

ನಾಲ್ಕು ಬಾರಿ ವಿಧಾನಸಭೆಗೆ, ಐದು ಬಾರಿ ಲೋಕಸಭೆಗೆ, ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ, ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿ ಗಂಭೀರವಾಗಿ, ಸಕ್ರಿಯವಾಗಿ, ಮರ್ಯಾದೆಯಿಂದ ಕೆಲಸ ಮಾಡಿ ಎಪ್ಪತ್ತರ ಗಡಿಯನ್ನು ಮುಟ್ಟಿರುವ ಸೂದಿನಿ ಜೈಪಾಲ ರೆಡ್ಡಿ ಈಗ ಬಹುತೇಕವಾಗಿ ಮೌನವಾಗಿದ್ದಾರೆ.
ಅವರು ಹೊತ್ತಿರುವ ವಿಜ್ಞಾನ- ತಂತ್ರಜ್ಞಾನ ಇಲಾಖೆಯ ಜವಾಬ್ದಾರಿಗೆ ಸಂಬಂಧಿಸಿದಂತೆ ಇರುವ ವಿಚಾರಗಳನ್ನು ಬಿಟ್ಟು, ಬೇರೆ ರಾಜಕೀಯ, ಆರ್ಥಿಕ- ಸಾಮಾಜಿಕ ವಿಚಾರಗಳಲ್ಲಿನ ಚರ್ಚೆಯಲ್ಲಿ ಅವರ ಕಾಣಿಕೆ ಕಡಿಮೆ.
ರಾಜ್ಶಶಾಸ್ತ್ರ, ರಾಜಕೀಯ ಸಿದ್ಧಾಂತ ಹಾಗೂ ಜನತಾಂತ್ರಿಕ ವ್ಯವಸ್ಥೆಯನ್ನು ಕುರಿತು ಆಳವಾಗಿ ಅಧ್ಯಯನವನ್ನು ನಡೆಸಿದ್ದಾರೆ, ವೈಯಕ್ತಿಕವಾಗಿ ಅನುಭವ ಆಧರಿತ ಜ್ಞಾನವನ್ನೂ ಸಂಪಾದಿಸಿದ್ದಾರೆ. ಅವರದ್ದು ಬಹು ವಿಸ್ತಾರವಾದ ಶಬ್ಧ ಭಂಡಾರ, ಕಂಚಿನ ಗಂಟೆ ಮೊಳಗಿಸುವಂಥ ಧ್ವನಿ. ನಿಧಾನವಾದ ಭಾಷಣದ ಶೈಲಿ. ಅವರು ಹೇಳಿದ್ದೆಲ್ಲ ಕೇಳುವವರ ಮನದಾಳವನ್ನು ಮುಟ್ಟುವಂಥ ಮಾತು.
ಈಗ ಜೈಪಾಲ ರೆಡ್ಡಿ ಒಂದು ರೀತಿಯ ವಿಶಿಷ್ಟ ಸ್ವರೂಪದ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಪ್ರಾಯಶಃ ಅದು ಅವರಿಗೆ ಅನಿವಾರ್ಯವೇ ಆಗಿತ್ತೇನೋ.
ಹೇಳಿಕೇಳಿ, ಜೈಪಾಲ ರೆಡ್ಡಿ ಪ್ರತಿನಿಧಿಸುವುದು ತೆಲಂಗಾಣದ ಹೃದಯ ಸೀಮೆಯಂತಿರುವ ನಲಗೊಂದ ಜಿಲ್ಲೆಯನ್ನು, ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಅವರು ಹುಟ್ಟಿದ್ದು ಆಂಧ್ರಪ್ರದೇಶದ ನಲಗೊಂದ ಜಿಲ್ಲೆಯ ಚಂದೂರು ಮಂಡಲದ ನಲ್ಮಟ್ಟ ಗ್ರಾಮದಲ್ಲಿ. ಆದರೆ ಅವರ ನಿಜವಾದ ಕಾರ್ಯಕ್ಷೇತ್ರ ಮಹಬೂಬ್ ನಗರ ಜಿಲ್ಲೆಯ ಮಾರಗುಲ ಸೀಮೆ.
ಉಸ್ಮಾನಿಯಾ ವಿದ್ಯಾಲಯದ ಎಂ.ಎ. ಪದವೀಧರ. ವಿದ್ಯಾರ್ಥಿಯಾಗಿದ್ದಾಗಲೇ ಕಾಂಗ್ರೆಸ್ ಸಂಬಂಧವಿತ್ತು, ಅನಂತರ ತುರ್ತು ಪರಿಸ್ಥಿತಿಯ ಕಾಲದಲ್ಲಿ ಕಾಂಗ್ರೆಸ್ ಬಿಟ್ಟು ಜನತಾ ಪರಿವಾರಕ್ಕೆ ಬಂದರು. 1980ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ರಾಯ್‌ಬರೈಲಿ - ಮೇಡಕ್ ಎರಡೂ ಕಡೆ ಸ್ಪರ್ಧಿಸಿದಾಗ ಮೇಡಕ್‌ನಲ್ಲಿ ಅವರ ಪ್ರತಿಸ್ಪರ್ಧಿ ಜೈಪಾಲ ರೆಡ್ಡಿ, ಅವರೇ. ಅಲ್ಲಿ ಸೋತರು.
ಆಂಧ್ರಪ್ರದೇಶ ಕಾಲವಕುರ್ಕಿ ಕ್ಷೇತ್ರವನ್ನು ನಾಲ್ಕು ಬಾರಿ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಅನಂತರ 1984 ರಲ್ಲಿ ತೆಲುಗುದೇಶಂ ಬೆಂಬಲದಿಂದ ಮೆರ್ಯಾಲಗುಡ ಕ್ಷೇತ್ರದಿಂದ ಲೋಕಸಭೆಗೆ ಆರಿಸಿ ಬಂದರು. ಎರಡು ಬಾರಿ ರಾಜ್ಯಸಭೆಯ ಸದಸ್ಯರೂ ಆಗಿದ್ದರು. ಈಗ ಮತ್ತೆ ಕಾಂಗ್ರೆಸ್‌ಗೇ ಸೇರಿ ಮನಮೋಹನ ಸಿಂಗ್ ಮಂತ್ರಿ ಮಂಡಲದಲ್ಲಿ ಒಬ್ಬ ಪ್ರತಿಭಾವಂತ ಸಚಿವರಾಗಿದ್ದಾರೆ. ಹಲವಾರು ಸಂಸದೀಯ ಸಮಿತಿಗಳ ಸದಸ್ಯರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಈಗಲೂ ಅನೇಕರು ಜೈಪಾಲ ರೆಡ್ಡಿ ಅವರನ್ನು ಗುರ್ತಿಸುವುದು ಕಾಂಗ್ರೆಸಿನಲ್ಲಿರುವ ಸಮಾಜವಾದಿ ಸದಸ್ಯ ಎಂದೇ. ಅದೇ ಅವರ ಬ್ರ್ಯಾಂಡ್. ಹಿಂದೆ ಪೆಟ್ರೋಲಿಯಂ ಖಾತೆಯ ಮಂತ್ರಿಯಾಗಿದ್ದಾಗ ಕೆಲವು ವಿಚಾರಗಳಲ್ಲಿ ಅವರು ಕೈಗೊಂಡ ನಿರ್ಧಾರಗಳು ಮುಖೇಶ್ ಅಂಬಾನಿಯವರ ರಿಲೈಯನ್ಸ್ ಪೆಟ್ರೋ ಸಂಸ್ಥೆಯ ಹಿತಕ್ಕೆ ವಿರುದ್ಧವಾಗಿತ್ತೆಂದೂ, ಅದಕ್ಕೇ ಅವರನ್ನು ಆ ಖಾತೆಯಿಂದ ಬದಲಾಯಿಸಿ, ವಿಜ್ಞಾನ- ತಂತ್ರಜ್ಞಾನ ಇಲಾಖೆಗೆ ನೇಮಿಸಿದ್ದು ಎನ್ನುವ ವದಂತಿಗಳಿವೆ.
ಆದರೆ ಜೈಪಾಲ ರೆಡ್ಡಿ ಆ ವಿಚಾರದಲ್ಲಿ ಹೆಚ್ಚು ಮಾತನಾಡುವುದಿಲ್ಲ. ಹಿಂದೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರು ಹಾಗೂ ಇತರ ಕೆಲವು ಊರುಗಳಿಗೆ ಮೆಟ್ರೋ ರೈಲು ಯೋಜನೆಯ ಪ್ರಸ್ತಾಪ ಆಗಿದ್ದು, ನಗರಾಭಿವೃದ್ಧಿ ಖಾತೆಯನ್ನು ಅವರು ಯಶಸ್ವಿಯಾಗಿಯೇ ನಿರ್ವಹಿಸಿದ್ದರು. ಪ್ರಧಾನವಾಗಿ ದೇಶದ ನಗರ ಸಾರಿಗೆ ವ್ಯವಸ್ಥೆಯ ಸ್ವರೂಪವನ್ನೇ ಬದಲಿಸಿಬಿಟ್ಟರು. ರಸ್ತೆಗಳ ಮೇಲೆ ನಡೆದ ಕ್ರಾಂತಿ ಅದು.
ದೀರ್ಘಕಾಲ ಸಾರ್ವಜನಿಕ ಜೀವನದಲ್ಲಿದ್ದರೂ ಇದುವರೆಗೆ ಒಂದೇ ಒಂದು ಹಗರಣದಲ್ಲೂ ಅವರ ಹೆಸರು ಕೇಳಿ ಬಂದಿಲ್ಲ. ಭ್ರಷ್ಟಾಚಾರದ ಆರೋಪವಂತೂ ಇಲ್ಲವೇ ಇಲ್ಲ. ರಾಜಕೀಯ ಜೀವನವನ್ನು ಆರಂಭಿಸಿದ್ದು ಕಾಂಗ್ರೆಸ್ಸಿನಲ್ಲೇ. ತುರ್ತು ಪರಿಸ್ಥಿತಿಯ ಅನಂತರ ಗುರ್ತಿಸಿಕೊಂಡಿದ್ದು ಜನತಾ ಪರಿವಾರದಲ್ಲಿ. ಜನತಾ ಪರಿವಾರ ಚಿಂದಿ- ಚಿಂದಿಯಾದಾಗ ಜೈಪಾಲ ರೆಡ್ಡಿ ಕಾಂಗ್ರೆಸ್ಸಿಗೇ ಹಿಂದಿರುಗಿದರು.
ಈಗ ಅವರು ಸಿಕ್ಕಿ ಬಿದ್ದಿರುವ ಬಿಕ್ಕಟ್ಟು ಎಂದರೆ ತೆಲಂಗಾಣ ರಾಜ್ಯದ ನಿರ್ಮಾಣಕ್ಕಾಗಿ ನಡೆದಿರುವ ಹೋರಾಟದಲ್ಲಿ ಎಷ್ಟರ ಮಟ್ಟಿಗೆ ತಾವು ಪಾಲುಗೊಳ್ಳಬಹುದು ಎನ್ನುವ ವಿಚಾರದಲ್ಲಿ.
1956 ರಲ್ಲಿ ಭಾಷಾವಾರು ರಾಜ್ಯಗಳ ರಚನೆಯಾದಾಗ ಆಂಧ್ರಪ್ರದೇಶದಲ್ಲಿ ಅದುವರೆಗೂ ಮದರಾಸ್ ಪ್ರಾಂತದಲ್ಲಿದ್ದ ರಾಯಲಸೀಮ, ಕರಾವಳಿ ಆಂಧ್ರದ ಪ್ರತಿನಿಧಿಗಳು ಹಾಗೂ ತೆಲಂಗಾಣದ ಪ್ರತಿನಿಧಿಗಳಿಗೂ ಒಂದು ರೀತಿಯ ಒಪ್ಪಂದವಾಗಿತ್ತು. ಆ ಒಪ್ಪಂದದಂತೆ, ತೆಲಂಗಾಣಕ್ಕೆ ಹಲವು ವಿಶೇಷ ಸೌಲಭ್ಯಗಳನ್ನು ನೀಡುವ ಭರವಸೆ ಸಿಕ್ಕಿತ್ತು.
ನಿಜ. ಆ ಮಾತುಕತೆ ನಡೆದಾಗ ಜೈಪಾಲ ರೆಡ್ಡಿ ಇನ್ನೂ ವಿದ್ಯಾರ್ಥಿಯಾಗಿದ್ದರು. ಆಗಿನ ಒಪ್ಪಂದದ ವಿಚಾರದಲ್ಲಿ ಅವರಿಗೆ ಈಗ ಗೊತ್ತಿರುವುದಿಷ್ಟೇ; ಆಂಧ್ರ ಪ್ರದೇಶದ ಯಾವ ಸರ್ಕಾರವೂ (ಡಾ॥ ಚೆನ್ನಾರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸರ್ಕಾರವೂ ಸೇರಿಕೊಂಡಂತೆ) ಆ ವಾಗ್ದಾನವನ್ನು ಈಡೇರಿಸಲಿಲ್ಲ.
ಆಂಧ್ರಪ್ರದೇಶ ದೇಶದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದು. ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯ. ಸಾಕಷ್ಟು ಶ್ರೀಮಂತ ರಾಜ್ಯವೇ. ಆದರೂ ತೆಲಂಗಾಣ ಹಿಂದೆ ಬಿದ್ದಿದೆ. ದೇಶದ ಅತಿ ಹಿಂದುಳಿದ ಪ್ರದೇಶಗಳಲ್ಲಿ ತೆಲಂಗಾಣವೂ ಒಂದು.
ಈಗ ಅಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ನಿರ್ಮಾಣಕ್ಕಾಗಿ, ಜನಸಾಮಾನ್ಯ ವರ್ಗಗಳ ನಡುವೆಯೇ ಮೂಡಿದ ದೊಡ್ಡ ಆಂದೋಲನ ನಡೆದಿದೆ. ಮೊದಲಿನಿಂದಲೂ ಆಂಧ್ರಪ್ರದೇಶದ ವಿಭಜನೆಯನ್ನು ವಿರೋಧಿಸಿಕೊಂಡು ಬಂದಿದ್ದ ಅನೇಕ ವ್ಯಕ್ತಿಗಳು ಹಾಗೂ ಶಕ್ತಿಗಳು ಈಗ ತೆಲಂಗಾಣದ ಪರವಾಗಿಯೇ ಇದ್ದಾರೆ. ಕಾಂಗ್ರೆಸ್ಸೂ ಅದನ್ನು ವಿರೋಧಿಸುತ್ತಿಲ್ಲ. ಆದರೆ ಕಾಂಗ್ರೆಸ್ ನಾಯಕರು ನಿರ್ಧಾರವನ್ನು ಪ್ರಕಟಿಸಲು ವಿಳಂಬ ಮಾಡುತ್ತಿದ್ದಾರೆ.
ತೆಲಂಗಾಣದಲ್ಲಿ ಈಗ ರಾಷ್ಟ್ರೀಯ ಖ್ಯಾತಿ ಪಡೆದ ನಾಯಕರು ಯಾವ ಪಕ್ಷದಲ್ಲೂ ಇಲ್ಲ ಎನ್ನಬಹುದು. ಹಿಂದೆ ಆ ಭಾಗದಲ್ಲಿ ರಾಷ್ಟ್ರಮಟ್ಟದ ನಿರ್ಧಾರಗಳ ಮೇಲೆ ಪ್ರಭಾವ ಬೀರಬಲ್ಲ ಕಮ್ಯುನಿಸ್ಟ್ ನಾಯಕರಿದ್ದರು. ಈಗ ಕಮ್ಯುನಿಸ್ಟ್ ಚಳವಳಿ ತುಂಬಾ ಸೊರಗಿದೆ.
ಇನ್ನೂ ರಾಷ್ಟ್ರೀಯ ನಾಯಕರಾಗಿ ಉಳಿದುಕೊಂಡಿರುವವರಲ್ಲಿ ಜೈಪಾಲ ರೆಡ್ಡಿ ಅವರ ಹೆಸರು ಮೊದಲಿನದ್ದು. ಹಾಗಂತಲೇ ತೆಲಂಗಾಣ ರಾಜ್ಯ ನಿಮಾರ್ಣದ ಅಂತಿಮ ಹೋರಾಟದಲ್ಲಿ ಜನ ಜೈಪಾಲ ರೆಡ್ಡಿ ಅವರ ನಾಯಕತ್ವವನ್ನು ಅಪೇಕ್ಷಿಸುತ್ತಿರುವುದು ನಿಜ.
ಕೇಂದ್ರದಲ್ಲಿ ಮಂತ್ರಿಯಾಗಿದ್ದುಕೊಂಡೇ ತೆಲಂಗಾಣ ಚಳವಳಿಯ ನಾಯಕರಾಗುವ ಹಾಗಿಲ್ಲ, ಈಗಿನ ಮಂತ್ರಿಮಂಡಲದ ಅನೇಕ ನಿರ್ಧಾರಗಳನ್ನು ಜೈಪಾಲ ರೆಡ್ಡಿ ಬೆಂಬಲಿಸುವುದಿಲ್ಲ, ಆದರೂ ಕಾಂಗ್ರೆಸ್ಸಿನಲ್ಲಿದ್ದ ಮೇಲೆ ಅಲ್ಲಿನ ಸಂಪ್ರದಾಯಕ್ಕೆ ಶರಣಾಗಲೇ ಬೇಕೆಂದು ಭಾವಿಸಿ, ಅವರು ಸುಮ್ಮನಿರುವುದು.
ದೆಹಲಿಯ ಕೆಲವು ವಲಯಗಳಲ್ಲಿ ಹಬ್ಬಿರುವ ವದಂತಿಗಳಂತೆ, ಸದ್ಯದಲ್ಲೇ ಜೈಪಾಲ ರೆಡ್ಡಿ ಸಚಿವ ಸಂಪುಟದಲ್ಲಿನ ಸ್ಥಾನಕ್ಕೆ ರಾಜಿನಾಮೆ ನೀಡಿ, ತೆಲಂಗಾಣ ಚಳವಳಿಗೆ ಅಗತ್ಯವಾಗಿರುವ ಗಂಭೀರ, ಪ್ರಬುದ್ಧ ನಾಯಕತ್ವವನ್ನು ನೀಡಲು ಮುಂದಾಗಬಹುದು.
70ರ ಗಡಿ ದಾಟಿರುವ, ನಡೆಯುವುದಕ್ಕೆ ಊರುಗೋಲನ್ನು ಬಳಸುವ, ಜೈಪಾಲ ರೆಡ್ಡಿ ಆ ನಿರ್ಧಾರವನ್ನು ಕೈಗೊಂಡರೆ, ಪ್ರಾಯಶಃ ಅವರೇ ಪ್ರತ್ಯೇಕ ತೆಲಂಗಾಣ ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿಯಾಗಲೂಬಹುದು. 1998ರಲ್ಲಿ ಅವರಿಗೆ 'ವಿಶಿಷ್ಟ ಸಂಸದೀಯ ಪಟು' ಎನ್ನುವ ಸನ್ಮಾನವೂ ಅನಿರೀಕ್ಷಿತವಾಗಿ ಬಂದಿತ್ತು. ಯಾರಿಗೆ ಗೊತ್ತು, ಈಗ ಅವರು ತೆಲಂಗಾಣದ ಸಿಎಂ ಆಗಲೂಬಹುದು.
-ಸತ್ಯ