ಬೈಟುಕಾಫಿ

ಪಾಪ್‌ಗಳ ಲೋಕದಲ್ಲಿ

ಪಾಪ್‌ಗಳ ಲೋಕದಲ್ಲಿ
Published On :

ಪಾಪ್ ಹಾಡುಗಳ ಮೋಡಿಯೇ ಅಂತಹದ್ದು! ಎಂಥವನನ್ನೂ ಕೇಳುಗನನ್ನಾಗಿಸುವ ವಿಸ್ಮಯ. ಅಲ್ಲಿ ಸಂಗೀತವಿದೆ. ಗಾಯನವಿದೆ. ಭಾವನೆಗಳ ತುಮುಲವಿದೆ. ಕ್ರೇಜ್ ಇದೆ. ನೋವಿನ ಸಾಹಿತ್ಯವನ್ನೂ ಶಬ್ಧಗಳ ಅಲೆಯಲ್ಲಿ ಮತ್ತು ಉದ್ವೇಗದ ಧ್ವನಿಯಲ್ಲಿ ಪ್ರಸ್ತುತ ಪಡಿಸುವ ಚಾತುರ್ಯ ಇದೆ. ಅಂತಹ ಚಮತ್ಕಾರ ಪಾಪ್ ಹಾಡುಗಳಿಗೆ ಮಾತ್ರ ಸಾಧ್ಯ. ಅಂದ ಮಾತ್ರಕ್ಕೇ, ಮೈಕಲ್ ಜಾಕ್ಸನ್ ವಿಶ್ವದಾದ್ಯಂತ ಆರಾಧ್ಯ ಪಾಪ್ ತಾರೆಯಾಗಿದ್ದು. ಲೇಡಿ ಗಾಗಾ, ಶಕೀರ ಹುಡುಗರ ಮನೆ ಮಾತಾಗಿದ್ದು. ಫೀಫಾ ವಿಶ್ವಕಪ್ ಪಂದ್ಯಕ್ಕಾಗಿ ಹಾಡಿದ ಶಕೀರಾಳ ವಕ್ಕಾವಕ್ಕಾ ಎಷ್ಟು ಮಂದಿಯ ಬಾಯಿಯನ್ನು ಹಾದು ಹೋಗಿಲ್ಲ? ಪಂದ್ಯ ಮುಗಿದರು ವಕ್ಕಾ ವಕ್ಕಾ ಇಂದಿಗೂ ಹಲವರ ಬಾಯಿಪದ.  

'ಪಾಪ್ ಸಂಗೀತ ಎಂದಾಕ್ಷಣ ಅಲ್ಲೊಂದಿಷ್ಟು ಶಬ್ಧಗಳ ಆರ್ಭಟವಿರುತ್ತದೆ. ಡ್ರಮ್ಸ್‌ಗಳ ಯದ್ವಾತದ್ವಾ ಬಡಿತವಿರುತ್ತದೆ. ಲಯ, ತಾಳ, ಶೃತಿ ಇಲ್ಲದೆಯೇ ಹುಚ್ಚರಂತೆ ಸಂಗೀತದ ಎಲ್ಲಾ ಉಪಕರಣಗಳನ್ನು ನುಡಿಸುತ್ತಾರೆ. ಹಾಡುಗಾರರು ಕಿವಿ ಗಡಚಿಕ್ಕುವಂತೆ ಆರ್ಭಟಿಸುತ್ತಾರೆ. ಬೇಕಾಬಿಟ್ಟಿ ಕುಣಿಯುತ್ತಾರೆ' ಎಂಬ ಮೊಂಡು ವ್ಯಾಖ್ಯಾನ ಇದೆ. ನಮ್ಮ ಸಿನಿಮಾ ಹಾಡುಗಳನ್ನೇ ತೆಗೆದುಕೊಳ್ಳಿ, 'ಎಂಪ್ಟಿ ರೋಡು, ಒಂಟಿ ಗರ್ಲು, ಕೆಂಪು ಲಿಪ್ಸು, ಕೈಲಿ ಬುಕ್ಸು!', 'ಹಚ್ಚೀ.. ಕಳ್ಳ ಕಳ್ಳಾಚಿ ಓನ್ ಮಾಡ್ತಾ ಇದೀಯಾ? ಲವ್ ಮಾಡ್ತಾ ಇದೀನಿ!' ಎಂಬಿತ್ಯಾದಿ ಅಸಂಬದ್ಧ ಹಾಡುಗಳಿಗೆ ಬರವೇ? ಹಾಗಂತ ಎಣಿಕೆ ಮಾಡಿದರೆ ಸಾಕಷ್ಟು ಒಳ್ಳೆಯ ಭಾವಾರ್ಥವಿರುವ ಸಿನಿಮಾ ಹಾಡುಗಳು ನಮ್ಮಲಿವೆ. ಎಲ್ಲೋ ಒಂದೆರಡು ಹಾಡುಗಳು ಕೆಟ್ಟದಾಗಿವೆ ಎಂದ ಮಾತ್ರಕ್ಕೆ ಪೂರ್ತಿ ಸಿನಿಮಾ ರಂಗದ ಮೇಲೆ ಗೂಬೆ ಕೂರಿಸಲು ಸಾಧ್ಯವಿಲ್ಲ. ಅಂತೆಯೇ ಪಾಪ್ ಸಂಗೀತ!
ಪಾಪ್ ಲೋಕ ಎಂಬುದು ಅದ್ಭುತ ಮಾಯಾ ಪ್ರಪಂಚ. ಈ ಮಾಯಾನಗರಿಯಲ್ಲಿ ಮೂಡಿದ ಸಾವಿರಾರು ಅಲ್ಬಾಮ್‌ಗಳಿವೆ. ನೂರಾರು ಸ್ಟಾರ್ ಹಾಡುಗಾರರು ಇದ್ದಾರೆ. ಬೆಸ್ಟ್, ಟಾಪ್ ಅಂತ ಸಮೀಕರಿಸಿದಾಗ ಈ ಹತ್ತು ಹಾಡುಗಳು ಪ್ರಮುಖವೆನಿಸುತ್ತವೆ.

ಐ ವಾಂಟ್ ಇಟ್ ದಾಟ್ ವೇ - ಬ್ಯಾಕ್‌ಸ್ಟ್ರೀಟ್ ಬಾಯ್ಸ್
ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಗುಂಪಿಗೆ ಅಮೆರಿಕದಲ್ಲಿ ಐಡೆಂಟಿಟಿ ತಂದುಕೊಟ್ಟ ಹಾಡು. 'ಐ ವಾಂಟ್ ಇಟ್ ದಾಟ್ ವೇ' ಹಾಡಿಗೆ ಮ್ಯಾಕ್ಸ್ ಮಾರ್ಟೀನ್ ಮತ್ತು ಆಂಡ್ರೇಸ್ ಕಾರ್ಲಸನ್ ಅವರ ಸಾಹಿತ್ಯವಿದೆ. ಸಂಬಂಧದಲ್ಲಿ ಭಾವನಾತ್ಮಕ ಅಥವಾ ದೈಹಿಕ ಅಂತರದಿಂದ ಉಂಟಾಗುವ ವೇದನೆಯನ್ನು ಬಿಂಬಿಸುತ್ತದೆ. ಹಾಡಿನ ಆಕರ್ಷಣೆ ಮತ್ತು ಲವ್ಲಿನೆಸ್ ಎಲ್ಲರೂ ಇಷ್ಟಪಡುವಂತೆ ಮಾಡಿದೆ. ಜನಪ್ರಿಯತೆಯೊಂದಿಗೆ ದುಡ್ಡು ಮಾಡುವಲ್ಲೂ ಹಿಂದೆ ಬೀಳಲಿಲ್ಲ. ಹೆಚ್ಚಿನ ಸಂಗೀತ ವಿಮರ್ಶಕರು ಹಾಡಿನ ಕುರಿತಾಗಿ ಒಳ್ಳೆಯ ಅಭಿಪ್ರಾಯ ಮಂಡಿಸಿದ್ದಾರೆ.
ಚೀನದ 'ಮಿನಿಸ್ಟ್ರೀ ಆಫ್ ಕಲ್ಚರ್‌' ಪಟ್ಟಿಯಲ್ಲಿ ಈ ಹಾಡನ್ನು ಸೇರಿಸಲಾಗಿತ್ತು. ಇಂಟರ್ನೆಟ್‌ನಿಂದ ತೆಗೆಯಬೇಕು ಎಂಬ ವಾದವನ್ನು ಮಂಡಿಸಿತ್ತು!

ಬ್ಯಾಡ್ - ಮೈಕಲ್ ಜಾಕ್ಸನ್
1987ರಲ್ಲಿ 'ಬ್ಯಾಡ್‌' ಅಲ್ಬಮ್‌ನ ಹಾಡಾಗಿ ಜಗತ್ತಿನಾದ್ಯಂತ ಮೋಡಿ ಮಾಡಿದ್ದು 'ಬ್ಯಾಡ್‌' ಸಾಂಗ್! ಸಾಹಿತ್ಯ, ಸಂಗೀತ, ಗಾಯನ ಎಲ್ಲವನ್ನೂ ಮೈಕಲ್ ಒಬ್ಬರೇ ನಿರ್ವಹಿಸಿದ್ದರು. ವಿಮರ್ಶಕರಿಂದ ಹೆಚ್ಚಿನ ಟೀಕೆಗೆ ಒಳಗಾಯಿತು. ಆದರೆ ರಾತ್ರೋರಾತ್ರಿ ಜನಪ್ರಿಯವಾಯಿತು. ಯುನೈಟೆಡ್ ಕಿಂಗ್‌ಡಮ್ ರಾಷ್ಟ್ರಗಳನ್ನು ಹುಚ್ಚೆಬ್ಬಿಸಿತು. 'ಬ್ಯಾಡ್‌' ಹಾಡು ಕೇಳಿದವರೆಲ್ಲಾ 'ಯು ನೋ, ಐ ಆಮ್ ಬ್ಯಾಡ್!' ಎನ್ನಲು ಶುರುಮಾಡಿದ್ದರಂತೆ! ಮೈಕಲ್ ಜಾಕ್ಸನ್ ಅವರ ಸ್ವಂತ ಅನುಭವವೇ ಈ ಹಾಡಿನ ಸ್ಫೂರ್ತಿ. 'ವಿ ಕ್ಯಾನ್ ಚೇಂಜ್ ವರ್ಲ್ಡ್ ಟುಮಾರೋ' ಎಂಬ ಸಾಲು ಮನಮುಟ್ಟುವಂತಿದೆ.

ಥ್ರಿಲ್ಲರ್ - ಮೈಕಲ್ ಜಾಕ್ಸನ್
1983, ಡಿಸೆಂಬರ್ 2. ಜಾನ್ ಲಾಂಡೀಸ್ ಸಹಕಾರದೊಂದಿಗೆ ಸ್ವತಃ ಸಾಹಿತ್ಯ ಬರೆದು, ಹಾಡಿ ಡ್ಯಾನ್ಸ್ ಮಾಡಿದ 'ಥ್ರಿಲ್ಲರ್ ಅಲ್ಬಮ್‌'ನ 'ಥ್ರಿಲ್ಲರ್‌' ಜಗತ್ತಿನಾದ್ಯಂತ ಥ್ರಿಲ್ ಮೂಡಿಸುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸ್ವಲ್ಪ ದಿನಗಳ ಹಿಂದಷ್ಟೇ ಜಾಕ್ಸನ್‌ನ ಆಫ್ ದಿ ವಾಲ್ ಅಲ್ಬಮ್ ವಿಮರ್ಶಕರಿಂದ ಭಾರಿ ಪ್ರಶಂಸೆ ಪಡೆದಿತ್ತು. ಸಾಕಷ್ಟು ದುಡ್ಡು ಮಾಡಿತ್ತು. ನಂತರದ ದಿನಗಳಲ್ಲಿ 'ಎಮ್‌ಜೆ' ಧ್ವನಿ ಗುರುತಿಸದವರಿಲ್ಲ ಎಂಬಷ್ಟು ವ್ಯಾಪಿಸಿತು. ಥ್ರಿಲ್ಲರ್ ಹಾಡಿನ ಮಿಲಿಯನ್‌ಗಟ್ಟಲೆ ಕಾಪಿ ಮಾರಾಟಗೊಂಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿತು. ಥ್ರಿಲ್ಲರ್ 'ಜನಪ್ರಿಯ ಸಂಸ್ಕೃತಿ'ಯನ್ನು ಹುಟ್ಟುಹಾಕಿತು. ಮಧ್ಯರಾತ್ರಿಯ ವೇಳೆ ದಟ್ಟ ಕತ್ತಲೆಯಲ್ಲಿ, ಕೊಠಡಿಯೊಳಗಿರುವ ಒಂಟಿ ಹುಡುಗಿಯನ್ನು ಕಾಡುವ ಭೂತದ ಕುರಿತಾದ ಸಾಲುಗಳು. ಕೂಗಿದರೂ ಯಾರಿಗೂ ಕೇಳುವುದಿಲ್ಲ. ಆಕೆಯನ್ನು ಕಾಪಾಡಲೂ ಯಾರೂ ಬರುವುದಿಲ್ಲ. ಅಂತಹ ಸಂದರ್ಭ ಪ್ರಕಟಗೊಳ್ಳುವ ಆ ಹುಡುಗಿಯ ಭೀತಿ ಹಾಡಿನಲ್ಲಿ ಪ್ರಕಟಗೊಂಡಿದೆ. 'ಕಿಂಗ್ ಆಫ್ ಪಾಪ್‌' ಎಂಬ ಹಣೆಪಟ್ಟಿ ಸಿಕ್ಕಿದ್ದು ಈ ಹಾಡಿನ ಮುಖಾಂತರ!

ಬೇಬಿ ಒನ್ ಮೋರ್ ಟೈಮ್ಸ್ - ಬ್ರಿಟ್ನಿ ಸ್ಪಿಯರ್ಸ್
ಅಂದು 1998 ಸೆಪ್ಟಂಬರ್ 30, 'ಬೆಬಿ ಒನ್ ಮೋರ್ ಟೈಮ್ಸ್‌' ಹಾಡು ಗ್ಲೋಬಲ್ ಪ್ರಖ್ಯಾತಿಗೆ ಒಳಗಾಯಿತು. ಜಗತ್ತಿನ ಯುವಕರ ಆರಾಧ್ಯ ದೇವಿಯಾಗಿ 'ಬ್ರಿಟ್ನಿ ಸ್ಪಿಯರ್ಸ್‌' ಅವತರಿಸಿಬಿಟ್ಟಳು. ಎಷ್ಟೋ ಬ್ರೇಕ್ ಆದ ಜೋಡಿಗಳು ಒಂದಾದವು! ಹರೆಯದ ಯುವತಿಯೋರ್ವಳ ವಿರಹವನ್ನು ಸುಂದರವಾಗಿ ಕಟ್ಟಿಕೊಟ್ಟ ಖ್ಯಾತಿ ಈ ಹಾಡಿಗೆ ಸಲ್ಲಬೇಕು. ಮ್ಯಾಕ್ಸ್ ಮಾರ್ಟೀನ್ ಈ ಹಾಡಿನ ಕತೃ. 10 ಮಿಲಿಯನ್‌ಗೂ ಹೆಚ್ಚು ಹಾಡಿನ ಕಾಪಿಗಳು ಮಾರಾಟಗೊಂಡವು. 'ಹೌವ್ ವಾಸ್ ಐ ಸಪ್ಪೋಸಡ್ ಟು ನೋ ದಾಟ್ ಸಮ್‌ತಿಂಗ್ ವಾಸ್ ನಾಟ್ ರೈಟ್ ಹಿಯರ್‌' ಸಾಲು ಕಾರಣ ಹೇಳದೆ ಕೈ ಬಿಡುವ ಪ್ರೇಮಿಗಳ ನಿಯತ್ತನ್ನು ಪ್ರಶ್ನಿಸುವಂತಿದೆ.

ರಿಟನ್ ಇನ್ ದ ಸ್ಟಾರ್ಸ್ - ಟೈನಿ ಟೆಂಫ್
ಟೈನಿ ಟೆಂಫ್‌ನ ಅಲ್ಬಮ್‌ನ ಹಾಡಾಗಿದ್ದು ಎರಿಕ್ ಟರ್ನರ್ ಧ್ವನಿಯಾಗಿದ್ದಾರೆ. ಇಶಿ, ಮುಘಲ್, ಟೆಂಫ್, ಟರ್ನರ್, ಶಾರ್ಲಿ ಬೆರ್ನಾಡೋ 'ರಿಟ್ಟನ್ ಇನ್ ದ ಸ್ಟಾರ್ಸ್‌' ರಚಿಸಿದ್ದಾರೆ. 2011 ಮೇಜರ್ ಲೀಗ್ ಬೇಸ್‌ಬಾಲ್ ಪೋಸ್ಟ್ ಸೀಸನ್, 'ಡಬ್ಲುಡಬ್ಲುಇ'ನ ವ್ರಸ್ಸೋಮೇನಿಯಾ 27, 'ಸ್ಕೈ ಸ್ಪೋರ್ಟ್ಸ್‌'ನ ಪ್ರೀಮಿಯರ್ ಲೀಗ್‌ಗಳಲ್ಲಿ ಥೀಮ್ ಸಾಂಗ್‌ಆಗಿ 'ರಿಟನ್ ಇನ್ ದ ಸ್ಟಾರ್ಸ್‌' ಮೋಡಿ ಮಾಡಿತು.

ಪೋಕರ್ ಫೇಸ್ - ಲೇಡಿ ಗಾಗಾ
2008ರಲ್ಲಿ ಬಿಡುಗಡೆಯಾದ 'ದಿ ಫೇಮ್‌' ಅಲ್ಬಮ್‌ನ ಹಾಡು. ಸ್ವತಃ ರಚಿಸಿ ಧ್ವನಿ ನೀಡಿದ್ದಾರೆ ಲೇಡಿ ಗಾಗಾ. ಈ ಹಾಡಿನ ಹಿಂದಿರುವ ಆಲೋಚನೆ ಬೈಸೆಕ್ಸ್‌ವಾಲಿಟಿ. ತನ್ನ ರಾಕ್ ಆ್ಯಂಡ್ ರೋಲ್ ಬಾಯ್ ಫ್ರೆಂಡ್‌ಗಳಿಗಾಗಿ ಅರ್ಪಿಸಿರುವ ಹಾಡೂ ಹೌದು! ಅತಿ ಹೆಚ್ಚು ಡೌನ್‌ಲೋಡ್‌ಗೆ ಒಳಪಟ್ಟಿರುವ ಹಾಡು ಎಂಬ ಹೆಗ್ಗಳಿಕೆಯೂ ಇದೆ. ಸಾಂಗ್ ಆಫ್ ದ ಇಯರ್, ರೆಕಾರ್ಡ್ ಆಫ್ ದ ಇಯರ್, 52ನೇ ಗ್ರಾಮಿ ಅವಾರ್ಡ್, ಬೆಸ್ಟ್ ಡಾನ್ಸ್ ರೆಕಾರ್ಡಿಂಗ್ ವಿಭಾಗದಲ್ಲೂ ಗ್ರಾಮಿ ಅವಾರ್ಡ್ ಪಡೆದ ಹಿರಿಮೆ ಪೋಕರ್ ಫೇಸ್‌ನದ್ದು.

ದಿಸ್ ಇಸ್ ಮಿ - ಡೆಮಿ ಲೊವೆಟೋ ಮತ್ತು ಜೋಯ್ ಜೋನಸ್
ಆಂಡಿ ಡೋಡ್ ಮತ್ತು ಆಡಮ್ ವ್ಯಾಟ್ಸ್ ರಚಿಸಿರುವ ಗೀತೆ. 'ಕ್ಯಾಂಪ್ ರಾಕ್‌' ಅಲ್ಬಾಮ್‌ನ ಹಾಡು ಇದಾಗಿದ್ದು ಜೋಯ್ ಜೋನಸ್ ಧ್ವನಿ ನೀಡಿದ್ದಾರೆ. ನಾನ್ಯಾರು ಎಂಬ ಅರ್ಥ ಕೊಡುವ 'ಲೋ ಕ್ಯೂ ಸಾಯ್‌' ಎಂಬ ಸ್ಪಾನಿಶ್ ಆವೃತ್ತಿಯಲ್ಲಿ ಲೊವೆಟೋ ಹಾಡಿದ್ದಾರೆ. ಡೆಮಿ ಲೊವೆಟೋ ಹಾಡಿದ ಮೊದಲ ಹಾಡು ಇದಾಗಿದ್ದು ಆಕೆಗೆ ಸಾಕಷ್ಟು ಹೆಸರು ತಂದುಕೊಟ್ಟಿತು. 'ಐ ಆಮ್ ಎಕ್ಷಾಕ್ಟ್‌ಲಿ ವೇರ್ ಐ ಆಮ್ ಸಪ್ಪೋಸಡ್ ಟು ಬಿ, ದಿಸ್ ಇಸ್ ಮಿ' ಎಂದು ಅವಳ ಮತ್ತು ಅವಳಲ್ಲಿರುವ ಪ್ರೇಯಸಿಯ ವರ್ಣನೆ ಮೆಚ್ಚುಗೆಯಾಗುತ್ತದೆ.

ಕಾಲ್ ಮಿ ಮೇಬಿ - ಕಾರ್ಲಿ ರೇ
ಕೆನೆಡಿಯನ್ ಕವಯಿತ್ರಿ ಮತ್ತು ಗಾಯಕಿ ಕಾರ್ಲಿ ರೇ ಜೆಪ್ಸನ್ 'ಕಿಸ್‌' ಅಲ್ಬಮ್‌ಗಾಗಿ ಹಾಡಿರುವ ಗೀತೆ. ಜೆಪ್ಸನ್ ಮತ್ತು ತಾವಿಶ್ ಕ್ರ್ಯೂ ಸಾಹಿತ್ಯವಿದೆ. ಪ್ರಪಂಚದಾದ್ಯಂತ ಹೊಸ ಅಲೆ ಸೃಷ್ಟಿ ಮಾಡಿದ ಹಾಡು. ಒಂದೇ ವರ್ಷದಲ್ಲಿ ಹತ್ತು ಮಿಲಿಯಕ್ಕೂ ಹೆಚ್ಚು ಮಾರಾಟಗೊಂಡಿದೆ. ಎರಡು ಗ್ರಾಮಿ ಅವಾರ್ಡ್‌ಗೆ ಭಾಜನವಾಗಿದೆ.

ಅಂಬ್ರೆಲ್ಲಾ - ರೈಹಾನ್ನಾ
ದಿ ಡ್ರೀಮ್, ಟ್ರಿಕ್ಕಿ ಸ್ಟಿವರ್ಟ್, ಕುಕ್ ಹ್ಯಾರೆಲ್ ಮತ್ತು ಜೇ ಜೆ ಅವರ ರಚನೆ ಈ ಗೀತೆಗಿದೆ. ನಟಿ, ವಿನ್ಯಾಸಗಾರ್ತಿ, ಗಾಯಕಿ ರೈಹಾನ್ನಾ ಮತ್ತು ಜೇ ಜೆ ಧ್ವನಿಗೂಡಿಸಿದ್ದಾರೆ. ವಾಸ್ತವದಲ್ಲಿ ಬ್ರಿಟ್ನಿ ಸ್ಪೀಯರ್ಸ್ ರಚಿಸಿದ ಗೀತೆ. ಆದರೆ ತಿರಸ್ಕೃತಗೊಂಡಿತ್ತು. 'ಅಂಬ್ರೆಲ್ಲಾ' ಗ್ರಾಮಿ ಅವಾರ್ಡ್ ಪುರಸ್ಕೃತಗೊಂಡಿದೆ. ರೈಹಾನ್ನಾ ಪಾಪ್ ಲೋಕದಲ್ಲಿ ನೆಲೆಯೂರಲು ಅಂಬ್ರೆಲ್ಲಾ ಆಶ್ರಯ ನೀಡಿತು.

ಐ ವಿಲ್ ಆಲ್ವೇಸ್ ಲವ್ ಯು - ವೇಟ್ನಿ ಹೌಸ್ಟನ್
ಅಮೆರಿಕದ ಗಾಯಕಿ ಮತ್ತು ಕವಯಿತ್ರಿ ಡಾಲ್ಲಿ ಪಾರ್‌ಟನ್ ರಚಿಸಿದ ಹಾಡು. ಹೌಸ್ಟನ್ 1974ರಲ್ಲಿ ರಚಿಸಿ ಹಾಡಿದ 'ಐ ವಿಲ್ ಆಲ್ವೇಸ್ ಲವ್ ಯು' ಗೀತೆಗೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು. ಒಂದೇ ಹಾಡಿಗೆ ಎರಡು ಬಾರಿ 'ನಂಬರ್ ವನ್ ಸಿಂಗರ್‌' ಮತ್ತು ಮೂರು ಬಾರಿ 'ನಂಬರ್ ವನ್ ರೈಟರ್‌' ಎಂಬ ಮಾನ್ಯತೆ ಗಿಟ್ಟಿಸಿದ ಪಾಪ್ ತಾರೆ. 1992ರಲ್ಲಿ 'ದಿ ಬಾಡಿಗಾರ್ಡ್‌' ಸಿನಿಮಾದ ಹಾಡಾಗಿ ವೇಟ್ನಿ ಹೌಸ್ಟನ್ ಪರಿವರ್ತಿಸಿದರು. ಹೌಸ್ಟನ್ ಹಾಡಿದ ಆವೃತ್ತಿಗೆ 2 ಗ್ರಾಮಿ ಅವಾರ್ಡ್ ಮಾನ್ಯತೆ ಸಿಕ್ಕಿದೆ. ವರ್ಲ್ಡ್ ಬೆಸ್ಟ್ ಸೆಲ್ಲರ್ ಸ್ಥಾನದಿಂದ ಹೌಸ್ಟನ್ ಹಾಡಿದ ಆವೃತ್ತಿ ಇಂದಿಗೂ ಹಿಂದೆ ಸರಿದಿಲ್ಲ.
-ಮಂಜುನಾಥ್ ಎಲ್. ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.