ಸಂಗೀತ ಯೋಗಿ ಜಿ.ಎಸ್. ಹೆಗಡೆ ಬೆಳ್ಳೇಕೇರಿ

ಯೋಗಿಗಳನ್ನು ಹಿಮಾಲಯದ ತಪ್ಪಲಲ್ಲಿಯೇ ಹುಡುಕಬೇಕೆಂದಿಲ್ಲ. ನಮ್ಮ ಆಚೀಚೆ ಅಪರೂಪಕ್ಕೆ ಕಾಣಸಿಗುತ್ತಾರೆ- ಎಂಬ ಹೇಳಿಕೆಗೆ ಆಧಾರದಂತಿದ್ದವರು ಪಂಡಿತ್ ಗಣಪತಿ ಹೆಗಡೆ ಬೆಳ್ಳೇಕೇರಿಯವರು. ಶಾಸ್ತ್ರೀಯ ಸಂಗೀತಕ್ಕಾಗಿಯೇ, ಸಂಗೀತದಲ್ಲಿಯೇ ಬದುಕಿದ ಅವರು ಅದರಲ್ಲೇ ಎಲ್ಲ ಸಂತೋಷ ಕಂಡವರು.
1918ರಲ್ಲಿ ಶಿರಸಿಯ ಸಮೀಪದ ಬೆಳ್ಳೇಕೇರಿಯಲ್ಲಿ ಹುಟ್ಟಿದ ಅವರಿಗೆ ಚಿಕ್ಕಂದಿನಿಂದಲೂ ಸಂಗೀತ ಅಚ್ಚುಮೆಚ್ಚು. ಆದರೆ ಆಗ ಸಂಗೀತಗಾರರ ಕುರಿತು ಆದರ ಇರಲಿಲ್ಲ. ಸಹಜವಾಗಿಯೇ ಅವರ ಸಂಗೀತ ಪ್ರೀತಿಗೆ ಹತ್ತಿರದವರಿಂದ ಪ್ರೋತ್ಸಾಹ ಸಿಗಲಿಲ್ಲ. ಮನೆ, ತಂದೆ-ತಾಯಿ, ಊರು ಎಲ್ಲವನ್ನೂ ತ್ಯಾಗ ಮಾಡಿದ ಬೆಳ್ಳೇಕೇರಿ ಸಂಗೀತದ ಬೆನ್ನುಹತ್ತಿ ಹೊರಟೇಬಿಟ್ಟರು. ಆಗ ಅವರಿಗೆ ಕೇವಲ ಹದಿನಾಲ್ಕು ವರ್ಷ! ಓದಿದ್ದು ಕೇವಲ ನಾಲ್ಕನೆಯ ತರಗತಿ.
ಸಂಗೀತ ಕಲಿಯಬೇಕೆನ್ನುವ ಅದಮ್ಯ ಆಸೆ ಬಿಟ್ಟರೆ ಮತ್ತೇನೂ ಇಲ್ಲದ ಸ್ಥಿತಿ. ಶಿಕ್ಷಣ-ಭಾಷೆಗಳ ಬಲ ಇಲ್ಲ, ಆತ್ಮೀಯರ ಆಧಾರ ಇಲ್ಲ, ಕೈಯಲ್ಲಿ ಕಾಸೂ ಇಲ್ಲ. ಉಪವಾಸ, ವನವಾಸದ ಜತೆ ಅಜ್ಞಾತವಾಸವನ್ನೂ ಸೇರಿಸಿಕೊಂಡರು. ಮನೆಯವರು ತನ್ನನ್ನು ಹುಡುಕಬಾರದೆಂದು ಹೆಸರನ್ನು 'ಶ್ಯಾಮ ಆರ್. ಜೋಶಿ' ಎಂದು ಬದಲಿಸಿಕೊಂಡರು. ಸಂಗೀತ ಶಿಕ್ಷಕರನ್ನು ಹುಡುಕುತ್ತಾ ಆರು ವರ್ಷ ಸುತ್ತಿದರು. ಮುಂಬೈಯಲ್ಲಿದ್ದ ಸಂಗೀತ ಗುರು, ಹುಟ್ಟು ಕುರುಡ ಪಂಡಿತ್ ಮೋಹನ ಚಿಕ್ಕರಮನೆಯವರಿಗೆ ನಿಷ್ಠಾವಂತ ಸಹಾಯಕನ ಅಗತ್ಯ ಇತ್ತು. ಬೆಳ್ಳೇಕೇರಿಗೆ ಸಂಗೀತಕ್ಕೆ ಪ್ರೋತ್ಸಾಹ ನೀಡುವ ಶಾಶ್ವತ ನೆಲೆಯೊಂದು ಅವಶ್ಯವಿತ್ತು. 1938ರಲ್ಲಿ ಶಿಷ್ಯತ್ವ ಪಡೆದು ಅವರ ಕಣ್ಣಾದರು. ಇಪ್ಪತ್ತು ವರ್ಷ ಅವರ ಸೇವೆ ಮಾಡುತ್ತಾ, ಅವರ ಸಹಕಾರದಿಂದ ಶಾಸ್ತ್ರೀಯ ಸಂಗೀತ ದಿಗ್ಗಜರಾದ ಉಸ್ತಾದ್ ಫಯಾಜ್ ಖಾನ್, ಉಸ್ತಾದ್ ಖಾದೀಂ ಹುಸೇನ್ ಖಾನ್ರಿಂದಲೂ ಶಿಕ್ಷಣ ಪಡೆದರು. ಎಲ್ಲೆಡೆ ಸೇವೆಯೇ ಗುರುದಕ್ಷಿಣೆ.
ಮೂರು ವರ್ಷ ಸತತ ಗುರುಸೇವೆ, ಶಿಕ್ಷಣ ನಡೆದಿರುವಾಗಲೇ ಎದುರಾಯಿತು ಅಗ್ನಿಪರೀಕ್ಷೆ. ಬೆಳ್ಳೇಕೇರಿ ತಮ್ಮ ಇಂಪು ಕಂಠವನ್ನು ಶಾಶ್ವತವಾಗಿ ಕಳೆದುಕೊಂಡರು. ಧೃತಿಗೆಡುವ ಬದಲು ಹೆಚ್ಚಿನ ಪರಿಶ್ರಮಕ್ಕೆ ತೊಡಗಿದರು. ವಾದನಗಳ ಅಭ್ಯಾಸಕ್ಕೆ ಮುಂದಾದರು. ಪಿಟೀಲು, ಕೊಳಲು, ಸಿತಾರ್, ಜಲತರಂಗ, ತಬಲಾಗಳಲ್ಲಿ ನೈಪುಣ್ಯ ಗಳಿಸಿಕೊಂಡರು.
1958ರಲ್ಲಿ ಶಿರಸಿಗೆ ಮರಳಿ, ಒಂದು ಹಳೆಯ ಬಾಡಿಗೆ ಮನೆಯಲ್ಲಿ 'ಶಾಸ್ತ್ರೀಯ ಸಂಗೀತ ವಿದ್ಯಾಲಯ' ಪ್ರಾರಂಭಿಸಿ, 'ಬೆಳ್ಳೇಕೇರಿ ಸಂಗೀತ ಮಾಸ್ತರು' ಎಂದೇ ಜನಪ್ರಿಯರಾದರು. ಶಿರಸಿಗೆ ಬರುವ ಬದಲು ಮುಂಬೈ, ಪುಣೆ ಅಥವಾ ಶಾಸ್ತ್ರೀಯ ಸಂಗೀತಕ್ಕೆ ಉನ್ನತ ಸ್ಥಾನ ಇರುವ ಯಾವುದೇ ನಗರಕ್ಕೆ ಹೋಗಿದ್ದರೂ ಹಣದ ಹೊಳೆಯೇ ಅವರೆಡೆಗೆ ಹರಿದು ಬರುತ್ತಿತ್ತು. ಆದರೆ ಹಣಕ್ಕೆ ಅವರು ಅಷ್ಟೊಂದು ಮಹತ್ವ ಕೊಡಲಿಲ್ಲ.
ಬೆಳ್ಳೇಕೇರಿ ಮಾಸ್ತರರಿಂದ ಶಿಕ್ಷಣ ಪಡೆಯುವುದೊಂದು ಅಪೂರ್ವ ಅನುಭವ. ತಮ್ಮ ಸರಳ ಜೀವನಕ್ಕೆ ಕನಿಷ್ಠ ಎಷ್ಟು ಬೇಕೋ ಅಷ್ಟನ್ನು ಮಾತ್ರ ಶುಲ್ಕವಾಗಿ ಪಡೆಯುತ್ತಿದ್ದರು. ಅವರ ಉಡುಪು ಕೂಡ ಅಷ್ಟೇ ಸರಳ-ಬಿಳಿ ಶರ್ಟ್ ಹಾಗೂ ಪಾಯಿಜಾಮಾ, ತಲೆಗೆ ಕರಿ ಟೊಪ್ಪಿ. ಊಟವೂ ತೀರಾ ಸಾತ್ವಿಕ. ಹೆಚ್ಚಿನ ಕಡೆಗೆ ಕಾಲ್ನಡಿಗೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬಸ್. ಜೀವನದ ಸಂಧ್ಯಾಕಾಲವನ್ನು ಅದೇ ತಾಲೂಕಿನ ಒಂದು ಪುಟ್ಟ ಹಳ್ಳಿ 'ಯಡಳ್ಳಿ'ಯಲ್ಲಿ ಕಳೆದರು.
ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕವಾಗಿ ಕಲಿಸುತ್ತಿದ್ದರು. ಗುಂಪು ಶಿಕ್ಷಣ ಅವರಿಗಾಗದು. ಬೆಳಗ್ಗೆ ಏಳಕ್ಕೆ ಕ್ಲಾಸುಗಳು ಪ್ರಾರಂಭವಾದರೆ ರಾತ್ರಿ ಒಂಬತ್ತರವರೆಗೂ ನಿರಂತರ. ವರ್ಷಕ್ಕೆ ಎರಡು ದಿನ ಮಾತ್ರ ರಜೆ! (ಅವರ ತಂದೆ-ತಾಯಿಯ ತಿಥಿಯಂದು). ತಾವು ಕಲಿತ ಆಗ್ರಾ ಘರಾಣಾ ಪದ್ಧತಿಯಲ್ಲೇ ಶಿಕ್ಷಣ ನೀಡುತ್ತಿದ್ದರು. ಜನಪ್ರಿಯತೆಗಾಗಿ ಬೇರೆ ರೂಪ ಅವರಿಗಾಗದು. ವಿದ್ಯಾರ್ಥಿಗಳಿಂದಲೂ ಅವರು ಅದನ್ನೇ ಬಯಸುತ್ತಿದ್ದರು. ಶಿರಸಿಯಲ್ಲಿ ಆಗ್ರಾ ಘರಾಣೆಯ ಶಿಕ್ಷಣದ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ಅವರ ಕನಸಾಗಿತ್ತು. ಆದರೆ ಅದಕ್ಕಾಗಿ ಹಣ ಸಂಗ್ರಹವನ್ನು ಒಲ್ಲರು. ಸರಕಾರ ಕಲಾವಿದರಿಗೆ ನೀಡುವ ಮಾಸಾಶನವನ್ನೂ ತಿರಸ್ಕರಿಸಿದ್ದರು. ನಂತರದ ವರ್ಷಗಳಲ್ಲಿ ದೇಹಶಕ್ತಿ ಕುಗ್ಗಿ, ಕ್ಲಾಸು ನಡೆಸುವ ಸಾಮರ್ಥ್ಯವಿಲ್ಲದಿದ್ದಾಗ ಆತ್ಮೀಯರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಪಡೆದಿದ್ದರು.
55 ವರ್ಷಗಳಲ್ಲಿ 3 ಸಾವಿರ ವಿದ್ಯಾರ್ಥಿಗಳಿಗೆ ಸಂಗೀತ ಭಂಡಾರವನ್ನೇ ತೆರೆದಿಟ್ಟಿದ್ದರು. ಪ್ರಚಾರಕ್ಕೆ ಒಡ್ಡಿಕೊಳ್ಳದ, ಯಾವ ಪ್ರಶಸ್ತಿಗೂ ಹಾತೊರೆಯದ, ತಮ್ಮ ಕುರಿತು ಏನನ್ನೂ ಹೇಳಿಕೊಳ್ಳದ ಅವರ ಸ್ವಭಾವದಿಂದಾಗಿ ಇಂತಹ ಮೇರು ವ್ಯಕ್ತಿತ್ವದ ಸನಿಹ ಸೌಭಾಗ್ಯ ಕೆಲವೇ ಜನರಿಗೆ ಮಾತ್ರ ಲಭ್ಯವಾಯಿತು. ಅಂತಹ ಭಾಗ್ಯವಂತರಲ್ಲಿ ನಾನೂ ಒಬ್ಬಳು ಎನ್ನುವುದೇ ಹೆಮ್ಮೆ.
-ಕುಮುದಾ ಜಿ.ಎಂ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


