ಸಾಪ್ತಾಹಿಕಪ್ರಭ

ವಿವಿ ಕಚೇರಿಯಲ್ಲೇ ಲಭ್ಯವಿರುತ್ತದೆ

Published On :

ಎಸ್. ಶ್ರೀಶ, ತುಮಕೂರು
ಸರ್ಕಾರಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದು, ಮುಂಬಡ್ತಿ ಹಾಗೂ ಯುಜಿಸಿ ವೇತನಶ್ರೇಣಿ ಪಡೆಯಲು ಎನ್‌ಇಟಿ, ಪಿಎಚ್‌ಡಿ ಇತ್ಯಾದಿ ಪರೀಕ್ಷೆಗಳನ್ನು ಪಾಸು ಮಾಡುವ ಅಗತ್ಯವಿದೆಯೇ?
- ಈ ಎಲ್ಲ ವಿವರಗಳೂ ನಿಮ್ಮ ಕಾಲೇಜು ಹಾಗೂ ನಿಮ್ಮ ವಿಶ್ವವಿದ್ಯಾಲಯ ಕಚೇರಿಯಲ್ಲಿ ಲಭ್ಯವಿರುತ್ತದೆ. ಬೇಕಾದರೆ ಎನ್‌ಇಟಿಯ ಅಂತರ್ಜಾಲದಲ್ಲಿ ಈ ಎಲ್ಲ ವಿವರ ಪಡೆಯಬಹುದು ಅಥವಾ ಮಾಹಿತಿ ಹಕ್ಕಿನ ಕಾಯಿದೆ ಅಡಿಯಲ್ಲೂ ಇದನ್ನು ಪಡೆಯಬಹುದು.

ನಿವೃತ್ತಿ ವೇಳೆಯಲ್ಲಿನ ಹುದ್ದೆ-ವೇತನ
ಬಸವರಾಜಪ್ಪ, ಮೈಸೂರು
ಅನುದಾನಿತ ಶಾಲೆಯಲ್ಲಿ ಹದಿಮೂರು ವರ್ಷ ಕೆಲಸ ಮಾಡಿ ಯುಪಿಎಸ್‌ಸಿ ಮೂಲಕ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಹುದ್ದೆಗೆ ಆಯ್ಕೆಯಾಗಿದ್ದೇನೆ. ನನ್ನ ನಿವೃತ್ತಿ ವೇತನ ಯಾವ ನಿಯಮ(ಹಳೆಯ ಅಥವಾ ಹೊಸದು)ದಲ್ಲಿ ನಿಗದಿ ಮಾಡುತ್ತದೆ?
- ನಿವೃತ್ತಿಯ ವೇಳೆಯಲ್ಲಿ ಯಾವ ಹುದ್ದೆಯಲ್ಲಿರುತ್ತೀರೋ ಅದೇ ಹುದ್ದೆಯಲ್ಲಿ ಹಾಗೂ ಯಾವ ನಿಯಮದಡಿ ವೇತನ ಪಡೆಯುತ್ತಿರುತ್ತೀರೋ ಅದೇ ನಿಯಮದಡಿ ನಿವೃತ್ತಿ ವೇತನ ನಿಗದಿಯಾಗುತ್ತದೆ.

ಕೋರ್ಟ್‌ನಲ್ಲಿ ಸ್ಟೇ ಪಡೆಯಿರಿ
ಊರು, ಹೆಸರು ಬೇಡ
ಹಿಂದಿನ ಮನೆಯವರು ಕಾಂಪೌಂಡ್ ಹಾಕಲು ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೆ ಅವರ ಶೌಚಾಲಯ ಮತ್ತು ಚಜ್ಜಾ ನನ್ನ ಜಾಗದವರೆಗೂ ಮುಂದುವರಿದಿದೆ. ಏನು ಮಾಡಬೇಕು?
- ನ್ಯಾಯಾಲಯದಲ್ಲಿ ನಿರ್ಬಂಧಕಾಜ್ಞೆ ಪಡೆಯಿರಿ. ಅದರ ಜತೆಗೆ ಪೊಲೀಸರ ಸಹಾಯ ಕೊಡುವಂತೆ ಕೋರ್ಟನ್ನು ಪ್ರಾರ್ಥಿಸಿರಿ. ಒತ್ತುವರಿಯನ್ನು ಕಿತ್ತುಹಾಕಲು ಆದೇಶಿಸುವಂತೆ ಕೋರ್ಟನ್ನೇ ಕೇಳಿ. ಅಲ್ಲದೇ ನಿಮ್ಮ ವ್ಯಾಪ್ತಿಯ ಪಂಚಾಯಿತಿ ಕಚೇರಿ ಅಥವಾ ಮುನಿಸಿಪಾಲಿಟಿಯನ್ನೂ ಪ್ರತಿವಾದಿಯನ್ನಾಗಿ ಮಾಡಿ.

ಗ್ರಾಹಕರ ವೇದಿಕೆಗೆ ಅರ್ಜಿ ಕೊಡಿ
ಲತಾದೇವಿ, ಶಿವಮೊಗ್ಗ
ಜಮೀನಿನ ದಾಖಲೆಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದು ಐದು ವರ್ಷಗಳ ಹಿಂದೆ ಮರುಪಾವತಿ ಮಾಡಿರುತ್ತೇನೆ. ಆದರೆ ಕಾಗದಪತ್ರಗಳನ್ನು ಇನ್ನೂ ವಾಪಸ್ ಕೊಟ್ಟಿಲ್ಲ. ಏನು ಮಾಡಬೇಕು?
- ಬ್ಯಾಂಕಿಂಗ್ ಓಂಬುಡ್ಸ್‌ಮನ್, ಬೆಂಗಳೂರು ಇವರಿಗೆ ದೂರು ನೀಡಿ. ಜತೆಗೆ ಜಿಲ್ಲಾ ಗ್ರಾಹಕರ ವೇದಿಕೆಗೆ ಅರ್ಜಿ ಕೊಡಿ. ಪರಿಹಾರ ಸಿಗಬಹುದು. ದಾಖಲೆಗಳ ನಕಲನ್ನು ಸಂಬಂಧಿಸಿದ ಇಲಾಖೆಗಳಿಂದಲೂ ಪಡೆಯಬಹುದು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ
ಎಂ.ಎಸ್. ದೊಡ್ಡೇರಿ, ಚಳ್ಳಕೆರೆ
ದೇಣಿಗೆ, ಚಂದಾ ವಗೈರೆ ವಸೂಲು ಮಾಡಿ ದೇವಸ್ಥಾನ, ಚರ್ಚ್, ಮದರಸ ಇತ್ಯಾದಿಗಳನ್ನು ಕಟ್ಟಿ ಇದರ ವ್ಯವಹಾರಕ್ಕೆ ಸಮೀತಿ ರಚಿಸದೆ ಬೇಕಾದವರ ಒಂದು ಗುಂಪಿನವರನ್ನು ಸದಸ್ಯರನ್ನಾಗಿ ಮಾಡಿಕೊಂಡು ಟ್ರಸ್ಟ್ ನೋಂದಾಯಿಸಿಕೊಳ್ಳುವುದು ಸರಿಯೇ? ಒಂದು ವೇಳೆ ತಪ್ಪಿದ್ದರೆ ಅದರ ರದ್ದತಿಗೆ ಏನು ಮಾಡಬಹುದು?
- ಟ್ರಸ್ಟ್ ನೋಂದಾಯಿಸಿಕೊಳ್ಳುವಾಗ ಬೇರೆ ಸಮಿತಿಯ ಅಗತ್ಯವಿಲ್ಲ. ಟ್ರಸ್ಟ್ ನೋಂದಣಿಯಾಗಬೇಕಾದರೆ ಭಾರತೀಯ ಟ್ರಸ್ಟ್ ಕಾಯಿದೆಯಂತೆ ನೋಂದಣಿ ಮಾಡುತ್ತದೆ. ಕೇವಲ ಟ್ರಸ್ಟಿಗಳು ಅಥವಾ ರಾಜ್ಯದ ಅಡ್ವೊಕೇಟ್ ಜನರಲ್‌ರಲ್ಲಿ ದಾವಾ ಹಾಕಬಹುದು. ನಿಮಗೆ ಅಷ್ಟು ಕಾಳಜಿಯಿದ್ದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ದಾಖಲಿಸಬಹುದು.


- ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.