದಲೂ ಅವರಿಗೆ ನನ್ನ ಮೇಲೆ ಒಂದು ಬಗೆಯ ಅಸಮಾಧಾನವಿತ್ತು. ಎಷ್ಟೋ ಸಲ ಅದನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಕೆಲವು ಸಲ ಬಹಳ ಆತ್ಮೀಯವಾಗಿಯೂ ನಡೆದುಕೊಳ್ಳುತ್ತಿದ್ದರು. ಈ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.
ಅಂತೂ ಇಲ್ಲಿಗೆ ಲೋಕ ಶಿಕ್ಷಣ ಟ್ರಸ್ಟಿನ ಆಸ್ತಿಗಳು ಮತ್ತು ಪ್ರಕಟಣೆಗಳ ಸಂಬಂಧ ನಡೆಯುತ್ತಿದ್ದ ಎಲ್ಲಾ ಕೋರ್ಟ್ ವ್ಯವಹಾರಗಳು ಕೊನೆಗೊಂಡು, 1974ನೇ ನವೆಂಬರ್ 21ರಂದು ಪರಭಾರೆಯಾಗಿದ್ದ ಟ್ರಸ್ಟಿನ ಆಸ್ತಿಗಳು 1986ನೇ ಮಾರ್ಚ್ 10ರಂದು ಪುನಃ ಟ್ರಸ್ಟಿನ ಸ್ವಾಧೀನಕ್ಕೆ ಬಂದವು. ಹನ್ನೆರಡು ವರ್ಷಗಳಲ್ಲಿ ಏಳು ಆಡಳಿತ ವರ್ಗಗಳು ಬಂದು ಟ್ರಸ್ಟಿನ ಆಸ್ತಿ ಹಾಗೂ ಪ್ರಕಟಣೆಗಳನ್ನು ಸಂಪೂರ್ಣ ಹಾಳು ಮಾಡಿದ್ದವು. ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಪತ್ರಿಕೆಗಳು ತಮ್ಮ ಪ್ರಸಾರ, ಪ್ರಭಾವ ಕಳೆದುಕೊಂಡಿದ್ದು, ಅವುಗಳನ್ನು ನಡೆಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಮೊದಲು ಕೆಪಿಪಿ ಕಂಪೆನಿ, ಆ ಮೇಲೆ ಜೆಕೆಎನ್ಪಿ ಕಂಪೆನಿ, ಅನಂತರ ಕರ್ನಾಟಕ ಸರ್ಕಾರ, ಆ ಮೇಲೆ ಕೋರ್ಟಿನಿಂದ ನೇಮಿಸಲ್ಪಟ್ಟ ನಾಲ್ಕು ಜನ ರಿಸೀವರ್ಗಳು ಟ್ರಸ್ಟಿನಲ್ಲಿ ನಡೆಸಿದ ದುರಾಡಳಿತ ಆವರ್ಣನೀಯವಾಗಿತ್ತು. ವರಮಾನ ಕಡಿಮೆಯಾಗಿ ನೌಕರರಿಗೆ ಸಂಬಳ ಕೊಡಲು ಅಥವಾ ಮುದ್ರಣ ಕಾಗದ ಖರೀದಿಸಲು ಹಣ ಇರುತ್ತಿರಲಿಲ್ಲ. ಸಾಲ ಮಾಡಿ ಮುದ್ರಣ ಕಾಗದ ಖರೀದಿ ಮಾಡಬೇಕಾಗಿತ್ತು. ಈ 12 ವರ್ಷದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು ಮೂರು ಕೋಟಿ ರು. ಸಾಲ ಮಾಡಲಾಗಿತ್ತು. ಇದರ ಮೇಲೆ ಅನೇಕ ಜನ ಠೇವಣಿದಾರರಿಂದ 70-80 ಲಕ್ಷ ರು. ಠೇವಣಿ ಹಣ ಪಡೆದು, ಅದನ್ನು ವಾಪಸ್ ಕೊಟ್ಟಿರಲಿಲ್ಲ. ಈ ಠೇವಣಿದಾರರು ಕೋರ್ಟಿಗೆ ಹೋಗಿದ್ದರು. ಕೋರ್ಟಿನಲ್ಲಿ ನೂರಾರು ಪ್ರಕರಣಗಳು ನಡೆಯುತ್ತಿದ್ದವು. ಇನ್ನು ಟ್ರಸ್ಟಿನ ಸ್ಥಿರಾಸ್ತಿಗಳ ಬಗ್ಗೆ ಹೇಳಬೇಕಾಗಿಲ್ಲ. ಅವುಗಳೆಲ್ಲ ಪಾಳುಬಿದ್ದ ಮನೆಗಳಂತೆ ಹಾಳಾಗಿದ್ದವು. ಹುಬ್ಬಳ್ಳಿ ಮತ್ತು ಬೆಂಗಳೂರು ಸ್ಥಿರಾಸ್ತಿಗಳಿಂದ ಬರುತ್ತಿದ್ದ ಬಾಡಿಗೆ ಸುಮಾರು ಎರಡು ಮೂರು ಸಾವಿರಕ್ಕೂ ಹೆಚ್ಚಾಗಿರಲಿಲ್ಲ. ಸಂಸ್ಥೆಯಲ್ಲಿ ಕೆಲಸಗಾರರ ಸಂಖ್ಯೆ 500ಕ್ಕೂ ಹೆಚ್ಚಾಗಿತ್ತು, ಪ್ರತಿ ತಿಂಗಳು ಸುಮಾರು 10 ಲಕ್ಷ ರು. ಸಂಬಳ ಕೊಡಬೇಕಾಗಿತ್ತು. ಈ ಕೆಲಸಗಾರರಲ್ಲಿ ಯಾರು ಏನು ಕೆಲಸ ಮಾಡುತ್ತಾರೆಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಆದರೂ ಟ್ರಸ್ಟಿನ ಆಸ್ತಿಗಳು 12 ವರ್ಷಗಳ ಕೋರ್ಟ್ ವ್ಯವಹಾರದ ನಂತರ ಪುನಃ ಟ್ರಸ್ಟಿಗೆ ಬಂದು ಸೇರಿದ್ದು ಒಂದು ಸಮಾಧಾನದ ಸಂಗತಿ.
ಹೋರಾಟ ನಡೆಸಿದವರು ಯಾರು?
ಪರಭಾರೆಯಾಗಿದ್ದ ಟ್ರಸ್ಟಿನ ಆಸ್ತಿ ಮತ್ತು ಪ್ರಕಟಣೆಯನ್ನು ಪುನಃ ಟ್ರಸ್ಟಿಗೆ ಬರುವಂತೆ 12 ವರ್ಷ ನಡೆದ ಹೋರಾಟ ನಡೆಸಿದವರು ಯಾರು, ಇದಕ್ಕಾಗಿ ಎಷ್ಟು ಹಣ ಖರ್ಚಾಗಿರಬಹುದು, ಯಾರು ಸಹಾಯ ಮಾಡಿದರು ಮತ್ತು ಯಾರು ವಿರೋಧಿಸಿದರು ಎಂಬ ಮಾತು ಈಗ ಬೇಡ. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಸುಮಾರು 60 ವರ್ಷ ಸೇವೆ ಸಲ್ಲಿಸಿದ್ದ ನಾನೇ ಈ ಹೋರಾಟಕ್ಕೆ ಮೂಲ ಪುರುಷನೆಂದು ಅನೇಕರ ಭಾವನೆ. ನಿಜ. ನಾನು ಈ ಹೋರಾಟದ ಮುಂಚೂಣಿಯಲ್ಲಿದ್ದೆ. ಆದರೆ ನಾನೊಬ್ಬನೇ ಹೋರಾಡಲಿಲ್ಲ. ನನ್ನ ಜೊತೆಗೆ ಇನ್ನೂ ಅನೇಕರಿದ್ದರು. ಹುಬ್ಬಳ್ಳಿಯ ಡಾ. ಆರ್.ಎಸ್. ಕುಂಭಕೋಣಂ, ಧೀರೇಂದ್ರ ಜಾಂಬಳೆ ಮತ್ತು ಆರ್.ಕೆ. ಜೋಶಿ ನನಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡಿದರು ಮತ್ತು ಬೆಂಬಲ ಕೊಟ್ಟರು. ಇವರ ಜೊತೆಗೆ ಇನ್ನಿಬ್ಬರ ಹೆಸರನ್ನೂ ಹೇಳಲೇಬೇಕು. ಅವರೆಂದರೆ ಧಾರವಾಡದ ಸುಪ್ರಸಿದ್ಧ ವಕೀಲರಾದ ಸಿ.ಬಿ.ಪಾಟೀಲರು ಮತ್ತು ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾದ ಕೆ.ಐ.ಭಟ್ಟರು. ಇವರಿಬ್ಬರೂ 12 ವರ್ಷ ನಡೆದ ಕೋರ್ಟ್ ವ್ಯವಹಾರಗಳನ್ನು ತಮ್ಮದೆಂದೇ ಭಾವಿಸಿ, ಒಂದು ನಯಾಪೈಸೆ ಫೀಜು ತೆಗೆದುಕೊಳ್ಳದೆ ಎಷ್ಟೋ ಸಲ ಸ್ವಂತ ಖರ್ಚಿನಿಂದ ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಗೆ ಹೋಗಿ ಬಂದು ವ್ಯವಹಾರ ನಡೆಸುತ್ತಿದ್ದರು. ಕೊನೆಗೆ ಸುಪ್ರೀಂ ಕೋರ್ಟಿಗೂ ಹೋಗಿ ವಾದ ಮಾಡಿ, ಈ ಆಸ್ತಿಗಳು ಪುನಃ ಟ್ರಸ್ಟಿಗೆ ಸಿಗುವಂತೆ ಮಾಡಿದರು. ಇವರಿಬ್ಬರ ನೆರವು ಇಲ್ಲದಿದ್ದರೆ ಟ್ರಸ್ಟಿನ ಆಸ್ತಿ ಪುನಃ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
(ಮುಂದುವರಿಯುವುದು)
ಕೆ.ಶಾಮರಾವ್