ಡಿಬಿಸಿ ನ್ಯೂಸ್! ಸಂಧಾನಮೂರ್ತಿ ಚಂದ್ರೇಗೌಡ

ರಾಜಕೀಯ ಹಲ್ಲಾಹಲ್ಲಿಯಲ್ಲಿ ದುಷ್ಟರಾರು- ಶಿಷ್ಯರಾರು ಎನ್ನುವ ಪ್ರಶ್ನೆ ಸಾರ್ವಜನಿಕ ವ್ಯವಹಾರಗಳ ಆಸಕ್ತರನ್ನು ಕಾಡಿರುವ ಸಮಯದಲ್ಲೇ ಹಲವು ಪಕ್ಷಗಳನ್ನು ಸೇರಿ- ಬಿಟ್ಟು,...
ಡಿಬಿಸಿ ನ್ಯೂಸ್! ಸಂಧಾನಮೂರ್ತಿ ಚಂದ್ರೇಗೌಡ
Updated on: 

ರಾಜಕೀಯ ಹಲ್ಲಾಹಲ್ಲಿಯಲ್ಲಿ ದುಷ್ಟರಾರು- ಶಿಷ್ಯರಾರು ಎನ್ನುವ ಪ್ರಶ್ನೆ ಸಾರ್ವಜನಿಕ ವ್ಯವಹಾರಗಳ ಆಸಕ್ತರನ್ನು ಕಾಡಿರುವ ಸಮಯದಲ್ಲೇ ಹಲವು ಪಕ್ಷಗಳನ್ನು ಸೇರಿ- ಬಿಟ್ಟು, ನಾಯಕರ ಜತೆ ವಿಪರೀತ ಸ್ನೇಹದಿಂದಿದ್ದು, ಕೆಲವರ ಜತೆ ಜಗಳವಾಡಿದರೂ, ಇದರಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವುದನ್ನು ಪ್ರದರ್ಶಿಸಿರುವ ಹಿರಿಯ ರಾಜಕಾರಣಿ ದಾದರಹಳ್ಳಿ ಬೈರೇಗೌಡ- ಚಂದ್ರೇಗೌಡ ಅವರು ಈಗ ಬಿಜೆಪಿಯಲ್ಲಿ ಸಂಧಾನದ ಧೂತರ ಅವತಾರವನ್ನು ಎತ್ತಿ ಮುಂದೆ ಬಂದಿದ್ದಾರೆ.
ರಾಜಕೀಯ ಜೀವನದಲ್ಲಿ ಚಂದ್ರೇಗೌಡರು ಸೋಲನ್ನು ಸುಲಭವಾಗಿ ಒಪ್ಪುವವರಲ್ಲ. ಅವರಿಗೆ ಚುನಾವಣೆಯಲ್ಲಿ ಸೋಲುವುದೂ ಗೊತ್ತು, ಗೆಲ್ಲುವುದೂ ಗೊತ್ತು.
ಅವರ ಊರು ಮನೆಯಾದ ದಾದರಹಳ್ಳಿ ಇರುವುದು ನಿಸರ್ಗದ ಗರ್ಭದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ. ಅವರ ಹೆಸರಿನ ಹಿಂದೆ ಬೇಕಾದರೆ 'ಕಾಫಿ ಪ್ಲಾಂಟರ್‌' ಎನ್ನುವುದನ್ನು ಸೇರಿಸಬಹುದು. ಅಷ್ಟು ಹೇಳಿಕೊಳ್ಳುವಷ್ಟು ತೋಟ ಗದ್ದೆ ಇದೆ.
ಆದರೆ ಅವರ ರಾಜಕೀಯದಲ್ಲಿ ಮೊದಲಿನಿಂದಲೂ ತಮ್ಮ ಕ್ಷೇತ್ರವಾದ ಮೂಡಿಗೆರೆಯ ವಿಧಾನಸಭೆ ಕ್ಷೇತ್ರವನ್ನು ಬಿಡಬೇಕಾಗಿತ್ತು. ಅದು ಕರ್ನಾಟಕದ ಶಾಶ್ವತ ಮೀಸಲು ಕ್ಷೇತ್ರಗಳಲ್ಲಿ ಒಂದು.
ಚಂದ್ರೇಗೌಡರು ಬೆಂಗಳೂರು- ಬೆಳಗಾವಿಯಲ್ಲಿ ಶಿಕ್ಷಣ ಮುಗಿಸಿ, ವಕೀಲಿಯ ಕಪ್ಪು ಕೋಟನ್ನು ಧರಿಸಿದ್ದರೂ ರಾಜಕೀಯಾಸಕ್ತರೇ. ಅವರು ವಕೀಲಿ ಮಾಡಿದ್ದು ಕಡಿಮೆ. ರಾಜಕೀಯವೇ ಹೆಚ್ಚು.
ರಾಜಕೀಯದಲ್ಲಿ ಗೌಡರು ಘಟಾನುಘಟಿಗಳ ಸಂಗಾತಿಯಂತೆ ಕೆಲಸ ಮಾಡಿದ್ದಾರೆ, ಪ್ರಬಲ ಪ್ರತಿಷ್ಠಿತರ ವಿರುದ್ಧ ಜಗಳವಾಡುತ್ತಲೂ ರಾಜಕೀಯ ಮಾಡಿದ್ದಾರೆ. ವಿಧಾನ ಪರಿಷತ್ತು, ವಿಧಾನಸಭೆಗಳೆರಡರಲ್ಲೂ ವಿರೋಧ ಪಕ್ಷದ ನಾಯಕರಾಗಿದ್ದವರು. ವಿಧಾನಸಭೆ ಸ್ಪೀಕರ್ ಆಗಿದ್ದರು. ಮಂತ್ರಿಯೂ ಆಗಿದ್ದರು.
ಅವರಿಗೀಗ 77 ವಯಸ್ಸು. ಇದು ಬಾಳ ಸಂಜೆ. ಆದರೆ ಅವರಲ್ಲಿ ಇನ್ನೂ ತಾರುಣ್ಯದ ಉತ್ಸಾಹವಿದೆ. ಪ್ರಜಾಸೋಷಲಿಸ್ಟ್ ಪಾರ್ಟಿ, ಇಂದಿರಾ ಕಾಂಗ್ರೆಸ್, ಕ್ರಾಂತಿರಂಗ, ಜನತಾ ದಳಗಳಲ್ಲಿ ಪ್ರಾತಿನಿಧಿಕ ಸ್ಥಾನಗಳನ್ನು ಪಡೆದು, ತರ್ಕಬದ್ಧ, ಶುಚಿತ್ವದ ಚಿಂತನೆಯ ಆಧರಿತ ವಾಗ್ಮಿತೆಯನ್ನು ಪ್ರದರ್ಶಿಸಿದ್ದರೂ, ಅವರು ರಾಜಕೀಯದಲ್ಲಿ ನಿಜವಾಗಲೂ ಮಿಂಚಿದ್ದು ಸಂಧಾನದಲ್ಲಿ. ಎಲ್ಲ ಪಕ್ಷಗಳಲ್ಲೂ ಅವರ ಅಭಿಮಾನಿಗಳಿದ್ದಾರೆ. ಶತ್ರುಗಳಿಲ್ಲ. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ವಿರೋಧಿಗಳಿರಬಹುದಷ್ಟೇ.
1971ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನಿಂದ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ 35ರ ಯುವಕ ಚಂದ್ರೇಗೌಡರು, ಪ್ರಾಯಶಃ ಅಗ ತಾನೆ ಖಾದಿ ಧರಿಸಲಾರಂಭಿಸಿದ್ದರು. ಅಲ್ಲಿಯವರೆಗೂ ಅವರ ಜತೆಗಾರರು ಮಲೆನಾಡಿನ ಸೋಷಲಿಸ್ಟರೇ. ಆ ಚುನಾವಣೆಯ ಅನಂತರದ ಅನೇಕ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಹಲವು ಚುನಾವಣೆಗಳಲ್ಲಿ ಖಡಾಖಡಿ ಹೋರಾಟದ ಅನುಭವವೂ ಆಗಿದೆ. 1977ರ ಚುನಾವಣೆಯಲ್ಲಿ ಚಂದ್ರೇಗೌಡರು ಚಿಕ್ಕಮಗಳೂರಿನಿಂದ ಲೋಕಸಭೆಗೆ ಆರಿಸಿ ಹೋಗಿದ್ದರು. ಆ ಚುನಾವಣೆಯಲ್ಲಿ ಇಂದಿರಾ ರಾಯ್‌ಬರೈಲಿಯಲ್ಲಿ ರಾಜ್‌ನಾರಾಯಣರ ವಿರುದ್ಧ ಸೋತಿದ್ದರು. ಜನತಾ ಸರ್ಕಾರ ಅಸ್ತಿತ್ವದಲ್ಲಿ ಬಂದಿತ್ತು.
ಆಗ ಇಂದಿರಾಗಾಂಧಿ ಅವರನ್ನು ಲೋಕಸಭೆಗೆ ಕಳಿಸಲು ಕಾಂಗ್ರೆಸ್ ನಿರ್ಧರಿಸಿದಾಗ, ಕರ್ನಾಟಕದ ಮುಖ್ಯಮಂತ್ರಿ ದೇವರಾಜ ಅರಸು ಆರಿಸಿದ್ದು ಚಿಕ್ಕಮಗಳೂರು ಕ್ಷೇತ್ರವನ್ನು. ಚಂದ್ರೇಗೌಡರು ಆ ಕ್ಷೇತ್ರವನ್ನು ಖಾಲಿ ಮಾಡಿಕೊಡಬೇಕಾಯಿತು. ಸಂತೋಷದಿಂದಲೇ ಆ ಕೆಲಸ ಮಾಡಿ ಪ್ರಚಾರ ರಥವನ್ನೂ ಓಡಿಸಿದರು.
ಅವರಿಗೆ ಅಧಿಕಾರಸ್ಥ ರಾಜಕಾರಣದ ಸ್ಥಾನ ಸಿಕ್ಕಿದ್ದು ಅದರ ಅನಂತರವೇ. ವಿಧಾನಪರಿಷತ್ತಿಗೆ ಆಯ್ಕೆಯಾದರು. ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲೇ ಮಂತ್ರಿಯಾದರು. ಅನಂತರ ಕಾಂಗ್ರೆಸ್ ಮತ್ತೆ ಹೋಳಾದಾಗ, ಅರಸು ಪಾಳೆಯದಲ್ಲೇ ಉಳಿದು ಮುಂದೆ ಜನತಾ ಪರಿವಾರದತ್ತ ವಾಲಿದರು.
ಕರ್ನಾಟಕ ಕಂಡ ಬಹುದೊಡ್ಡ ರೈತ ಹೋರಾಟದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ನರಗುಂದದಿಂದ ಬೆಂಗಳೂರಿನವರೆಗಿನ ಮಹಾಪಾದಯಾತ್ರೆ ನಡೆದಾಗ, ಚಂದ್ರೇಗೌಡರು ಅರಸು ಕಾಂಗ್ರೆಸ್ಸಿನ ಪ್ರದೇಶ ಸಮಿತಿಯ  ಅಧ್ಯಕ್ಷರು. ಅವರು ಆ ಪಾದಯಾತ್ರೆಯಲ್ಲಿ ಪೂರ್ತಿ ಪಾಲುಗೊಳ್ಳಲಿಲ್ಲ ಎನ್ನುವುದು ನಿಜ. ಆದರೆ ಆಗೀಗ ಪಾಲುಗೊಂಡು ಹೋರಾಟಗಾರರಿಗೆ, ಅವರ ಜತೆ ರಾಜಕೀಯ ನಾಯಕರೂ ಇರುವ ಭರವಸೆಯನ್ನು ಮೂಡಿಸಿದರು.
ಮತ್ತೆ ಪಕ್ಷದ ಬದಲಾವಣೆ, ಕ್ಷೇತ್ರದ ಬದಲಾವಣೆ. 1983ರ ನಿರ್ಣಾಯಕವಾದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರೇಗೌಡರು ಆರಿಸಿಕೊಂಡಿದ್ದು ತೀರ್ಥಹಳ್ಳಿ ಕ್ಷೇತ್ರವನ್ನು. ಗೆದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಚಂದ್ರೇಗೌಡರು ಸ್ಪೀಕರ್. ಮತ್ತೆ ಕ್ಷೇತ್ರ ಬದಲಾವಣೆ. ಶೃಂಗೇರಿಯಲ್ಲಿ ನಿಂತರು. ಗೆದ್ದರು. ಆ ವೇಳೆಗೆ ಚಂದ್ರೇಗೌಡರು ಕಾಂಗ್ರೆಸ್ಸಿಗೆ ಮರಳಿದ್ದರು. 1999-2004ರ ಅವಧಿಯಲ್ಲಿ ಗೌಡರು ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಕಾನೂನು ಮಂತ್ರಿ.
ಪ್ರಾಯಶಃ ಆ ಅವಧಿಯೇ ಅವರ ಅಧಿಕಾರಸ್ಥ ರಾಜಕಾರಣದ ಸುವರ್ಣ ದಿನಗಳಾಗಿತ್ತು. ಅನಂತರದ ದಿನಗಳಲ್ಲಿ ರಾಜಕೀಯದಲ್ಲಿ ಅವರು ಮುಂಕಾಗಿದ್ದು ನಿಜ. ಅವರಿಗೆ ರಾಜಕೀಯವಾಗಿ ಮರುಹುಟ್ಟು ನೀಡಿದ್ದು ಬಿಜೆಪಿ ನಾಯಕ ಯಡಿಯೂರಪ್ಪ. ಅದುವರೆಗೂ ಸಂಘ ಪರಿವಾರದ ಸಂಪರ್ಕವೇ ಇಲ್ಲದಿದ್ದ ಚಂದ್ರೇಗೌಡರನ್ನು ಬಿಜೆಪಿಗೆ ಕರೆದುತಂದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ರೇಲ್ವೆ ಮಂತ್ರಿ ಸಿ.ಕೆ. ಜಾಫರ್ ಷರೀಫ್ ಅವರ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದರು.
ನಿಜ ಜೀವನದಲ್ಲಿ ಸಿ.ಕೆ. ಜಾಫರ್ ಷರೀಫ್, ಚಂದ್ರೇಗೌಡರ ಆತ್ಮೀಯ ಮಿತ್ರ. 1971ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಪರವಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ದೆಹಲಿಗೆ ಒಟ್ಟಿಗೇ ಹೋದವರು. ಅನಂತರದ ದಿನಗಳಲ್ಲಿ ಹೆಚ್ಚು ಕಡಿಮೆ ಪ್ರತಿವಾರ ಇಬ್ಬರೂ ದೆಹಲಿಯಿಂದ ಬೆಂಗಳೂರಿಗೆ ಒಟ್ಟಿಗೇ ಬರುತ್ತಿದ್ದರು. ಹಲವು ಹತ್ತು ಪತ್ರಿಕಾಗೋಷ್ಠಿಗಳನ್ನು ಅವರು ಒಟ್ಟಿಗೆ ನಡೆಸಿದ್ದಾರೆ. ಉತ್ತರ ಬೆಂಗಳೂರು ಕ್ಷೇತ್ರದ ಚಂದ್ರೇಗೌಡ- ಜಾಫರ್ ಷರೀಫ್ ಸ್ಪರ್ಧೆಯಲ್ಲಿ ಚಂದ್ರೇಗೌಡರು ಗೆದ್ದರು.
ಬಿಜೆಪಿಯಲ್ಲಿ ಚಂದ್ರೇಗೌಡರು ಸಹಜವಾಗಿಯೇ ಯಡಿಯೂರಪ್ಪ ಅವರ ಪರವಾಗಿದ್ದ ರಾಜಕಾರಣಿ. ಆದರೆ ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಸ್ಥಾಪಿಸಿದಾಗ, ಚಂದ್ರೇಗೌಡರು ಬಿಜೆಪಿಯಲ್ಲೇ ಉಳಿದರು. ಈಗಲೂ ಬಿಜೆಪಿಯಲ್ಲಿ ಚಂದ್ರೇಗೌಡರು ಗೌರವಾನ್ವಿತ ನಾಯಕರೇ. ಪಕ್ಷದಲ್ಲಿ ಯಡಿಯೂರಪ್ಪ ಅವರಿಲ್ಲದೇ ಹೋದರೆ, ಚುನಾವಣೆಯಲ್ಲಿ ಗೆಲ್ಲುವ ಸಂದರ್ಭ ಕಡಿಮೆ ಎನ್ನುವುದನ್ನು ಅವರೂ ಬಲ್ಲರು. ಚಂದ್ರೇಗೌಡರು ಬಿಜೆಪಿಯ ಗುಂಪು ಜಗಳದಲ್ಲಿ ಯಾವ ಗುಂಪಿನ ಜತೆಯಲ್ಲೂ ಗುರ್ತಿಸಿಕೊಳ್ಳಲಿಲ್ಲ. ಆ ರಾಜಕೀಯದತ್ತ ಗಮನವನ್ನೇ ಹರಿಸಿರಲಿಲ್ಲ.
ಪ್ರಾಯಶಃ ಆ ಕಾರಣಕ್ಕಾಗಿಯೇ ಪಕ್ಷದಲ್ಲಿ ಅನೇಕರು ಈಗ ಕರ್ನಾಟಕ ಬಿಜೆಪಿಯ ಎರಡು ಗುಂಪುಗಳ ನಡುವೆ ಯಾವಾಗಲಾದರೂ ಸಂಧಾನ ನಡೆಯುವುದಿದ್ದರೆ, ಆಗ ನಿಜವಾದ ಅರ್ಥದಲ್ಲಿ ಮಧ್ಯಸ್ಥಿಕೆದಾರರಾಗಬಲ್ಲ ಏಕೈಕ ವ್ಯಕ್ತಿ ಬಿಜೆಪಿಗೆ ಹೊರಗಿನಿಂದ ಬಂದ ಚಂದ್ರೇಗೌಡರೇ.
ಚಂದ್ರೇಗೌಡರು ಈಗ ಬಿಜೆಪಿಯಲ್ಲಿ ಯಾರ ಜತೆ ಬೇಕಾದರೂ ಮಾತುಕತೆ ನಡೆಸಬಹುದು. ಆ ಸ್ಥಿತಿಯಲ್ಲಿ ಅವರಿದ್ದಾರೆ. ಆದರೆ ಅದಕ್ಕೆ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಒಪ್ಪಬೇಕು. ಆ ಕಾಲ ಬರುತ್ತೋ ಇಲ್ಲವೋ ಗೊತ್ತಿಲ್ಲ. ಕಾಲ ಕೂಡಿ ಬಂದರೆ ಚಂದ್ರೇಗೌಡರಂತೂ ರೆಡಿ.


-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com