ಪತ್ತೇಪುರ

ಪತ್ತೇದಾರಿ ಸಾಹಿತ್ಯದ ಬಗ್ಗೆ ಹಿಂದೆ ಇದ್ದ ತುಚ್ಛ ಭಾವನೆ ಈಗ ಪಾಶ್ಚಾತ್ಯ ದೇಶಗಳಲ್ಲೂ ನಮ್ಮಲ್ಲೂ ಕಡಿಮೆಯಾಗುತ್ತಿದೆ. ಅದನ್ನೂ ಶಾಸ್ತ್ರೀಯ ಸಾಹಿತ್ಯದ ಮಟ್ಟದಲ್ಲಿ ಪರಿಗಣಿಸುವ ಮರುಮೌಲ್ಯಮಾಪನ ನಡೆಯುತ್ತಿದೆ. ಹೀಗಾಗಿ ಉತ್ತಮ ಸಾಹಿತ್ಯವನ್ನು ಎದುರುನೋಡುವ ಕಾಲ ಬಂದಿದೆ...
Updated on: 

ಸಂಸ್ಕೃತಿಯೊಂದರ ಮುಖ್ಯವಾಹಿನಿಯೊಂದಿಗೆ ಅನೌಪಚಾರಿಕವಾಗಿ ರಾಜಿಮಾಡಿಕೊಂಡು ಜನಸಾಮನ್ಯರ ದೈನಂದಿನ ಜೀವನದ ಧೋರಣೆ, ಕಲ್ಪನೆ, ದೃಷ್ಟಿಗಳ ಮೇಲೆ ಪ್ರಭಾವ ಬೀರುವ ಉಪ ಸಂಸ್ಕೃತಿಯನ್ನು 'ಪಾಪ್ ಕಲ್ಚರ್‌' ಎಂದು ಕರೆಯುತ್ತಾರೆ. ಪಾಪ್ ಎಂಬುದು 'ಪಾಪ್ಯುಲರ್‌' ಎಂಬ ಪದದ ಸಂಕ್ಷಿಪ್ತ ರೂಪ.
ಪಾಶ್ಚಿಮಾತ್ಯ ದೇಶಗಳಲ್ಲಿ 20ನೇ ಶತಮಾನದ ಪ್ರಾರಂಭದಲ್ಲಿ ಕಾಣಿಸಿಕೊಂಡ ಜನಪ್ರಿಯ ಸಂಸ್ಕೃತಿಯು ದ್ವಿತೀಯ ಮಹಾಯುದ್ಧದ ವೇಳೆಗೆ ವಿಶ್ವವ್ಯಾಪಿಯಾಗಿ ಉತ್ತುಂಗದಲ್ಲಿತ್ತು. ಏನೇ ಆದರೂ ಮುಖ್ಯವಾಹಿನಿಯಲ್ಲಿದ್ದ ಸಂಪ್ರದಾಯಸ್ಥರ ದೃಷ್ಟಿಯಲ್ಲಿ ಈ ಉಪ ಸಂಸ್ಕೃತಿಯು ತೋರ್ಕೆಯ, ವ್ಯಾವಹಾರಿಕ, ಭಾವಾವೇಷದ ಸಂಸ್ಕೃತಿ ಎಂದು ಅಗ್ಗವಾಗಿಯೇ ಕಂಡಿತು.
ಸಮಾಜದ ಕೆಳವರ್ಗಗಳ ಅವಿದ್ಯಾವಂತರ, ಅಥವಾ ಅಲ್ಪವಿದ್ಯಾವಂತರನ್ನು ಒಳಗೊಂಡ ಈ ಉಪ ಸಂಸ್ಕೃತಿಯು ಸಾಮೂಹಿಕ ಬಳಕೆಗಾಗಿ ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾದ ಅಗ್ಗದ ವಸ್ತುವೆನಿಸಿತು. ಇಂಥ ಮಾಸ್ ಕಲ್ಚರ್‌ನಿಂದ ಬಹುತೇಕ ಎಲ್ಲ ಮಾನವಿಕ ಉತ್ಪನ್ನಗಳೂ ಸೃಷ್ಟಿಯಾದವು. ಪಾಪ್- ಸಂಗಿತ, ಪಾಪ್- ಸಾಹಿತ್ಯ, ಪಾಪ್- ಚಿತ್ರಕಲೆ ಇತ್ಯಾದಿ. ಹೀಗೆ ಸೃಷ್ಟಿಯಾದ ಸಾಹಿತ್ಯವನ್ನು 'ಪಲ್ಪ್ ಫಿಕ್ಷನ್‌' ಎಂದೂ ಕರೆಯುತ್ತಾರೆ. 'ಪಲ್ಪ್‌' ಎಂದರೆ, ಕಚ್ಚಾ, ಕೀಳುದರ್ಜೆಯ, ಪ್ರಚೋದನಕಾರಿಯಾದ (ಸಾಹಿತ್ಯ) ಎಂದು ಅರ್ಥ. ಜನಪ್ರಿಯ ಸಾಹಿತ್ಯವು ಶಾಸ್ತ್ರೀಯ ಸಾಹಿತ್ಯದ ವಿರುದ್ಧ ಧೃವವಾಗಿ ಪರಿಗಣಿತವಾಗಿದೆ. ಇದರ ಮೂಲೋದ್ದೇಶವು ಕೇವಲ ಮನರಂಜನೆ. ಇದಕ್ಕೆ ಶಾಸ್ತ್ರೀಯ ಸಾಹಿತ್ಯದ ಸ್ಥಾನಮಾನ ಯಾವುದೇ ಭಾಷೆಯಲ್ಲೂ ಮೊದಲಿನಿಂದಲೂ ಇರಲಿಲ್ಲ. ಪತ್ತೇದಾರಿ ಕಾದಂಬರಿಗಳು ಈ ಗುಂಪಿಗೆ ಸೇರುತ್ತವೆ.
ಪತ್ತೇದಾರಿ: ಪತ್ತೆಯಾದ ದಾರಿ
ಇತ್ತೀಚೆಗೆ ನಿಧನರಾದ ಕಾದಂಬರಿಕಾರ ಎನ್. ನರಸಿಂಹಯ್ಯನವರ ಸಾಧನೆ- ವೈಫಲ್ಯಗಳ ಬಗ್ಗೆ ಯೋಚಿಸಿದಾಗ 'ಪತ್ತೇದಾರಿ' ಸಾಹಿತ್ಯ ಪ್ರಕಾರದ ಪರಿಶೀಲನೆ ಅನಿವಾರ್ಯವೆನಿಸಿತು.
ವೃತ್ತಿಪರ ಅಥವಾ ಹವ್ಯಾಸಿ ಪತ್ತೇದಾರನೊಬ್ಬ ಅಪರಾಧದ ಗೋಜಲನ್ನು (ಓದುಗರೊಂದಿಗೆ) ಎಳೆ ಎಳೆಯಾಗಿ ಬಿಡಿಸುತ್ತಾ ಅನುಮಾನ ಬಂದವರ ವಿಚಾರಣೆ, ಸುಳಿವುಗಳ ಹುಡುಕಾಟ- ಪರಿಶೀಲನೆ ಮಾಡುತ್ತಾ ಕೊನೆಗೆ ಅಪರಾಧಿಯನ್ನು ಕಂಡುಹಿಡಿಯುವ ರೋಚಕ ತಂತ್ರವು ಓದುಗನ ಕಲ್ಪನೆ, ಕುತೂಹಲ, ಊಹೆಗೆ ಸವಾಲಾಗಿ ಆತನ ಭಾವೋದ್ವೇಗದೊಂದಿಗೆ ಆಟವಾಡಬಲ್ಲ ಶಕ್ತಿ ಹೊಂದಿದೆ.

ಪತ್ತೇದಾರಿ ಸಾಹಿತ್ಯಕ್ಕೆ ಪುರಾತನ ಗ್ರೀಕ್ ನಾಟಕ 'ಈಡಿಪಸ್ ರೆಕ್ಸ್‌'ನಂಥ ಶಾಸ್ತ್ರೀಯ ಸಾಹಿತ್ಯದ ಪ್ರೇರಣೆ ಇದೆಯಾದರೂ ಅಮೆರಿಕದ ಎಡ್ಗರ್ ಅಲನ್ ಪೋ ಬರೆದ 'ಮರ್ಡರ್ಸ್ ಇನ್ ದಿ ರೂ ಮಾರ್ಗ್‌'ನೊಂದಿಗೆ ಆಧುನಿಕ ಪತ್ತೇದಾರಿ ಕಾದಂಬರಿಗಳು 1841ರಲ್ಲಿ ಪ್ರಾರಂಭವಾದವು ಎಂದು ಹೇಳಬಹುದು. ಪೋ ಸೃಷ್ಟಿಸಿದ ಮಾನ್ಸಿಯರ್ ಸಿ ಅಗಸ್ಟೈನ್ ಡ್ಯೂಪಿನ್ ಅನೇಕ ಕೊಲೆಗಳ ರಹಸ್ಯವನ್ನು ಬೇಧಿಸುತ್ತಾನೆ. ಪೋ ತನ್ನ ತರ್ಕ ಹಾಗೂ ಅಪರಾಧಿಗಳ ವೈಯಕ್ತಿಕ ವಿಲಕ್ಷಣ ಗುಣಗಳನ್ನೇ ಸುಳುಹುಗಳಾಗಿ ಪಡೆದು ಅಪರಾಧಿಗಳನ್ನು ಕಂಡು ಹಿಡಿಯುವ ತಂತ್ರವನ್ನು ಮುಂದಿನ ಪತ್ತೇದಾರಿ ಬರಹಗಾರರು ಮಾದರಿಯಾಗಿ ಅನುಸರಿಸಿದರು. ಅಮೆರಿಕದಲ್ಲಿ ಪೋ ಪತ್ತೇದಾರಿ ಕಾದಂಬರಿಯ ಜನಕನಾದರೆ, ಬ್ರಿಟನ್‌ನಲ್ಲಿ ಸರ್ ಆರ್ಥರ್ ಕಾನನ್ ಡಾಯ್ಲ್ 20ನೇ ಶತಮಾನದ ಉದ್ದಕ್ಕೂ ತನ್ನ ಪತ್ತೇದಾರಿ ನಾಯಕ ಶೆರ್ಲಾಕ್ ಹೋಮ್ಸನ್ನು ಮೆರೆಸಿದ. ಈತ ಕೇವಲ ಕಾಲ್ಪನಿಕ ಪಾತ್ರ ಎಂದು ಜನರು ಒಪ್ಪಿಕೊಳ್ಳಲು ಸಾಧ್ಯವೇ ಆಗದಷ್ಟು ನೈಜವಾಗಿ ಸೃಷ್ಟಿಸಿ ಜನಪ್ರಿಯಗೊಳಿಸಿದ.
1887ರಲ್ಲಿ ಮೊದಲು ಪ್ರಕಟವಾದ 'ಎ ಸ್ಟಡಿ ಇನ್ ಸ್ಕಾರ್ಲೆಟ್‌' ಕಾದಂಬರಿಯಲ್ಲಿ ಮೊದಲು ಕಾಣಿಸಿಕೊಂಡ ಪಾತ್ರ ಶೆರ್ಲಾಕ್ ಹೋಮ್ಸ್, ನಂತರ ಡಾಯ್ಲ್‌ನ ಎಲ್ಲ ಕಥೆ- ಕಾದಂಬರಿಗಳಲ್ಲೂ ತನ್ನ ನೆಚ್ಚಿನ ಬಂಟ ಡಾ. ಜಾನ್ ವ್ಯಾಟ್ಸನ್‌ನೊಂದಿಗೆ ನಾಯಕನಾಗಿ ಬರುತ್ತಾನೆ. ಇಪ್ಪತ್ತನೇ ಶತಮಾನದ ಮೊದಲ ಅರ್ಧವನ್ನು 'ಪತ್ತೇದಾರಿ ಸಾಹಿತ್ಯದ ಸುವರ್ಣ ಯುಗ'ವೆಂದು ಕರೆಯುತ್ತಾರೆ. ನಂತರ ಅದು ಹೈ ಆರ್ಟ್ ಹಾಗೂ ಹಾರ್ಡ್ ಬಾಯಿಲ್ಡ್ ಎಂದು ಕವಲುಗಳಾದವು.
ಐವತ್ತರ ನಂತರ
ಹೈ ಆರ್ಟ್ ಪತ್ತೇದಾರಿ ಕಾದಂಬರಿಗಳನ್ನು ಬರೆದವರಲ್ಲಿ ಜಿ.ಕೆ. ಚೆಸ್ಟರ್‌ಟನ್; ಡಾರತಿ ಸೇಯರ್ಸ್, ಅಗಾಥಾ ಕ್ರಿಸ್ಟೀ ಹೆಸರಿಸಬಹುದು. ಜಿ.ಕೆ ಚೆಸ್ಟರ್ಟನ್, ಫಾದರ್ ಬ್ರೌನ್ ಎಂಬ ಪುರೋಹಿತ- ಪತ್ತೇದಾರನನ್ನು ಸೃಷ್ಟಿಸಿದ್ದಾನೆ. ಡಾರತಿ ಸೇಯರ್ಸ್, ಲಾಡರ್ ಪೀಟರ್ ವಿಮ್‌ಸೆ ಎಂಬ ಶ್ರೀಮಂತ ಪತ್ತೇದಾರನನ್ನು ಸೃಷ್ಟಿಸಿದ್ದಾಳೆ. ಅಗಾಥಾ ಕ್ರಿಸ್ಟಿ ಮಿಸ್ ಜೇನ್ ಮಾರ್ಪ್ಲ್ ಎಂಬ ಹೆಣ್ಣು ಪತ್ತೇದಾರಳನ್ನೂ ಹಾಗೂ ಹರ್ಕ್ಯೂಲ್ ಪಾಯ್‌ರಟ್ ಎಂಬ ಪತ್ತೇದಾರನನ್ನೂ ಕಥೆಗಳಲ್ಲಿ ಬಳಸುತ್ತಾಳೆ.
ಹಾರ್ಡ್ ಬಾಯಿಲ್ಡ್ ಬರಹಗಾರರು ಅಮೆರಿಕನ್ ಲೇಖಕರು. ಇವರು 'ಬ್ಲಾಕ್ ಮಾಸ್ಕ್‌' ಎಂಬ ಪ್ರಚೋದನಕಾರಿ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಈ ಲೇಖಕರು ಸೃಷ್ಟಿಸುವ ಪತ್ತೇದಾರರು ಉತ್ತಮ ಗುಣಮಟ್ಟದ ಬರಹಗಾರರಿಗಿಂತ ಭಿನ್ನ. ಅವರು ನಗರದ ವರಟು ಜನರಾಗಿದ್ದು, ದುಡಿಯುವ ವರ್ಗಕ್ಕೆ ಸೇರಿದವರು. ದೈಹಿಕ ಕ್ರೌರ್ಯವನ್ನು ನಿಸ್ಸಂಕೋಚವಾಗಿ ಮಾಡುವ ದೇಹದಾರ್ಢ್ಯವುಳ್ಳ ನಿಷ್ಠುರರು. ಅವರಲ್ಲಿ ಪ್ರಮುಖರೆಂದರೆ  ಡಶೇಲ್ ಹ್ಯಾಮೆಟ್ ಹಾಗೂ ರೇಮಂಡ್ ಚ್ಯಾಂಡ್ಲರ್. ಇತ್ತೀಚಿನ ಪತ್ತೇದಾರಿ ಕಾದಂಬರಿಗಳನ್ನು ಅಲ್ಪಸಂಖ್ಯಾತರೂ, ಆಫ್ರಿಕನ್ ಅಮೆರಿಕನ್ನರೂ (ಅವರನ್ನು ನೀಗ್ರೋ ಎಂದು ಕರೆಯಬಾರದು), ಜ್ಯೂ ಜನಾಂಗದವರೂ, ಬರೆಯುತ್ತಿದ್ದು, ಕಥಾನಾಯಕರೂ ಅವರ ಜನಾಂಗದವರಾಗಿರುತ್ತಾರೆ. ಜೊತೆಗೆ, ಸಲಿಂಗಕಾಮಿಗಳು, ಮೂಲ ಅಮೆರಿಕ ವಾಸಿಗಳೂ ಕಥಾನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲ ಅಪರಾಧಗಳ ಮುಖ್ಯ ಉದ್ದೇಶ ವೈಯಕ್ತಿಕವಾಗಿರಬೇಕು. ಅಂತಾರಾಷ್ಟ್ರೀಯ ಸಂಚು, ಯುದ್ಧ-ರಾಜಕೀಯ, ಇವು ಪತ್ತೇದಾರಿ ಕಾದಂಬರಿಯ ವ್ಯಾಪ್ತಿಗೆ ಬರುವುದೇ ಇಲ್ಲ.
ಪತ್ತೇದಾರಿ ಸಾಹಿತ್ಯದ ವರ್ಗಗಳು
ಪತ್ತೇದಾರಿ ವರ್ಗದಲ್ಲಿ ಬಹುತೇಕ ಕಾದಂಬರಿಗಳು ಹುಡನ್ನಿಟ್ ರೂಪದಲ್ಲಿರುತ್ತವೆ. ಸಂಕೀರ್ಣ ವಸ್ತುವುಳ್ಳ ಕಥೆಯಲ್ಲಿ ಓದುಗನಿಗೆ ಸುಳುಹುಗಳು ಸಿಗುತ್ತಾ ಹೋಗುತ್ತದೆ, ಪುಸ್ತಕದ ಕೊನೆಯಲ್ಲಿ ಲೇಖಕನು ರಹಸ್ಯ ಬಯಲು ಮಾಡುವ ಮೊದಲೇ ಓದುಗ ಹು ಡನ್ ಇಟ್ ಎಂದು ಊಹಿಸುತ್ತಾನೆ.
ಬೀಗ ಹಾಕಿದ ಕೋಣೆಯ ರಹಸ್ಯ (ಲಾಕ್ಡ್ ರೂಮ್ ಮಿಸ್ಟ್ರಿ): ಕೋಣೆಯ ಒಳಗೆ ಹೋಗಲಾಗಲೀ  ಬರಲಾಗಲೀ ಸಾಧ್ಯವೇ ಇರದಂಥ ಮೇಲ್ನೋಟಕ್ಕೆ ಅಸಂಭವ ಎಂಬಂಥ ಸಂದರ್ಭದಲ್ಲಿ ಒಂದು ಅಪರಾಧವಾಗಿರುತ್ತದೆ.
ವಿಲೋಮ ಪತ್ತೇದಾರಿ ಕಥೆ: ಇಂಗ್ಲಿಷಿನಲ್ಲಿ ಇದನ್ನು 'ಇನ್ವರ್ಟೆಡ್ ಡಿಟೆಕ್ಟಿವ್ ಸ್ಟೋರಿ' ಎಂದು ಕರೆಯುತ್ತಾರೆ. ಇಂಥ ಕಥೆಗಳಲ್ಲಿ ಮೊದಲೇ ಅಪರಾಧಿ ಯಾರೆಂದು ತಿಳಿಸಲಾಗುತ್ತದೆ. ಕಥೆಯ ಉಳಿದ ಭಾಗ ಈ ರಹಸ್ಯವನ್ನು ಹೇಗೆ ಪತ್ತೆದಾರ ಕಂಡುಹಿಡಿಯುತ್ತಾನೆ ಎಂಬುದನ್ನು ವಿವರಿಸುತ್ತದೆ.
ಅಮೆರಿಕನ್ ಹಾರ್ಡ್ ಬಾಯಿಲ್ಡ್: ಮುಲಾಜುಗಳಿಲ್ಲದ, ಭಾವನಾರಹಿತ ಕ್ರೌರ್ಯ ಮತ್ತು ಲೈಂಗಿಕತೆಯ ಚಿತ್ರಣವಿರುತ್ತದೆ. ಪತ್ತೇದಾರನೂ ಅಪಾಯವನ್ನು ಎದುರಿಸುವ ಕ್ರೌರ್ಯ ತೋರುವ ಪರಿಸ್ಥಿತಿ ಬರುತ್ತದೆ.
ಪೊಲೀಸ್ ಪ್ರೊಸೀಜುರಲ್: ಪತ್ತೇದಾರ ಒಬ್ಬ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ನೈಜ ಘಟನೆಗಳನ್ನು ಆಧರಿಸಿ ಅಥವಾ ನೈಜ ಘಟನೆಯ ಹಾಗೆ ಕಾಣುವಂತೆ ಬರೆಯಲಾಗಿರುತ್ತದೆ.
ಲೀಗಲ್ ಥ್ರಿಲ್ಲರ್: ಇದರಲ್ಲಿ ಬಹುತೇಕ ಪತ್ತೇದಾರರು ವಕೀಲರಾಗಿರುತ್ತಾರೆ. ಅವರು ತಮ್ಮ ಕಕ್ಷಿದಾರನನ್ನು ಉಳಿಸಲು ಸತ್ಯವನ್ನು ಹೊರಗೆಡವಲು ಶ್ರಮಿಸುತ್ತಾರೆ.
ಗೂಢಚಾರಿ ಕಾದಂಬರಿಗಳು: ದೇಶದ ಇಂಟೆಲಿಜೆನ್ಸ್ ವಿಭಾಗಕ್ಕೆ ಸೇರಿದ ಸ್ಪೈಗಳು ಕಥಾನಾಯಕರಾಗಿರುತ್ತಾರೆ.
ಮನೋವೈಜ್ಞಾನಿಕ ನಿಗೂಢತೆ: ಮನೋವಿಕಾರಗಳಿಂದ ಅಪರಾಧವೆಸಗುತ್ತಿರುವ ವ್ಯಕ್ತಿಯ ಹಿನ್ನೆಲೆ ಇರುತ್ತದೆ.
ಕೇಪರ್ ಕಥೆಗಳು: ಇಡೀ ಕಥೆಯನ್ನು ಅಪರಾಧಿಯ ದೃಷ್ಟಿಕೋನದಿಂದ ನೋಡಲಾಗುತ್ತದೆ. ಇಲ್ಲೂ ತನಿಖೆ, ಪತ್ತೇದಾರಿಕೆ ಹಾಗೂ ಕೊನೆಯಲ್ಲಿ ಬಂಧನ ಇರುತ್ತದೆ, ಆದರೆ ಅಪರಾಧಿಯ ಬಗ್ಗೆ ಮೆಚ್ಚುಗೆ, ಸಹಾನುಭೂತಿ ಬರುವಂತೆ ಇರುತ್ತದೆ.
ಇಂಗ್ಲಿಷಿನಲ್ಲಿ ಪತ್ತೇದಾರಿ ಸಾಹಿತ್ಯದ ಜನಪ್ರಿಯತೆ ಮಕ್ಕಳ ಸಾಹಿತ್ಯಕ್ಕೂ ಲಗ್ಗೆ ಹಾಕಿದೆ. ಎನಿಡ್ ಬ್ಲೈಟನ್, ಕ್ಯರೋಲಿನ್ ಕೀನ್, ಪ್ರ್ಯಾಂಕ್ಲಿನ್ ಡಿಕ್ಸನ್‌ನಂಥ ಬರಹಗಾರರು ಹದಿ- ಪೂರ್ವದ ಮಕ್ಕಳಿಗೆ ಬರೆದ ಕಾದಂಬರಿಗಳಲ್ಲಿ ಶಾಲಾ ಮಕ್ಕಳು ರಜೆಯಲ್ಲಿ ಆಕಸ್ಮಿಕವಾಗಿ ಎದುರಾಗುವ ಸಮಸ್ಯೆಗಳನ್ನು ಭೇದಿಸಿ, ಅಪರಾಧಿಗಳನ್ನು ಹಿಡಿಯುವ ಅದ್ಭುತ ಕಥೆಗಳು. ವಿಷಯ ತಂತ್ರ ಎಷ್ಟೇ ಸರಳವಾಗಿದ್ದರೂ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಖಂಡಿತಾ ಮೂಡಿಸುತ್ತದೆ ಹಾಗೂ ಇದೊಂದು ಕ್ಷೇತ್ರದಲ್ಲಿ ಅಶ್ಲೀಲತೆ ಇಲ್ಲ. ಧೈರ್ಯವಾಗಿ ಮಕ್ಕಳಿಗೆ ಇಂಥ ಪುಸ್ತಕಗಳನ್ನು ಓದಲು ಕೊಡಬಹುದು.
ಪುರಸ್ಕಾರ ಏಕಿಲ್ಲ?
1960ರ ದಶಕದವರೆಗೂ ಪೇಪರ್‌ಬ್ಯಾಕ್ ಎಡಿಶನ್‌ಗಳನ್ನು ಓದುವುದು 'ಅಗ್ಗದ' ಅಭಿರುಚಿಯ ಸಂಕೇತವಾಗಿತ್ತು. ಆ ಕಾದಂಬರಿಗಳು ಅಗ್ಗದ ಬೆಲೆಗೆ ದೊರೆಯುತ್ತಿದ್ದವು ಹಾಗೂ ಅವುಗಳ ಗುಣಮಟ್ಟ ಅಗ್ಗವಾಗಿರುತ್ತಿದ್ದವು. ವಿಶ್ವವಿದ್ಯಾಲಯಗಳಲ್ಲೂ ಶೈಕ್ಷಣಿಕವಾಗಿ ಜನಪ್ರಿಯ ಸಾಹಿತ್ಯವನ್ನು ಪಠ್ಯಪುಸ್ತಕಗಳಾಗಿ ಓದುತ್ತಿರಲಿಲ್ಲ. ಈ ಪದ್ಧತಿ ಪದವಿ ಮಟ್ಟದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಕೇವಲ ಸಂಶೋಧನೆ ಮಾಡುವವರು ಈ ನಡುವೆ ಈ ವಸ್ತುಗಳನ್ನು ಶೋಧಿಸುತ್ತಿದ್ದಾರೆ.
ಕನ್ನಡದಲ್ಲಿ ಏಕಿಲ್ಲ?
ಕನ್ನಡ ಸಾಹಿತ್ಯದಲ್ಲಿ ಇದುವರೆಗೂ ಏಳಿಗೆಯಾಗದ ಸಾಹಿತ್ಯ ಪ್ರಕಾರಗಳೆಂದರೆ, ವಿಜ್ಞಾನ ಕಥಾ ಸಾಹಿತ್ಯ ಮತ್ತು ಪತ್ತೇದಾರಿ ಸಾಹಿತ್ಯ. ಇವೆರಡರಲ್ಲಿ ಪತ್ತೇದಾರಿಯೇ ಎಷ್ಟೋ ವಾಸಿ. ಕಡೆಯ ಪಕ್ಷ ಎನ್. ನರಸಿಂಹಯ್ಯ, ಜಿಂದೆ ನಂಜುಂಡ ಸ್ವಾಮಿ, ಮಾ ಭಿ ಶೇ.  ಹಾಗೂ ಟಿ.ಕೆ. ರಾಮರಾವ್ ಅವರ ಹೆಸರುಗಳನ್ನು ಹೇಳಬಹುದು.  ವಿಜ್ಞಾನ ಕಥಾ ಸಾಹಿತ್ಯದಲ್ಲಿ ರಾಜಶೇಖರ ಭೂಸನೂರ ಮಠ ಹಾಗೂ ಮನು ಇವೆರಡೇ ಹೆಸರೇ ನೆನಪಾಗುವುದು. ಸಾಮಾಜಿಕ, ಕಾದಂಬರಿಗಳನ್ನು ಬರೆಯಲು ಜೀವನನುಭವ ಮತ್ತು ಸ್ವಲ್ಪ ಮಟ್ಟಿನ ಕಲ್ಪನೆ ಇದ್ದರೆ ಸಾಕು. ಆದರೆ ಇವೆರಡು ವರ್ಗಗಳಿಗೆ ಬಹು ಶಿಸ್ತಿನ ಜ್ಞಾನದ ಅಗತ್ಯವಿದೆ. ಬರೆಯುವ ಉತ್ಸಾಹ ಉಳ್ಳವರಿಗೆ ಅಗತ್ಯ ಸಿದ್ಧತೆ ಇಲ್ಲವಾಗಿದೆ. ಆಧುನಿಕ ವಿಧಿ ವಿಜ್ಞಾನದ ತಂತ್ರಗಳು, ಪೊಲೀಸ್ ತರಬೇತಿ, ಅಪರಾಧಗಳ ಬಗ್ಗೆ (ಕ್ರಿಮಿನಲ್ ಬ್ರೈನ್) ಅರಿವು, ಇದ್ದವರಿಗೆ ಮಾತ್ರ ತಮ್ಮ ಕಲ್ಪನೆಯ ನೆರವಿನೊಂದಿಗೆ  ಪತ್ತೇದಾರಿ ಸಾಹಿತ್ಯ ಬರೆಯಲು ಸಾಧ್ಯ. ಬಹುಶಃ ಈಗ ಕಾಲ ಪಕ್ವವಾಗಿದೆ.
ಉತ್ತಮ ಪತ್ತೇದಾರಿಗೆ 10 ಸೂತ್ರ
ಉತ್ತಮ ಪತ್ತೇದಾರಿ ಕೃತಿಯೊಂದು ಬರಹಗಾರನಿಗೆ ಬೌದ್ಧಿಕ ಆಟವಿದ್ದಂತೆ. ಆ ಆಟಕ್ಕೆ ಕೆಲವು ಅಘೋಷಿತ ನಿಯಮಗಳಿರುತ್ತವೆ. ಪ್ರತಿ ಪತ್ತೇದಾರಿ ಕಾದಂಬರಿಗಾರನೂ ಇದನ್ನು ಗೊತ್ತಿದ್ದೂ ಗೊತ್ತಿಲ್ಲದೆಯೋ ಅನುಸರಿಸುತ್ತಾನೆ. ಕಾದಂಬರಿಯನ್ನು ಓದುತ್ತಿದ್ದಂತೆ, ಅಪರಾಧಿ ಯಾರೆಂದು ಊಹಿಸಲು ಓದುಗನಿಗೂ ಪತ್ತೇದಾರನಿಗೆ ಇರುವಷ್ಟೇ ಸಮಾನ ಅವಕಾಶವಿರಬೇಕು. ರೊನಾಲ್ಡ್ ನಾಕ್ಸ್ ಎಂಬಾತ 1929ರಲ್ಲಿ ಪತ್ತೇದಾರಿ ಕಾದಂಬರಿಗಾರರಿಗೆ ಈ ಹತ್ತು ನಿಯಮಗಳನ್ನು ಬರೆದಿದ್ದಾನೆ.
1. ಅಪರಾಧಿಯು ಕಥೆಯ ಪೂರ್ವಭಾಗದಲ್ಲೇ ಬಂದಿರಬೇಕು. ಕಥೆಯ ನಿರೂಪಣೆಯಲ್ಲಿ ಯಾರ ಆಲೋಚನೆಗಳನ್ನು ಓದುಗನು ಅನುಸರಿಸುತ್ತಿರುತ್ತಾರೋ ಅವನಾಗಿರಕೂಡದು.
2. ಮಾನವಾತೀತ ಅತೀಂದ್ರಿಯ ಶಕ್ತಿಗಳು ಅಪರಾಧಿಗಳಾಗಿರಕೂಡದು.
3. ಇಡೀ ಕಥೆಯಲ್ಲಿ ಒಂದೇ ಒಂದು ನಿಗೂಢ ಕೋಣೆ ಇರಬೇಕು.
4. ಇದುವರೆಗೂ ಪರಿಚಿತವಾಗಿರುವ ವಿಷ ಅಥವಾ ಮಾರಕ ಸಾಧನವನ್ನೇ ಕೊಲೆಗೆ ಬಳಸಬೇಕು. ದೀರ್ಘವಾದ ವೈಜ್ಞಾನಿಕ ವಿವರಣೆ ಅಗತ್ಯವಿರುವ ಹೊಸ ಮಾದರಿ ಅಸ್ತ್ರಗಳನ್ನು ಬಳಸಬಾರದು.
5. ಕಥೆಯಲ್ಲಿ ಅತ್ಯಲ್ಪ ಸಾಧ್ಯತೆ ಇರುವ ವ್ಯಕ್ತಿ ಕೊಲೆಗಾರನಾಗಬಾರದು (ಚೈನಮನ್). ಉದಾ: ಜವಾನ, ಅಡಿಗೆಭಟ್ಟ, ಕೆಲಸಗಾರ.
6. ಪತ್ತೇದಾರನಿಗೆ ಅಪರಾಧಿಯು ಆಕಸ್ಮಿಕವಾಗಿ ಸಿಗಬಾರದು, ಪತ್ತೇದಾರನ ಅಂತರ್ಬೋಧೆ ಅಥವಾ ಅಪರೋಕ್ಷ ಜ್ಞಾನದಿಂದ ಕಂಡುಹಿಡಿಯಬಾರದು.
7. ಪತ್ತೇದಾರನೇ ಅಪರಾಧ ಮಾಡಬಾರದು.
8. ಓದುಗನಿಗೆ ಒದಗಿಸದೆ ಇರುವ ಮಾಹಿತಿ, ಸುಳುಹುಗಳನ್ನು ಬಳಸಬಾರದು.
9. ಪತ್ತೇದಾರನೊಂದಿಗೆ ಸಾಧಾರಣವಾಗಿ ಇರುವ ಮೂರ್ಖ ಗೆಳೆಯ ತನ್ನ ಮನಸ್ಸಿನಲ್ಲಿ ಸುಳಿಯುವ ಆಲೋಚನೆಗಳನ್ನು ಬಚ್ಚಿಟ್ಟುಕೊಳ್ಳಬಾರದು ಹಾಗೂ ಅವನಿಗೆ ಸಾಧಾರಣ ಓದುಗನ ಬುದ್ಧಿಶಕ್ತಿಗಿಂತ ಸ್ವಲ್ಪ ಕಡಿಮೆ ಬುದ್ಧಿಶಕ್ತಿ ಇರಬೇಕು.
10. ಓದುಗನನ್ನು ಈ ಸಾಧ್ಯತೆಗೆ ಸಿದ್ಧಗೊಳಿಸದೇ, ಅವಳಿ- ಜವಳಿ ತಮ್ಮ, ಅಥವಾ ಒಂದೇ ರೀತಿ ಇರುವ ಮತ್ತೊಬ್ಬ ವ್ಯಕ್ತಿ ಅಪರಾಧಿಯಾಗಿರಬಾರದು.
ಕಾದಂಬರಿಕಾರ- ಕೃತಿ ಸಲಹೆ
    ಜಿ.ಕೆ. ಚೆಸ್ಟರ್ಟನ್- ದ ಕಂಪ್ಲೀಟ್ ಫಾದರ್ ಬ್ರೌನ್ (1986)
    ಆರ್ಥರ್ ಕಾನನ್ ಡಾಯ್ಲ್- ದ ಹೌಂಡ್ ಆಫ್ ದ ಬ್ಯಾಸ್ಕರ್ವಿಲ್ಲಿಸ್ (1902)
    ಎಡ್ಗರ್ ಅಲನ್ ಪೋ- ದ ಮರ್ಡರ್ಸ್ ಇನ್ ದ ರೂ ಮಾಗರ್ (1841)
    ಚಾಲ್ಸರ್ ಡಿಕನ್ಸ್- ಬ್ಲೀಕ್‌ಹೌಸ್ (1853)
    ಅಗಾಥಾ ಕ್ರಿಸ್ಟೀ- ಪೆರಿಲ್ ಅಟ್ ಎಂಡ್ ಹೌಸ್ (1932)
    ವಿಲ್ಕೀ ಕಾಲಿನ್ಸ್- ದ ಮೂನ್ ಸ್ಟೋನ್ (1868)
    ಜಾನ್ ಡಿಕ್ಸನ್ ಕಾರ್- ದ ಹಾಲೋ ಮ್ಯಾನ್ (1935)
    ರೋನಾಲ್ಡ್ ನಾಕ್ಸ್- ದ ವಯಾಡಕ್ಡ್ ಮರ್ಡರ್ (1925)
    ಡಾರತಿ ಎಲ್ ಸೇಯರ್ಸ್- ಫೈವ್ ರೆಡ್ ಹೆರ್ರಿಂಗ್ಸ್ (1931)
    ಅಯಾನ್ ಫ್ರೆಮಿಂಗ್- ಫ್ರಂ ರಷ್ಯಾ ವಿತ್ ಲವ್ (1957)
    ಅಲಿಸ್ಟರ್ ಮ್ಯಾಕ್‌ಲೀನ್- ದ ಗನ್ಸ್ ಆಫ್ ನವರೋನ್ (1957)
    ಜೇಮ್ ಹ್ಯಾಡ್ಲೀ ಚೇಸ್- ನೋ ಆರ್ಕಿಡ್ ಫಾರ್ ಮಿಸ್ ಬ್ಲ್ಯಾಂಡಿಷ್ (1939)

-ಡಾ. ಉದಯರವಿ ಶಾಸ್ತ್ರೀ
udayaravi.shastry@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com