ನ್ಯೂ ವೋಟ್ ಬ್ಯಾಂಕ್

ಸೋಲು- ಗೆಲುವಷ್ಟೇ ಯುದ್ಧದ ಫಲಿತಾಂಶವಲ್ಲ. ರಣರಂಗದಲ್ಲಿ ಸಾವುಗಳ ಕೌಂಟರ್ರೂ ಒಂದಿರುತ್ತದೆ. ಅದೇ ಯುದ್ಧಭೂಮಿಯ ಒಂದು ಬದಿಯಲ್ಲಿ ಹೆರಿಗೆ ವಾರ್ಡೂ ಇರುತ್ತದೆ. ಒಂದು ಅಂಶ ಸಾಯಬಹುದು, ಮತ್ತೊಂದು ಸಾಧ್ಯತೆ ತೆರೆದುಕೊಳ್ಳಬಹುದು. ಎಲ್ಲರೂ ಬಿಂಬಿಸಿರುವಂತೆ 2014ರ ಈ ಚುನಾವಣೆ ಮೂರನೇ ಮಹಾಯುದ್ಧ. ಅಭ್ಯರ್ಥಿಗಳ ಸೋಲು- ಗೆಲುವನ್ನು ಬದಿಗಿಟ್ಟು ಇಲ್ಲಿಯೂ ಸಾವು- ಹುಟ್ಟುಗಳ ತಲೆ ಎಣಿಸಬಹುದು; ಅದು ಮುಖ್ಯವಾಗಿ ವೋಟ್ಬ್ಯಾಂಕಿನ ವಿಚಾರದಲ್ಲಿ.
ವೋಟ್ಬ್ಯಾಂಕ್ ಎಂದರೆ ಒಂದು ಜನಸಮೂಹ. ಏನಾದರೂ ಕಸರತ್ತು ನಡೆಸಿ ಈ ಗುಂಪನ್ನು ಒಲಿಸಿಕೊಂಡರೆ ಆ ಪಕ್ಷಕ್ಕೆ ಬಂಪರ್. ಸ್ವಾತಂತ್ರ್ಯ ಬಂದಾಗಿನಿಂದ ಕಳೆದ ಚುನಾವಣೆಯವರೆಗೂ ನಮ್ಮವರಿಗಿದ್ದ ವೋಟ್ ಬ್ಯಾಂಕುಗಳು; ರೈತರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು... ಹೀಗೆ ಬಹುತೇಕ ಜಾತಿ- ಧರ್ಮಾಧರಿತ ಸಂಗತಿಗಳು. ಆದರೆ, ಈ ಬಾರಿ ಅವೆಲ್ಲ ನಮ್ಮ ಮುಖಂಡರ ಭಾಷಣಕ್ಕೆ ವಸ್ತುವಾಗಿಯೂ ಇಲ್ಲ. ಅವರ ಟಾರ್ಗೆಟ್ ಅಂಥ ವೋಟ್ಬ್ಯಾಂಕುಗಳ ಮೇಲೂ ಇಲ್ಲ. ಈ ಸಲ ಹೊಸ ವೋಟ್ಬ್ಯಾಂಕುಗಳು ಸೃಷ್ಟಿಯಾಗಿವೆ. ಇವುಗಳ ಹುಟ್ಟಿನಿಂದ ಜಾತಿ, ಮೀಸಲಾತಿಗಳ ಸರಪಳಿಯಿಂದ ಭಾರತ ಕಳಚಿಕೊಳ್ಳುತ್ತಿದೆ. ಅವೆಲ್ಲ ಸತ್ತವು ಅಂತಲೇ ಇಟ್ಟುಕೊಳ್ಳಿ. ಹಾಗಾದರೆ ಆ ಹೊಸ ಹುಟ್ಟುಗಳು ಯಾವುವು?
ಸಾಮಾಜಿಕ ಜಾಲತಾಣ
ಇದು ಭಾರತದ ಮೊದಲ ಸೋಶಿಯಲ್ ಮೀಡಿಯಾ ಎಲೆಕ್ಷನ್! ಫೇಸ್ಬುಕ್, ಟ್ವಿಟ್ಟರ್ಗಳು ಇಂದು ಪೇಪರು- ಟೀವಿ ಜಾಹೀರಾತಿಗಿಂತ ಪರಿಣಾಮಕಾರಿ. ನಾಯಕ ಒಂದು ತಾಸು ಭಾಷಣ ಬಿಗಿದರೆ ಅಥವಾ ಪತ್ರಿಕಾಗೋಷ್ಠಿಯಲ್ಲಿ ಒದರಿಕೊಂಡರೆ ಅದಕ್ಕೆ ವಿಶೇಷ ಮಹತ್ವ ಸಿಗುತ್ತಿಲ್ಲ. ಅದೇ ಫೇಸ್ಬುಕ್. ಟ್ವಿಟ್ಟರ್ನಲ್ಲಿ ಒಂದು ಸಾಲನ್ನು ಸ್ಫೋಟಿಸಿಬಿಟ್ಟರೆ ಅದಕ್ಕೆ ಸಿಗುವ ಮಾನ್ಯತೆಯೇ ಬೇರೆ. ಬಹುಶಃ ಈ ಬೆಳವಣಿಗೆ 1983ರ ಆಂಧ್ರ ವಿಧಾನಸಭೆ ಚುನಾವಣೆಯನ್ನು ನೆನಪಿಸುತ್ತದೆ. ಈಗೇನು ಫೇಸ್ಬುಕ್ ಜನಪ್ರಿಯವಾಗುತ್ತಿರುವಂತೆ ಆಗ ಭಾರತದಲ್ಲಿ ಟಿವಿ ತನ್ನ ಸಾಮ್ರಾಜ್ಯ ಸ್ಥಾಪಿಸುತ್ತಿತ್ತು. ಅಲ್ಲಿ ಆ ಹಿಂದೆ 6 ಬಾರಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಸಾಂಪ್ರದಾಯಿಕ ಪ್ರಚಾರ ಸಭೆಗಳನ್ನೇ ಮುಂದುವರಿಸಿತ್ತು. ಆದರೆ, ಟಿಡಿಪಿ (ತೆಲುಗು ದೇಶಂ ಪಾರ್ಟಿ) ನಾಯಕ ಎನ್.ಟಿ. ರಾಮ್ರಾವ್ ಟಿವಿಯನ್ನೇ ಪ್ರಚಾರ ಮಾಧ್ಯಮವನ್ನಾಗಿಸಿಕೊಂಡು ಕೈನಿಂದ ಅಧಿಕಾರ ಕಸಿದುಕೊಂಡರು. ಹತ್ತು ವರುಷದ ಹಿಂದೆ ಫೇಸ್ಬುಕ್ ಸ್ಥಾಪಿಸಿದ್ದ ಮಾರ್ಕ್ ಝುಕರ್ಬರ್ಗ್ ಇವತ್ತು ಇಷ್ಟೆಲ್ಲ ಲೈಕು- ಕಾಮೆಂಟುಗಳ ಕೋಟೆ ಕಟ್ಟಿಕೊಂಡಿದ್ದರೆ ಅದಕ್ಕೆ ನೇರ ಕಾರಣ ಒಬಾಮ. 2008ರಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರೆಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಬರಾಕ್ ಒಬಾಮ, ಜಾನ್ ಮೆಕೇನ್ನನ್ನು ಹಿಂದಿಕ್ಕಿದ್ದು ಇದೇ ಫೇಸ್ಬುಕ್ ಕ್ಯಾಂಪೇನ್ನಿಂದ. ಈ ದಿಗ್ವಿಜಯದಿಂದ ಅಮೆರಿಕದಲ್ಲಿ ಫೇಸ್ಬುಕ್ಗೆ ಸಿಕ್ಕ ಗೌರವವೇ ಬೇರೆಯಾಗಿತ್ತು. ಇವತ್ತು ಭಾರತದ ಯುವಕರಿಗೆ ಶೇ.37ರಷ್ಟು ಸುದ್ದಿಗಳನ್ನು ಇಂಟರ್ನೆಟ್ಟೇ ಒದಗಿಸುತ್ತಿದೆ. ಒಂದು ಸೂಕ್ಷ್ಮ ವಿಚಾರವನ್ನು ಚರ್ಚಿಸಲೂ ಇಲ್ಲಿ ನೂರಾರು ವೇದಿಕೆಗಳು. ಅಭ್ಯರ್ಥಿಯ ಭಾಷಣದ ಒಂದು ಸಾಲು ವಾರಗಟ್ಟಲೆ ಚರ್ಚೆಯ ವಸ್ತುವಾಗುತ್ತಿದೆ. ನಾಯಕನ ಸಾಧನೆ, ಹಗರಣಗಳು, ವಂಚನೆಯ ವಿಡಿಯೋ- ಫೋಟೋಗಳು ಫ್ಲೆಕ್ಸ್ನಂತೆ ಕಿರುಪರದೆ ಮೇಲೆ ತೋರಣ ಕಟ್ಟುತ್ತವೆ. ಫೇಸ್ಬುಕ್- ಟ್ವಿಟ್ಟರ್ನಷ್ಟು ವೇಗವಾಗಿ ಸುದ್ದಿ ಹರಡುವ ಸಾಮರ್ಥ್ಯ ಇವತ್ತಿನ ನ್ಯೂಸ್ ಚಾನೆಲ್ಗಳಿಗೂ ಇಲ್ಲ. ಹೀಗಾಗಿ, ರಾಜಕಾರಣಿಗಳು ಈ ಸಮೂಹದ ಮೇಲೆ ಕಣ್ಣಿಟ್ಟಿದ್ದಾರೆ. ವಿಶೇಷವಾಗಿ ಯುವಜನತೆಯ ಮತಗಳನ್ನು ಲಪಟಾಯಿಸಲಿಕ್ಕೆ!
ಟೀ ವ್ಯಾಪಾರಿಗಳು
ಎಲೆಕ್ಷನ್ನಿನ ಕಾರಣಕ್ಕಾಗಿ ಇವತ್ತು ಟೀಯ ಬಣ್ಣವೂ ಬದಲಾಗಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಹುಟ್ಟುಹಾಕಿದ 'ಚಾಯ್ ಪೇ ಚರ್ಚಾ' ಟೀ ವ್ಯಾಪಾರಿಗಳನ್ನು ಆಕರ್ಷಿಸಿದೆ. ಮೋದಿಯೂ ಈ ಹಿಂದೆ ಚಾ ಮಾರುತ್ತಿದ್ದರಂತೆ. ಹೀಗಾಗಿ, ಟೀ ಇದೀಗ ಕಾಂಗ್ರೆಸ್ಗೆ ಗಂಟಲು ಸುಡುವ ಪೇಯ. ಭಾರತದಲ್ಲಿ ಶೇ.77.9 ಮಂದಿ ಟೀಪ್ರಿಯರಿದ್ದಾರೆ; ಒಟ್ಟಾರೆ 13 ಲಕ್ಷ ಟೀ ವ್ಯಾಪಾರಿಗಳಿದ್ದಾರೆ. ಟೀ ವ್ಯಾಪಾರ ಸಣ್ಣ ಉದ್ಯಮವಾದರೂ ದೊಡ್ಡ ಮಾಧ್ಯಮ. ಕಟಿಂಗ್ ಶಾಪಿನಂತೆ ಇದೂ ಚರ್ಚೆಗೆ ಜಾಗ. ಈ ಕಾರಣಕ್ಕಾಗಿಯೇ ಮೋದಿ ಈ ವರ್ಗದ ಮೇಲೆ ದೃಷ್ಟಿ ಹರಿಬಿಟ್ಟರು. ಬಿಹಾರದಲ್ಲಿ ಚಾಯ್ ಪೇ ಚರ್ಚಾ ಜನಪ್ರಿಯವಾಗಿದ್ದನ್ನು ಗಮನಿಸಿ ಲಾಲೂ ಪ್ರಸಾದ್ ಯಾದವ್ ಕೂಡ ಈ ವರ್ಗವನ್ನು ಸೆಳೆಯಲೆತ್ನಿಸಿದರು. ಚಾಯ್ ಪೇ ಚರ್ಚಾ ಜನಪ್ರಿಯತೆ ಗಮನಿಸಿದ ಹಲವು ಪಕ್ಷಗಳು 'ಬಾರ್ ಮೇ ಚರ್ಚಾ' ನಡೆಸಲು ಚಿಂತಿಸಿದರು. ಆದರಿದು ಟೀಕೆಗೆ ಗುರಿಯಾಯಿತು.
ಬೀದಿ ಬದಿ ವ್ಯಾಪಾರಿಗಳು
ಇವರನ್ನು ಆಕರ್ಷಿಸಲು ಹೊರಟಿದ್ದು ರಾಹುಲ್ಗಾಂಧಿ. ಮೊನ್ನೆ ಮೊನ್ನೆ ಗಡಿಬಿಡಿಯಲ್ಲಿ ಮತ್ತು ಅವಿರೋಧವಾಗಿ 'ಬೀದಿ ಬದಿಯ ವ್ಯಾಪಾರಿಗಳ ಜೀವನೋಪಾಯ ಹಕ್ಕುಗಳ ರಕ್ಷಣಾ ಮಸೂದೆ' ಜಾರಿಗೊಳಿಸುವ ಮೂಲಕ ಈ ವರ್ಗದ ಕೈಹಿಡಿದರು. ಭಾರತದಲ್ಲಿ ಸುಮಾರು 1 ಕೋಟಿ ಜನ ಬೀದಿ ಬದಿಯ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದಾರೆ. ಇವರ ಕಲ್ಯಾಣಕ್ಕೆ ಪ್ರತಿ ಪಟ್ಟಣದಲ್ಲಿ ಪ್ರಾಧಿಕಾರ ಸ್ಥಾಪಿಸಿ ಪೊಲೀಸರ ಕಿರುಕುಳದಿಂದ ರಕ್ಷಿಸುವುದು ಈ ಮಸೂದೆಯ ಉದ್ದೇಶ. ಅಲ್ಲದೆ ಪ್ರತಿ ಪಟ್ಟಣದಲ್ಲಿ ಶೇ.2.5ರಷ್ಟು ಬೀದಿ ಬದಿಯ ವ್ಯಾಪಾರಿಗಳಿರಬೇಕು ಎಂಬ ಕಾನೂನು ಕೂಡ ಕಾಂಗ್ರೆಸ್ಸಿಗೆ ಲಾಭವೇ. ಪ್ರಮಾಣಪತ್ರ ಹೊಂದಿದ ಬೀದಿ ಬದಿಯ ವ್ಯಾಪಾರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವಂತಿಲ್ಲ ಎಂಬ ನೀತಿಯೂ ಈ ವರ್ಗಕ್ಕೆ ಭರವಸೆ ತಂದುಕೊಟ್ಟಿದೆ. ಹೀಗಾಗಿ ಇವರೆಲ್ಲರ ಮತಗಳು ಕಾಂಗ್ರೆಸ್ನ ಬುಟ್ಟಿಗೆ ಸೇರುವುದು ನಿಶ್ಚಿತ.
ರಿಕ್ಷಾ ಚಾಲಕರು
ಇವರನ್ನು ಸೆಳೆಯಲು ಹೊರಟಿದ್ದು ದೆಹಲಿಯ '49 ದಿನದ ಮುಖ್ಯಮಂತ್ರಿ', ಆಮ್ ಆದ್ಮಿಯ ಅರವಿಂದ ಕೇಜ್ರಿವಾಲ್. ಇವತ್ತು ದಿಲ್ಲಿಯ ಶೇ.62,500 ಆಟೋಗಳ ಹಿಂದೆ ಕೇಜ್ರಿವಾಲ್ರ ಪೋಸ್ಟರ್ ಅಂಟಿಸಲಾಗಿದೆ. ಅಲ್ಲಿ ಆಟೋ ರಿಕ್ಷಾ ರ್ಯಾಲಿಯೂ ಯಶಸ್ವಿಯಾಗಿದೆ. ಕೇಂದ್ರದಲ್ಲಿ ತಾವೇನಾದರೂ ಅಧಿಕಾರಕ್ಕೆ ಬಂದರೆ, ಆಟೋ ಬಾಡಿಗೆ ದರ ನ್ಯಾಯಯುತವಾಗಿಸುವುದಲ್ಲದೆ, ಚಾಲನೆಯ ಮಿತಿಯನ್ನು ದೇಶಾದ್ಯಂತ ವಿಸ್ತರಿಸುತ್ತೇವೆ ಅಂತಲೂ ಆಮ್ ಆದ್ಮಿ ಘೋಷಿಸಿದೆ. ಜಿಪಿಎಸ್ (ಎಟ್ಟಛಿಛಟ ಕ್ಟಿಡ್ಝಡ್ಝ್ಟಿಟ್ಝಿಟ್ಜಿ ಖಣಡಡಿಜಟ) ಉಳ್ಳ ಮೀಟರ್ಗೆ ಇಂದು ಮಾರುಕಟ್ಟೆಯಲ್ಲಿ 13,500 ರುಪಾಯಿ. ಆದರೆ, ಅದನ್ನು 18 ಸಾವಿರ ರು. ಕೊಟ್ಟು ಖರೀದಿಸುವ ಸ್ಥಿತಿಯಿದೆ. ಈಗಾಗಲೇ ಮೀಟರ್ ಹೊಂದಿರುವ ಆಟೋಗಳಿಗೆ ಜಿಪಿಎಸ್ ಡಿವೈಸ್ ಅನ್ನು 4 ಸಾವಿರ ರು.ನಲ್ಲಿ ನೀಡುವ ಭರವಸೆಯನ್ನೂ ಪಕ್ಷ ಕೊಟ್ಟಿದೆ. ಇಲ್ಲಿಯ ತನಕ ಯಾವ ಪಕ್ಷಗಳೂ ಆಟೋ ಚಾಲಕರ ಮೇಲೆ ಕಣ್ಣಿಟ್ಟಿರಲಿಲ್ಲ. ಇದು 'ಆಪ್'ನ ದಾಖಲೆಯೇ ಸರಿ.
ಮಹಿಳೆಯರು
ಇವರ ಮೇಲೆ ಬಹುತೇಕ ಪಕ್ಷಗಳು ಕಣ್ಣಿಟ್ಟಿವೆ. ಅದರಲ್ಲೂ ರಾಹುಲ್ ಗಾಂಧಿ ಹೋದ ರಾಜ್ಯಗಳಲ್ಲೆಲ್ಲ 'ಮಹಿಳಾ ಸಮಾವೇಶ' ನಡೆಸಿದ್ದಾರೆ. ನಮ್ಮ ಕರ್ನಾಟಕದಲ್ಲೂ ತುಮಕೂರಿನಲ್ಲಿ ಈ ಸಮಾವೇಶ ನಡೆಯಿತು. 'ಇಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬಂದಿದ್ದಾರೆ' ಎನ್ನುವ ಮೂಲಕ ರಾಹುಲ್ ಸಮಾವೇಶದ ವೈಫಲ್ಯವನ್ನೂ ಒಪ್ಪಿಕೊಂಡರು. ಇನ್ನೆಲ್ಲೋ ಹೋದಲ್ಲಿ ರಾಹುಲ್ಗೆ ಕಿಸ್ ಮಾಡಿದ ಮಹಿಳೆಯನ್ನು, ಆಕೆಯ ಗಂಡ ಕೊಂದು ಹಾಕಿದ ಘಟನೆಯೂ ನಡೆಯಿತು. ಸಿಎಂ ಸಿದ್ದರಾಮಯ್ಯ ಮಹಿಳೆಯರ ವೋಟನ್ನು ದೃಷ್ಟಿಯಲ್ಲಿಟ್ಟುಕೊಂಡು, ಸ್ವಸಹಾಯ ಸಂಘಗಳ ಸಾಲವನ್ನೇ ಮನ್ನಾ ಮಾಡಿದರು. ಬಿಜೆಪಿಯೂ ಪ್ರತಿ ರಾಜ್ಯಗಳಲ್ಲಿ ಮಹಿಳಾ ಅಭ್ಯರ್ಥಿಗೆ ಪ್ರಾತಿನಿಧ್ಯ ಕೊಟ್ಟಿದೆ. ರಾಜ್ಯದಲ್ಲಿ ಅತಿಹೆಚ್ಚು ಮಹಿಳಾ ಮತವಿರುವ (3,65,592) ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆಯವರನ್ನು ನಿಲ್ಲಿಸಿದೆ. ಆಮ್ ಆದ್ಮಿಯಲ್ಲೂ ಗ್ಲ್ಯಾಮರ್ ಮಣಿಯರಿಗೆ ಟಿಕೆಟ್ ಕಲ್ಪಿಸಿದ್ದು ಮತ್ತೊಂದು ಸಾಕ್ಷಿ.
-ಕೀರ್ತಿ ಕೋಲ್ಗಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


