ನಿಮ್ಮ ತಲೆ ಸರಿ ಉಂಟಾ?

ಬೇಸಿಗೆಯೆಂದಿಲ್ಲ, ಮಳೆಗಾಲವೆಂದಿಲ್ಲ- ಬಿಸಿಲಿಗೂ ಮಳೆಗೂ ಮೊದಲು ಒಡ್ಡಿಕೊಳ್ಳುವುದು ನಿಮ್ಮ ತಲೆಕೂದಲು. ಕೂದಲಿಗೆ ಕಾಲಕ್ಕೆ ತಕ್ಕಂತೆ ಬಗೆಬಗೆಯ ಆರೈಕೆಯ ವಿಧಾನಗಳಿವೆಯಾದರೂ, ಸಾಮಾನ್ಯ ಆರೈಕೆ ಕ್ರಮಗಳು ಒಂದೇ.
ಬಿಸಿಲಿನ ತಾಪ ಹಾಗೂ ಬೆವರಿನಿಂದಾಗಿ ನಿಮ್ಮ ಕೂದಲಿನ ಆರೋಗ್ಯ ಹಾಳಾಗುತ್ತದೆ. ಬೇಸಿಗೆಯ ತಾಪದಿಂದ ಪಾರಾಗಲು ಕ್ಲೋರಿನ್ ಮಿಶ್ರಿತ ನೀರಿಗೆ ಇಳಿದಲ್ಲಿ ಕೂದಲು ಮತ್ತಷ್ಟು ಹಾಳಾಗಿಬಿಡುತ್ತದೆ. ಮೊದಲ ಮಳೆಯಲ್ಲಿ ನೆನೆಯೋಣ ಎಂದು ಮಳೆಗೆ ಇಳಿದರೆ ಅದು ಕೂದಲಲ್ಲಿ ಡ್ಯಾಂಡ್ರಫ್ ಹುಟ್ಟುಹಾಕಬಹುದು. ಹೀಗಾಗಿ ಎಚ್ಚರದಿಂದ ಕೂದಲನ್ನು ಕಾಯ್ದುಕೊಳ್ಳುವುದು ಅಗತ್ಯ. ಅದಕ್ಕೆ ಕೆಲ ಟಿಪ್ಸ್ ಇಲ್ಲಿವೆ.
ನಿತ್ಯ ಸ್ವಚ್ಛತೆ
ಡೀಪ್ ಕ್ಲೆನ್ಸಿಂಗ್ ಹೊಂದಿರುವ ಶಾಂಪು ಬಳಸಿ ನಿತ್ಯ ನಿಮ್ಮ ಕೂದಲನ್ನು ಸ್ವಚ್ಛಗೊಳಿಸಬೇಕು. ಒಣ ಕೂದಲು ಹೊಂದಿರುವ ವ್ಯಕ್ತಿಗಳು ಕೊಂಚ ಮೃದುವಾದ ಶಾಂಪೂ ಬಳಸಬೇಕು. ನಂತರ ಕಂಡೀಷನಿಂಗ್ ರೂಢಿಸಿಕೊಳ್ಳಬೇಕು. ಕೂದಲು ಸುರುಳಿ ಅಥವಾ ವೇವ್ ರೀತಿಯಲ್ಲಿ ಇರುವವರು ಮಾತ್ರವೇ ಕಂಡೀಷನರ್ ಬಳಕೆ ಮಾಡಬೇಕು. ನೇರ ಕೂದಲು ಹೊಂದಿರುವವರು ಕಂಡೀಷನರ್ ಬಳಕೆ ಕಡಿಮೆ ಮಾಡಬೇಕು.
ಹೆಲ್ಮೆಟ್ ಬಳಕೆ
ಹೆಲ್ಮೆಟ್ ಬಳಕೆ ಮಾಡುವವರು ತಲೆ ಭಾಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಬೆವರಿನ ಅಂಶ ತಲೆ ಭಾಗದಲ್ಲಿ ಉಳಿದುಕೊಳ್ಳುವುದರಿಂದ ತುರಿಕೆ ಹಾಗೂ ಸ್ಕಾಲ್ಪ್ ಇನ್ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಸನ್ ಪ್ರೊಟೆಕ್ಷನ್
ಬಿಸಿಲಿಗೆ ಹೋಗುವ ಮುನ್ನ ಕೂದಲನ್ನು ಸೂರ್ಯನ ಕಿರಣಗಳಿಗೆ ನೇರವಾಗಿ ಒಡ್ಡುವುದನ್ನು ತಪ್ಪಿಸಬೇಕು. ಇದರಿಂದ ಕೂದಲಿನ ಬಣ್ಣ ಕಡಿಮೆಯಾಗುವುದನ್ನು ತಪ್ಪಿಸಬಹುದು. ಕ್ಯಾಪ್, ಹ್ಯಾಟ್, ಸ್ಕಾರ್ಫ್ ಹಾಗೂ ಸ್ಟ್ರಾಲ್ ಬಳಕೆ ಮಾಡಬಹುದು.
ಈಜುಕೊಳ
ಈಜುಕೊಳದಲ್ಲಿನ ರಾಸಾಯನಿಕಗಳಿಂದ ತಪ್ಪಿಸಿಕೊಳ್ಳಲು ತಲೆಗೆ ಸೂಕ್ತ ರಕ್ಷಣೆ ಒದಗಿಸಿಕೊಳ್ಳಿ. ಕ್ಲೋರಿನ್ ಹಾಗೂ ಈಜುಕೊಳದಲ್ಲಿನ ಇತರೆ ರಾಸಾಯನಿಕ ಪದಾರ್ಥಗಳಿಂದ ನಿಮ್ಮ ಕೂದಲಿನ ಆರೋಗ್ಯ ಕೆಡುತ್ತದೆ. ಇದರಿಂದಾಗಿ ಕೂದಲು ಒಣಗುವುದಲ್ಲದೆ, ಒಡೆದುಕೊಳ್ಳುತ್ತದೆ. ಈಜುಕೊಳಕ್ಕೆ ಇಳಿಯುವ ಮುನ್ನ ಸ್ವಿಮ್ಮಿಂಗ್ ಕ್ಯ್ಯಾಪ್ ಧರಿಸಲು ಮರೆಯಬೇಡಿ. ನೀರಿಗೆ ಇಳಿಯುವ ಮೊದಲು ನಲ್ಲಿ ನೀರಿನಿಂದ ಕೂದಲನ್ನು ಒದ್ದೆ ಮಾಡುವುದು ಹಾಗೂ ಲಿವ್ ಇನ್ ಕಂಡೀಷನರ್ಗಳನ್ನು ಬಳಸಬೇಕು. ಇದರಿಂದ ಈಜುಕೊಳದ ರಾಸಾಯನಿಕಗಳನ್ನು ನಿಮ್ಮ ಕೂದಲು ಸಂಪೂರ್ಣ ಹೀರಿಕೊಳ್ಳುವುದಿಲ್ಲ. ಕೊಳದಿಂದ ಆಚೆ ಬಂದ ನಂತರ ಸ್ವಚ್ಛ ನೀರಿನಿಂದ ಹಾಗೂ ಶಾಂಪುವಿನಿಂದ ತಲೆಕೂದಲು ತೊಳೆದುಕೊಳ್ಳಿ.
ಶಾರ್ಟ್ ಆ್ಯಂಡ್ ಸ್ವೀಟ್
ಬೇಸಿಗೆಯಲ್ಲಿ ಎಂತೋ ಅಂತೆಯೇ ಮಳೆಗಾಲದಲ್ಲೂ ಉದ್ದಕೂದಲನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ನೆನೆದ ಕೂದಲು ನೆಗಡಿಗೆ ದಾರಿ ಮಾಕೊಡಬಹುದು. ಹೀಗಾಗಿ ಕೂದಲನ್ನು ಶಾರ್ಟ್ ಮಾಡಿಸಿಕೊಳ್ಳುವುದರಿಂದ ನಿಮಗೊಂದು ಹೊಸ ಲುಕ್ ಸಿಗುವುದರ ಜತೆಗೆ ಅದರ ನಿರ್ವಹಣೆ ಕೂಡ ಸುಲಭವಾಗುತ್ತದೆ.
ಅಗತ್ಯ ನೀರಿನಂಶ ಒದಗಿಸಿ
ಹವಾನಿಯಂತ್ರಣ ಹಾಗೂ ಕೆಫೇನ್ನಂತಹ ಅಂಶಗಳು ಶರೀರ ಹಾಗೂ ಕೂದಲಿನ ನೀರಿನ ಅಂಶಗಳನ್ನು ಹೀರಿಬಿಡುತ್ತದೆ. ಇದರಿಂದ ಕೂದಲು ಸತ್ವ ಕಳೆದುಕೊಂಡಂತೆ ಕಾಣುತ್ತದೆ. ಶರೀರಕ್ಕೆ ಬೇಕಾದ ಅಗತ್ಯದ ನೀರಿನ ಅಂಶ ಒದಗಿಸುವುದನ್ನು ಮರೆಯಬೇಡಿ.
ತಂಪು ಆಹಾರ ಸೇವನೆ
ಸೌತೇಕಾಯಿ, ಕಲ್ಲಂಗಡಿ, ಕರ್ಬುಜ, ಎಳನೀರು, ಪುದೀನಾ ಹಾಗೂ ಮೂಲಂಗಿ ಹೆಚ್ಚಿನ ತಂಪಿನ ಅಂಶ ಹೊಂದಿರುತ್ತವೆ. ಇವುಗಳ ಸೇವನೆಯಿಂದ ಶರೀರದ ತಾಪಮಾನ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಬಿಸಿಲು ಹಾಗೂ ಸೆಕೆ ಹೆಚ್ಚಿದ್ದಾಗ ಇವನ್ನು ಸೇವಿಸಿ. ಆದರೆ ಮಳೆ ಇದ್ದಾಗ ಅವನ್ನು ಅವಾಯ್ಡ್ ಮಾಡಿ.
ಕೂದಲನ್ನು ಒಣಗಿಸಿ
ಆಫೀಸಿನಿಂದ ಬರುವಾಗ ಅಥವಾ ಬೇಕೆಂದೇ ಮಳೆಯಲ್ಲಿ ನೆನೆದಿದ್ದೀರಾ? ಹಾಗಿದ್ದರೆ ಅದನ್ನು ಕೂದಲೇ ಒಣಗಿಸಿಕೊಳ್ಳಿ. ಇಲ್ಲವಾದರೆ ಫಂಗಸ್, ಹೊಟ್ಟು ಬೆಳೆಯಬಹುದು. ಮುಖ್ಯವಾಗಿ, ಮೊದಲ ಮಳೆಯಲ್ಲಿ ರಾಸಾಯನಿಕ ಹಾಗೂ ಖನಿಜ ಅಂಶಗಳು ಹೆಚ್ಚಿರುತ್ತವೆ.
ಹೇರ್ ಆಯಿಲ್ ನಿಲ್ಲಿಸಿ
ಬೇಸಿಗೆ ಕಾಲದಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದನ್ನು ಕಡಿಮೆ ಮಾಡಬೇಕು. ಅದರಲ್ಲಿಯೂ ನಿಮ್ಮದು ಎಣ್ಣೆ ಅಂಶದಿಂದ ಕೂಡಿದ ಸ್ಕಾಲ್ಪ್ ಆಗಿದ್ದಲ್ಲಿ ಎಣ್ಣೆ ಹಚ್ಚುವುದನ್ನು ನಿಲ್ಲಿಸಬೇಕು. ಎಣ್ಣೆ ಹಚ್ಚಿದಲ್ಲಿ ಕೆಲ ರೀತಿಯ ಫಂಗಸ್ ಬೆಳೆಯಲು ಕಾರಣವಾಗಿ ಕೂದಲು ಉದುರಲಾರಂಭಿಸುತ್ತದೆ.
-ಡಾ. ಶಾಹಿದ್ ಶಂಶೀರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


