ಮೆದುಳು ರಿಪೇರಿ ಮಾಡುವ ಮೆಕ್ಯಾನಿಕ್ಗಳ ಬಗ್ಗೆ ಗೊತ್ತಿರಲಿ

ಬೆಳ್ಳಂಬೆಳಗ್ಗೆ ಎಸ್ಎಂಎಸ್, ದೂರವಾಣಿ ಕರೆಗಳ ಮಹಾಪೂರ. ಹೆಚ್ಚಿನವು ಕರಾವಳಿ, ಮಲೆನಾಡು ಭಾಗದಿಂದಲೇ ಬಂದಿರುವಂತಹವು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲವಲ್ಲ. 'ನೇರಳೆ ಹಣ್ಣಿನ ಮಹತ್ವ ನಮಗೆ ಗೊತ್ತೇ ಇರಲಿಲ್ಲ. ಮೆದುಳಿನ ಆರೋಗ್ಯದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ, ಎನ್ನುವುದನ್ನು ನೀವು ಹೇಳಲೂ ಇಲ್ಲ' ಎನ್ನುವ ಆಕ್ಷೇಪ ಸಹ ಇತ್ತೆನ್ನಿ. ಈ ಕುರಿತಾಗಿ ಸ್ಥಳೀಯವಾಗಿ ಸಂಶೋಧನೆಗಳು ನಡೆಯದೇ ಇರುವುದು ಸಹ ನೇರಳೆ ಕುರಿತಂತೆ ನಮ್ಮ ಅಜ್ಞಾನಕ್ಕೆ ಕಾರಣವಾಗಿರಬಹುದು ಎನ್ನುವ ಅಭಿಪ್ರಾಯಗಳೂ ಇದ್ದವು. ಅದು ಸಹ ನಿಜವೇ. ಸರ್ಕಾರಗಳ ನೀತಿಯ ಫಲವಾಗಿ ಕೃಷಿ ವಿಶ್ವ ವಿದ್ಯಾಲಯಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಿದ್ದು, ಮೊದಲಿದ್ದ ವಿ.ವಿ.ಗಳ ವ್ಯಾಪ್ತಿ ಕಡಿಮೆಯಾಗಿದೆ. ಇಲ್ಲದೆ ತೋಟಗಾರಿಕೆಗೆಂದೇ ಪ್ರತ್ಯೇಕ ವಿ.ವಿ.ಯೂ ರಾಜ್ಯದಲ್ಲಿ ಇವೆ. ಇಂತಹ ವಿ.ವಿ.ಗಳು ನೇರಳೆ ಮತ್ತಿತರ ಕಾಡು ಹಣ್ಣುಗಳ ಕುರಿತಾಗಿ ಸಂಶೋಧನೆ ನಡೆಸಲು ವಿಫುಲ ಅವಕಾಶಗಳು ಇವೆ ಅಲ್ಲವೆ? (ಅರಣ್ಯ ಮಹಾವಿದ್ಯಾಲಯಗಳೂ ಇವೆ). ಸಮಸ್ಯೆ ಏನೆಂದರೆ ಇಂತಹ ವಿಚಾರಗಳ ಕುರಿತು ಯಾರು ಸಂಶೋಧನೆ ನಡೆಸಬೇಕು ಎನ್ನುವ ತಾಕಲಾಟಗಳು ಇರಬಹುದೇನೋ! ಈ ಕುರಿತು ಇನ್ನಷ್ಟು ವೈಜ್ಞಾನಿಕ ಅಧ್ಯಯನ, ಒಂದಷ್ಟು ಸಂಶೋಧನೆಗಳು ನಡೆದರೆ ಬಹಳ ಪ್ರಯೋಜನ ಆಗುವುದಂತೂ ದಿಟ.
ರಕ್ತ ಸಂಚಾರಕ್ಕೂ, ಮೆದಳಿನ ಕಾರ್ಯ ನಿರ್ವಹಣೆಗೂ ಸಂಬಂಧ ಇದೆ ತಾನೆ? ಒಮ್ಮೊಮ್ಮೆ ರಕ್ತದಲ್ಲಿ ಕಬ್ಬಿಣದ ಅಂಶ ಮಿತಿಮೀರಿದರೆ ಮೆದುಳಿನ ಕಾರ್ಯನಿರ್ವಹಣೆಗೆ ಧಕ್ಕೆ ಆಗುವುದುಂಟು. 'ಹೈಡ್ರಾಕ್ಸೆಲ್ ರಾಡಿಕಲ್ಸ್' ಎನ್ನುವ ವಿಷಕಾರಿ ತ್ಯಾಜ್ಯವು ಈ ರಕ್ತದಲ್ಲಿ ಕಬ್ಬಿಣದ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದ್ದರೆ ಉತ್ಪಾದನೆಯಾಗುತ್ತದೆ. ಈ ತ್ಯಾಜ್ಯವು ರಕ್ತ ಪೂರೈಕೆಯನ್ನು ಮೆದುಳಿಗೆ ಕಡಿಮೆ ಮಾಡಬಲ್ಲದು. ಅಲ್ಲದೆ ಮೆದುಳು - ರಕ್ತನಾಳಗಳ ನಡುವೆ ತಡೆಗೋಡೆಯಾಗಿಯೂ ನಿಲ್ಲಬಹುದು. ರಕ್ತಸಂಚಾರದಲ್ಲಿ ಏರಿಳಿತ ಆದರೆ ಮೆದುಳಿಗೆ ಅಗತ್ಯವಿರುವ ಆಮ್ಲಜನಕದ ಪೂರೈಕೆಯಲ್ಲಿಯೂ ವ್ಯತ್ಯಯ ಆಗೇ ಆಗುತ್ತದೆ. ನೇರಳೆ, ಬ್ಲೂ ಬೆರ್ರಿ, ಬ್ಲ್ಯಾಕ್ ಬೆರ್ರಿ, ಒಣದ್ರಾಕ್ಷಿ, ದ್ರಾಕ್ಷಿ, ಬೀಟ್ರೂಟ್ ಮೊದಲಾದ ನೇರಳೆ ಮತ್ತು ನೀಲಿಬಣ್ಣದ ಹಣ್ಣುಗಳು ರಕ್ತದಲ್ಲಿನ ಹೆಚ್ಚುವರಿ ಕಬ್ಬಿಣ, ಕೊಲೆಸ್ಟರಾಲ್ ಅನ್ನು ತೆಗೆದುಹಾಕುತ್ತವೆ. ಇದು ಮಾತ್ರವಲ್ಲದೆ ಮೆದುಳಿಗೆ ಅಡ್ಡಿ ಆಗಬಹುದಾದ ಯಾವುದೇ ಅಡೆತಡೆಗಳನ್ನು ನಿವಾರಿಸುತ್ತವೆ. ಮೆದುಳಿನಲ್ಲಿ ಅಲ್ಪಪ್ರಮಾಣದ ತೊಂದರೆಗಳು ಕಾಣಿಸಿಕೊಂಡಾಗ ಅವುಗಳನ್ನು ಸರಿಪಡಿಸುವ ಮೆಕ್ಯಾನಿಕ್ ರೀತಿಯಲ್ಲಿಯೂ ಇವು ಕೆಲಸ ಮಾಡುತ್ತವೆ. ಇಂಥ ಹಣ್ಣುಗಳ ಸಿಪ್ಪೆಯಲ್ಲಿಯೇ ಮೆದುಳಿಗೆ ಬೇಕಾದ 'ಪೈಥೊಕೆಮಿಕಲ್'ಗಳಿರುವುದು. ನಿತ್ಯದ ಆಹಾರದಲ್ಲಿ ಇಂಥ ಹಣ್ಣುಗಳಿಗೆ ಜಾಗವಿದ್ದರೆ ಮೆದುಳು, ತನ್ಮೂಲಕ ಮಾನಸಿಕ ಆರೋಗ್ಯದ ಕುರಿತಾಗಿ ನಿಶ್ಚಿಂತೆಯಿಂದ ಇರಬಹುದು.ಟಿ
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


