ಬೈಟುಕಾಫಿ

ಮಲೆನಾಡಿನ ಸಪ್ಪಳ

ಮಲೆನಾಡಿನ ಸಪ್ಪಳ
Published On :

ಮಾವು, ಹಲಸುಗಳ ಸುಗ್ಗಿ ಬೆನ್ನಲ್ಲೇ ಮದುವೆ, ಉಪನಯನದಂಥ ಶುಭ ಕಾರ್ಯಗಳ ಆರಂಭ. ಪ್ರಕೃತಿ ಫಸಲಿನ ಸಮಾರಾಧನೆಗಳ ಸಂಭ್ರಮ.
ಶುಭ ಕಾರ್ಯಗಳಿಗೆ ಹಾಗೂ ಮಳೆಗಾಲಕ್ಕಾಗಿ ಮಲೆನಾಡಲ್ಲಿ ಹಪ್ಪಳದ ಕಂಬಳ ಜೋರು. 'ಹಪ್ಪಳವಿಲ್ಲದ ಸಮಾರಾಧನೆ ಇಲ್ಲ' ಎಂಬಂತೆ ಎಲ್ಲಕ್ಕೂ ಹಪ್ಪಳ ಬೇಕು. ಉದ್ದಿನ ಹಪ್ಪಳ, ಅಕ್ಕಿ ಹಪ್ಪಳ, ರಾಗಿ ಹಪ್ಪಳ... ಹೀಗೆ ಹಲವು ರೀತಿಯಲ್ಲಿ ಹಪ್ಪಳ ತಯಾರಿಸುತ್ತಾರಾದರೂ ಶ್ರೇಷ್ಠತೆ, ರುಚಿ ಮಾತ್ರ ಹಲಸಿನ ಹಪ್ಪಳಕ್ಕೆ.
ಕರ್, ಕುರ್ ಸದ್ದಿನೊಂದಿಗೆ ಊಟದ ಸವಿಗೆ ಜತೆಯಾಗುವ ಹಲಸಿನ ಹಪ್ಪಳದಲ್ಲೂ ಹಲವು ವಿಧ. ಎಣ್ಣೆ ಹಪ್ಪಳ, ಸಂಡಿಗೆ ಹಪ್ಪಳ, ಹಸೆ ಹಪ್ಪಳ, ಬಾಳೆ ಹಪ್ಪಳ, ಒತ್ತಪ್ಪಳ ಹೀಗೆ...
ಉತ್ತರ ಕನ್ನಡದ ಎಲ್ಲ ಗ್ರಾಮೀಣ ಭಾಗಗಳಲ್ಲೂ ಸಾಮಾನ್ಯವಾಗಿ ಹಲಸಿನಕಾಯಿ ಹಪ್ಪಳ ಮಾಡಿಯೇ ಮಾಡುತ್ತಾರೆ. ಅಲ್ಲಿ ಹಪ್ಪಳ ಮಾಡುವುದೇ ಒಂದು ಸಂಭ್ರಮ. ಇದು ಒಂದಿಬ್ಬರು ತಕ್ಷಣಕ್ಕೆ ಮಾಡಿ ಮುಗಿಸುವ ಕಾರ್ಯವಲ್ಲ. ಹಲಸಿನ ಕಾಯಿ ಬಲಿಯಲು (ಬೆಳೆಯಲು) ಆರಂಭವಾದಾಗಿನಿಂದ ಐದಾರು ಜನರ ತಂಡ ಹಪ್ಪಳ ಮಾಡುವ ಕಾರ್ಯಕ್ಕೆ ಸಿದ್ಧ. ಇವರೆಲ್ಲ ಒಂದೊಂದು ದಿನ ಒಬ್ಬೊಬ್ಬರ ಮನೆಗೆ ಹೋಗಿ ಹಪ್ಪಳ ಮಾಡುತ್ತಾರೆ. ಇಲ್ಲಿ ಹರಟೆ, ಮೋಜು, ಸುದ್ದಿಮನೆ ಕಥೆ ಜೋರು.

ತಯಾರಿಕೆ ಹೇಗೆ?
ಬಲಿತ ಹಲಸಿನ ಕಾಯಿಯ ಮೇಲಿನ ಮುಳ್ಳಿನ ಭಾಗ ತೆಗೆದು, ಒಳಗಿನ ಸೊ(ತೊ)ಳೆಗೆ ಅಂಟಿಕೊಂಡಿರುವ ಸೋರೆ ತೆಗೆಯಬೇಕು. ನಂತರ ಸೊಳೆ ಒಳಗಿನ ಬೀ ತೆಗೆದು ಸೊಳೆಯನ್ನು ಕುದಿವ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಬೇಕು. ನಂತರ ಆ ನೀರನ್ನು ಬಸಿದು, ಬೇಯಿಸಿದ ಸೊಳೆಗೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಗಟ್ಟಿಯಾಗಿ ನಾದಿ (ರುಬ್ಬಿ). ಇದನ್ನು ಸಣ್ಣ ಸಣ್ಣ ಉಂಡೆಯ ಆಕಾರ ಮಾಡಿ, ಬಾಳೆ (ಊಟದ) ಎಲೆ ಮೇಲೆ ಕೈಯಿಂದ ತೆಳ್ಳಗೆ ಹಚ್ಚಿ, ಬಿಸಿಲಿಗೆ ಒಣ ಹಾಕಬೇಕು. ಒಂದೇ ದಿನದಲ್ಲಿ ಸಾವಿರಾರು ಹಪ್ಪಳ ತಯಾರಿಸಬಹುದು.

ಉಪ್ಪಿನ ಸೊಳೆ ಹಪ್ಪಳ
ಮಳೆಗಾಲಕ್ಕೆ ಬಳಸಲೆಂದು ಹಲಸಿನ ಸೊಳೆ ಉಪ್ಪಲ್ಲಿ ಹಾಕಿಡುವ ಪದ್ಧತಿ ಇದೆ. ಮಳೆಗಾಲ ಮುಗಿದ ಮೇಲೂ ಇದು ಮಿಕ್ಕಿದ್ದರೆ, ಇದರಿಂದಲೂ ರುಚಿಯಾದ ಹಪ್ಪಳ ತಯಾರಿಸಬಹುದು. ಅದರೆ ಈ ಸೊಳೆಯನ್ನು ಚೆನ್ನಾಗಿ ತೊಳೆದು, ಉಪ್ಪಿನ ಪ್ರಮಾಣ ಕಡಿಮೆ ಮಾಡಿಕೊಂಡು, ಇದನ್ನು ರುಬ್ಬಿದ ನಂತರ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಬೆರೆಸಬೇಕು. ಬಳಿಕ ಒಲೆ ಮೇಲಿಟ್ಟು ಗಟ್ಟಿಯಾಗುವವರೆಗೆ ಕಾಯಿಸಬೇಕು. ಅದು ತಣ್ಣಗಾದ ಮೇಲೆ ನಮಗೆ ಬೇಕಾದ ಹದಕ್ಕೆ ಹಚ್ಚಬೇಕು.

ಮಾರುಕಟ್ಟೆಯಲ್ಲಿ ಲಭ್ಯ
ಹಲವು ಗ್ರಾಮೋದ್ಯೋಗ ಸಂಸ್ಥೆಗಳು ಹಲಸಿನ ಹಪ್ಪಳ ಮಾಡುವ ಕಾಯಕ ಆರಂಭಿಸಿದ್ದಾರೆ. ತಮ್ಮ ಮನೆ, ಮನೆಗಳಲ್ಲಿ ಸುಲಭಕ್ಕೆ ಸಿಗುವ ಹಲಸು ಬಳಸಿ ಹಪ್ಪಳ ತಯಾರಿಸಿ, ಒಂದು ಹಪ್ಪಳಕ್ಕೆ 1 ರು.ನಂತೆ 20 ಅಥವಾ 25 ಹಪ್ಪಳವಿರುವ ಪ್ಯಾಕೆಟ್ ತಯಾರಿಸಿ ಮಾರುಕಟ್ಟೆಗೆ ನೀಡುತ್ತಾರೆ. ಇದರಿಂದ ಲಾಭವೇ ಹೊರತು ನಷ್ಟವಿಲ್ಲ.

ಸೂಚನೆ
ಹಪ್ಪಳ ಹಚ್ಚುವುದಕ್ಕೂ ಮುನ್ನ ಬಾಳೆಲೆಗೆ ಸ್ವಲ್ಪ ನೀರನ್ನು ಚಿಮುಕಿಸಿಕೊಳ್ಳಬೇಕು. ಅದರಿಂದ ಒಣಗಿದ ಹಪ್ಪಳ ಥಟ್ಟನೆ ತೆಗೆಯಲು ಸಾಧ್ಯ. ಇದನ್ನು ಪ್ಲಾಸ್ಟಿಕ್ ಹಾಳೆಯ ಮೇಲೂ ಹಚ್ಚಬಹುದು. ಉಪ್ಪಿನ ಸೊಳೆ ಹಪ್ಪಳ ಮಾಡುವಾಗ ಬೇಯಿಸುವ ಮೊದಲೇ ರುಬ್ಬಬೇಕು.

-ವಿನುತಾ ಹೆಗಡೆ
vntvnk@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.