ಸಾಪ್ತಾಹಿಕಪ್ರಭ

ದೇಹಕ್ಕಿಂತ ಗಡ್ಡ ದೊಡ್ಡದು!

ದೇಹಕ್ಕಿಂತ ಗಡ್ಡ ದೊಡ್ಡದು!
Published On :

ಜಗತ್ತಿನ ಅದ್ಭುತ ಪ್ರಾಣಿಗಳೆಲ್ಲ ಗಡ್ಡ ಬಿಟ್ಟಿವೆ. ಹುಲಿ, ಸಿಂಹ, ಚಿರತೆ, ಗುರುಪ್ರಸಾದ್ etc... ಗಾಂಧಿನಗರದಲ್ಲೇ 'ಮಠ' ಕಟ್ಟಿದ ಈ ಗುರುಗಳಿಗೆ, ಗಡ್ಡ- ಮೀಸೆ ಎರಡೂ ಬಿಟ್ಟು ತಿರುಗಿದರೇನೇ ಐಡೆಂಟಿಟಿ. ಅದೇನೋ ಹೇಳುತ್ತಾರಲ್ಲ, ಹೆಗ್ಗುರುತು. ಮಚ್ಚುಲಾಂಗು ಹಿಡಿಯುವವರ ಮಧ್ಯೆ ಸಣ್ಣ ಬ್ಲೇಡನ್ನು ಕೂಡ ಹಿಡಿದವರಲ್ಲ ಗುರು. ಕ್ಷೌರಿಕರೆಲ್ಲ ವಿಲನ್ ಅಲ್ಲ, ಶೇವಿಂಗಿನ ಮೇಲೆ ಸಿಟ್ಟೇನಿಲ್ಲ. ಗಡ್ಡ ತೆಗೆಯಲು ಆಲಸ್ಯವೂ ಅಲ್ಲ. 'ದೇಹಕ್ಕಿಂತ ಗಡ್ಡ ದೊಡ್ಡದು' ಎಂಬುದು ಈ ಡೈರೆಕ್ಟರ್ ಸ್ಪೆಷಲ್.

ಮಹಾತ್ಮರು ಮುಟ್ಟಿದ ವಸ್ತು ಬಹಳ ಉದ್ದ ಬೆಳೆಯುತ್ತದೆ ಎಂಬುದಕ್ಕೆ ಗುರುಗಳ ಗಡ್ಡ ಉದಾಹರಣೆ. ಹದಿಮೂರು ವರ್ಷದ ಹಿಂದೆ ಕೋಲು ಮುಖದ ಮೇಲೆ ಕುರುಚಲಾಗಿ ಬೆಳೆದಿದ್ದ ತೆಳುಗಡ್ಡವನ್ನು ಸವರಿ ಅಣ್ಣಾವ್ರು ಹೇಳಿದರಂತೆ, 'ನಿಮ್ಮ ಮುಖಕ್ಕೊಂದು ಫ್ರೇಮ್ ಕೊಟ್ಟಿದೆ ಈ ಗಡ್ಡ'. ಅಲ್ಲಿಂದ ಗುರುಗಳು ಬ್ಲೇಡ್ ಕಂಪನಿಯ ಸಹವಾಸವನ್ನೇ ಬಿಟ್ಟು, ಗಡ್ಡದಾರಿ ಹಿಡಿದರು. ಅಣ್ಣಾವ್ರು ಮುಟ್ಟಿದ ಗಡ್ಡ, ಈಗವರ ಮುಖಕ್ಕೇ ಗುರುತ್ವಾಕರ್ಷಣೆ ತಂದುಕೊಟ್ಟಿದೆ. ಕೊನೆಗೆ ಗಡ್ಡತನ ಪ್ರದರ್ಶಿಸುವುದೇ ಅಭ್ಯಾಸವಾಗಿ ಹೋಯಿತು.

ಗಡ್ಡ ಬಿಡುವುದೊಂದೇ ಅಲ್ಲ. ಈ ಗುರು ಹಲವು ವಿದ್ಯೆಗಳ ವಿಶ್ವವಿದ್ಯಾಲಯ. ಅವರೇ ಹೇಳಿಕೊಳ್ಳುವಂತೆ, ತಾನು ಅತಿಹೆಚ್ಚು ಎಣ್ಣೆ ಕುಡಿದ ಕನ್ನಡದ ಹಣತೆ. ಒಂದಲ್ಲ, ಎರಡು ಜನ್ಮಕ್ಕಾಗುವಷ್ಟು ವೈನು ಕುಡಿದಿದ್ದಾರೆ. ಆದರೆ, ಈಗ ಎಣ್ಣೆಗೂ ಗುರುಪ್ರಸಾದ್‌ಗೂ ಆಗಿಬರುತ್ತಿಲ್ಲ. ಒಂದು ತಿಂಗಳ ಹಿಂದೆ ಖಾಲಿ ಗ್ಲಾಸಿನ ಮುಂದೆ ಪ್ರಮಾಣ ಮಾಡಿ, ಆ ಚಟಕ್ಕೆ ತಿಲಾಂಜಲಿಯಿಟ್ಟದ್ದಕ್ಕೂ ಕಾರಣ ಸ್ಪೆಷಲ್ಲಾಗಿಯೇ ಉಂಟು.

ಶೇಕ್ಸ್‌ಪಿಯರ್‌ನ 'ಹ್ಯಾಮ್ಲೆಟ್‌' ನಾಟಕದಲ್ಲೊಬ್ಬ ಕಲಾವಿದ ಬರುತ್ತಾನೆ. ಲಾರೆನ್ಸ್ ಆಲಿವಿಯರ್. ಅರವತ್ತೈದನೇ ವಯಸ್ಸಿನಲ್ಲಿ ಕ್ಯಾನ್ಸರ್ ಬಂದು ಆಲಿವಿಯರ್‌ನ ಗಂಟಲೊಳಗೆ ಕೂರುತ್ತದೆ. ಮೊದಲ ವೈದ್ಯ ಹೇಳಿದ, 'ನೀವಿನ್ನು ಮದ್ಯ ಕುಡಿಯುವಂತಿಲ್ಲ, ಸಿಗರೇಟು ಸೇದುವಂತಿಲ್ಲ'. ಆಲಿವಿಯರ್‌ಗೆ ಅವನ ಸಲಹೆ ಸಮಾಧಾನವಾಗುವುದಿಲ್ಲ. ಮತ್ತೊಬ್ಬ ವೈದ್ಯನಲ್ಲಿಗೆ ಹೋದ. 'ಓ ಪರ್ವಾಗಿಲ್ಲ, ಎಲ್ಲಾ ತಗೊಳ್ಳಿ' ಎಂದ ಆ ವೈದ್ಯ. ಹಾಗೆಯೇ ಆಲಿವಿಯರ್ ಕುಡಿಯುತ್ತಾ, ಸಿಗರೇಟಿನ ಹೊಗೆ ಬಿಡುತ್ತಾ ಮತ್ತೆ ಹತ್ತೊಂಬತ್ತು ವರ್ಷ ಬದುಕಿದ.

ಯಾವ ವೈದ್ಯರೂ ಅಲ್ಲ; ಇಲ್ಲಿ ಗುರುಗಳಿಗೆ ಆತ್ಮವೇ ಸಲಹೆ ಕೊಟ್ಟಿದೆಯಂತೆ, ಕುಡಿತ ಒಳ್ಳೆಯದಲ್ಲ ಅಂತ. ಎಣ್ಣೆ ಅನ್ನೋದು ಗುರುಗಳ ಪಾಲಿಗೆ ಫುಲ್‌ಟೈಮ್ ಜಾಬ್. ಅದನ್ನು ಪಾರ್ಟ್‌ಟೈಂಗೆ ಇಳಿಸುವುದಕ್ಕೆ ಅವರ ಮನಸ್ಸು ಒಪ್ಪುವುದಿಲ್ಲ. ಮೊದಲೆಲ್ಲ ಡೈರೆಕ್ಷನ್ನು, ಸಂಭಾಷಣೆ ಬರೆಯೋದಿಕ್ಕೆ ಅಂತ 12 ಗಂಟೆ, ಮಿಕ್ಕ 4 ಗಂಟೆಯನ್ನು ತೈಲಜಪಕ್ಕೆ ಮೀಸಲಿಟ್ಟಿದ್ದರು. ಆದರೆ, ಈಗ ಗುರುಗಳಿಗೆ ಅಷ್ಟೂ ಪುರುಸೊತ್ತಿಲ್ಲ. ಅವರ ಸಂಭಾಷಣೆ ಹೆಚ್ಚು ಸಂಭಾವನೆ ತಂದುಕೊಡುತ್ತಿದೆ. ಪ್ರತಿಭೆಗೆ ವ್ಯಾಪಕ ಮಾರುಕಟ್ಟೆ ಸಿಕ್ಕಿದೆ. ಆವಾಗ್ಗಾವಾಗ ಒಂದು ಚಿತ್ರವನ್ನು ಎದ್ದೇಳಿಸದಿದ್ದರೆ ಒಳಗಿನ ಮಂಜುನಾಥ ಶಾಪ ಕೊಟ್ಟಾನು! ಗಡ್ಡ ಕೆರೆದುಕೊಳ್ಳಲೂ ಬಿಡುವಿಲ್ಲದಿರುವಾಗ ಕುಡಿತಕ್ಕಾಗಿ 4 ಗಂಟೆ ವ್ಯರ್ಥ ಮಾಡಲು ಗುರುಗಳು ಸಿದ್ಧರಿಲ್ಲ. ಗುರುಗಳಿಗೆ ಜ್ಞಾನೋದಯವಾಗಿದೆ.

ಈ ಆರೇಳು ವರ್ಷದಿಂದ ಗುರುಗಳೊಬ್ಬರೇ ಕುಡಿದಿಲ್ಲ. ಟೀಮಿಗೆ ಕುಡಿಸಿ, ಮಜಾ ತೆಗೆದುಕೊಳ್ಳುವವರು ಅವರು. ಅಬಕಾರಿ ಇಲಾಖೆಯ ಕಡತ ತೆಗೆದರೆ ಸರ್ಕಾರಕ್ಕೆ ಮಾಡಿಕೊಟ್ಟ ಹತ್ತು ಲಕ್ಷ ರು. ಲಾಭ ಇವರ ಹೆಸರಿನಲ್ಲೇ ಇದೆ. 'ಟೀಚರ್ಸ್‌' ಅವರ ಇಷ್ಟದ ಬ್ರ್ಯಾಂಡ್. ಬಿಸ್ಲೇರಿ ಇಟ್ಟುಕೊಂಡ ಹಾಗೆ ಮೂರ್ನಾಲ್ಕು ಟೀಚರ್ಸ್ ಬಾಟಲಿಗಳು ಅವರ ಕಾರಲ್ಲಿ ಸದಾ ಇರೋವು. ಕನ್ನಡ ಚಿತ್ರರಂಗದಲ್ಲಿ ಯಾರ್ಯಾರು ದೊಡ್ಡವರಿದ್ದಾರೆ, ಅವರೆಲ್ಲರ ಜತೆಯೂ ಮದ್ಯಸಮಾರಾಧನೆ ಮಾಡಿದ ಪೆಗ್ಗಳಿಕೆ. ಜಗ್ಗೇಶ್ ಇವರ ಫೇವರಿಟ್ ಪಾರ್ಟ್ನರ್.
ಮದ್ಯ ಸೇವನೆ ಬಿಟ್ಟಾಗಿದೆ ಬಿಡಿ. ಈಗ 'ಡೈರೆಕ್ಟರ್ ಸ್ಪೆಷಲ್‌' ಭರ್ಜರಿಯಾಗಿ ರಿಲೀಸಾದ ಖುಷಿಯಲ್ಲಿ ಮತ್ತೊಂದು ಚಟದಿಂದ ಮುಕ್ತರಾಗಲು ಹೊರಟಿದ್ದಾರೆ ಗುರುಗಳು. ಅದು ಸಿಗರೇಟು. ಆ ಸಿಗರೇಟು ಅವರಿಗೆ ಆರನೇ ಬೆರಳಂತೆ. ಅದನ್ನು ತುಂಡರಿಸಲು ಆರೋಗ್ಯದ ಬಗೆಗಿನ ಕಾಳಜಿಯೇ ಕಾರಣ. 'ಸ್ಟ್ರಾಂಗ್‌' ಬ್ರ್ಯಾಂಡ್‌ನಲ್ಲಿದ್ದವರು, ಈಗ ಶಿಲ್ಪಾಶೆಟ್ಟಿ ಥರ ಒಣಗಿಕೊಂಡ 'ಲೈಟ್ಸ್‌'ಗೆ ಕೈ ಇಟ್ಟಿದ್ದಾರೆ. ನಿತ್ಯ ನಲವತ್ತು ಸಿಗರೇಟುಗಳನ್ನು ದಹಿಸುತ್ತಿದ್ದವರು ಈಗ 15ಕ್ಕಿಳಿದಿದ್ದಾರೆ. 'ಖುಷಿಯಾದ್ರೂ ಸೇದ್ತೀವಿ, ಬೇಜಾರಾದ್ರೂ ಸೇದ್ತೀವಿ. ಈ ಸಿಗರೇಟಿನ ಚಟಕ್ಕೆ ಕಾರಣವೇ ಇಲ್ಲ. ಎಲ್ಲಿ ಅವಕಾಶ ಸಿಗುತ್ತೆ, ಅಲ್ಲಿ ಬೆಂಕಿ ಹಚ್ಚುವ ದುರಭ್ಯಾಸ ಇದು' ಎಂಬುದು ಗುರುವಚನ. 'ಬುದ್ಧಿವಂತರಾದ ನಾವೇ ಈ ಚಟಗಳಿಗೆ ಅಂಟಿಕೊಳ್ಳುವುದು ತಪ್ಪು. ನಾನು ಎಲ್ಲ ಚಟಗಳಿಂದ ಮುಕ್ತನಾಗುತ್ತಿದ್ದೇನೆ. ಬೇರಾರೂ ಇವುಗಳ ಸಹವಾಸಕ್ಕೆ ಹೋಗಬೇಡಿ' ಎಂಬುದು ಗುರು ಉಪದೇಶ.

ಅಡಲ್ಟ್ಸ್ ಜೋಕುಗಳನ್ನು ಹೇಳುವುದರಲ್ಲೂ ಗುರುಗಳು ಫೇಮಸ್ಸು. ಕ್ಷಮಿಸಿ, ಅದನ್ನು ಬರೆಯಲು ಸೆನ್ಸಾರ್ ಮಂಡಳಿಯ ಅನುಮತಿ ಸಿಗಲಿಲ್ಲ!

- ಕೀರ್ತಿ
kolgarkeerthi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.