ಬೈಟುಕಾಫಿ

ನಂಬಿ ಕೆಡಲಿಲ್ಲ ನಾವು

ನಂಬಿ ಕೆಡಲಿಲ್ಲ ನಾವು
Published On :

ಮೂಢನಂಬಿಕೆ ವಿರುದ್ಧ ಆಕ್ರೋಶ ಇಂದುನಿನ್ನೆಯದಲ್ಲ. ಮೊನ್ನೆಯಷ್ಟೇ ಕಾದಂಬರಿಕಾರ ಕುಂವೀ, ಜ್ಯೋತಿಷಿಗಳನ್ನು ಭಯೋತ್ಪಾದಕರ ಹಿಟ್‌ಲಿಸ್ಟಿಗೆ ಸೇರಿಸಿಬಿಟ್ಟರು. ಆದರೂ ಈ ಮೂಢನಂಬಿಕೆಗಳ ಮೇಲೆ ಅನೇಕರಿಗೆ ವ್ಯಾಮೋಹ ಇದ್ದಿದ್ದೇ. ಅದರಲ್ಲೂ ಸೆಲೆಬ್ರಿಟಿಗಳೆನಿಸಿಕೊಂಡವರು ಒಂದಲ್ಲಾ ಒಂದು ನಂಬಿಕೆಗೆ ಜೋತು ಬಿದ್ದವರೇ. ಪಯಣಿಸುವಾಗ ಕಪ್ಪು ಬೆಕ್ಕು ಅಡ್ಡಬಂದರೆ, ಖಾಲಿ ಕೊಡ ಕಂಡರೆ ಅಪಶಕುನ, ಗ್ರಹಣ ದಿನ ಶುಭ ಕಾರ್ಯ ಮಾಡುವಂತಿಲ್ಲ, ಗಂಡಸರಿಗೆ ಎಡಕಣ್ಣು ಮತ್ತು ಹೆಂಗಸರಿಗೆ ಬಲಗಣ್ಣು ಬಡಿದುಕೊಳ್ಳುತ್ತಿದ್ದರೆ ಏನೋ ಕೆಟ್ಟ ವಾರ್ತೆ ಕೇಳೋಕೆ ಇದೆ ಎಂಬುದೆಲ್ಲ ನಮ್ಮ- ನಿಮ್ಮ ನಂಬಿಕೆ. ಆದರೆ, ಸೆಲೆಬ್ರಿಟಿಗಳ ಒಣ ನಂಬಿಕೆ ಕೇಳಿಬಿಟ್ಟರೆ, ಒಂದು ಕ್ಷಣ ಅಚ್ಚರಿ ಮೂಗಿನ ಮೇಲೆ ಕೂರುತ್ತದೆ.

ವಿಮಾನದಲ್ಲಿ ಬ್ರಿಟ್ನಿ ಹಾಡು
ಹಾಲಿವುಡ್ ತಾರೆ ಮೆಗಾನಾ ಫಾಕ್ಸ್‌ಗೆ ಭಯ ಪ್ಲಸ್ ಮೂಢನಂಬಿಕೆ ಎರಡೂ ಮಿಕ್ಸ್ ಆಗಿ ಕಾಡುತ್ತದೆ. ವಿಮಾನ ಪ್ರಯಾಣವೆಂದರೆ ಈಕೆಗೆ ಸಿಕ್ಕಾಪಟ್ಟೆ ಭಯವಂತೆ. ಹಾಗಂತ ವಿಮಾನದಲ್ಲಿ ಹೋಗದೇ ಇರೋಕ್ಕೆ ಸಾಧ್ಯವಾ? ಅಂಥ ವೇಳೆಯಲ್ಲಿ ವಿಮಾನದೊಳಗೆ ಬ್ರಿಟ್ನಿ ಸ್ಪಿಯರ್ಸ್‌ಳ ಹಾಡನ್ನು ಕೇಳ್ತಿರ್ತಾಳೆ. ವಿಮಾನ ಪ್ರಯಾಣದಲ್ಲಿ ಒಂದು ವೇಳೆ ತಾನು ಸತ್ತರೆ ಬ್ರಿಟ್ನಿಯ ಹಾಡನ್ನು ಕೇಳಿಸಿಕೊಂಡೇ ಸಾಯಬೇಕೆನ್ನುವುದು ಫಾಕ್ಸ್ ನಂಬಿಕೆ.


ಗಂಗೂಲಿ ಜೇಬಲ್ಲಿ ಗುರು ಫೋಟೋ!
ಇಂಥ ನಂಬಿಕೆಗಳಿಂದ ಕ್ರಿಕೆಟ್ ದೇವರು ತೆಂಡೂಲ್ಕರ್ ಕೂಡ ಜಾರಿಕೊಂಡಿಲ್ಲ. ಆಗೆಲ್ಲ ಸಚಿನ್ ಕ್ರೀಸಿಗಿಳಿಯುವ ಮುನ್ನ ಎಡ ಕಾಲಿಗೇ ಮೊದಲು ಪ್ಯಾಡ್ ಕಟ್ಟುತ್ತಿದ್ದರು. ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಬ್ಯಾಟಿಂಗ್ ಮಾಡುವಾಗ ಜೇಬಲ್ಲಿ ಗುರುವಿನ ಭಾವಚಿತ್ರವಿಟ್ಟುಕೊಂಡಿರುತ್ತಿದ್ದರು. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಲಿಯೋನಾರ್ಡ್ ಹಟನ್  ಆಡುವಾಗ ಅವರ ತಾತನ ಗೆಳೆಯ ನೀಡಿದ 5 ಶಿಲ್ಲಿಂಗ್ ನಾಣ್ಯಗಳನ್ನು ಜೇಬಲ್ಲಿಟ್ಟುಕೊಳ್ಳುತ್ತಿದ್ದರಂತೆ. ಇನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟೀವ್ ವ್ಹಾನ ಎಡಭಾಗದ ಪಾಕೆಟ್ಟಿನಲ್ಲಿ ಕೆಂಬಣ್ಣದ ಕರ್ಚೀಫ್ ಇರುತ್ತಿತ್ತು. ಭಾರತದ ಮಹೇಂದರ್ ಅಮರ್‌ನಾಥ್ ಫೀಲ್ಡಿಂಗ್ ಮಾಡುವಾಗ ಕೈಯಲ್ಲಿ ಕೆಂಪು ಬಣ್ಣದ ಹ್ಯಾಂಡ್ ಕರ್ಚೀಫ್ ಇರುತ್ತಿತ್ತು.


ಆಲ್ಬಾ ಕಟ್ಟಿದ ಬ್ರೇಸ್‌ಲೆಟ್!
ಮೂಢನಂಬಿಕೆ ಅನ್ನೋದು ಹಾನಗಲ್‌ನಿಂದ ಹಾವೇರಿ ತನಕ ಇದ್ದಿದ್ದೇ. ಅಮೆರಿಕದ ನಟಿ ಜೆಸ್ಸಿಕಾ ಆಲ್ಬಾಳ ಸೀಮಂತಕ್ಕೆ ನೂರಾರು ಜನ ಬಂದಿದ್ದರು. ವಿಶೇಷ ಪ್ರಾರ್ಥನೆ ಮಾಡಿ, ಆ ಎಲ್ಲ ಅತಿಥಿಗಳ ಕೈಗೆ ಲೆದರ್ ಬ್ರೇಸ್‌ಲೆಟ್ ಕಟ್ಟಿದಳು ಆಲ್ಬಾ. 'ನನಗೆ ಮಗು ಹುಟ್ಟುವವರೆಗೆ ಅದನ್ನು ಯಾರೂ ಕೈಯಿಂದ ಕಳಚಬಾರದು. ಹಾಗೆ ಯಾರಾದರೂ ಕಳಚಿದರೆ ಹುಟ್ಟುವ ಮಗುವಿಗೆ ತೊಂದರೆಯಾಗುತ್ತದೆ' ಅಂತಲೂ ಹೇಳಿದ್ದಳು. ಅವರ್ಯಾರೂ ಅದನ್ನು ಬಿಚ್ಚಲಿಲ್ಲ, ಆಲ್ಬಾ ಮಗು ಸೇಫ್ ಆಗಿ ಲ್ಯಾಂಡ್ ಆಯಿತು.


ವಿಂಬಲ್ಡನ್ ಗೆಲ್ಲಿಸಿದ ಗಡ್ಡ
ಮೂಢನಂಬಿಕೆಗಳು ಕೇವಲ ಕ್ರಿಕೆಟಿಗರದ್ದೇ ಸ್ವತ್ತಲ್ಲ. ಮಾಜಿ ಬಾಸ್ಕೆಟ್‌ಬಾಲ್ ಆಟಗಾರ ಮೈಕಲ್ ಜೋರ್ಡಾನ್‌ಗೆ '23'ನೇ ಸಂಖ್ಯೆ ಮೇಲೆ ಹೆಚ್ಚು ಮೋಹ. ನೀಲಿ ಬಣ್ಣದ ನಾರ್ಥ್ ಕರೋಲಿನಾ ಶಾರ್ಟ್ ತನಗೆ ಅದೃಷ್ಟ ತಂದುಕೊಡುತ್ತೆ ಅಂತ ಈತ ಚಿಕಾಗೋ ಬುಲ್ ಯುನಿಫಾರಂ ಒಳಗೆ ಆ ಶಾರ್ಟ್ ಅನ್ನು ಹಾಕಿಕೊಳ್ಳುತ್ತಿದ್ದ. ಇನ್ನು ಸ್ವೀಡಿಶ್ ಟೆನಿಸಿಗ ಜೋರ್ನ್ ಬೋರ್ಗ್ ವಿಂಬಲ್ಡನ್ ಆಡುವಾಗ ಗಡ್ಡ ಬೋಳಿಸುತ್ತಿರಲಿಲ್ಲ. 1976ರಿಂದ 1980ರ ಅವಧಿಯಲ್ಲಿ ಸತತ 5 ವಿಂಬಲ್ಡನ್ ಕಿರೀಟವನ್ನು ಗೆಲ್ಲುವಂತೆ ಮಾಡಿದ್ದು ಅದೇ ಲಕ್ಕಿ ಗಡ್ಡವಂತೆ!

ಕಿಂಗ್‌ಖಾನ್ 555
ಶಾರೂಖ್ ಖಾನ್‌ಗೆ 555 ಲಕ್ಕಿ ನಂಬರ್. ಅವರ ಕಾರ್ ನಂಬರ್ ಕೂಡ 555. ಅಷ್ಟೇ ಯಾಕೆ, ಕಿಂಗ್‌ಖಾನ್‌ನ 'ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್‌'ನ ಉದ್ಯೋಗಿಗಳ ಮೊಬೈಲ್ ನಂಬರ್‌ಗಳಲ್ಲೂ 555 ಸಂಖ್ಯೆ ಇದ್ದೇ ಇರುತ್ತೆ. ಬಾಡಿಗೆ ತಾಯಿ ಮೂಲಕ ಮಗು ಪಡೆದರೆ ಅದೃಷ್ಟ ಎನ್ನುವ ಕಾರಣಕ್ಕಾಗಿ ಮೊನ್ನೆ ದತ್ತು ಪಡೆದರು.

ಸೆರೆನಾಳ ಬಾತ್‌ರೂಂ ಚಪ್ಪಲಿ ಕಥೆ

ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕಥೆ ಮತ್ತೊಂದು. ಬಾತ್‌ರೂಂ ಚಪ್ಪಲಿಯನ್ನೇ ಪಂದ್ಯನಡೆಯುವಲ್ಲಿಗೆ ಹಾಕಿಕೊಂಡು ಬಂದು ವಿಶಿಷ್ಟ ರೀತಿಯಲ್ಲಿ ತನ್ನ ಶೂ ಲೇಸ್ ಕಟ್ಟಿಕೊಳ್ಳುತ್ತಾಳೆ. ಪಂದ್ಯದಲ್ಲಿ ಮೊದಲು ಸರ್ವ್ ಮಾಡುವಾಗ 5 ಬಾರಿ ಚೆಂಡನ್ನು ಬೌನ್ಸ್ ಮಾಡುವ ಈಕೆ, ಪಂದ್ಯದುದ್ದಕ್ಕೂ ಬಳಸುವುದು ಒಂದೇ ಸಾಕ್ಸ್. ಅನೇಕ ಸಲ ಪಂದ್ಯ ಗೆಲ್ಲಿಸಿಕೊಟ್ಟ ಸಾಕ್ಸನ್ನೇ ಮತ್ತೆ ಮತ್ತೆ ಬಳಸಿದ ಉದಾಹರಣೆಯೂ ಇದೆ.

ಮೂತ್ರ ಸೇವಿಸುತ್ತಿದ್ದ ಮಚಿದಾ!
ಬ್ರೆಜಿಲ್‌ನ ಮಾರ್ಷಲ್ ಆರ್ಟ್ ಚಾಂಪಿಯನ್ ಲ್ಯೂಟೋ ಮಚಿದಾ ದಿನಾ ಬೆಳಗ್ಗೆದ್ದು, ಅವನ ಮೂತ್ರವನ್ನೇ ಸೇವಿಸುತ್ತಿದ್ದ! ದೇಹವನ್ನು ಸ್ವಸ್ಥವಾಗಿಡಲು ಮೂತ್ರವೊಂದೇ ಔಷಧಿ ಎಂಬುದು ಆತನ ನಂಬಿಕೆ. ಸಹ ಆಟಗಾರರು ಅಷ್ಟೇ ಅಲ್ಲ, ಕೋಚ್ ಬುದ್ಧಿ ಹೇಳಿದರೂ ಅದನ್ನು ಮಚಿದಾ ಕೇಳಿರಲಿಲ್ಲ.


ಕೆಂಪು ಬಾಲನ್!
ವಿದ್ಯಾಬಾಲನ್‌ರ ಲಕ್ಕಿ ಕಲರ್ ಕೆಂಪು. ಅದಕ್ಕಾಗಿಯೇ ಅವರು 'ದಿ ಡರ್ಟಿ ಪಿಕ್ಟರ್‌'ನಲ್ಲಿ ಕೆಂಪು ಸಾರಿ ಉಟ್ಟು 'ಊಲಾಲಾ...' ಡ್ಯಾನ್ಸ್ ಮಾಡಿದ್ದರು. 'ಫೆರಾರಿ ಕಿ ಸವಾರಿ'ಯಲ್ಲಿ ಸಾಂಪ್ರದಾಯಿಕ ಹಸಿರು ಸೀರೆ ತೊಟ್ಟು ಲಾವಣಿ ಡ್ಯಾನ್ಸ್ ಮಾಡಬೇಕಾಗಿ ಬಂದಾಗ ತನಗೆ ಕೆಂಪು ಸೀರೆಯೇ ಬೇಕೆಂದು ಹಠ ಹಿಡಿದಿದ್ದರು.


ರಜನಿಗೆ ಮೈಸೂರು ಲಕ್ಕಿ
ಇನ್ನು ಕನ್ನಡ ಮತ್ತು ತಮಿಳು ಇಂಡಸ್ಟ್ರಿಗೆ ಮಹದೇವಪುರ ಲೊಕೇಶನ್ ಅದೃಷ್ಟದ ತಾಣ. ರಜನೀಕಾಂತ್‌ರ ಹೆಚ್ಚಿನ ಸಿನಿಮಾಗಳು ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಶೂಟಿಂಗ್ ಆಗಿದ್ದು. ಈಗ ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ಚಿತ್ರೀಕರಣವಾಗುತ್ತಿರುವ 'ಲಿಂಗ' ಕೂಡ ಅಲ್ಲಿಯೇ ನಡೆಯುತ್ತಿದೆ.

ಚಪ್ಪಲಿ ವಾಸನೆಯಲ್ಲೇ ಕಾದಂಬರಿ ಬರೆಯುತ್ತಿದ್ದ!
ಸಾಹಿತಿಗಳೂ 'ಮೂಢ' ಭಕ್ತರೇ. 'ದಿ ಟೇಲ್ ಆಫ್ ಟು ಸಿಟೀಸ್‌' ಲೇಖಕ ಚಾರ್ಲ್ ಡಿಕನ್ಸನ್ ಬರೆಯುವ ಮುನ್ನ ಟೇಬಲ್ ಕ್ಲೀನ್ ಮಾಡುತ್ತಿದ್ದ. ಟೇಬಲ್ ಕ್ಲೀನಿಲ್ಲದೆ ಬರೆದರೆ, ಅದು ತನಕೂ ಸಮಾಧಾನ ಕೊಡುವುದಿಲ್ಲ ಎನ್ನುವುದು ಆತನ ನಂಬಿಕೆ. ಖ್ಯಾತ ಲೇಖಕಿ ಕಾರ್ಸನ್ ಮಾಕ್ಲೆರ್ಸ್ ಬರೆಯುವಾಗ ಸ್ವೆಟರ್ ಧರಿಸಿಕೊಂಡೇ ಇರುತ್ತಿದ್ದಳಂತೆ. ಅದು ಲಕ್ಕಿ ಸ್ವೆಟರ್. ಅದನ್ನು ತೊಳೆಯುವ ದಿನ ಆಕೆ ಏನೂ ಬರೆಯುತ್ತಿರಲಿಲ್ಲ! ಇನ್ನು ಕೊಳೆತ ಚಪ್ಪಲ್‌ಗಳ ವಾಸನೆ ಇಲ್ಲದಿದ್ದರೆ ಜರ್ಮನ್ ಲೇಖಕ ಫ್ರೆಡ್ ರಿಡ್ ಶಿಲ್ಲರ್‌ಗೆ ಏನೇನನ್ನೂ ಬರೆಯಲಾಗುತ್ತಿರಲಿಲ್ಲ.
ಬಚ್ಚನ್ ಫ್ಯಾಮಿಲಿಯೂ ಅಷ್ಟೇ...
ಅಮಿತಾಭ್ ಬಚ್ಚನ್ ಕುಟುಂಬಕ್ಕೆ 'A' ಅಕ್ಷರ ಲಕ್ಕಿ. ಅಭಿಷೇಕ್- ಐಶ್ವರ್ಯಾ ರೈ ಪುತ್ರಿಗೆ ಮಗಳಿಗೆ 'A'ಯಿಂದ ಆರಂಭವಾಗುವ ಹೆಸರಿಡಬೇಕೆಂದು ನಾಲ್ಕು ತಿಂಗಳು ಕಾದಿದ್ದರು. ಕೊನೆಗೂ 'ಆರಾಧ್ಯ' ಎಂಬ ಕ್ಯೂಟ್ ಹೆಸರು ಸಿಕ್ಕಿತು. ಇಷ್ಟು ಮಾತ್ರವಲ್ಲ, ಆರಾಧ್ಯಳಿಗೆ ಅಭಿಷೇಕ್ 'ಆಡಿ 8' ಕಾರನ್ನು ಗಿಫ್ಟ್ ಮಾಡಿದ್ದ. ಈ ಕುಟುಂಬಕ್ಕೆ '4' ಕೂಡ ಅದೃಷ್ಟ ಸಂಖ್ಯೆ. ಅಮಿತಾಭ್ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಅಪ್ಪ ಹರಿವಂಶ ರಾಯ್ ಬಚ್ಚನ್‌ರ ವಾಚನ್ನೇ ಕಟ್ಟಿಕೊಳ್ಳುತ್ತಾರೆ. ಜ್ಯೋತಿಷಿಗಳನ್ನು ನಂಬುವ ಅಮಿತಾಭ್ ಕೈಯಲ್ಲಿ ಅದೃಷ್ಟ ಹರಳಿನ ಉಂಗುರವಿದೆ.

171 ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ 171 ಅಥವಾ 74449 ಸಂಖ್ಯೆ ಅದೃಷ್ಟವೆಂದು ನಂಬುತ್ತಾರೆ. ಇವರು ನಟಿಸಿದ ಹೆಚ್ಚಿನ ಸಿನಿಮಾಗಳಲ್ಲಿ ಈ ಸಂಖ್ಯೆಯನ್ನು ಬಳಸಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರ ಅದೃಷ್ಟ ಸಂಖ್ಯೆ 9. ರಾಜ್ ಕುಟುಂಬಕ್ಕೆ '9'ನೇ ಸಂಖ್ಯೆಯಲ್ಲಿ ವ್ಯಾಪಕ ನಂಬಿಕೆ. ನಟಿ ಶರ್ಮಿಳಾ ರಾಹುಕಾಲದಲ್ಲಿ ಯಾವುದೇ ಕೆಲಸಗಳಿಗೆ ಕೈ ಹಾಕಲ್ವಂತೆ. ಬೆಳಗ್ಗೆ ಆಕೆ ಕಡುಬಣ್ಣದ ಬಟ್ಟೆಗಳನ್ನೂ ಧರಿಸುವುದಿಲ್ಲ. '1' ಆಕೆಯ ಲಕ್ಕಿ ನಂಬರ್.

ಮಾಂಸ ಸೇವನೆ ಬಿಟ್ಟ ದಿನಕರ್
ನಿರ್ದೇಶಕ, ನಿರ್ಮಾಪಕ ದಿನಕರ್ ಸಿನಿಮಾ ಮಾಡುವಾಗ ಮಾಂಸಾಹಾರ, ಅನ್ನ ಸೇವಿಸುವುದಿಲ್ಲ. 'ಸಾರಥಿ' ಚಿತ್ರ ಸಂಪೂರ್ಣಗೊಳ್ಳಲು ಸುಮಾರು ಒಂದೂವರೆ ವರ್ಷ ಹಿಡಿಸಿತ್ತು. ಅಷ್ಟು ಕಾಲದವರೆಗೆ ದಿನಕರ್ ತಮ್ಮ ಇಷ್ಟ ಭಕ್ಷ್ಯವಾದ ಅನ್ನ ಮತ್ತು ಮಾಂಸಾಹಾರದಿಂದ ದೂರವಿದ್ದರು. 'ಜೊತೆ ಜೊತೆಯಲಿ' ಸಿನಿಮಾ ಮಾಡುವಾಗಲೂ ಹೀಗೇ ಮಾಡಿದ್ದರಂತೆ. ಅಂಥ ಸಿನಿಮಾ ಹಿಟ್ ಆಗಿದ್ದೂ ವಿಶೇಷವೇ!

ಶಿಲ್ಪಾ ಶೆಟ್ಟಿ ಕಾಲು ಕ್ರಾಸ್ ಮಾಡಿ ಕೂತರೆ...
ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಆಡುವಾಗ ತಂಡದೊಡತಿ ಶಿಲ್ಪಾ ಶೆಟ್ಟಿ ಎರಡೂ ಕೈಗಳಿಗೆ ವಾಚ್ ಕಟ್ಟಿಕೊಳ್ಳುತ್ತಾರೆ. ಇನ್ನು ರಾಜಸ್ಥಾನ್ ಬ್ಯಾಟಿಂಗ್ ಮಾಡುವಾಗ ಆಕೆ ಕಾಲುಗಳನ್ನು ಕ್ರಾಸ್ ಮಾಡಿ ಕುಳಿತುಕೊಳ್ಳುವುದಿಲ್ಲ. ಆದರೆ, ವಿರುದ್ಧ ಪಂದ್ಯ ಬ್ಯಾಟಿಂಗ್ ಮಾಡುವಾಗ ಮಾತ್ರ ಕಾಲು ಕ್ರಾಸ್ ಮಾಡಿಯೇ ಕೂರುತ್ತಾಳೆ.

ಅಮೀರ್‌ಖಾನ್‌ನ ಡಿಸೆಂಬರ್ ಪ್ರೀತಿ

ಬಾಲಿವುಡ್‌ಗೆ ಕಾಲಿಟ್ಟಾಗ 'ವಿಶಾಲ್‌' ಎಂಬ ಹೆಸರಿನವನಾಗಿದ್ದ ಅಜಯ್ ದೇವಗನ್ ಕ್ರಮೇಣ 'Devgan'ನಲ್ಲಿ 'a'ಯನ್ನು ಕೈಬಿಟ್ಟ. ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ ಪ್ರತಿ ಕೆಲಸವನ್ನು ಆರಂಭಿಸುವ ಮುನ್ನ ಜ್ಯೋತಿಷಿಯ ಸಲಹೆ ಕೇಳುತ್ತಾಳೆ. ಯಾವ ಜಾಗದಲ್ಲಿ ಎಷ್ಟು ಹೊತ್ತಿಗೆ ಏನೇನು ಮಾಡಬೇಕೆಂಬುದನ್ನು ಜ್ಯೋತಿಷಿಯ ಸಲಹೆಯಿಂದಲೇ ಮಾಡುವ ಏಕ್ತಾಗೆ 'K' ಅದೃಷ್ಟದ ಅಕ್ಷರವಂತೆ! ಮಿ. ಪರ್ಫೆಕ್ಟ್  ಅಮೀರ್‌ಖಾನ್‌ಗೆ ಕ್ರಿಸ್‌ಮಸ್ ಅದೃಷ್ಟದ ಹಬ್ಬ. ಕ್ರಿಸ್‌ಮಸ್ ವೇಳೆ ಬಿಡುಗಡೆಯಾದ ಎಲ್ಲ ಚಿತ್ರಗಳು ಹಿಟ್ ಆಗಿರುವುದೇ ಇದಕ್ಕೆ ಸಾಕ್ಷಿ. ಹೀಗಾಗಿ, ಅವರಿಗೆ ಡಿಸೆಂಬರ್ ಮೇಲೆ ನಂಬಿಕೆ ಹೆಚ್ಚು. ಅಷ್ಟೇ ಯಾಕೆ? ಕಿರಣ್‌ರಾವ್- ಅಮೀರ್ ಮಗ ಆಜಾದ್ ಹುಟ್ಟಿದ್ದೂ ಡಿಸೆಂಬರ್‌ನಲ್ಲೇ.

ಉಳಿದವರು ಕಂಡಂತೆ...

    '12' ಅನ್ನು ಅನ್‌ಲಕ್ಕಿ ಎಂದು ನಂಬಿದ್ದ ಖ್ಯಾತ ಉದ್ಯಮಿ ಜಿ.ಡಿ. ಬಿರ್ಲಾ ಅವರು ಕೋಲ್ಕತ್ತಾದಲ್ಲಿ ನಿರ್ಮಿಸಿದ ಪ್ರಧಾನ ಕಚೇರಿಯಲ್ಲಿ 12ನೇ ಮಹಡಿಯೇ ಇರಲಿಲ್ಲ.
    ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹನುಮಂತನ ಚಿಕ್ಕಮೂರ್ತಿ, ಮಡೋನ್ನಾ ಮತ್ತು ಆಕೆಯ ಮಗುವಿನ ಚಿತ್ರವಿರುವ ಒಂದು ಲಾಕೆಟ್ ಅನ್ನು ಯಾವತ್ತೂ ತಮ್ಮೊಂದಿಗೆ ಇರಿಸಿಕೊಳ್ಳುತ್ತಾರೆ.
    ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಗೆ ನಾಮ ನಿರ್ದೇಶನ ಅರ್ಜಿ ಸಲ್ಲಿಸುವಾಗ ಯಾವತ್ತೂ ಕಪ್ಪು ಇಂಕಿನ ಪೆನ್ನನ್ನು ಬಳಸುವುದಿಲ್ಲ.
    ನಾಮನಿರ್ದೇಶನ ಅರ್ಜಿ ಸಲ್ಲಿಸುವ ಮುನ್ನ ಕನಿಷ್ಠ 5 ಜ್ಯೋತಿಷಿಗಳ ಸಲಹೆ ಕೇಳುವ ಬಿಜೆಪಿ ಅಭ್ಯರ್ಥಿಗಳು, ಅರ್ಜಿ ಫಾರಂ ಯಾವತ್ತೂ ಉತ್ತರಕ್ಕೆ ಮುಖ ಮಾಡಿರುವಂತೆ ಜಾಗ್ರತೆ ವಹಿಸುತ್ತಾರೆ.
    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ಪ್ರಧಾನ ನಿರ್ಧಾರ ಕೈಗೊಳ್ಳುವಾಗ ತಮ್ಮ ಜನ್ಮ ನಕ್ಷತ್ರಕ್ಕೆ ಹೊಂದುವ ಬಟ್ಟೆಗಳನ್ನೇ ಧರಿಸುತ್ತಾರೆ.
    ದೇವೇಗೌಡರ ಪಾಲಿಗೆ '5' ಲಕ್ಕಿ ಸಂಖ್ಯೆ. ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವಾಗಲೂ ಆ ಸಂಖ್ಯೆ ಕೂಡಿಸಿದರೆ 5 ಬರಬೇಕು ಎಂಬಂತೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ.
    ಎಚ್.ಡಿ. ರೇವಣ್ಣ ನಾಮ ನಿರ್ದೇಶನ ಸಲ್ಲಿಸುವಾಗ ಕೊರಳಿಗೆ ಚಿನ್ನದ ಸರ ಮತ್ತು ಕೈಗೆ ಬಂಗಾರದ ಬ್ರೇಸ್‌ಲೆಟ್ ಧರಿಸುವುದು ಹೆಚ್ಚು ಅದೃಷ್ಟ ತಂದುಕೊಡುತ್ತದೆ ಎಂದು ನಂಬಿದ್ದಾರೆ.

- ಇಬ್ಬನಿ
loveibbani@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.