ವಾರ್ತಾ-ಆರತಿ

ಆರತಿ ಕುಲಕರ್ಣಿ ಎಂಬ ಹೆಸರು ಕಿರುಕ್ಷೇತ್ರದಲ್ಲಿ ಸತತ ಎರಡನೇ ವಾರ ಕಾಣಿಸಿಕೊಂಡಿದ್ದು ಕೆಲವರಲ್ಲಿ ಗೊಂದಲವೆನಿಸಿ, ಒಮ್ಮೆ ಕಳೆದವಾರದ ಪತ್ರಿಕೆಯನ್ನು ಮತ್ತೆ ತಿರುವಿ ಹಾಕುವಂತಾಗದಿರಲಿ ಎಂದು ಈ ಮುನ್ನುಡಿ. ಇವರು ಅವರಲ್ಲ. ಅದೇ ಹೆಸರಿನ ಇನ್ನೊಬ್ಬ ಕಿರುತೆರೆ ನಟಿ.
ಈ ಆರತಿ ಅರಗಿಣಿ ಧಾರಾವಾಹಿಯಿಂದ ಜನಪ್ರಿಯಗೊಂಡವರು. ಮೊದಲು ಖಾಸಗಿ ಟಿವಿ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿದ್ದ ಆರತಿ ನಟಿಯಾಗಿದ್ದು ತೀರಾ ಅನಿರೀಕ್ಷಿತ. ಈ ಬಗ್ಗೆ ಅವರ ಮಾತಲ್ಲೇ ಕೇಳೋಣ.
ಪೂರ್ತಿ ಹೆಸರು?
ಆರತಿ ಪವನ್ ಕುಲಕರ್ಣಿ
ನಟನೆಗೆ ಬಂದದ್ದು ಹೇಗೆ?
ಸ್ಪಷ್ಟ ಕನ್ನಡ ಬರುತ್ತಿತ್ತು. ವಿಪರೀತ ಮೇಕಪ್ ಇಲ್ಲದೆಯೂ ಸಹಜವಾಗಿ ನೋಡಬಲ್ ಎಂಬಂತೆ ಇದ್ದೆ. ಖಾಸಗಿ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿ ಆಯ್ಕೆಯಾದೆ. ಅಲ್ಲಿ ಕ್ಲಿಕ್ ಆಗಿದ್ದು, ಕರ್ನಾಟಕ ಸಮಯ ಎಂಬ ವಿಶೇಷ ವಾರ್ತೆ, ಜ್ಯೋತಿಷ್ಯ ಈಸ್ ಈಕ್ವಲ್ ಟು ಭವಿಷ್ಯ ಮತ್ತು ಚಾರ್ಜ್ಶೀಟ್ ಕಾರ್ಯಕ್ರಮಗಳ ನಿರೂಪಕಿಯಾಗುವ ಅವಕಾಶ ದೊರಕಿಸಿತು.
ನೀವೂ ಬಯಲುಸೀಮೆಯವ್ರಾ?
ಹೌದು. ಹುಟ್ಟಿದ್ದು ಬೆಳಗಾವಿಯ ಘಟಪ್ರಭಾದಲ್ಲಿ. ಸ್ಕೂಲೂ ಅಲ್ಲೇ ಆಯ್ತು. ತಂದೆ ಲಕ್ಷ್ಮಣರಾವ್ ಕಾಟನ್ ಮಿಲ್ ವೃತ್ತಿಯಿಂದ ನಿವೃತ್ತರು. ತಾಯಿ ಸುಮಾ ಗೃಹಿಣಿ. ನಾವು ಇಬ್ಬರು ಮಕ್ಕಳು. ಅಣ್ಣ ಆನಂದ್ ಖಾಸಗಿ ವೃತ್ತಿಯಲ್ಲಿದ್ದಾರೆ.
ಓದು, ಉದ್ಯೋಗ, ಇತ್ಯಾದಿ?
ಪಿ.ಯು ನಂತರ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಮಾಡಿದೆ. ಈಗ ನಟನೆಯೇ ವೃತ್ತಿ, ಪ್ರವೃತ್ತಿ ಎಲ್ಲ.
ಅರಗಿಣಿ ಧಾರಾವಾಹಿಯ ನಿಮ್ಮ ಪಾತ್ರದ ಬಗ್ಗೆ ಹೇಳಿ.
ನಾನು ಗೌರಮ್ಮ ಪಾತ್ರಕ್ಕೂ ಸೈ, ರಫ್ ಅಂಡ್ ಟಫ್ ಪಾತ್ರಕ್ಕೂ ಸೈ. ಅರಗಿಣಿ ಧಾರಾವಾಹಿಯ ಮುಗ್ಧ ಮನೆಮಗಳ ಪಾತ್ರ. ನಾನು ನಾಯಕನ ಅಕ್ಕ ಅಕ್ಷರಾ. ತಮ್ಮನೆಂದರೆ ತುಂಬಾ ಪ್ರೀತಿ. ತುಂಬಾ ಸೈಲೆಂಟ್ ಹುಡುಗಿ ನಾನು. ದೇವರಲ್ಲಿ ವಿಪರೀತ ಭಕ್ತಿಯಿರುವವಳು. ಸಹನಾವತಿ ಕೂಡ. ಪತಿ ಖಳನಾದರೂ ಕೂಡ ನಾನು ಆತನನ್ನು ನಂಬುತ್ತೇನೆ. ಆತ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿರುತ್ತಾನೆ. ನಾನು ಕುಂಟಿ ಬೇರೆ. ಹಾಗಾಗಿ ಪ್ರೇಕ್ಷಕರ ಸಿಂಪಥಿಗಳಿಸಲು ಸಾಕಷ್ಟು ಅವಕಾಶಗಳಿವೆ. ಇಡೀ ಧಾರಾವಾಹಿಯಲ್ಲಿ ನನ್ನ ಪಾತ್ರ ಆದರ್ಶ ಬಯಸುವ ಹೆಣ್ಣು ಮಕ್ಕಳಿಗೆ ಆಪ್ತ. ನನ್ನ ಚಿಕ್ಕಮ್ಮನ ಪಾತ್ರವನ್ನು ಎಲ್ಲ ಚಿಕ್ಕ ಮಕ್ಕಳೂ ಇಷ್ಟಪಟ್ಟಿದ್ದಾರೆ. ಗಂಡ ಆಸ್ತಿಗೋಸ್ಕರ ನನ್ನ ಮದುವೆಯಾಗಿರುತ್ತಾನೆ.
ಅಂದಹಾಗೆ ನೀವು ಮ್ಯಾರೀಡ್ ಅಲ್ವಾ? ನಿಮ್ಮ ಪತಿ ಏನು ಕಂಡು ಕೈಹಿಡಿದರು?
ಹೂಂ. ನಾನು ವಿವಾಹಿತೆ. ನನ್ನವರು ನನ್ನನ್ನು ಪ್ರೀತಿಸಿ ಕೈ ಹಿಡಿದಿದ್ದಾರೆ. ಡಿಪ್ಲೊಮಾ ಮಾಡುತ್ತಿದ್ದ ಸಂದರ್ಭ. ಕ್ಲಾಸ್ಮೇಟ್ ರೂಪಾ ಇದ್ದ ವಠಾರದ ಮನೆಗೆ ಆಗಾಗ ಹೋಗ್ತಿದ್ದೆ. ಅಲ್ಲೇ ಪವನ್ ಕುಲಕರ್ಣಿ ಮನೆಯೂ ಇತ್ತು. ಲವ್ವಾಗಿಹೋಯ್ತು. ಮನೇಲೂ ಗ್ರೀನ್ಸಿಗ್ನಲ್ ಕೊಟ್ರು. ಈಗ ನಮ್ಮದು ಐದನೇ ವರ್ಷದ ದಾಂಪತ್ಯ . ಅವರು ಸಿ.ಎ ಆಗಿ ದುಡಿಯುತ್ತಿದ್ದಾರೆ.
ನಿಮ್ಮ ಪುಟಾಣಿ ಪುಟ್ಟನ ಹೆಸರು ವಿಶೇಷವಾಗಿದೆ ಅಂತ ಕೇಳ್ಪಟ್ಟೆ.
ಹೌದು. ಸಂಕಲ್ಪ್ ಅಂತ. ಪವನ್ ಇಟ್ಟ ಹೆಸರು ಅದು. ಈಗವನಿಗೆ ಮೂರೂವರೆ ವರ್ಷ. ನನ್ನಮೊದಲ ಫ್ಯಾನು.
ಅತ್ತೆಮಾವ ಸೀರಿಯಲಲ್ಲಿ ನಟಿಸೋಕೆ ಬಿಡ್ತಾರಾ ಅಥವಾ ಸೀರಿಯಲ್ಗಳ ಅತ್ತೆಮಾವಂದಿರ ಥರಾನೇ ಕಿರಿಕ್ಕಾ?
ನನಗೆ ಆ ಬಗ್ಗೆ ಹೆಮ್ಮೆಯಿದೆ. ಅತ್ತೆ ವಸುಧಾರದ್ದು ತಾಯಿಯ ಮಮತೆ. ಮಾವ ವಿಠಲರಾವ್ ಶಿಂಧೆ ಪತ್ರಕರ್ತರಾಗಿದ್ದವರು. ಈಗ ಸೊಸೆ ಕೂಡ ಮಾಧ್ಯಮ ಕ್ಷೇತ್ರದಲ್ಲಿರುವುದು ಅವರಿಗೆ ಅಭಿಮಾನ.
ಧಾರಾವಾಹಿ ಇಷ್ಟಾನೋ? ವಾರ್ತಾವಾಚನ ಇಷ್ಟಾನೋ?
ಬದುಕಿನಲ್ಲಿ ಯಾವುದನ್ನೂ ಮಿಸ್ ಮಾಡಿಕೊಳ್ಳದಿರುವ ಜಾಯಮಾನ ನನ್ನದು. ಬಹಳಷ್ಟು ಮಟ್ಟಿಗೆ ಅದರಲ್ಲಿ ಯಶಸ್ವಿಯಾಗಿದ್ದೇನೆ ಕೂಡ. ಹಾಗಂತ ವಾರ್ತಾವಾಹಿನಿಯಲ್ಲಿದ್ದ ಕೆಲಸ ತೊರೆಯಲು ಮನಸ್ಸಿರಲಿಲ್ಲ. ಇಂದಿಗೂ ಪಾರ್ಟ್ಟೈಮ್ ವಾರ್ತಾವಾಚಕಿಯಾಗಲು ತಯಾರಿದ್ದೇನೆ. ಆದರೆ ಪೂರ್ತಿಯಾಗಿ ಧಾರಾವಾಹಿಯನ್ನು ತೊರೆಯಲಾರೆ. ಯಾಕೆಂದರೆ ಐದು ವರ್ಷ ವಾರ್ತೆ ಓದಿದಾಗ ದೊರೆಯದ ಜನಪ್ರಿಯತೆಯನ್ನು ಹತ್ತೇ ತಿಂಗಳಲ್ಲಿ ಅರಗಿಣಿ ಧಾರಾವಾಹಿ ನೀಡಿದೆ. ಈಗ ಹೊರಗಡೆ ಕಂಡೊಡನೆ ಜನ ಗುರುತಿಸಿ ಸಮೀಪಿಸುವಾಗ ನಾನು ಸ್ಟಾರ್ ಆಗಿದ್ದೇನೇನೋ ಎಂಬ ಫೀಲ್ ಉಂಟಾಗುತ್ತಿದೆ.
ಕಿರುತೆರೆಯಲ್ಲಿ ನಿಮ್ಮ ಗಾಡ್ಫಾದರ್ ಯಾರು?
ನಾನು ನಟನಾರಂಗಕ್ಕೆ ಬಂದದ್ದು ಅನಿರೀಕ್ಷಿತ. ಸ್ನೇಹಿತ ಗೋಪಿ ಮೂಲಕ ನಿರ್ದೇಶಕ ರವಿಗರಣಿ ಪರಿಚಯವಾಯ್ತು. ರವಿ ಗರಣಿ ಸರ್ ಅವಕಾಶ ಕೊಟ್ಟು, ನನ್ನಲ್ಲಿ ನಟನೆ ಬಗ್ಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿದವರು. ಅವರೇ ಒಂದು ರೀತಿಯಲ್ಲಿ ಗಾಡ್ಫಾದರ್. ಆರಂಭದಲ್ಲಿ ನಾನು ವಾರ್ತೆ ಓದಿದಂತೆ ಸಂಭಾಷಣೆ ಒಪ್ಪಿಸುತ್ತಿದ್ದೆ. ಅದನ್ನು ತಿದ್ದಿದ್ದು ರವಿಗರಣಿ ಸರ್.
-ಶಶಿಕರ ಪಾತೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


