ಸಲಹೆ ಕೇಳಬಹುದು
-ಮಹದೇವಯ್ಯ, ಮಾಯಗಾನಹಳ್ಳಿ, ರಾಮನಗರ ಜಿಲ್ಲೆ
ನಮ್ಮ ತಾತನವರು 1967ರಲ್ಲಿ ನಾಲ್ಕು ಎಕರೆ ಜಮೀನು ಕೊಂಡುಕೊಂಡಿದ್ದರು. 1995ರಲ್ಲಿ ನಮ್ಮ ತಂದೆ ಹಾಗೂ ಚಿಕ್ಕಪ್ಪನವರು ಅದನ್ನು ಮಾರಿದರು. ಮಕ್ಕಳ ಹೆಸರನ್ನು ನಮೂದಿಸಿಲ್ಲ. ನಾವು ಪರಿಶಿಷ್ಟ ಜನಾಂಗಕ್ಕೆ ಸೇರಿದವರು. ಇದನ್ನು ಮರಳಿ ಪಡೆಯಬಹುದೇ?
- ಈ ಜಮೀನು ಕ್ರಯದಿಂದ ಪಡೆದಿದ್ದರಿಂದ ಪ.ಜಾತಿ, ಪ. ಪಂಗಡಗಳ ಕಾನೂನು (ಪರಭಾರೆ ನಿಷೇಧ) ಅನ್ವಯವಾಗುವುದಿಲ್ಲ. 1995ರಲ್ಲಿ ಮಾರಾಟವಾದ್ದರಿಂದ ಹೆಣ್ಣುಮಕ್ಕಳಿಗೆ ಆಗ ಹಕ್ಕಿರಲಿಲ್ಲ. ಮಾರಾಟವಾಗಿ 27 ವರ್ಷವಾಗಿರುವುದರಿಂದ ಲಿಮಿಟೇಷನ್ ಅವಧಿ ಮುಗಿದಿದೆ. ಆದ್ದರಿಂದ ಕಾನೂನು ನಿಮ್ಮ ಸಹಾಯಕ್ಕೆ ಬರಲಾರದು. ಬೇಕಾದರೆ ಜಿಲ್ಲಾ ನ್ಯಾಯಾಲಯದಲ್ಲಿರುವ ಉಚಿತ ಕಾನೂನು ನೆರವು ಸಮೀತಿಯಲ್ಲಿ ಸಲಹೆ ಕೇಳಬಹುದು.
ದೂರಿಲ್ಲದೆ ನ್ಯಾಯಾಲಯ ಪರಿಗಣಿಸದು
ಹೆಸರು, ಊರು ಬೇಡ
ನಾನು ಮದುವೆಯಾಗಿ ಮಕ್ಕಳಿರುವಾಗಲೇ ಬೇರೊಬ್ಬಳ ಜತೆ ಸಂಸಾರ ಮಾಡಿಕೊಂಡಿದ್ದು, ಅವಳಿಗೂ ಒಂದು ಮಗುವಿದೆ. ನನ್ನ ಮೊದಲ ಪತ್ನಿಯ ಒಪ್ಪಿಗೆ ಪಡೆದೇ ಎರಡನೇ ಲಗ್ನವಾಗಿದ್ದೇನೆ. ಈಗ ಒಬ್ಬರು ನನ್ನನ್ನು ಬೆದರಿಸುತ್ತಾ, ಇದು ಕಾನೂನಿಗೆ ವಿರುದ್ಧ. ನಿನಗೆ ಮಾಡಿಸುತ್ತೇನೆ ಎಂದೆಲ್ಲಾ ಹೆದರಿಸುತ್ತಿದ್ದಾರೆ. ಪರಿಹಾರವೇನು?
- ಎರಡನೇ ಪತ್ನಿ ಇರಬೇಕೇ ಬೇಡವೇ ಎಂಬುದು ನೀವು ಹಾಗೂ ನಿಮ್ಮ ಇಬ್ಬರು ಹೆಂಡಿರ ಸಮಸ್ಯೆ. ಬೇರೊಬ್ಬರಿಗೆ ಅದರ ಉಸಾಬರಿ ಸಲ್ಲ. ಎರಡನೇ ಮದುವೆಯು ಕಲಂ 494 ಐಪಿಸಿ ಹಾಗೂ ಹಿಂದೂ ವಿವಾಹ ಕಾಯಿದೆಯ ಕಲಂ 5 ಹಾಗೂ 4ರಂತೆ ನ್ಯಾಯಯುತ ಮದುವೆಯಾಗುವುದಿಲ್ಲ. ಆದರೆ ಅದನ್ನು ಪ್ರಶ್ನಿಸಬೇಕಾದವರು ಇಬ್ಬರು ಹೆಂಡತಿಯರೇ ವಿನಾ ಉಳಿದವರಲ್ಲ. ಹೀಗೆ ದೂರಿಲ್ಲದೆ ನ್ಯಾಯಾಲಯ ಅದನ್ನು ಗಮನಕ್ಕೆ ತೆಗೆದುಕೊಳ್ಳಲಾಗದು. ಆದ್ದರಿಂದ ನೀವು ಈ ವಿಷಯದಲ್ಲಿ ಹಾಯಾಗಿರಬಹುದು.
ನಿರ್ವಹಣಾ ವೆಚ್ಚ ಕೇಳಬಹುದು
ಸಿದ್ದಲಿಂಗ ಶೆಟ್ಟಿ, ಕೆ.ಆರ್. ನಗರ, ಮೈಸೂರು ಜಿಲ್ಲೆ
ನಾಲ್ಕು ಜನ ಗಂಡುಮಕ್ಕಳು, ಒಬ್ಬಳು ಮಗಳು. ಇದ್ದ ಮನೆಯನ್ನು ಕೊನೇ ಮಗನಿಗೆ ದಾನಪತ್ರದ ಮೂಲಕ ಕೊಟ್ಟು ನೋಂದಣಿ ಮಾಡಿಸಿದ್ದೇನೆ. ಈಗ ಎರಡು ವರ್ಷಗಳ ನಂತರ ಆ ಮಗ ನಮ್ಮನ್ನು, ಮನೆ ಖಾಲಿ ಮಾಡಿ. ಮನೆಯನ್ನು ಮಾರುತ್ತೇನೆ ಎಂದು ಒತ್ತಾಯಿಸುತ್ತಿದ್ದಾನೆ. ಮುಂದೆ ನಾವು ಜೀವನಕ್ಕೆ ಏನು ಮಾಡುವುದು?
- ಹಿಂದೂ ದತ್ತಕ ಹಾಗೂ ನಿರ್ವಹಣಾ ಕಾಯಿದೆಯ ಕಲಂ 20ರಂತೆ ಮಕ್ಕಳು ತಂದೆತಾಯಿಯರನ್ನು ಸಾಕುವುದು ಅವರ ಕರ್ತವ್ಯ. ಆದ್ದರಿಂದ ನೀವು ಕೋರ್ಟಿನಲ್ಲಿ ದಾವಾ ಹಾಕಿ ನಿರ್ವಹಣಾ ವೆಚ್ಚ ಕೇಳಬಹುದು. ಮನೆಯನ್ನು ಕೊನೆಯವನಿಗೆ ಕೊಟ್ಟಿರುವುದರಿಂದ ಆ ಜವಾಬ್ದಾರಿ ಆತನದೇ. ಮಾತಾಪಿತೃ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಹಾಗೂ ನಿರ್ವಹಣೆ ಕಾಯಿದೆ 2007 ಇದರ ಕಲಂ 5 ಕೂಡ ನಿಮ್ಮ ನೆರವಿಗೆ ಬರುತ್ತದೆ.
ಎಲ್ಲ ಹೆಣ್ಣುಮಕ್ಕಳಿಗೂ ಪಾಲಿದೆ
ಎಂ. ನಾಗರಾಜ, ಮೈಸೂರು
1991ರಲ್ಲಿ 2ಎಕರೆ, 3 ಗುಂಟೆ ಜಮೀನು ಖರೀದಿಸಿ ನೋಂದಣಿ ಮಾಡಿಸಿದ್ದೇನೆ. ಗಂಡು ಮಕ್ಕಳೂ ಸಹಿ ಹಾಕಿದ್ದಾರೆ. ಈಗ ಆತನ ಹೆಣ್ಣುಮಕ್ಕಳು ಈ ಆಸ್ತಿಯಲ್ಲಿ ಪಾಲು ಕೇಳಬಹುದೇ?
- ಎಲ್ಲ ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಂತೆಯೇ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು 9.9.2005ರಿಂದಲೇ ಜಾರಿಯಾದ ಕಾನೂನಿನಲ್ಲಿ ಬಂದಿದೆ (ಕಲಂ 6ರ ಹಿಂದೂ ಉತ್ತರಾಧಿಕಾರ ಕಾಯಿದೆ). ಆದರೆ ಅದೇ ಕಲಂನ 9ರಂತೆ ಡಿಸೆಂಬರ್ 20, 2004ರ ಹಿಂದಿನ ಮಾರಾಟ, ಪರಭಾರೆ ಇತ್ಯಾದಿಗೆ ನೀವು ಭಯಪಡುವ ಅಗತ್ಯವಿಲ್ಲ.
ಈಗ ಸ್ಟಾಂಪ್ವೆಂಡರ್ ಕೆಲಸ ಮಾಡುವಂತಿಲ್ಲ
ವಿ.ಜಿ. ಕಾಶಿನಾಥ, ಕೂಡ್ಲಿಗೆ, ಬಳ್ಳಾರಿ ಜಿಲ್ಲೆ
ಸ್ಟಾಂಪ್ವೆಂಡರ್ ಆಗಲು ಯಾವ ಪರೀಕ್ಷೆ ಪಾಸು ಮಾಡಬೇಕು? ಯಾರು ಲೈಸನ್ಸ್ ನೀಡುತ್ತಾರೆ?
- ಕರ್ನಾಟಕ ಡೀಡ್ ರೈಟರ್ಸ್ ಪರವಾನಗಿ ಕಾನೂನಿನಂತೆ ಪ್ರತಿ ಜಿಲ್ಲೆಯ ಜಿಲ್ಲಾ ರಿಜಿಸ್ಟ್ರಾರ್ ಅವರು ಡೀಡ್ ರೈಟರ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಲೈಸನ್ಸ್ ಕೊಡುತ್ತಾರೆ. ಈಗ ಸ್ಟಾಂಪ್ವೆಂಡರ್ ಆಗಿ ಯಾರೂ ಕೆಲಸ ಮಾಡುವಂತಿಲ್ಲ.
-ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

