ಬೈಟುಕಾಫಿ

Youth ಕಹಳೆ

ಮತದಾನದ ಹಕ್ಕು ಪಡೆದ ಖುಷಿ. ಆದರೆ 'ಮೊದಲ ಮತ ಯಾರಿಗೆ ಹಾಕಬೇಕು?' ಎಂಬ ತಾಕಲಾಟ. 'ಮೊದಲು' ಎಂಬ ಪದಕ್ಕೆ ಯುವ...

Youth ಕಹಳೆ
Published On :

ಮತದಾನದ ಹಕ್ಕು ಪಡೆದ ಖುಷಿ. ಆದರೆ 'ಮೊದಲ ಮತ ಯಾರಿಗೆ ಹಾಕಬೇಕು?' ಎಂಬ ತಾಕಲಾಟ. 'ಮೊದಲು' ಎಂಬ ಪದಕ್ಕೆ ಯುವ ಜನತೆಯಲ್ಲಿ ಸಾಕಷ್ಟು ಆದ್ಯತೆಯಿದೆ. ಮೊದಮೊದಲ ನೋಟ ಚಂದ, ಮೊದಮೊದಲ ಮಾತು ಚಂದ, ಮೊದಮೊದಲ ವೋಟು ಚಂದ!
ಅದು ಸಾಯುವವರೆಗೂ ನೆನಪಿನಲ್ಲಿ ಉಳಿಯುವ ಪ್ರಕ್ರಿಯೆ ಆಗಿದ್ದರಿಂದಲೋ, ದೇಶದ ಪ್ರಧಾನಿ ಆಯ್ಕೆ ಮಾಡುವಲ್ಲಿ ನನಗೂ ಅವಕಾಶ ಸಿಕ್ಕಿತು ಎಂಬ ಅಭಿಮಾನವೋ, ತಾನು ದೊಡ್ಡವನಾದೆ ಎಂದು ಅಪ್ಪನಿಗೆ ಸಂದೇಶ ಮುಟ್ಟಿಸುವ ಥ್ರಿಲ್ಲೋ... ಒಟ್ಟಿನಲ್ಲಿ ಮೊದಲ ಮತದಾನ ಸರ್ವಶ್ರೇಷ್ಠ.
'ಯಾರಿಗೆ?' ಎಂಬ ಪ್ರಶ್ನೆ ಸಾಕಷ್ಟು ಕಾಡಿಸುತ್ತದೆ. ತಾನು ಹಾಕಿದ ಮೊದಲ ಮತ ಒಬ್ಬ ಭ್ರಷ್ಟನಿಗೆ ಎಂದಾದರೆ ಅವಮಾನಕರ ವಿಷಯ. ಅದೇ ಸದ್ಗುಣಿ ರಾಜಕಾರಣಿಗೆ ಮತ ಹಾಕಿದರೆ 'ಒಳ್ಳೆಯವರೊಡನೆ ಕೈ ಜೋಡಿಸಿದೆ' ಎಂಬ ಆತ್ಮಾಭಿಮಾನ. ತಾನು ಚುನಾಯಿಸಿದ ವ್ಯಕ್ತಿ ಗೆದ್ದರೆ, ಮಂತ್ರಿಯಾದರೆ ಏನೋ ಹೆಮ್ಮೆ. ಸ್ವತಃ ತಾನೇ ಗೆದ್ದಿರುವೆ ಎಂಬಷ್ಟು ಉತ್ಸಾಹ. ಸಾಕಷ್ಟು ಆಲೋಚನೆ ಮಾಡಿ, ಅಳೆದು, ತೂಗಿ ಆರಿಸುವ ಕೈಂಕರ್ಯಕ್ಕೆ ಹೊಸ ಮತದಾರ ಕೈಹಾಕುತ್ತಾನೆ. ಮೊನ್ನೆ ಮೊನ್ನೆ ದೆಹಲಿ ಚುನಾವಣೆಯಿಂದ ಕಲಿತ ಪಾಠವೂ ಇರಬಹುದು! ಯುವ ಮತದಾರ ಸಾಕಷ್ಟು ಜಾಗೃತನಾಗಿದ್ದಾನೆ. ಭ್ರಷ್ಟರಿಗೆ ಮತ ಹಾಕಿದರೆ ಭ್ರಷ್ಟಾಚಾರ ಮಾಡಿದ ಪಾಲಿನಲ್ಲಿ ತಾನೂ ಸೇರ್ಪಡೆ ಆಗುತ್ತೇನೆ ಎಂಬ ಮುಂಜಾಗ್ರತೆ ಹೊಂದಿದ್ದಾನೆ.  ಅಂದ ಹಾಗೆ, ಪ್ರಸ್ತುತ ವರ್ಷದ ಮೊದಲ ಮತದಾನ ಮಾಡುವವರ ಸಂಖ್ಯೆ ಬರೋಬ್ಬರಿ 150 ದಶಲಕ್ಷ! ಭಾರತೀಯ ಚುನಾವಣಾ ಪ್ರಕ್ರಿಯೆಯ ಹೊಸ ಅಧ್ಯಾಯ! ನೂತನ ಮತದಾರರ ಸಂಖ್ಯೆಯ ಆಧಾರದಲ್ಲಿ ಭಾರತದ ಪಾಲಿಗೆ ಹೊಸ 'ಇಂಪಾಕ್ಟ್‌' ಎಂದೂ ಬಣ್ಣಿಸಬಹುದು. ಪ್ರೆಸ್ ಇನ್ಫರ್ಮೇಶನ್ ಬ್ಯೂರೊ ವರದಿಯಂತೆ ಈ ಬಾರಿಯ ಲೋಕಸಭೆ ಚುನಾವಣೆಗೆ ಶೇಕಡಾ 20.6 ಹೊಸ ಮತದಾರರು ಸೇರ್ಪಡೆ ಆಗಿದ್ದಾರೆ.
ಭಾರತದ ಒಟ್ಟಾರೆ ಜನಸಂಖ್ಯೆ 1.27 ಶತಕೋಟಿ. 2009ರ ಅಂಕಿಅಂಶದ ಪ್ರಕಾರ 1.19 ಶತಕೋಟಿ. ಅಂದರೆ ಸುಮಾರು 80 ದಶಲಕ್ಷ ಜನಸಂಖ್ಯೆ ಹೆಚ್ಚಾಗಿದೆ. ಒಟ್ಟು ಯುವ ಮತದಾರರ ಸಂಖ್ಯೆಯ ಅರ್ಧದಷ್ಟು! ಜನಸಂಖ್ಯೆ ಹೆಚ್ಚಾದಂತೆ ಅಲ್ಲಿನ ರಾಜಕೀಯ ಏರುಪೇರುಗಳು, ಅನಿರಿಕ್ಷಿತ ಬದಲಾವಣೆಗಳು ಸಹಜವಾಗೇ ಆಗುವಂತಹವುಗಳು. ಈ ಪೂರಕ ದೃಷ್ಟಿಯಿಂದಲೇ ಈ ಬಾರಿಯ ಚುನಾವಣೆ ಹೊಸ ಅಧ್ಯಯಕ್ಕೆ ಮುನ್ನುಡಿ ಎಂದೇ ಪರಿಗಣಿಸಲ್ಪಟ್ಟಿರುವುದು.
2011ರ ಜನಗಣತಿ ಪ್ರಕಾರ 18 ಮತ್ತು ಮೇಲ್ಪಟ್ಟ ವಯೋವಾನದವರು ಶೇಕಡಾ 63ರಷ್ಟಿದ್ದಾರೆ. ಶೇ.60 ಮತದಾನ ಪಟ್ಟಿಯಲ್ಲಿ ಸೇರಿರುವವರ ಸಂಖ್ಯೆ. 2009ರ ಮತದಾರರ ಪಟ್ಟಿಯಲ್ಲಿ ಸೇರಿರುವವರು 714 ದಶಲಕ್ಷ. ಈ ಬಾರಿ 762 ದಶಲಕ್ಷಕ್ಕೆ ಹೆಚ್ಚಳವಾಗಬಹುದು. 800 ದಶಲಕ್ಷ ಆಗುವ ಸಂಭವವೂ ಇದೆ.


ಹೊಸ ಮತದಾರರು
ಒಟ್ಟು ಮತದಾರರು 1.27 ಶತಕೋಟಿ

ಯುವ ವೋಟರ್ಸ್ 150 ದಶಲಕ್ಷ


ಶೇಕಡಾವಾರು ಸೇರ್ಪಡೆ 20.6
ಭಾರತ

ಯುವಕರು -10.88
ಯುವತಿಯರು -9.73

ಒಟ್ಟು -20.6



ಗ್ರಾಮೀಣ ಪ್ರದೇಶ


ಯುವಕರು - 7.56

ಯುವತಿಯರು-6.76

ಒಟ್ಟು -14.32
ನಗರ ಪ್ರದೇಶ-ಯುವಕರು 3.31
ಯುವತಿಯರು-2.97


ಒಟ್ಟು 6.28


ಕರ್ನಾಟಕ

ಯುವಕರು -0.52

ಯುವತಿಯರು-0.49

ಒಟ್ಟು -1.01


ಗ್ರಾಮೀಣ ಪ್ರದೇಶ

ಯುವಕರು -0.33
ಯುವತಿಯರು-0.30
ಒಟ್ಟು -0.63


ನಗರ ಪ್ರದೇಶ

ಯುವಕರು -0.19

ಯುವತಿಯರು-0.19

ಒಟ್ಟು -0.38


ಅಲ್ಲಿ ಯುವಕರದೇ ಪಾರುಪತ್ಯ

ಯುವಶಕ್ತಿಯ ಒಕ್ಕೂಟ ಸಂಭವಿಸುವುದು ಅಕ್ಷರಶಃ ಸಾಮಾಜಿಕ ತಾಣಗಳಲ್ಲಿ. ಭಾರತ ಒಟ್ಟು 543 ಲೋಕಸಭಾ ಸೀಟುಗಳ ಪೈಕಿ 160 ಸ್ಥಾನಗಳು ಸಾಮಾಜಿಕ ತಾಣಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿವೆ. 63 ಸ್ಥಾನಗಳು ಸ್ವಲ್ಪ ಮಟ್ಟಿಗೆ ಮತ್ತು 60 ಸ್ಥಾನಗಳು ಸಣ್ಣ ಮಟ್ಟಿಗೆ ಸಾಮಾಜಿಕ ತಾಣಗಳನ್ನು ಅವಲಂಬಿಸಿವೆ. ಈ ಬಾರಿಯ ಚುನಾವಣೆಯಲ್ಲಿ 287 ಕ್ಷೇತ್ರಗಳ ಮೇಲೆ ಸಾಮಾಜಿಕ ತಾಣಗಳು ನೇರ ಪರಿಣಾಮ ಬೀರಲಿವೆ. ಒಟ್ಟು ಮತದಾರರ ಪೈಕಿ ಶೇ.10 ಮತದಾರರು ಸಾಮಾಜಿಕ ತಾಣಗಳನ್ನು ಉಪಯೋಗಿಸುತ್ತಿದ್ದಾರೆ.


ನೂತನ ದಾಖಲೆ
ಇದುವರೆಗೂ ಆಗಿರುವ 15 ಸಂಸದೀಯ ಚುನಾವಣೆಗಳಲ್ಲಿ ಶೇ.66ಕ್ಕಿಂತ ಹೆಚ್ಚು ಮತದಾನವಾದ ಉದಾಹರಣೆಗಳೇ ಇಲ್ಲ. 1984ರಲ್ಲಿ ನಡೆದ ಚುನಾವಣೆ ದಾಖಲಿಸಿದ ಶೇ. 64 ಮತದಾನವೇ ಗರಿಷ್ಠ! ಆದರೆ ಈ ವರ್ಷ ಆ ದಾಖಲೆ ಅಳಿಸಲಿದೆ. ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗರಿಷ್ಠ ಮಟ್ಟದಲ್ಲಿ ಮತದಾನ ನಡೆಯಲಿದೆ. ಆದರೆ ಹೊಸದಾಗಿ ಸೇರಿರುವ 150 ದಶಲಕ್ಷ ಯುವ ಮತದಾರರು ಮತದಾನ ಮಾಡಬೇಕು.


ಬೇಬಿ ಬೂಮ್ ಕಥೆ
ಅಂದು 70ರ ದಶಕದಲ್ಲಿ ಅಮೆರಿಕದಲ್ಲಾದ ಬದಲಾವಣೆಯನ್ನು ಉದಾಹರಿಸಬಹುದು. 1946-64ರಲ್ಲಿ  ಸುಮಾರು 70 ಮಿಲಿಯ ಜನಸಂಖ್ಯೆ ಮತದಾರರ ಲಿಸ್ಟಿಗೆ ಸೇರಿತು. 'ಬೇಬಿ ಬೂಮ್‌' ಪೀಳಿಗೆ ಎಂದೇ ಪ್ರಸಿದ್ಧಿ ಪಡೆಯಿತು. ವಾಟರ್‌ಗೇಟ್ ಹಗರಣದಿಂದ ರಿಚರ್ಡ್ ನಿಕ್ಸನ್ ಭವಿಷ್ಯ ಕಳೆದುಕೊಂಡರು. ಜಾನ್ ಎಫ್. ಕೆನಡಿ ಅಮೆರಿಕದ ಯುವ ನೇತಾರರಾಗಿ ಹೊರಹೊಮ್ಮಿದರು. ಯುವ ಶಕ್ತಿಯು ಅಮೆರಿಕದಂತಹ ದೇಶದ ರಾಜಕೀಯ ಅಸ್ತಿತ್ವವನ್ನೇ ಬದಲಿಸಬಹುದು ಎಂಬ ಸಾಕ್ಷ್ಯಾಧಾರಗಳನ್ನು ಪ್ರಪಂಚಕ್ಕೆ ಪ್ರಸ್ತುತ ಪಡಿಸಿತು.


ಯುವ ಶಕ್ತಿಯ ಸ್ಪೋಟ

ನಮ್ಮ ದೇಶವೀಗ ಯುವ ಜನರ ದೇಶ! ಇದ್ದಕ್ಕಿದ್ದಂತೆ ಯುವ ಶಕ್ತಿಯ ಗೋಚರವಾಗಿದೆ. 150 ಮಿಲಿಯ ಯುವಕರು ಮತ ಚಲಾಯಿಸಿದರೆ ರೋಮಾಂಚಕ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾಗಲಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಒಟ್ಟು 26 ರಾಜ್ಯಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಇರುವುದು ಯುವ ಮತದಾರರು.


ರಾಜಕೀಯಕ್ಕೆ ಹೊಸ ಭಾಷ್ಯ

ಯುವ ಮತದಾರರು ಭಾರತದ ಪಾಲಿಗೆ ಹೊಸ ವಿಚಾರ ಅಲ್ಲ. ಆದರೆ ಯುವ ಮತದಾರರ ಸಂಖ್ಯೆ ಸೋಜಿಗ. ಇಲ್ಲಿ ಜಾತಿ, ಧರ್ಮದ ಆಧಾರದಲ್ಲಿ ವೋಟ್‌ಬ್ಯಾಂಕ್‌ಗಳಿವೆ. ಆದರೆ ಯುತ್ ವೋಟ್‌ಬ್ಯಾಂಕ್‌ಗಳಿಲ್ಲ. 'ನನ್ನೊಂದು ಮತದಿಂದ ಯಾವ ಗಣನೀಯ ಪರಿಣಾಮವೂ ಆಗುವುದಿಲ್ಲ' ಎಂದೇ ಬಲವಾಗಿ ನಂಬಿದ್ದ ಯುವಕರು ಈಗ ಬದಲಾಗಿದ್ದಾರೆ. ಪ್ರತಿ ಯುವಕನಿಗೂ ತನ್ನ ಒಂದು ಮತ ಪ್ರಜಾಪ್ರಭುತ್ವದಲ್ಲಿ ಹೊಸ ಬದಲಾವಣೆ ತರಬಲ್ಲದು ಎಂದು ಅರ್ಥವಾಗಿದೆ.



ಸದೃಡ ಸರ್ಕಾರದ ಅಗತ್ಯವಿದೆ
ಯುವ ಮತದಾರರಿಗೆ ಬೇಕಿರುವುದು ಸದೃಢ ಸರ್ಕಾರ! ಇವರು ತೃತೀಯ ರಂಗ ಎಂಬ ತುಂಡು ಪಕ್ಷಗಳ ಒಕ್ಕೂಟವನ್ನು ತಿರಸ್ಕರಿಸಿರುವುದು ಮೇಲ್ನೋಟಕ್ಕೆ ಕಾಣಸಿಗುತ್ತದೆ. ಅಸ್ಥಿರ ಸರ್ಕಾರದಿಂದ ಇವರು ರೋಸಿದ್ದಾರೆ. ಇದು ಎರಡು ರಾಷ್ಟ್ರೀಯ ಪಕ್ಷಗಳ ನಡುವಣ ನೇರ ಹಣಾಹಣಿ ಎಂಬುದು ಈಗಾಗಲೇ ಯುವ ಮತದಾರರ ಮನಸ್ಸಿನಲ್ಲಿ ನೆಟ್ಟಿದೆ. ಇದರ ಮಧ್ಯೆ ಆಪ್ ಭರವಸೆಯ ಹೊಸ ಸೇರ್ಪಡೆ ಎನಿಸಿದೆ.  



ಭ್ರಷ್ಟಾಚಾರ ಕಡಿಮೆ ಆಗ್ಬೇಕು. ಕಪ್ಪು ಹಣ ಬಳಕೆ ಮಾಡಿ ದೇಶದ ಅಭಿವೃದ್ಧಿಗೆ ಬಳಸಬೇಕು. ದಿನೇ ದಿನೆ ಏರುತ್ತಿರುವ ದಿನಬಳಕೆ ವಸ್ತುಗಳ ಬೆಲೆ ಕಡಿಮೆ ಆಗಬೇಕು. ಉದ್ಯೋಗ ಅವಕಾಶಗಳು ಹೆಚ್ಚಾಗಬೇಕು. ಭಾರತ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕನಸಿನ 'ವಿಷನ್ 2020' ಆಗಬೇಕು.
- ಧನ್ಯಶ್ರೀ ಕೆ. ಬೆಳ್ಳಾರೆ


ನಮ್ಮ ಕ್ಷೇತ್ರದ ಅಭ್ಯರ್ಥಿಗಿಂತ ಮುಖ್ಯವಾಗಿ ಪ್ರಧಾನಿ ಅಭ್ಯರ್ಥಿಯೇ ನನಗೆ ಮುಖ್ಯ. ದೇಶವನ್ನು ಉತ್ತಮ ವ್ಯಕ್ತಿಯ ಕೈಗೆ ನೀಡಬೇಕು. ಆ ನಿಟ್ಟಿನಲ್ಲಿ ನನ್ನ ಮತವನ್ನು ವ್ಯಯ ಮಾಡುತ್ತೇನೆ.
- ರಕ್ಷಿತ ಬೆಟ್ಟುಗದ್ದೆ


ಉತ್ತಮ ರಾಷ್ಟ್ರಕ್ಕಾಗಿ ಒಳ್ಳೆಯ ಪ್ರಧಾನಿ ಮುಖ್ಯ. ದೇಶದ ಸಮಸ್ಯೆಗಳನ್ನು ಬಗೆಹರಿಸಬಲ್ಲ ವ್ಯಕ್ತಿ ಯಾರೆಂದು ಆಲೋಚಿಸಿ ಅದಕ್ಕನುಗುಣವಾಗಿ ಮೊದಲ ಮತವನ್ನು ಹಾಕುತ್ತೇನೆ.
- ನಿವೇದಿತಾ ಭಟ್


ಲೈಂಗಿಕ ಅಲ್ಪಸಂಖ್ಯಾತರ 3,400 ಮತ


ಈ ಬಾರಿಯ ಲೋಕಸಭಾ ಚುನಾವಣೆಗೆ ಅತ್ಯಧಿಕ ಸಂಖ್ಯೆಯ ಯುವಶಕ್ತಿಯ ಜೊತೆಗೆ ಲೈಂಗಿಕ ಅಲ್ಪಸಂಖ್ಯಾತರು ಜೊತೆಯಾಗಿದ್ದಾರೆ. ರಾಜ್ಯದಲ್ಲಿ ಸುಮಾರು 3,400 ಲೈಂಗಿಕ ಅಲ್ಪಸಂಖ್ಯಾತರು ಚುನಾವಣೆಯಲ್ಲಿ ಮತ ಹಾಕುವ ಮಾನ್ಯತೆ ಪಡೆದಿದ್ದಾರೆ. ಸುಮಾರು 18 ವರ್ಷಗಳಿಂದಲೂ ಮತದಾನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರ ಪಾಲಿಗೆ ಈ ಬಾರಿಯ ಲೋಕಸಭೆ ಮೊದಲ ಚುನಾವಣೆ. ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಸುಮಾರು 2000 ಅಲ್ಪಸಂಖ್ಯಾತರು ಮತ ಚಲಾಯಿಸಿದ್ದರು.
ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಅಲ್ಪಸಂಖ್ಯಾತರಿದ್ದು ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಮತದಾನದ ಹಕ್ಕುದಾರರು ಆಗಬೇಕಿದೆ. ಹಿಂಜರಿಕೆ ಮತ್ತು ಬಹುಸಂಖ್ಯಾತರ ತಾತ್ಸಾರ ಮನೋಭಾವ ಕಡಿಮೆ ಆಗದ ನಿಟ್ಟಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಮುಂದೆ ಬರುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಲೈಂಗಿಕ ಅಲ್ಪಸಂಖ್ಯಾತರ ಮನವಿಗೆ ಪೂರಕವಾಗಿ ಮತದಾನ ಹಕ್ಕು ನೀಡಿದ್ದರಿಂದ ಮತದಾನ ಮಾಡಬೇಕಾದದ್ದು ತಮ್ಮ ಕರ್ತವ್ಯ ಎಂದು ಭಾವಿಸಿರುವುದೇ ಮತಗಟ್ಟೆಗೆ ಬರಲು ಕಾರಣವಾಗಿದೆ.  ಚಾಮರಾಜನಗರ ಮತ್ತು ಹಾಸನದಲ್ಲಿ ಜೆಡಿಎಸ್ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ್ದು ಬಹುಸಂಖ್ಯೆಯಲ್ಲಿ ಅವರ ಪರವಾಗಿ ಮತ ಚಲಾಯಿಸುವ ಸಾಧ್ಯತೆ ಇದೆ. ಬೆಂಗಳೂರು ಮತ್ತಿತರ ಕ್ಷೇತ್ರಗಳಲ್ಲಿ ಹೀಗೆ ಲೆಕ್ಕ ಹಾಕುವುದು ಕಷ್ಟ.


ಕಳೆದ ಬಾರಿಯ ವಿಧಾನಸಭೆಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಮತದಾರರ ಪಟ್ಟಿ ಸೇರಿದ್ದಾರೆ. ಪ್ರಜಾಪ್ರಭುತ್ವದ ಭಾಗವಾಗಲು ಅವಕಾಶ ಕೊಟ್ಟ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ನಮ್ಮೆಲ್ಲಾ ಕಾರ್ಯಕರ್ತರಿಗೆ ಮತಪಟ್ಟಿ ಸೇರುವಂತೆ ಮತ್ತು ಮತ ಚಲಾಯಿಸುವಂತೆ ಆಹ್ವಾನಿಸುತ್ತಿದ್ದೇವೆ ಮತ್ತು ಪ್ರೋತ್ಸಾಹಿಸುತ್ತಿದ್ದೇವೆ. ಅಭ್ಯರ್ಥಿಗಳೂ ಲೈಂಗಿಕ ಅಲ್ಪಸಂಖ್ಯಾತರನ್ನು ಪರಿಗಣಿಸಿ ಮತ ಹಾಕುವಂತೆ ಪ್ರೊತ್ಸಾಹಿಸಬೇಕು.
- ಅಕೈ ಪದ್ಮಶಾಲಿ
ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ್ತಿ


 
-ಮಂಜುನಾಥ್ ಎಲ್. ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.