ಮನೆಯಲ್ಲೇ ಬ್ರಾಹ್ಮಿ ಬೆಳೆದುಕೊಳ್ಳಿ

ನಮ್ಮ ಫ್ಯಾಕ್ಟರಿಗೆ ಬೇಕಾಗಿದ್ದ ಯಂತ್ರವೊಂದು ಚೀನಾದಲ್ಲಿ ಲಭ್ಯವಿದೆ ಎಂಬ ಮಾಹಿತಿ ಸಿಕ್ಕಿತು. ಇಂಟರ್ನೆಟ್ ಜಮಾನಾದಲ್ಲಿದ್ದರೂ ಯಂತ್ರಗಳ ವಿಚಾರದಲ್ಲಿ ಖುದ್ದು ಪರಿಶೀಲಿಸದಿದ್ದರೆ ಬೇಸ್ತು ಬೀಳುವ ಸಾಧ್ಯತೆಗಳು ಇಲ್ಲದಿಲ್ಲ. ಅದಕ್ಕಾಗಿ ಒಂದಿಬ್ಬರು ಆಪ್ತರೊಡನೆ ಅಲ್ಲಿಗೆ ಹೊರಟೆ. ಹೋದ ಕಾರ್ಯ ಬೇಗ ಮುಗಿಯಿತು. ಇನ್ನೂ ಒಂದು ದಿನ ಸಮಯವಿತ್ತು. ಊರುಗಳನ್ನು ನೋಡಿ ಬರೋಣ ಎಂದು ಹೊರಟೆವು. ಎಲ್ಲೆಡೆಯೂ ನಮಗೆ ಒಂದು ಉತ್ಪನ್ನ ಕಾಣಸಿಕ್ಕಿತು. ಅದನ್ನು ಮೊದಲ ಮಳಿಗೆಯಲ್ಲಿ ನೋಡಿದಾಗಲೇ ಹೇಳಿದೆ, 'ಇದು ನಮ್ಮ ಬ್ರಾಹ್ಮಿಯೇ'ಎಂದು. ಚೀನಾದಲ್ಲೂ ಬ್ರಾಹ್ಮಿ ಇದೆಯಾ ಎಂದು ಜತೆಗಿದ್ದವರು ಹುಬ್ಬೇರಿಸಿದರು. 'ಈಗಲ್ಲ, ಒಂದು ಸಾವಿರ ವರ್ಷದಿಂದಲೂ ಇಲ್ಲಿ ಬ್ರಾಹ್ಮಿ ಬಳಕೆ ಇದೆ' ಎಂದಾಗ ಅವರಿಗೆ ಇನ್ನಷ್ಟು ಅಚ್ಚರಿ ಆಯಿತು.
ನಮ್ಮ ಆಯುರ್ವೇದದಲ್ಲಿ ಬ್ರಾಹ್ಮಿ ಉಲ್ಲೇಖವಿದೆ. ನಾವೆಲ್ಲ ಚಿಕ್ಕವರಿದ್ದಾಗ ಬೆಳಗ್ಗೆ ತಿಂಡಿಗೆ ಮುನ್ನ ಅಮ್ಮ ಬ್ರಾಹ್ಮಿ ಎಲೆ ಕುದಿಸಿ ಕಷಾಯ ಮಾಡಿಕೊಡುತ್ತಿದ್ದುದು ನೆನಪಿಗೆ ಬಂತು. ಅದೇ ಸ್ವಾಮಿ ನಮ್ಮ ಒಂದೆಲಗ. ಆಯುರ್ವೇದ ಮಾತ್ರವೇ ಅಲ್ಲ, ಚೀನೀಯರೂ ಅದನ್ನು 'ಮೆದುಳಿನ ಆಹಾರ' ಎಂದೇ ಲಾಗಾಯ್ತಿನಿಂದಲೂ ಪರಿಗಣಿಸಿದ್ದಾರೆ. ಬ್ರಾಹ್ಮಿ ಸೇವನೆಯಿಂದ ಮೆದುಳು ಚುರುಕಾಗುತ್ತದೆ, ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎನ್ನುವ ನಂಬಿಕೆ. ಬ್ರಾಹ್ಮಿ ತೈಲದಿಂದ ತಲೆ ತಂಪಾಗಿರುವುದಲ್ಲದೆ ಕೇಶರಾಶಿ ಸಮೃದ್ಧವಾಗಿರುತ್ತದೆ. ಜೀರ್ಣಕಾರಿ ಕೂಡ. ಸೋಜಿಗ ಏನು ಗೊತ್ತಾ? ಚೀನೀಯರೂ ಇದನ್ನು ಔಷಧೀಯ ಸಸ್ಯವಾಗಿಯೇ ಪರಿಗಣಿಸಿದ್ದರು ಎನ್ನುವುದು. ಮೆದುಳು ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಏನೇ ಸಮಸ್ಯೆಗಳಿದ್ದರೂ ಅವರು ಬಳಸುತ್ತಿದ್ದುದು ಬ್ರಾಹ್ಮಿಯನ್ನೇ. ಆಸ್ತಮಾ,ಜೀರ್ಣಾಂಗಕ್ಕೆ ಸಂಬಂಧಪಟ್ಟ ಚಿಕಿತ್ಸೆಗಳಲ್ಲೂ ಇದರ ಉಪಯೋಗ ಇತ್ತು.
ಈಗೀಗ ಬ್ರಾಹ್ಮಿ ವಾಣಿಜ್ಯ ಬೆಳೆಯಾಗಿಯೂ ಪ್ರಸಿದ್ಧಿ ಪಡೆಯುತ್ತಿದೆ. ಜಮ್ಮು-ಕಾಶ್ಮೀರ, ಕೋಲ್ಕತ್ಕಾ ಮೊದಲಾದ ಕಡೆಗಳಲ್ಲಿ ಬ್ರಾಹ್ಮಿ ಬೆಳೆದು ಯಶಸ್ಸು ಕಂಡರಿದ್ದಾರೆ. ಆಯುರ್ವೇದ ಔಷಧ ಅಂಗಡಿಗಳು ಮಾತ್ರವೇ ಅಲ್ಲ, ಸೂಪರ್ ಮಾರ್ಕೆಟ್, ಮಾಲ್ಗಳಲ್ಲೂ ಬ್ರಾಹ್ಮಿಯ ವಿವಿಧ ಉತ್ಪನ್ನಗಳು ಸಿಗುತ್ತಿವೆ. ಬೇಸರ ಎಂದರೆ ಹಳ್ಳಿಗಳಲ್ಲಿ ಮನೆಯಂಗಳದಲ್ಲಿ ಬ್ರಾಹ್ಮಿ ಬೆಳೆಯುವುದು ಕಡಿಮೆಯಾಗುತ್ತಿದೆ. ಮೆದುಳಿನ ವಿಚಾರದಲ್ಲಿ ಬ್ರಾಹ್ಮಿ ಮಾಡುವ ಮುಖ್ಯ ಕೆಲಸ ಎಂದರೆ ಮೆದುಳಿನ ಸುತ್ತಮುತ್ತ ರಕ್ತಪರಿಚಲನೆ ಹೆಚ್ಚಿಸುವುದು. ಇದರಿಂದ ಸ್ವಾಭಾವಿಕವಾಗಿ ಮೆದುಳಿಗೆ ಬೇಕಾದ ಪ್ರಮಾಣದಲ್ಲಿ ಆಮ್ಲಜನಕ, ಪೋಶಕಾಂಶಗಳು ಸಿಕ್ಕು ಅದರ ಕಾರ್ಯಕ್ಷಮತೆ ಹೆಚ್ಚುತ್ತದೆ. ಮರೆವಿನ ಕಾಯಿಲೆಗೂ ಬ್ರಾಹ್ಮಿಯನ್ನು ಪರಿಣಾಮಕಾರಿ ಔಷಧ ಎಂದು ಪರಿಗಣಿಸಲಾಗಿದೆ. ನಿಮ್ಮ ಮನೆ ಅಂಗಳದಲ್ಲೊ, ಟೆರೆಸ್ ಮೇಲೊಜಾಗ ಇದ್ದರೆ ಬ್ರಾಹ್ಮಿ ಬೆಳೆದುಕೊಳ್ಳಿ. ಅದಕ್ಕೆ ಬೇಕಿರುವುದು ಒಂಚೂರು ನೀರು ಅಷ್ಟೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


