ಹನ್ನೆರಡು ವರ್ಷಗಳ ದುರಾಡಳಿತ

ಹನ್ನೆರಡು ವರ್ಷಗಳವರೆಗೆ ಪತ್ರಿಕೆ ನಡೆಸಿದ ಏಳು ಆಡಳಿತ ವರ್ಗಗಳು ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ತಂದಿದ್ದವು ಎಂಬುದನ್ನು ತೋರಿಸುತ್ತದೆ. ಈ ಅವಧಿಯ ಆಡಳಿತವನ್ನು ದುರಾಡಳಿತ ಎಂದು ಕರೆದರೆ ಬಹಳ ಸೌಮ್ಯ ಶಬ್ದವಾಗುತ್ತದೆ. ಅಜ್ಞಾನ, ಅವ್ಯವಸ್ಥೆ, ಅರಾಜಕತೆ, ಹಣಕಾಸಿನ ಹಾಗೂ ಸಂಪಾದಕೀಯ ವಿಷಯದಲ್ಲಿ ಅನುಭವಗಳ ಅಭಾವದಿಂದ ಬೆಂಗಳೂರು ಮತ್ತು ಹುಬ್ಬಳ್ಳಿ ಕಚೇರಿಗಳಲ್ಲಿ ಅಸಹ್ಯಕರ ವಾತಾವರಣ ಇತ್ತು. ಒಂದು ರೀತಿಯಲ್ಲಿ ಎರಡೂ ಕಚೇರಿಗಳಲ್ಲಿ, ಕೆಲಸಗಾರರಿಗಿಂತಲೂ ಪುಂಡರು, ರೌಡಿಗಳು, ಲಂಚಕೋರರು, ಸೋಮಾರಿಗಳು ತುಂಬಿದ್ದರು.
1 974ನೇ ನವೆಂಬರ್ 21ನೇ ತಾರೀಖಿನಿಂದ 1985ನೇ ಫೆಬ್ರವರಿ 10ನೇ ತಾರೀಕಿನವರೆಗೆ, ಅಂದರೆ ಸುಮಾರು 12 ವರ್ಷಗಳಲ್ಲಿ ಏಳು ಆಡಳಿತ ವರ್ಗಗಳು ಬಂದು, ಸಂಯುಕ್ತ ಕರ್ನಾಟಕ ಪತ್ರಿಕೆಯ ಆಡಳಿತ ನಡೆಸಲು ಪ್ರಯತ್ನಿಸಿದವು. ಆ ಅವಧಿಯಲ್ಲಿ 'ಪತ್ರಿಕೆಗಳ ಪ್ರಸಾರ, ಗುಣಮಟ್ಟ ಎಷ್ಟು ಕೆಳಮಟ್ಟಕ್ಕೆ ಹೋಗಿತ್ತೆಂದರೆ, ಅವು ಇನ್ನೂ ಕೆಳಮಟ್ಟಕ್ಕೆ ಇಳಿಯುವ ಸಂಭವವೇ ಇರಲಿಲ್ಲ'. ಈ ಸಮಯದಲ್ಲಿ ಕೊನೆಯ ಕೋರ್ಟು ರಿಸೀವರೊಬ್ಬರು ನನಗೆ ಹೇಳಿದ ಮಾತು ಜ್ಞಾಪಕಕ್ಕೆ ಬರುತ್ತದೆ. ಒಮ್ಮೆ ಅವರು ದಾರಿಯಲ್ಲಿ ಸಿಕ್ಕಾಗ 'ಶ್ಯಾಮರಾಯರೇ, ಸಂಯುಕ್ತ ಕರ್ನಾಟಕದ ಬೆಂಗಳೂರು ಮುದ್ರಣದ ಪ್ರಸಾರವನ್ನು ಐದು ಸಾವಿರಕ್ಕೆ ನಿಗದಿಮಾಡಬೇಕೆಂದು ಯೋಚಿಸುತ್ತಿದ್ದೇನೆ. ನೀವು ಏನು ಹೇಳುತ್ತೀರಿ?' ಎಂದು ಕೇಳಿದರು. ನನಗೆ ಆಶ್ಚರ್ಯವಾಯಿತು, ಆಘಾತವೂ ಆಯಿತು. ಆಗ ನಾನು ಪ್ರತಿಯೊಂದು ಪತ್ರಿಕೆಯವರೂ ತಮ್ಮ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ನೀವು ಕಡಿಮೆ ಮಾಡಲು ಯೋಚಿಸುತ್ತಿದ್ದೀರಲ್ಲ? ಎಂದು ಕೇಳಿದೆ. ಆಗ ಅವರು 'ಏನು ಮಾಡಲಿ, ಪತ್ರಿಕೆ ಮುದ್ರಿಸಲು ಮುದ್ರಣ ಕಾಗದ ಇಲ್ಲ. ಅದನ್ನು ಖರೀದಿಸಲು ಹಣವಿಲ್ಲ. ತಿಂಗಳ ವರಮಾನ ಸಿಬ್ಬಂದಿ ಸಂಬಳಕ್ಕೇ ಸಾಕಾಗುತ್ತಿಲ್ಲ. ಪ್ರತಿ ತಿಂಗಳು ಸಾಲ ಮಾಡಿ ಮಾಡಿ ಸಾಕಾಗಿದೆ' ಎಂದು ಬೇಸರದಿಂದ ಹೇಳಿದರು.
ಈ ಸಂವಾದ ಸಂಯುಕ್ತ ಕರ್ನಾಟಕ ಪತ್ರಿಕೆಯ ಅಂದಿನ ಬೆಂಗಳೂರು ಮುದ್ರಣದ ಪರಿಸ್ಥಿತಿಯನ್ನು ಚಿತ್ರಿಸುತ್ತದೆ. 12 ವರ್ಷಗಳವರೆಗೆ ಪತ್ರಿಕೆ ನಡೆಸಿದ ಏಳು ಆಡಳಿತ ವರ್ಗಗಳು ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ತಂದಿದ್ದವು ಎಂಬುದನ್ನು ತೋರಿಸುತ್ತದೆ. ಈ ಅವಧಿಯ ಆಡಳಿತವನ್ನು ದುರಾಡಳಿತ ಎಂದು ಕರೆದರೆ ಬಹಳ ಸೌಮ್ಯ ಶಬ್ದವಾಗುತ್ತದೆ. ಅಜ್ಞಾನ, ಅವ್ಯವಸ್ಥೆ, ಅರಾಜಕತೆ, ಹಣಕಾಸಿನ ಹಾಗೂ ಸಂಪಾದಕೀಯ ವಿಷಯದಲ್ಲಿ ಅನುಭವಗಳ ಅಭಾವದಿಂದ ಬೆಂಗಳೂರು ಮತ್ತು ಹುಬ್ಬಳ್ಳಿ ಕಚೇರಿಗಳಲ್ಲಿ ಅಸಹ್ಯಕರ ವಾತಾವರಣ ಇತ್ತು. ಒಂದು ರೀತಿಯಲ್ಲಿ ಎರಡೂ ಕಚೇರಿಗಳಲ್ಲಿ, ಕೆಲಸಗಾರರಿಗಿಂತಲೂ ಪುಂಡರು, ರೌಡಿಗಳು, ಲಂಚಕೋರರು, ಸೋಮಾರಿಗಳು ತುಂಬಿದ್ದರು. ಹುಬ್ಬಳ್ಳಿಯಲ್ಲಿ ಒಂದು ಹಳೆಯ ರೋಟರಿಯಂತ್ರ ಮತ್ತು ಬೆಂಗಳೂರಿನಲ್ಲಿ ನೂರು ವರ್ಷದ ಒಂದು ರೋಟರಿ ಯಂತ್ರಗಳ ಮೇಲೆ ಪತ್ರಿಕೆಯನ್ನು ಮುದ್ರಿಸಲಾಗುತ್ತಿತ್ತು. ಆ ಮುದ್ರಣ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ವಾರದಲ್ಲಿ ಕನಿಷ್ಠ 2-3 ದಿನವಾದರೂ ಮುದ್ರಣಕ್ಕೆ ಅಡ್ಡಿಯಾಗುತ್ತಿತ್ತು ಅಥವಾ ವಿಳಂಬವಾಗುತ್ತಿತ್ತು. ಎಷ್ಟೋ ತಿಂಗಳು ಈ ಮುಂದ್ರಣ ಯಂತ್ರದ ಬೆಲೆಗಿಂತಲೂ ಹೆಚ್ಚು ಹಣವನ್ನು ಅದರ ರಿಪೇರಿಗಾಗಿ ಖರ್ಚು ಮಾಡುತ್ತಿದ್ದರೆಂದರೆ ಆಶ್ಚರ್ಯವೆನಿಸಬಹುದು. ಇನ್ನು ಪತ್ರಿಕೆಗಳ ಸಾಗಣೆಯೂ ಒಂದು ಸಮಸ್ಯೆಯಾಗಿತ್ತು. ಸಂಸ್ಥೆಗೆ ಸ್ವಂತ ವಾಹನಗಳಿರಲಿಲ್ಲ. ಗುತ್ತಿಗೆದಾರರಿಗೆ ಬಾಡಿಗೆ ಕೊಡಲು ಹಣ ಇರುತ್ತಿರಲಿಲ್ಲ. ಆದ್ದರಿಂದ ಪತ್ರಿಕೆಗಳನ್ನು ರೈಲು ಅಥವಾ ಬಸ್ಸುಗಳ ಮುಖಾಂತರವೇ ಕಳಿಸಬೇಕಾಗಿತ್ತು. ಈ ಕಾರಣಗಳಿಂದ ಪತ್ರಿಕೆಯ ಪ್ರಸಾರ ಹುಬ್ಬಳ್ಳಿಯಲ್ಲಿ ಕೇವಲ 50 ಸಾವಿರ ಮತ್ತು ಬೆಂಗಳೂರಿನಲ್ಲಿ ಕೇವಲ 15 ಸಾವಿರ ಇತ್ತು. ಜಾಹಿರಾತುಗಳಿಂದ ಬರುವ ವರಮಾನ ಬಹಳ ಕಡಿಮೆಯಾಗಿತ್ತು. ಎಷ್ಟೋ ಸಲ ಮುದ್ರಣ ಕಾಗದದ ಖರೀದಿಗಾಗಿ ಅಥವಾ ಸಿಬ್ಬಂದಿಯವರಿಗೆ ಸಂಬಳ ಕೊಡುವುದಕ್ಕಾಗಿ ಏಜೆಂಟರು ಮತ್ತು ಜಾಹಿರಾತುದಾರರಿಂದ ಮುಂಗಡ ಹಣ ಪಡೆಯುವ ಸಂದರ್ಭಗಳೂ ಬರುತ್ತಿದ್ದವು.
ಇಂತಹ ಪರಿಸ್ಥಿತಿಯಲ್ಲಿ ಕೆ.ಪಿ.ಪಿ. (ಘೋರ್ಪಡೆ) ಕಂಪನಿಯವರು ಪತ್ರಿಕೆಗಳನ್ನು ಖರೀದಿ ಮಾಡಿದ್ದರು. ಮತ್ತು ಸ್ಥಿರಾಸ್ತಿಗಳನ್ನು ಗುತ್ತಿಗೆಗೆ ತೆಗೆದುಕೊಂಡರು. ಇದು ಬಂಡವಾಳವಿಲ್ಲದ ಕಂಪನಿ ಎಂಬುದನ್ನು ಈಗಾಗಲೇ ಹೇಳಿದೆ. ಟ್ರಸ್ಟಿಗೆ ಕೊಡಬೇಕಾಗಿದ್ದ ಹಣವನ್ನೇ ಈ ಕಂಪನಿ ಕೊಡಲಿಲ್ಲವೆಂದ ಮೇಲೆ, ಪತ್ರಿಕೆಗಳನ್ನು ನಡೆಸಲು ಬೇಕಾಗುವ ಅಷ್ಟೂ ಹಣವನ್ನು ಹೇಗೆ ತರಬಲ್ಲದು? ಆದರೆ ಆ ಕಂಪನಿಯ ಆಡಳಿತಾಧಿಕಾರಿಯಾಗಿದ್ದ ಕುಮಾರವೇಲು ಎಂಬಾತ ಬಹಳ ಬುದ್ಧಿವಂತ, ಉಪಾಯಗಾರ, ತಂತ್ರಗಾರ, ಟ್ರಸ್ಟಿನ ಸಾಲಗಳಿಗೆ ಬಡ್ಡಿ ಕೊಡಿಸಿ ಹೆಚ್ಚು ತೋರಿಸಿದ್ದರು. ಯಂತ್ರಗಳ ಬೆಲೆಯನ್ನು ಬಹಳ ಕಡಿಮೆ ತೋರಿಸಿದ್ದರು. ಸಾವಿರ ರೂ. ಯಂತ್ರಕ್ಕೆ ಕೇವಲ ನೂರು ರೂ. ತೋರಿಸಿದ್ದರು. ತನ್ನ ಕಾರ್ಯ ನಿರ್ವಹಣೆಗಾಗಿ ಈ ಕಂಪನಿಯ ಕಾರ್ಯದರ್ಶಿ ಬೆಂಗಳೂರು ಹುಬ್ಬಳ್ಳಿ ಯಂತ್ರೋಪಕರಣಗಳನ್ನು ಕೆನರಾ ಬ್ಯಾಂಕಿಗೆ ಒತ್ತೆ ಇಟ್ಟು ಸುಮಾರು 29 ಲಕ್ಷ ರೂ. ಸಾಲ ಪಡೆಯಲು ಸಂಚು ಮಾಡಿದ. ಈ ಸಾಲಕ್ಕೆ ಸೊಂಡೂರು ಕಂಪನಿಯವರು ಭದ್ರತೆ ಕೊಡುವುದಾಗಿ ತಿಳಿಸಿದ್ದರು. ನಂತರ ಕಂಪನಿ ಕಾನೂನಿನ ಪ್ರಕಾರ ಈ ರೀತಿ ಮಾಡಲು ಬರುವುದಿಲ್ಲವೆಂದ ಮೇಲೆ ಅನಂತನಿಗೆ ಮನ ಒಲಿಸಿ, ಟ್ರಸ್ಟಿನ ಸ್ಥಿರಾಸ್ತಿಗಳನ್ನೇ ಬ್ಯಾಂಕಿಗೆ ಒತ್ತೆ ಹಾಕಿಸಿದರು. ಅಂದರೆ ಕರ್ನಾಟಕ ಪತ್ರಿಕಾ ಪ್ರೈ.ಲಿ. ಕಂಪನಿಯ ಸಾಲಕ್ಕೆ ಲೋಕ ಶಿಕ್ಷಣ ಟ್ರಸ್ಟ್ ಭದ್ರತೆ ಕೊಡಬೇಕಾಯಿತು. ಅನಂತ ದಿವಾಕರ ಇನ್ನು ಧರ್ಮದರ್ಶಿಯಾಗಿದ್ದರಿಂದ ಅವನ ರುಜು ಕಾನೂನು ಬದ್ಧವಾಗಿತ್ತು. ಇದು ಆ ಕಂಪನಿ ಮಾಡಿದ ಮೊದಲನೇ ವಂಚನೆ. ಇದೇ ರೀತಿ ಇನ್ನೂ ಅನೇಕ ವಂಚನೆಗಳನ್ನು ಆ ಕಂಪನಿ ಮಾಡಿತು. ಟ್ರಸ್ಟ್ನ ಎಲ್ಲಾ ಸಾಲಗಳನ್ನು ತಾನು ತೀರಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರೂ ಒಂದು ಪೈಸೆ ಸಾಲ ತೀರಿಸಲಿಲ್ಲ. ಕಾರ್ಮಿಕರಿಗೆ ಕಾನೂನು ಪ್ರಕಾರ ಕೊಡಬೇಕಾಗಿದ್ದ ಪ್ರಾವಿಡೆಂಡ್ ಫಂಡ್, ಗ್ರಾಚ್ಯುಯಿಟಿ, ಇ.ಎಸ್.ಐ ಹಣವನ್ನು ಕೊಡಲಿಲ್ಲ. ಈ ಬಗ್ಗೆ ಅದುವರೆಗೆ ಜಮಾ ಆಗಿದ್ದ ಹಣವನ್ನು ಸಹ ಬಳಸಿಕೊಂಡಿದ್ದಲ್ಲದೆ ಪ್ರತಿ ತಿಂಗಳು ಸಂಬಳಕ್ಕಾಗಿ ಸೊಂಡೂರು ಕಂಪನಿಯಿಂದ ಹಣ ತರಬೇಕಾಗುತ್ತಿತ್ತು. ಇಲ್ಲವೆ ಬ್ಯಾಂಕಿನಲ್ಲಿ ಸಾಲ ಮಾಡಬೇಕಾಗುತ್ತಿತ್ತು. ಎಂ.ವೈ. ಘೋರ್ಪಡೆಯವರು ಆಗ ರಾಜ್ಯದ ಹಣಕಾಸು ಮಂತ್ರಿಯಾಗಿದ್ದರಿಂದ ಕೆನರಾ ಬ್ಯಾಂಕಿನರು ತಕರಾರು ಮಾಡದೆ, ಕೇಳಿದಷ್ಟು ಸಾಲ ಕೊಡುತ್ತಿದ್ದರು.
ಘೋರ್ಪಡೆಯವರಿಗೆ ಈ ಬಗ್ಗೆ ಚಿಂತೆ ಇರಲಿಲ್ಲ. ಅವರಿಗೆ ಬೇಕಾಗಿರುವುದ ತಮ್ಮ ಪ್ರಚಾರ. ಪತ್ರಿಕೆಯಲ್ಲಿ ಪ್ರತಿ ದಿನ ತಮ್ಮ ಫೋಟೊ ಅಥವಾ ಭಾಷಣ ಪ್ರಕಟವಾದರೆ ಬಹಳ ಸಂತೋಷ ಪಡುತ್ತಿದ್ದರಂತೆ. ಆದರೆ ಪ್ರತಿ ದಿನ ಸಾಲ ಮಾಡಿ ಪತ್ರಿಕೆಯನ್ನು ಎಷ್ಟು ದಿನ ನಡೆಸಲು ಸಾಧ್ಯ ಎಂಬ ಕಹಿ ಸತ್ಯವನ್ನು ಅವರು ಅರಿಯಬೇಕಾಗಿತ್ತು. ಅವರು ಅರ್ಥ ಶಾಸ್ತ್ರದಲ್ಲಿ ಬಹಳ ಬುದ್ಧಿವಂತರೆಂದು ಹೆಸರು ಗಳಿಸಿದ್ದರು. ಆದರೆ ರಾಜ್ಯದ ರಾಜಕೀಯ ಮೋಹ ಅವರನ್ನು ದಾರಿ ತಪ್ಪಿಸಿತ್ತು. ಅಂದು ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದರು. ಪ್ರಾರಂಭದಲ್ಲಿ ಅವರು ಇಂದಿರಾ ಗಾಂಧಿಯವರ ಶಿಷ್ಟರಾಗಿದ್ದರು. ಇಂದಿರಾ ಗಾಂಧಿ ಚಿಕ್ಕಮಗಳೂರು ಕ್ಷೇತ್ರದಿಂದ ಚುನಾವಣೆಗೆ ನಿಂತಾಗ, ಅರಸುರವರು ಹಗಲಿರುಳು ಶ್ರಮಿಸಿ, ಆಕೆ ಗೆಲ್ಲುವಂತೆ ಮಾಡಿದರು. ಮುಂದೆ ಅವರಲ್ಲಿ ಭಿನ್ನಾಭಿಪ್ರಾಯ ತಲೆದೋರಿ, ಪರಸ್ಪರ ವಿರೋಧಿಗಳಾದರು. ಆಗ ಅರಸು ಅವರನ್ನು ಕಾಂಗ್ರೆಸ್ ಪಕ್ಷದಿಂದಲೇ ಹೊರಗೆ ಹಾಕಲಾಯಿತು. ಆದರೂ ಅರಸು ಎದೆಗುಂದಲಿಲ್ಲ. ಇಂದಿರಾ ಗಾಂಧಿ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜ್ಯದಲ್ಲಿ ಒಂದು ಪ್ರತ್ಯೇಕ ಪಕ್ಷವನ್ನೇ ಕಟ್ಟಿದರು. ಇದಕ್ಕೆ ಅರಸು ಕಾಂಗ್ರೆಸ್ ಎಂದು ಹೆಸರಿಟ್ಟರು. ಇದರ ಒಂದು ಮಹಾಧಿವೇಶನ ಲಾಲ್ಬಾಗ್ ಗಾಜಿನ ಮನೆಯಲ್ಲಿ ನಡೆಯಿತು. ಹಾಸನದ ಹಾರನಹಳ್ಳಿ ರಾಮಸ್ವಾಮಿಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರೆಂದು, ಈ ಕಾಂಗ್ರೆಸ್ಸಿಗೆ ಅರಸುರವರು ಸಾಕಷ್ಟು ಆಸ್ತಿಯನ್ನು ಮಾಡಿಕೊಟ್ಟು ಇದಕ್ಕಾಗಿ ಒಂದು ಟ್ರಸ್ಟ್ ಸಹ ರಚಿಸಿದ್ದರು. ಈ ಟ್ರಸ್ಟಿನ ವಿಳಾಸ ಈಗ ಇಲ್ಲ.
ಇದೇ ಸಮಯದಲ್ಲಿ ಅರಸು ಅವರ ಅನೇಕ ಮಿತ್ರರು ಅವರನ್ನು ಬಿಟ್ಟು ಹೋದರು. ಇಂದಿರಾ ಗಾಂಧಿಯವರ ವಿರೋಧ ಕಟ್ಟಿಕೊಳ್ಳಲು ಅವರಿಗೆ ಇಷ್ಟವಿರಲಿಲ್ಲ. ಹೊಸ ಪಕ್ಷದಲ್ಲಿ ಸೇರಿಕೊಳ್ಳಲಿಲ್ಲ. ಅದರಲ್ಲಿ ಕೆಲವರು ಆಗ ತಾನೆ ಅಧಿಕಾರಕ್ಕೆ ಬಂದಿದ್ದ ಜನತಾ ದಳದಲ್ಲಿ ಸೇರಿಕೊಳ್ಳಲು ಪ್ರಯತ್ನಿಸಿದರು. ಅಂತಹವರಲ್ಲಿ ಎಂ.ವೈ. ಘೋರ್ಪಡೆಯವರು ಒಬ್ಬರು. ಅವರಿಗೆ ಕೇಂದ್ರ ಮಂತ್ರಿಯಾಗುವ ಆಸೆ ಇತ್ತು. ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಮತ್ತು ಕಾಶ್ಮೀರದ ದೊರೆ ಕರಣ್ ಸಿಂಗರೊಂದಿಗೆ ಹಲವು ಬಾರಿ ಈ ಬಗ್ಗೆ ಸಮಾಲೆಚನೆ ಮಾಡಿದ್ದರೆಂದು ಸುದ್ದಿ ಇತ್ತು. ತಮ್ಮ ಪರವಾಗಿ ಪ್ರಚಾರ ಮಾಡಲು ಪತ್ರಿಕೆಯೊಂದು ಇದ್ದರೆ ಅನುಕೂಲ ಎಂದು ಅವರಿಗೆ ಅನಿಸಿರಬಹುದು. ಆ ಉದ್ದೇಶದಿಂದಲೇ ಅವರು ಸಂಯುಕ್ತ ಕರ್ನಾಟಕದ ಮೇಲೆ ಕಣ್ಣು ಹಾಕಿರಬಹುದು. ಅವರ ಸುದೈವವೋ ಎಂಬಂದೆ ಪತ್ರಿಕೆ ಮಾರಾಟ ಮಾಡಲು ಮುಂದೆ ಬಂದಿದ್ದ ಇಬ್ಬರೂ ಅಪ್ಪ-ಮಗ ವ್ಯವಹಾರ ಜ್ಞಾನವಿಲ್ಲದವರು. ತಾವು ಮಾರಾಟ ಮಾಡುವ ವಸ್ತುವಿನ ಬೆಲೆಯನ್ನೇ ತಿಳಿಯದವರು. 'ಏನು ಕೊಡಬೇಕು' ಎಂದು ಗಿರಾಕಿ ಕೇಳಿದಾಗ, ಮಾರಾಟಗಾರ 'ನಿಮಗೆ ತಿಳಿದಷ್ಟು ಕೊಡಿ' ಎಂದು ಹೇಳಿದರೆ ಯಾರಿಗೆ ತಾನೆ ಸಂತೋಷವಾಗಲಿಕ್ಕಿಲ್ಲ. ಅನಾಯಾಸವಾಗಿ ಘೋರ್ಪಡೆಯವರ ರೊಟ್ಟಿ ತುಪ್ಪದಲ್ಲಿ ಜಾರಿ ಬಿತ್ತು. ಸಂತೋಷದಿಂದ ಒಪ್ಪಂದ ಮಾಡಿರಕೊಂಡರು. ರಾಜ್ಯದ ಒಂದು ಜನಪ್ರಿಯ ಕನ್ನಡ ದಿನಪತ್ರಿಕೆಯ ಯಜಮಾನರಾದರು.
ಎಂಟೇ ದಿನದಲ್ಲಿ ಒಂದು ಕಂಪೆನಿಯಲ್ಲಿ ಕಟ್ಟಿದರು. ಹೆಚ್ಚು ಬಂಡವಾಳ ಇಲ್ಲದ ಈ ಕಂಪೆನಿಯ ಹೆಸರಿನಲ್ಲಿ ಹಣ ಗಳಿಸುವ, ಹಣ ಸಂಗ್ರಹಿಸುವ ಒಂದಿಬ್ಬರು ಜಾದುಗಾರರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದರು. ಇದರ ಜತೆಗೆ ಕೆಲವು ಹೊಗಳು ಭಟ್ಟರನ್ನು ನೇಮಿಸಿಕೊಂಡರು. ಖಾದ್ರಿ ಶಾಮಣ್ಣ ಎಂಬ ಸರ್ವೋದಯ ಕಾರ್ಯಕರ್ತರನ್ನು ಸಂಪಾದಕರನ್ನಾಗಿ ನೇಮಿಸಿಕೊಂಡರು. ಆಡಳಿತ ನಡೆಸಲು ಇನ್ನೂ ಕೆಲವು ಹೊಗಳುಭಟರಿದ್ದರು. ಕೆಲವು ದಿನಗಳ ನಂತರ ಪ್ರಜಾವಾಣಿ ಪತ್ರಿಕೆಯಲ್ಲಿದ್ದ ಜಯಶೀಲರಾವ್ ಎಂಬ ಪತ್ರಕರ್ತರನ್ನು ತೆಗೆದುಕೊಂಡರು. ಆದರೆ ಈ ದಂಡಿಗೆ ಆಹಾರ (ಹಣ) ಪೂರೈಸುವುದು ಮಾತ್ರ ಕಂಪೆನಿಗೆ ಸಾಧ್ಯವಾಗಲಿಲ್ಲ. ಇವರು ಪತ್ರಿಕೆ ಮಾರಾಟ ಆಗುವ ಒಂದು ತಿಂಗಳ ಮೊದಲೇ ಅನಂತ ದಿವಾಕರರಿಂದ ನೇಮಕಗೊಂಡು ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ನಾಲ್ಕೈದು ಜನರು ಎಲ್ಲಾ ವಿಭಾಗಗಳ ಮೇಲ್ವಿಚಾರಣೆ ಮಾಡುತ್ತಿದ್ದರು. ಖಾದ್ರಿ ಶಾಮಣ್ಣನವರು ಮುಖ್ಯ ಸಂಪಾದಕರಾಗಿದ್ದರು. ಆತನನ್ನು ನಾನೇ ಕೆಲವು ವರ್ಷಗಳ ಹಿಂದೆ ತಿಂಗಳಿಗೆ ಕೇವಲ 250 ರೂ. ಸಂಬಳದ ಮೇಲೆ ಬೆಂಗಳೂರು ಕಚೇರಿಯಲ್ಲಿ ಮುಖ್ಯ ಉಪಸಂಪಾದರನಾಗಿ ನೇಮಿಸಿಕೊಂಡಿದ್ದೆ. ಮುಂದೆ ಆತ ಪ್ರಜಾವಾಣಿ ಪತ್ರಿಕೆಗೆ ಹೋಗಿ ಸಂಪಾದಕನಾಗಿದ್ದ. ಆತನನ್ನು ಘೋರ್ಪಡೆಯವರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವ್ಯವಸ್ಥಾಪಕ ಸಂಪಾದಕರನ್ನಾಗಿ ನೇಮಿಸಿಕೊಂಡಿದ್ದರು.
ಹೋರಾಟದ ನಾಂದಿ
ನಾನು ಸಂಯುಕ್ತ ಕರ್ನಾಟಕ ಪತ್ರಿಕೆಯಿಂದ ಹೊರಗೆ ಬಂದಿದ್ದು ಇದೇ ಸಮಯದಲ್ಲಿ. ಅದೂ ಖಾದ್ರಿ ಶಾಮಣ್ಣನವರ ದೆಸೆಯಿಂದ. ಈ ಘಟನೆ ನಡೆದದ್ದು 1974ನೇ ನವೆಂಬರ್ ಕೊನೆಯ ವಾರ. ಆಗ ನಾನು ಮುಖ್ಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಶಾಮಣ್ಣನವರು ನನಗೆ ಹೇಳಿ ಕಳಿಸಿದರು.
ಅವರ ರೂಮಿಗೆ ಹೋದೆ. ಕುಳಿತುಕೊಳ್ಳಲು ಹೇಳಿದರು. ಕಾಫಿ ತರಿಸಿಕೊಟ್ಟರು. ಜೊತೆಗೆ ಒಂದು ಕಾಗದವನ್ನೂ ಕೊಟ್ಟರು. ಆ ಕಾಗದದಲ್ಲಿ 'ಮುಂದಿನ ಫೆಬ್ರವರಿ 4ನೇ ತಾರೀಕು ನಿಮಗೆ 58 ವರ್ಷ ತುಂಬುತ್ತದೆ. ಕಾನೂನೂ ಪ್ರಕಾರ ಅಂದು ನೀವು ನಿವೃತ್ತರಾಗಬೇಕು. ಆದರೆ ಆಡಳಿತ ವರ್ಗ ಇಂದಿನಿಂದ ನಿಮಗೆ ರಜೆ ಕೊಟ್ಟಿದೆ. ರಜೆ ಮುಗಿದ ನಂತರ ನಿವೃತ್ತಿಗೊಳಿಸಲು ನಿರ್ಧರಿಸಿದೆ. ಇಂದಿನಿಂದಲೇ ನೀವು ಆಫೀಸಿಗೆ ಬರಬೇಕಾಗಿಲ್ಲ. ನಿಮ್ಮ ಸಂಬಳವನ್ನು ಮನೆಗೆ ಕೊಟ್ಟು ಕಳುಹಿಸಲಾಗುವುದು...'
(ಮುಂದುವರಿಯುವುದು)
-ಕೆ.ಶ್ಯಾಮರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


