

ಚೊಚ್ಚಲ ಹಿಂದಿ ಚಿತ್ರ 'ಜಿಸ್ಮ್-2'ನಲ್ಲಿ ದೇಹಸಿರಿ ಪ್ರದರ್ಶಿಸಿದ್ದ ಸನ್ನಿ ಲಿಯೋನ್ ಎನ್ನುವ ಬೊಂಬೆ ಈಗ 'ರಾಗಿಣಿ ಎಂಎಂಎಸ್-2'ನಲ್ಲಿ ಪ್ರೇಕ್ಷಕರನ್ನು ದಿಗಿಲು ಬೀಳಿಸುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.
ಸನ್ನಿ ಲಿಯೋನ್ ಸುದ್ದಿ ಸುಬ್ಬಕ್ಕ. ಅವಳ ಹೆಸರಿನಲ್ಲೇ ಏನೋ ಮೋಡಿ ಇದೆ ಬಿಡಿ. ಜನರಿಗಂತೂ ಸನ್ನಿ ಎಂಬ ಸುರಸುಂದರಿ ಏನು ಮಾಡಿದರೂ ಚೆಂದವೇ. ಹೀಗಾಗಿ ಈಕೆ ಬಹಿರಂಗವಾಗಿ ಏನೇ ಮಾಡಿದರೂ ಸುದ್ದಿಮನೆಗೆ ಆಹಾರ. ಈ ಇಂಡೊ-ಕೆನಡಿಯನ್ ಪೋರ್ನ್ ತಾರೆ ಈಗ ಬಾಲಿವುಡ್ನಲ್ಲಿ ಸಖತ್ತಾಗೇ ಮಿಂಚುತ್ತಿರುವುದಕ್ಕೆ ಅವಳ ಬಗ್ಗೆ ಇರುವ ಕುತೂಹಲವೂ ಕಾರಣವಾಗಿದ್ದೀತು.
ಕೆಲದಿನಗಳ ಹಿಂದೆ ಸನ್ನಿ 'ರಾಂಗ್' ಆಗಿದ್ದಳು. ಆಕೆ ಅನಿಲ್ ಶರ್ಮಾ ನಿರ್ದೇಶನದ 'ಸಿಂಗ್ ಸಾಹೇಬ್ ದಿ ಗ್ರೇಟ್' ಚಿತ್ರದ ಐಟಂ ಸಾಂಗ್ನಲ್ಲಿ ಮತ್ತೊಮ್ಮೆ ತನ್ನ ಮಾದಕ ಮೈಮಾಟ ತೋರಿಸುತ್ತಾಳೆ ಎನ್ನುವ ವದಂತಿ. 'ನೋ..ನೋ.. ನಾನು ಐಟಂ ಸಾಂಗ್ನಲ್ಲಿ ಕುಣಿಯುತ್ತಿಲ್ಲ' ಎಂದು ಎಲ್ಲಾ ಕಡೆಗೂ ಹೇಳಿಕೊಂಡು ಬಂದದ್ದಾಯ್ತು. ಕಳೆದ ವರ್ಷ ಸನ್ನಿಯ ಬಾಲಿವುಡ್ ಎಂಟ್ರಿಗೆ ಕಾರಣವಾದ 'ಜಿಸ್ಮ್ 2' ಬಳಿಕ ಅವಳೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾಳೆ. ಐಟಂ ನಿರಾಕರಿಸುತ್ತಲೇ ಈ ಸಿನಿಮಾದ ಬಗ್ಗೆಯೂ ಬಹಳವಾಗಿ ಹೇಳಿಕೊಳ್ಳುತ್ತಿದ್ದಾಳೆ.
'ನನ್ನ ಗಮನ ಏನಿದ್ದರೂ ರಾಗಿಣಿ ಎಂಎಂಎಸ್-2 ಬಗ್ಗೆ. ಇದು 2011ರಲ್ಲಿ ಭೂಷಣ್ ಪಟೇಲ್ ನಿರ್ದೇಶನದಲ್ಲಿ ಬಂದಿದ್ದ ರಾಗಿಣಿ ಎಂಎಂಎಸ್ ಚಿತ್ರದ ಮುಂದುವರಿದ ಭಾಗ. ಇದರಲ್ಲಿ ನನ್ನನ್ನು ನೋಡಿದವರು ದಿಗಿಲು ಬೀಳುವುದು ಗ್ಯಾರಂಟಿ. ಚಿತ್ರದಲ್ಲಿ ನನ್ನ ಎಂಟ್ರಿ, ಹಾಡುಗಳು, ಕ್ಲೈಮ್ಯಾಕ್ಸ್ ಎಲ್ಲವೂ ಬೆರಗು ಮೂಡಿಸುವಂತಿದೆ' ಎನ್ನುತ್ತಿದ್ದಾಳೆ. ಅಪ್ಪಟ ಭಾರತೀಯ ನಾರಿಯಂತೆ ಸಲ್ವಾರ್ ಕಮೀಜ್ ತೊಟ್ಟು, ಹಣೆಗೆ ಸಿಂಧೂರ ಇಟ್ಟುಕೊಂಡು, ನಿರ್ಮಾಪಕಿ ಏಕ್ತಾ ಕಪೂರ್ ಜತೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೂ ಆಗಿದೆ.
ಹೊಸ ಸಿನಿಮಾದ ಚಿತ್ರೀಕರಣ ಶುರುವಾಗಿಲ್ಲ. ಹಾಗಂತ ಬಿಡುವಿನ ವೇಳೆಯನ್ನು ಸನ್ನಿ ಸುಮ್ಮನೆ ಕಳೆಯುತ್ತಿಲ್ಲ. ಪ್ರಾಣಿದಯಾ ಸಂಘಟನೆ ಪೇಟಾ ಜತೆ ಗುರುತಿಸಿಕೊಂಡಿರುವ ಈಕೆ, ಸಂಘಟನೆಯ ಚಟುವಟಿಕೆಗಳಲ್ಲಿ ಬ್ಯುಸಿ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಶ್ವಾನಗಳ ಸಂತಾನಶಕ್ತಿಹರಣ ಸಂಬಂಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಂತದ ಬೊಂಬೆ, 'ಭಾರತದಲ್ಲಿ ಬೀದಿ ನಾಯಿಗಳ ಸಮಸ್ಯೆ ಸಿಕ್ಕಾಪಟ್ಟೆ ಇದೆ. ಅವುಗಳ ಸಂತಾನಶಕ್ತಿಹರಣದ ಬಗ್ಗೆ ಗಮನ ಕೊಡುವುದು ಅಗತ್ಯ. ಸಾಕಲು ಮನೆಗೆ ಶ್ವಾನ ತಂದಾಗ ಅದಕ್ಕೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಮರೆಯಬೇಡಿ' ಎಂದು ಕಿವಿಮಾತು ಹೇಳಿದ್ದಾಳೆ.
-ರಾಜೇಶ ಮುಂಡಿಗೇಸರ