ನಮಗೆ ಕಾಡೇ ನದಿಗಳ ತಾಯಿ, ಬ್ರಿಟಿಷರಿಗೆ ನದಿಯೇ ಮರ ಒಯ್ಯುವ ಮಾಯೆ! ನದಿಯಂಚಿನ ಕಾಡನ್ನು ದೇವರ ಕಾಡು ಎಂದು ನಾವು ಪೂಜಿಸಿದೆವು, ಮರ ಬೆಳೆದು ಕಟಾವಾದ ಬಳಿಕ ಸಾಗಣೆಗೆ ನದಿ ಅನುಕೂಲ ಎಂದು ಅವರು ಸಾಗವಾನಿ ನೆಡುತೋಪಿಗೆ ನೆಲ ಆಯ್ಕೆಗೆ ನದಿ ಕಣಿವೆಗೆ ಪಾಶಸ್ತ್ಯ ನೀಡಿದರು. ಹೀಗಾಗಿ ನಮ್ಮ ನದಿಯಂಚಿನಲ್ಲಿ ಸಾಮಿಲ್, ನೆಡುತೋಪು ವ್ಯಾಪಿಸಿದವು. ಅರಣ್ಯ ಕಾರ್ಯಯೋಜನೆ ರೂಪಿಸುವಾಗ ಮುಂದಿನ ವರ್ಷಗಳಲ್ಲಿ ಮರ ಎಷ್ಟು ಬೆಳೆಯುತ್ತದೆಂಬುದನ್ನು ಲೆಕ್ಕ ಹಾಕಲು ಬ್ರಿಟಿಷರು ಜಾಣರಿದ್ದರು. ಆದರೆ ಮರ ಎಳೆಯಲು ಕೋಣ, ಆನೆ, ನದಿ ಪ್ರವಾಹಗಳ ಬದಲು ದೈತ್ಯಶಕ್ತಿಯ ಲಾರಿ ಬರಬಹುದೆಂದು ಊಹಿಸಿರಲಿಲ್ಲ.
ಬಹುಶಃ ಅಂಥದ್ದೊಂದು ಕಲ್ಪನೆ ಸಾಧ್ಯವಾಗಿದ್ದರೆ ಕಡಿದಾದ ಕಣಿವೆ ಕೊಳ್ಳ ಬಿಟ್ಟು ರಸ್ತೆಯಂಚಿನಲ್ಲಿ ಇನ್ನಷ್ಟು ಸಾಗುವಾನಿ ಬೆಳೆಸುತ್ತಿದ್ದರು. ನದಿಯಂಚಿನ ನೈಸರ್ಗಿಕ ಕಾಡು ಅಷ್ಟರ ಮಟ್ಟಿಗೆ ಸಂರಕ್ಷಿತವಾಗುತ್ತಿತ್ತು. ನಮಗೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ 'ನೈಸರ್ಗಿಕ ಸಂಪನ್ಮೂಲ ಬಳಸಿ, ಕಾರ್ಖಾನೆ ಬೆಳೆಸಿ' ಎಂದು ನೆಹರು ಘೋಷಿಸಿದರು. ಸ್ವಾತಂತ್ರ್ಯೋದಯದ ಕಾಲಕ್ಕೆ ಪಶ್ಚಿಮ ಘಟ್ಟದಲ್ಲಿ ಅರಣ್ಯಾಧರಿತ ಕೈಗಾರಿಕೆಗಳು ಒಂದರ ನಂತರ ಒಂದರಂತೆ ಆರಂಭವಾದವು. ಆಗ ಲಾರಿಗಳು ರಸ್ತೆಗಿಳಿದವು. ಅಷ್ಟು ಕಾಲ ನದಿ ಪ್ರವಾಹದಲ್ಲಿ ಮಳೆಗಾಲದಲ್ಲಿ ಮಾತ್ರ ತೇಲುತ್ತಿದ್ದ ನಾಟಾ ಈಗ ಲಾರಿ ಏರಿ ವರ್ಷವಿಡೀ ಸಂಚರಿಸುವ ಸಾಧ್ಯತೆಯಾಯಿತು. ಘಟ್ಟದ ದಾರಿಯಲ್ಲಿ ಲಾರಿಯ ಭರ್ಜರಿ ಸಪ್ಪಳ ಕೇಳಿದಾಗ ಇನ್ನೂ ಮೋಟಾರು ನೋಡದ ಹಳ್ಳಿಗರು ಹೌಹಾರಿದರು. ಚಕ್ಕಡಿ ಓಡಾಡುವ ರಸ್ತೆಯಲ್ಲಿ ಲಾರಿ ಬಂದವು. ಈ ಲಾರಿಯವರು ಮಕ್ಕಳನ್ನು ಹಿಡಿದು ಒಯ್ಯುತ್ತಾರೆ, ಅಣೆಕಟ್ಟೆಗಳಿಗೆ ಮಕ್ಕಳನ್ನು ಬಲಿ ಹಾಕುತ್ತಾರೆ ಎಂದು ಜನ ಮಾತಾಡುತ್ತಿದ್ದರು! ಲಾರಿ ಸಪ್ಪಳ ಕೇಳಿದರೆ ಜನ ಭಯಗೊಳ್ಳುತ್ತಿದ್ದರು!
ನಮ್ಮಲ್ಲಿ ಲಾರಿ ಎಷ್ಟು ಭಯ ಹುಟ್ಟಿಸಿತ್ತೆಂದರೆ ನನ್ನದೇ ಒಂದು ಸ್ವಾರಸ್ಯಕರ ಘಟನೆಯಿದೆ. ಆಗೊಮ್ಮೆ ಹುಲೇಕಲ್ ಎಂಬ ಹಳ್ಳಿಯಿಂದ ಶಿರಸಿಗೆ ಹೊರಟಿದ್ದೆವು, ಬಸ್ ಇರಲಿಲ್ಲ. ಸಂಜೆಯಾಗಿತ್ತು, ನಮ್ಮನ್ನು ನೋಡಿ ಲಾರಿಯವರು ಕೈಬೀಸಿ ಕರೆದರು, ಶಿರಸಿಗೆ ಕರೆದೊಯ್ಯುತ್ತೇವೆಂದು ಕೂಗಿದರು, ನಾವು ದಿಕ್ಕಾಪಾಲಾಗಿ ಓಡಿದೆವು! ಲಾರಿ ಹೋದ ಬಳಿಕ ತೆಪ್ಪಗೆ ಅದರ ಹಿಂದೆ ನಾಲ್ಕಾರು ಕಿಲೋ ಮೀಟರ್ ನಡೆದು ಪೇಟೆ ಸೇರಿದೆವು ಅವತ್ತು ಮಕ್ಕಳನ್ನು ಹಿಡಿಯುವ ಲಾರಿ ಬಂದದ್ದು ಎಷ್ಟು ನಿಜವೋ ಗೊತ್ತಿಲ್ಲ, ಎಷ್ಟು ಮಕ್ಕಳನ್ನು ಹಿಡಿದರೆಂಬುದೂ ತಿಳಿದಿಲ್ಲ. ಆದರೆ ಘಟ್ಟ ಏರಿ ಕಾಡು ಕೊಳ್ಳ ಸುತ್ತಿದ ಲಾರಿಗಳು ಅರಣ್ಯಾಧರಿತ ಕೈಗಾರಿಕೆಗೆಂದು! ನಮ್ಮ ಕಾಡಿನ ಹಿರಿಯಜ್ಜನಂಥ ಹೆಮ್ಮರಗಳನ್ನೇ ಹೊತ್ತೊಯ್ದವು! ನದಿ ಮಳೆಗಾಲದಲ್ಲಿ ಮಾಡುತ್ತಿದ್ದ ಕೆಲಸವನ್ನು ಇವು ವರ್ಷವಿಡೀ ನಡೆಸಿದವು.
= ಲೇ: ಶಿವಾನಂದ ಕಳವೆ
(ಕಂಪ್ಯೂಟರ್ ಊಟ ಅಡವಿ ಮಾರಾಟ)