ಬಾಂಬು

Updated on: 

ಪಡುವಣದ ಬಾಗಿಲು
ಮುಚ್ಚಿಕೊಳ್ಳುತ್ತಿದ್ದರು
ಇವರ ಚೌಕಾಶಿಗಂತೂ
ಕೊನೆ ಇರಲಿಲ್ಲ
ಬೆಳಗಾದರೆ ಹಬ್ಬ!

ಸಂತೆ ತುಂಬೆಲ್ಲ
ಜನವೋ ಜನ...
ಅಲ್ಲಲ್ಲಿ ಜಾತಿ-ಮತ-ಪಂಥ
ಎಲ್ಲರ ಚಿತ್ತ
ವ್ಯಾಪಾರ- ವ್ಯವಹಾರದತ್ತ!
ಎಂಥದೋ....
ಕಿವಿ ಕಿತ್ತು ಹೋಗುವ ಶಬ್ದ
ಏನಾಯಿತೋ... ಏನೋ...
ತಿಳಿಯುವಷ್ಟರಲ್ಲಿ
ಜನರು ದೌಡೋ ದೌಡು
ಬಿದ್ದವರೆಷ್ಟೋ- ಎದ್ದವರೆಷ್ಟೋ
ತುಳಿತಕ್ಕೊಳಗಾಗಿ
ಸತ್ತವರೆಷ್ಟೋ!?

ಪಾಷಣ ಹೃದಯಿಗಳು
ವ್ಯಗ್ರರಾಗಿದ್ದರು
ಕರುಣೆಗೆ ಇರಲಿಲ್ಲ
ಜಾಗ ಮನದೊಳಗೆ
ಗುರಿಮುಟ್ಟಲು
ಇಟ್ಟಿದ್ದರು ಬಾಂಬು!

ಸಿಡಿತಕ್ಕೆ
ಚಿಮ್ಮಿತ್ತು ಅಲ್ಲೆಲ್ಲ ರಕ್ತ
ಸಂತೆಗೆ ಸೂತಕದ ಕಳೆ
ತಪ್ಪೇ ಮಾಡದ ಜನ
ಬಲಿಯಾಗಿದ್ದರು
ಬಾಂಬಿಗೇನು ಗೊತ್ತು
ಇವರು ತನ್ನವರು, ಅನ್ಯರೆಂದು!

ಕ್ಷಣಾರ್ಧದಲ್ಲಿ
ಹೆಣವಾಗಿದ್ದರು ಹೆಂಗಸರು
ಹೊಸಬಳೆಯನು
ಕೈಯಲ್ಲೇ ಹಿಡಿದು!

ಗಿಲಕಿ ಬತ್ತಾಸು ಹಿಡಿದ
ಮಕ್ಕಳು ಚೀಪುತ್ತಲೇ
ಕಣ್ಣು ಮುಚ್ಚಿದ್ದವು!

ಕೊರಳಲಿ ಶಿಲುಬೆಯಿದ್ದರೂ
ಜೀವ ಉಳಿದಿರಲಿಲ್ಲ
ಮೆಕ್ಕಾದಿಂದ
ತಂದ ಟೋಪಿಯೂ
ಛಿದ್ರವಾಗದೆ ಉಳಿಯಲಿಲ್ಲ!

ಹಣೆಯಲ್ಲಿನ
ಮೂರು ಬಣ್ಣದ ಗೀಟು
ಹಿಂದೆ ಜುಟ್ಟು
ದೊಡ್ಡ ಹೊಟ್ಟೆ
ತುಂಬೆಲ್ಲ ಬಿಳಿದಾರ
ಆಗ ತಾನೆ ಕೊಂಡ
ತುಳಸಿಹಾರ
ಸಂಜೆ ಆರತಿಗೆ
ಓಡುತ್ತಿದ್ದ ಭಟ್ಟರನ್ನೂ
ಬದುಕಿಸಿರಲಿಲ್ಲ ಶ್ರೀಹರಿ!!

ಹರಡಿತ್ತು ಸುದ್ದಿ
ನೋಡು- ನೋಡುತ್ತಲೇ
ಜ್ವಲಿಸಿತ್ತು ಕೋಮುಬೆಂಕಿ
ಯಾರೋ ಪಾಪಿ
ಮಾಡಿದ ತಪ್ಪಿಗೆ
ಇನ್ಯಾರಿಗೋ ಶಿಕ್ಷೆ!

ಮನೆಯ ಮುಂದೆಲ್ಲ ಹೊಗೆ
ಕಾಪಾಡಿ ಎಂಬ ಗೋಗರೆತ
ಕೇಳಲೇ ಇಲ್ಲ ಆರ್ತನಾದ
ಧರ್ಮದ ಅಫೀಮು
ಕುಡಿದವರ ಕಿವಿಗೆ!!

ಬಿಕ್ಕಿ ಬಿಕ್ಕಿ ಅಳುತ್ತಿದ್ದರು
ಅನಾಥರು
ದೇವರೆಡೆಗೆ ಕೈಚಾಚಿ
ರಕ್ತ ಕಾರಿಕೊಂಡು
ಮುಳುಗುತ್ತಿದ್ದ ಸೂರ್ಯನೂ
ನೋಡಿಯೂ ನೋಡದಂತೆ
ಕದ ಹಾಕಿಬಿಟ್ಟ!

-ಬಲ್ಲೇನಹಳ್ಳಿ ಮಂಜುನಾಥ್, ಹರಿಹರ ಪಲ್ಲತ್ತಡ್ಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com