ನಿರುತ್ತರ ಕೊರಿಯಾ!

ಚಿತ್ರ: ದಿ ಫ್ರಂಟ್ ಲೈನ್ (2011)
ಭಾಷೆ: ಕೊರಿಯಾ
ಅವಧಿ: 133 ನಿಮಿಷ
ತಾರಾಗಣ:
ಶಿನ್ ಹಾ- ಕಯ್ಯೂನ್, ಗೋ ಸೋ, ಲೀ ಜೇ- ಉನ್.
ಉತ್ತರ ಕೊರಿಯಾ ಮತ್ತೆ ಗುಟುರು ಹಾಕಿದೆ. ಜಾಗತಿಕ ಮಾಧ್ಯಮಗಳಲ್ಲೆಲ್ಲ ದಿನಗಟ್ಟಲೆ ಕೊರಿಯಾ ಸುದ್ದಿಗಳನ್ನೇ ಕೊರೆಯುತ್ತಿವೆ. ಅಮೆರಿಕದ ಅಣ್ವಸ್ತ್ರಸಜ್ಜಿತ ಯುದ್ಧವಿಮಾನಗಳು ದಕ್ಷಿಣ ಕೊರಿಯಾದಲ್ಲಿ ಅಭ್ಯಾಸಕ್ಕೆ ತೊಡಗಿವೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದಿರುವ ಉತ್ತರ ಕೊರಿಯಾ, ಅಮೆರಿಕದ ಯುದ್ಧ ನೆಲೆಗಳನ್ನು ಗುರಿಯಾಗಿಸಿಕೊಂಡು 'ತಾನೂ ಯುದ್ಧಕ್ಕೆ ಸಿದ್ಧ' ಎನ್ನುವ ಘೋಷಣೆ ಹೊರಡಿಸಿದೆ.
ಉತ್ತರ ಕೊರಿಯಾ ಮೊದಲಿಂದಲೂ ಜಗತ್ತಿನ ದೊಡ್ಡಣ್ಣ ಅಮೆರಿಕದ ವಿರುದ್ಧ ಸೆಡ್ಡು ಹೊಡೆಯುತ್ತಲೇ ಬಂದಿದ್ದು, ಈಗ ನೇರವಾಗಿ ಅಮೆರಿಕದತ್ತ ಯುದ್ಧದ ರಾಕೆಟ್ಗಳನ್ನು ಗುರಿ ಮಾಡಿ ನಿಲ್ಲಿಸಿದೆ. ಯುದ್ಧ ಎನ್ನುವ ಮಾನವ ವಿರೋಧಿ ಕೃತ್ಯವನ್ನು ಯಾರೂ ಒಪ್ಪಲಾಗದು. ಯುದ್ಧಕ್ಕೆ ಕಾರಣಗಳಿರಬಹುದು, ಅದರಿಂದಾಗುವ ಸಾವು- ನೋವಿಗೆ ಮಾತ್ರ ಯಾವ ಸಮರ್ಥನೆಗಳನ್ನೂ ಕೊಡಲಾಗದು. ಆದರೆ, ಉತ್ತರ ಕೊರಿಯಾ ಹೀಗೆ ಅಮೆರಿಕದ ವಿರುದ್ಧ ದನಿ ಎತ್ತಿರುವುದರ ಹಿಂದೆ ದೊಡ್ಡ ಚರಿತ್ರೆಯೇ ಇದೆ. ಉತ್ತರ ಮತ್ತು ದಕ್ಷಿಣ ಕೊರಿಯಾವನ್ನು ಅಮೆರಿಕ ಎಂದೂ ಒಂದಾಗಲಿಕ್ಕೆ ಬಿಡಲಿಲ್ಲ. 'ಈ ಎರಡೂ ದೇಶಗಳು ಒಂದಾದರೆ ಅದರ ಪರಿಣಾಮ ಎದುರಿಸಬೇಕಿರುವುದು ತಾನೇ' ಎಂದರಿತ ಅಮೆರಿಕ ಎರಡೂ ದೇಶಗಳನ್ನು ಇಬ್ಭಾಗ ಮಾಡಿ ದಕ್ಷಿಣ ಕೊರಿಯಾವನ್ನು ತನ್ನ ಯುದ್ಧಾಸ್ತ್ರಗಳ ನೆಲೆಯಾಗಿಸಿಕೊಂಡಿತು.
ಅಮೆರಿಕ, ಉತ್ತರ ಮತ್ತು ದಕ್ಷಿಣ ಕೊರಿಯಾದ ನಡುವಿನ ಮುಸುಗಿನ ಗುದ್ದಾಟವನ್ನು ಬಳಸಿಕೊಂಡು ತನ್ನ ಆಟ ಶುರುಮಾಡಿತು. ದಕ್ಷಿಣ ಕೊರಿಯಾವನ್ನು ಯುದ್ಧದ ತರಬೇತಿ ಶಾಲೆಯನ್ನಾಗಿಸಿಕೊಂಡ ಮೇಲೆ ಎರಡೂ ದೇಶಗಳು ಜಂಟಿಯಾಗಿ ಸಮರಾಭ್ಯಾಸ ಮಾಡಲಾರಂಭಿಸಿದವು. ಉತ್ತರ ಕೊರಿಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿತ್ತು. ಸಿಟ್ಟಿಗೆದ್ದ ಉತ್ತರ ಕೊರಿಯಾ, ಅಮೆರಿಕದ ಎಚ್ಚರಿಕೆಯ ಮಾತುಗಳನ್ನು ಲೆಕ್ಕಿಸದೆ ಅಣ್ವಸ್ತ್ರಗಳ ಪರೀಕ್ಷೆ ನಡೆಸಿತು. ರಷ್ಯಾ- ಚೀನಾ ಆರಂಭದಲ್ಲಿ ಉತ್ತರ ಕೊರಿಯಾಗೆ ಬೆಂಬಲ ಸೂಚಿಸಿದವಾದರೂ, ಪ್ರಸ್ತುತ ಚೀನಾ ಬೆಂಬಲದ ಬಾಯಿಮಾತಿಗೆ ಮಾತ್ರ ಸೀಮಿತವಾಗಿದ್ದರೆ, ರಷ್ಯಾ ಮೌನ!
ಉತ್ತರ ಮತ್ತು ದಕ್ಷಿಣ ಕೊರಿಯಾದ ನಡುವಿನ ಯುದ್ಧದ ಪುಟಗಳನ್ನು ತೆರೆಯುತ್ತ ಹೋದರೆ ದೊಡ್ಡ ಕ್ರೈಮ್ ಥ್ರಿಲ್ಲರೇ ಆಗುತ್ತದೇನೋ! ಒಂದೇ ಗಿಡದ ಎರಡು ಬಳ್ಳಿಗಳಂತಿರುವ ದಕ್ಷಿಣ ಕೊರಿಯಾ ಉತ್ತರ ಕೊರಿಯಾದ ಈ ರಕ್ತಚರಿತ್ರೆಯನ್ನು ತೆರೆದಿಡುವ ಚಿತ್ರ, 'ದಿ ಫ್ರಂಟ್ ಲೈನ್'. ಜಾಂಗ್ ಉನ್ ಇದರ ನಿರ್ದೇಶಕ. ದಕ್ಷಿಣ ಕೊರಿಯಾದ ಮೂಗಿನ ನೇರಕ್ಕೆ ಚಿತ್ರಿಸಿದ್ದರೂ ಮತ್ತೆ ಕೊರಿಯಾದ ಕರ್ಮಭೂಮಿಯಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಸಂದರ್ಭದಲ್ಲಿ ನೆನಪಾಗುವ ಚಿತ್ರವಿದು. ಈ ಚಿತ್ರ 'ಯುದ್ಧದ ಕ್ರೌರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ತೆರೆದಿಡುತ್ತದೆ' ಎಂದು ಹೇಳಿದರೆ, ಅದು ಒಂದು ಸಾಲಿನ ವಿಮರ್ಶೆ ಎಂದೆನ್ನಿಸಿಕೊಳ್ಳಬಹುದು.
1953ರ ಯುದ್ಧದ ನೆರಳಿನಲ್ಲಿ ಹೊರಳುವ ಚಿತ್ರವಿದು. ಹತ್ತಾರು ಯುದ್ಧ ದಾರಿಗಳಲ್ಲಿ ತಿರುಗುವಂಥದ್ದು. ಯುದ್ಧ ಶಿಬಿರದಲ್ಲಿ ಪುಟ್ಟ ಮಗುವಿಗೆ ಸೈನಿಕನೊಬ್ಬ ಚಾಕೊಲೆಟ್ ಕೊಟ್ಟಾಗ ಅದು ತೆಗೆದುಕೊಳ್ಳಲು ತನ್ನ ಮೊಂಡು ಕೈ ಚಾಚುವ, 17 ವರ್ಷದ ಹುಡುಗ ನರಳಿ ನರಳಿ ಸಾಯುವ, ಹದಿಹರೆಯದ ಹುಡುಗಿ ಕೈಯಲ್ಲಿ ಬಂದೂಕು ಹಿಡಿದು ಕೊಲ್ಲುವ, 'ಯುದ್ಧ ವಿರಾಮ ಒಪ್ಪಂದ ಜಾರಿಗೆ ಬರಲು ಇನ್ನೂ 12 ಗಂಟೆ ಬಾಕಿ ಇದೆ. ಸಿಕ್ಕ ಸಿಕ್ಕ ಕಡೆ ದಾಳಿ ಮಾಡಿ, ಕೈಗೆ ಸಿಕ್ಕವರನ್ನು ಕೊಂದುಬಿಡಿ' ಎನ್ನುವ ಕಮಾಂಡರ್ನ ಆಜ್ಞೆ, ಅತ್ಯಂತ ಕ್ರೂರಿಯಾಗಿ ವರ್ತಿಸುವ ಸೈನಿಕ, ಯುದ್ಧ ಮಾಡುತ್ತಲೇ ಮಾನವೀಯತೆಗೆ ಮಿಡಿಯುವ ಸೈನಿಕ... ಹೀಗೆ ಚಿತ್ರ ತನ್ನ ಪ್ರತಿ ದೃಶ್ಯದಲ್ಲೂ ಯುದ್ಧದ ನಂತರ ಉಳಿಯುವ ಬೂದಿಯ ಹಿಂದಿನ ವ್ಯಥೆಯನ್ನು ತೆರೆದಿಡುತ್ತ ಸಾಗುತ್ತದೆ.
"He was so young', "so what? this is a battlefield, and anybody can die. Is there an order who dies first? age means nothing in war'.... ಸೈನಿಕರಿಬ್ಬರ ಸಂಭಾಷಣೆಯ ಸಾಲುಗಳ ಸ್ಯಾಂಪಲ್ ಇದು.
ಯುದ್ಧದಿಂದಲೇ ಆರಂಭವಾಗಿ ಯುದ್ಧಭೂಮಿಯಲ್ಲೇ ಮುಗಿಯುವ ಈ ಚಿತ್ರದಲ್ಲಿ ಕೊನೆಗೂ ಯಾರೂ ಉಳಿಯಲ್ಲ. ಹಾಗಿದ್ದ ಮೇಲೆ ಯುದ್ಧ ಯಾರಿಗೆ? ಒಂದೇ ಬಳ್ಳಿಯ ಹೂಗಳನ್ನು ಎರಡು ತುಂಡಾಗಿ ಕತ್ತರಿಸಿ ಆಟವಾಡುತ್ತಿರುವ ಆಮೆರಿಕಗಾ? ವಾಸ್ತವದಲ್ಲಿ ಯಾರಿಗೂ ಯುದ್ಧ ಬೇಕಿಲ್ಲ. ಆದರೂ ಯುದ್ಧದ ಪರಿಣಾಮಗಳು ಗೊತ್ತಿದ್ದರೂ ಉತ್ತರ ಕೊರಿಯಾ ಯುದ್ಧ ಉತ್ಸಾಹದಲ್ಲಿ ಮುಳಗಿದೆ. ಆದರೆ ಯುದ್ಧಗಳಿಂದ ಎಲ್ಲೂ ಶಾಂತಿ ನೆಲೆಸಿದ ಉದಾಹರಣೆ ಇಲ್ಲ. 'ಸದ್ಧಾಂ ಹುಸೇನ್ ಸರ್ವಾಧಿಕಾರದಿಂದ ಇರಾಕ್ಗೆ ಮುಕ್ತಿ ಕೊಡಿಸುತ್ತೇನೆ' ಎಂದು ಹೊರಟ ಅಮೆರಿಕ, ಇರಾಕ್ನಲ್ಲಿ ಶಾಂತಿ ಸ್ಥಾಪಿಸೀತೆ? ಅಲ್ಲೀಗ ಮತ್ತೆ ಆಂತರಿಕ ಕಲಹಗಳು ಆರಂಭಗೊಂಡಿವೆ. ಅಮೆರಿಕದ ಕೈಗೊಂಬೆಯಂತಿರುವ ಇರಾಕ್ನ ಅಧ್ಯಕ್ಷ ನೌರ್ ಆಲ್ ಮಾಲಿಕ್ನ ವಿರುದ್ಧ ಸ್ಥಳೀಯರು ಪ್ರತಿಭಟನೆಗಿಳಿದಿದ್ದಾರೆ. ಶಾಂತಿ ಸ್ಥಾಪಿಸುವುದಾಗಿ ಹೇಳಿದ ಅಮೆರಿಕ ಜಾಣತನದಿಂದ ಜಾರಿಕೊಂಡಿದೆ.
ಅಮೆರಿಕ ಆಡಿಸಿದಂತೆ ಆಡುತ್ತಿರುವ ದಕ್ಷಿಣ ಕೊರಿಯಾ ಸಮರಕ್ಕೆ ನಿಂತಿದ್ದು, ಉತ್ತರ ಕೊರಿಯಾವೂ ಸಹ ಯುದ್ಧ ದಾಹಿಯಂತೆ ಅರ್ಭಟಿಸುತ್ತಿರುವುದನ್ನು ನೋಡಿದರೆ ಕೊರಿಯಾ ತನ್ನ ಮನೆಗೆ ತಾನೇ ಬೆಂಕಿ ಇಟ್ಟುಕೊಳ್ಳುತ್ತಿದೆ ಎನ್ನದೆ ಬೇರೆ ವಿಧಿ ಇಲ್ಲ. ಆದರೆ ಕೊರಿಯಾದ ಎರಡೂ ಭಾಗದವರಿಗೆ ಇರಾಕ್ ಒಂದು ಪಾಠವಾದರೆ ಪರದೇಶಗಳ ಕಲಹದಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವ ಅಮೆರಿಕದ ಬಾಲ ಮುದುಡಿಕೊಳ್ಳುತ್ತದೆ. 'ದಿ ಫ್ರಂಟ್ ಲೈನ್' ಚಿತ್ರದ ಆಶಯವೂ ಸಹ ಇದೆ.
= ಆರ್. ಕೇಶವಮೂರ್ತಿ
keshavarkm1@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


