ಹೀಗೊಂದು ಮಹಾಯಾತ್ರೆ ಸಿ.ಕೆ. ಜಾಫರ್ ಷರೀಫ್

ಮಾಜಿ ಕೇಂದ್ರ ಮಂತ್ರಿ, ನಿಷ್ಠಾವಂತ ಕಾಂಗ್ರೆಸ್ ನಾಯಕ ಸಿ.ಕೆ. ಜಾಫರ್ ಷರೀಫ್ ಕೆಲವು ವರ್ಷಗಳ ವಿರಾಮದ ಅನಂತರ ಮತ್ತೆ ತಮ್ಮ....
ಹೀಗೊಂದು ಮಹಾಯಾತ್ರೆ ಸಿ.ಕೆ. ಜಾಫರ್ ಷರೀಫ್
Updated on: 

ಮಾಜಿ ಕೇಂದ್ರ ಮಂತ್ರಿ, ನಿಷ್ಠಾವಂತ ಕಾಂಗ್ರೆಸ್ ನಾಯಕ ಸಿ.ಕೆ. ಜಾಫರ್ ಷರೀಫ್ ಕೆಲವು ವರ್ಷಗಳ ವಿರಾಮದ ಅನಂತರ ಮತ್ತೆ ತಮ್ಮ ಇಳಿವಯಸ್ಸಿನಲ್ಲಿ ಸಕ್ರಿಯ ರಾಜಕಾರಣದಲ್ಲಿ ಪಾಲುಗೊಳ್ಳಲು ಅಪೇಕ್ಷಿಸಿದ್ದಾರೆ.
ಈ ನವೆಂಬರ್‌ಗೆ ಜಾಫರ್ ಷರೀಫ್ ಎಂಬತ್ತರ ಗಡಿ ದಾಟಲಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯ ಸಕ್ರಿಯ, ಚುನಾವಣೆ ಜಂಜಾಟದ ರಾಜಕೀಯದ ನಂತರವೂ 7 ಬಾರಿ ಲೋಕಸಭೆ ಸದಸ್ಯರಾಗಿ, ರೇಲ್ವೆ ಮಂತ್ರಿಯಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮಿಂಚಿದ್ದ ಜಾಫರ್ ಷರೀಫ್, ಈಗ ಮತ್ತೆ ವಿಧಾನ ಸಭೆ ಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿರುವುದರ ಹಿನ್ನಲೆ ಏನು?
ರಾಜಕಾರಣ, ಅದರಲ್ಲೂ ಸಕ್ರಿಯ ರಾಜಕಾರಣ ಒಂದು ಚಟ. ಒಮ್ಮೆ ಅದನ್ನು ಅಂಟಿಸಿಕೊಂಡರೆ ಅದರಿಂದ ಮುಕ್ತಿ ಸಿಗುವುದು, ದೈಹಿಕವಾಗಿ ನಿಷ್ಕ್ರಿಯರೆನಿಸಿದಾಗಲೇ ಎನ್ನುವ ಮಾತಿದೆ. ಅದಕ್ಕೆ ಜಾಫರ್ ಷರೀಫ್ ಹೊರತೇನೂ ಅಲ್ಲ ಇಷ್ಟಕ್ಕೂ ಅವರು 4 ವರ್ಷಗಳ ಹಿಂದೆ ಉತ್ತರ ಬೆಂಗಳೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಅವರ ದೀರ್ಘ ಕಾಲದ ಮಿತ್ರ ಡಿ.ಬಿ. ಚಂದ್ರೇಗೌಡರ ವಿರುದ್ಧ ಸೋತಿದ್ದವರು. ಆಗ ರಾಜಕೀಯದಿಂದ ನಿವೃತ್ತಿಯ ಮಾತನ್ನೇ ಆಡಿರಲಿಲ್ಲ.
ಅದಕ್ಕೇನೂ ಅವರು ಕಾರಣ ಕೊಡಬೇಕಾಗಿಲ್ಲ. ಆದರೆ ಸಮಕಾಲೀನ ಕರ್ನಾಟಕದ ರಾಜಕೀಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸಕ್ರಿಯ ಪಾತ್ರ ಕಡಿಮೆಯಾಗಿರುವುದು, ಆ ಸಮುದಾಯದಲ್ಲಿ ಪ್ರಭಾವಶಾಲಿ ನಾಯಕರು ಈಗ ಕಾಣಿಸಿಕೊಳ್ಳದೇ ಇರುವುದೇ ಇದಕ್ಕೆ ಕಾರಣ ಇದ್ದರೂ ಇರಬಹುದು.
ಅದಕ್ಕಿಂತಲೂ ಹೆಚ್ಚಾಗಿ, ಪಕ್ಷಾಂತರದ ರಾಜಕೀಯ ತನ್ನ ವಿಧವಿಧವಾದ ಮುಖಗಳ ಮೂಲಕ ವಿಜೃಂಬಿಸಿ, ಪಕ್ಷ ರಾಜಕೀಯವೇ ಗಜಿಬಿಜಿಯ ಅವಸ್ಥೆಯಲ್ಲಿ ಸಿಕ್ಕಿ ಬಿದ್ದಿರುವಾಗ, ಅದನ್ನು ಸುಧಾರಿಸುವ ಬಯಕೆಯೂ ಇರಬಹುದು.
ಇಂದಿಗೂ ಜಾಫರ್ ಷರೀಫ್ ರಾಜಕೀಯ ವಿಚಾರಗಳಲ್ಲಿ ಸಕ್ರಿಯವಾದ ಆಸಕ್ತಿಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಬೇಕಾದ ಕಸುವನ್ನೂ ಪಡೆದಿದ್ದಾರೆ. ಕಾಂಗ್ರೆಸ್ ಕರೆದಾಗಲೆಲ್ಲಾ ಸಭೆಗೆ ಬರ್ತಾರೆ.
ಈಗಿನ ತಲೆಮಾರುಗಳ ಜನರಿಗೆ, ದಶಕಗಳ ಹಿಂದೆ, ಚಳ್ಳಕೆರೆಯಿಂದ ಸಂಸಾರ ಸಮೇತರಾಗಿ ಬೆಂಗಳೂರಿಗೆ ಬಂದು, ಒಂದು ಜಟಕಾ ಗಾಡಿಯಲ್ಲಿ ತುಂಬಬಹುದಾದಷ್ಟೇ ಸಾಮಾನನ್ನು ತುಳಸಿ ತೋಟದ ತೋಟದಪ್ಪ ಛತ್ರದಲ್ಲಿ ಹಾಕಿ, ಕಾಂಗ್ರೆಸ್ ಕಾರ್ಯಾಲಯದತ್ತ ಗೊತ್ತು ಗುರಿ ಇಲ್ಲದೇ ಕಾಲು ಹಾಕಿದ ಜಾಫರ್ ಕೇಂದ್ರದಲ್ಲಿ ಮಂತ್ರಿಯಾಗಿ, ದೊಡ್ಡ ಹೆಸರು ಗಳಿಸಿ, ಜನಾಬ್ ಅಲ್‌ಹಾಜ್ ಸಿ.ಕೆ. ಜಾಫರ್ ಷರೀಫ್ ಸಾಹೇಬ್ ಆಗಿ ಪರಿವರ್ತನೆ ಹೊಂದಿದ ಮಹಾಯಾತ್ರೆಯ ಪರಿಚಯವಿರಲಿಕ್ಕಿಲ್ಲ.
ಇತ್ತೀಚಿನ ದಿನಗಳಲ್ಲಿ ಜಾಫರ್ ಷರೀಫ್ ಸಾರ್ವಜನಿಕ ಸಭೆ- ಸಮಾರಂಭಗಳಲ್ಲಿ ಕಾಣಸಿಕೊಳ್ಳುತ್ತಿಲ್ಲ. ಎರಡು ಬಾರಿ ಹೃದಯದ ಶಸ್ತ್ರ ಚಿಕಿತ್ಸೆಯಾಗಿದೆ. ಮೊದಲಿನಿಂದಲೂ ಬೆನ್ನು ನೋವಿತ್ತು. ಈಗ ಸ್ವಲ್ಪ ಬಾಗಿದ್ದಾರೆ. ಆದರೂ ಅವರ ಉತ್ಸಾಹ ಕುಗ್ಗಿಲ್ಲ. ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದೇ ತಮ್ಮ ಮೊದಲ ಆಧ್ಯತೆ ಎಂದು ಈಗಲೂ ಸಾರುತ್ತಾರೆ.
ಕಾಂಗ್ರೆಸ್ಸಿನ ಅವರ ಪೂರ್ವಾಶ್ರಮದ ಜೀವನ ಕುರಿತು ಹತ್ತು ಹಲವು ದಂತಕತೆ- ಉಪಕತೆಗಳಿವೆ. ಕಾರ್ಯಾಲಯದಲ್ಲಿ ಬಂದವರಿಗೆ ಕಾಫಿ- ತಿಂಡಿ ತಂದು ಕೊಡುತ್ತಿದ್ದವರೆನ್ನುವ ಪ್ರಚಾರವೂ ಆಗಿತ್ತು. ಅದೆಲ್ಲ ಅಪಪ್ರಚಾರ, ಸುಳ್ಳು. ನಿಜಲಿಂಗಪ್ಪ ಅವರ ಕಾಲದಿಂದಲೂ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಯಾವಾಗಲು ಕಾಣಿಸಿಕೊಳ್ಳುತ್ತಿದ್ದ ಜಾಫರ್ ಷರೀಫ್ ಒಂದು ರೀತಿಯಲ್ಲಿ ಕಾರ್ಯಾಲಯದ ಅಘೋಷಿತ 'ಸ್ವಯಂಸೇವಕ'. ಅಲ್ಲಿ ಅವರು ಮಾಡದೇ ಇರುವ ಕೆಲಸವೇ ಇರಲಿಲ್ಲ. ಹಾಗೆಂದು ಅವರನ್ನು ನಾಯಕರು ಹೀನಾಯವಾಗಿ ನೋಡಿಕೊಳ್ಳುತ್ತಲೂ ಇರಲಿಲ್ಲ. ಆಗಿನ ಎಲ್ಲ ನಾಯಕರಿಗೂ ಕಾರ್ಯಾಲಯದ ವ್ಯವಹಾರದಲ್ಲಿ ಜಾಫರ್ ಷರೀಫ್ ವಿಚಾರದಲ್ಲಿ ವಿಶ್ವಾಸವೂ ಇತ್ತು, ನಂಬಿಕೆಯೂ ಇತ್ತು ಗೌರವವೂ ಇತ್ತು.
1969ರ ಕಾಂಗ್ರೆಸ್ ವಿಭಜನೆಯ ಅನಂತರ ಜಾಫರ್ ಷರೀಫ್ ಸಕ್ರಿಯ- ಜನಪ್ರಾತಿನಿಧಿಕ ರಾಜಕೀಯದಲ್ಲಿ ಗಣ್ಯ ವ್ಯಕ್ತಿಯಾದರು. ಇಂದಿರಾ ಕಾಂಗ್ರೆಸ್ಸಿನಲ್ಲಿ ನಿಷ್ಠೆಯನ್ನಿಟ್ಟರು. ಈಗಲೂ ಅವರ ನಿಷ್ಠೆ ಕಾಂಗ್ರೆಸ್ಸಿಗೇ. 1971ರಲ್ಲಿ ಇಂದಿರಾ ಗಾಂಧಿ ವೈಯಕ್ತಿಕ ಆಸಕ್ತಿ ವಹಿಸಿ, ಜಾಫರ್ ಷರೀಫ್ ಅವರನ್ನು ಪಕ್ಷದ ಕನಕಪುರ ಕ್ಷೇತ್ರದ ಅಭ್ಯರ್ಥಿಯಾಗಿ ಆರಿಸಿದಾಗ, ಮೇಲೇರಿದ ಹುಬ್ಬುಗಳು ಕೆಳಗಿಳಿಯಲು ಬಹುಕಾಲ ಬೇಕಾಯಿತು.
ಆಗ ಕನಕಪುರದಲ್ಲಿ ಮಹಾ ಮೈತ್ರಿಕೂಟದ ಅಭ್ಯರ್ಥಿ, ನಿಜಲಿಂಗಪ್ಪ ಅವರ ಅಳಿಯ ಎಂ.ವಿ. ರಾಜಶೇಖರನ್. ಅಲ್ಲಿ ಷರೀಫ್ ಗೆಲ್ಲುವುದು ಅಸಾಧ್ಯವೆಂದೇ ಎಲ್ಲರೂ ತಿಳಿದಿದ್ದರು. ಆದರೆ ಆ ಕ್ಷೇತ್ರದಲ್ಲಿನ ಪ್ರಭಾವಿ ಮತದಾರ ವರ್ಗದ ಒಕ್ಕಲಿಗರ ಬೆಂಬಲ ಷರೀಫ್ ಅವರಿಗೆ ಸಿಕ್ಕಿತ್ತು. ಬೆಂಗಳೂರು ನಗರ, ಹೊಸಕೋಟೆ, ಮಂಡ್ಯದಲ್ಲೆಲ್ಲ ಒಕ್ಕಲಿಗರೇ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾಗ, ಒಕ್ಕಲಿಗರು ಜಾಫರ್ ಷರೀಫರನ್ನು ಕಡೆಗಾಣಿಸಿದರೆ, ಅಲ್ಪಸಂಖ್ಯಾತರು ಎಲ್ಲಿ ತಮ್ಮ ವಿರುದ್ಧವೇ ತಿರುಗಿ ಬೀಳುತ್ತಾರೋ ಎನ್ನುವ ಭೀತಿ, ಷರೀಫರನ್ನು ಕಾಪಾಡಿತು.
ಅನಂತರ ಷರೀಫ್ ಹಿಂತಿರುಗಿ ನೋಡಲಿಲ್ಲ. ದೆಹಲಿಯ ಯಶಪಾಲ ಕಪೂರ್‌ರಂಥ ಸಾನಿಧ್ಯದಲ್ಲಿ ನಿಜ ರಾಜಕೀಯದ ತಂತ್ರಗಳನ್ನು ಕರತಲಾಮಲಕ ಮಾಡಿಕೊಂಡರು. ಮುಂದಿನದ್ದೆಲ್ಲ ಪ್ರಕಟವಾಗಿರುವ ಇತಿಹಾಸವೇ.
ರೇಲ್ವೆಯ ಸಹಾಯಕ ಮಂತ್ರಿಯಾದರು. ಉತ್ತರ ಬೆಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಇನ್ನೊಬ್ಬ ಮುಖ್ಯಮಂತ್ರಿ ದೇವರಾಜ ಅರಸರ ಅಳಿಯ ಡಾ೤ ಎಂ.ಡಿ. ನಟರಾಜ್ ಅವರನ್ನು ಸೋಲಿಸಿದರು. ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ಸಿನ ಪ್ರಮುಖ ವಕ್ತಾರ ಎನಿಸಿಕೊಂಡರು.
ನರಸಿಂಹರಾಯರ ಕಾಲದಲ್ಲಿ ರೇಲ್ವೆ ಮಂತ್ರಿ. ಇಡೀ ದೇಶದಲ್ಲಿ ಒಂದೇ ಗೇಜ್ (ಬ್ರಾಡ್ ಗೇಜ್) ಇರಬೇಕೆಂದು ಪ್ರತಿಪಾದಿಸಿ, ಅದನ್ನು ಜಾರಿಗೆ ತರಲು ಯತ್ನಿಸಿದರು. ಹಲವು ಭ್ರಷ್ಟಾಚಾರದ ಆರೋಪಗಳನ್ನು ಹೊರಬೇಕಾಯಿತು. ಎಲ್ಲವನ್ನೂ ಎದುರಿಸಿದರು. ಅತ್ಯುನ್ನತ ಮಟ್ಟದ ರಾಜಕೀಯದಲ್ಲಿ ಪರಮ ಪವಿತ್ರರೆನಿಸಿದವರ ಕಾಲೂ ಕೆಸರೇ ಎನ್ನುವುದನ್ನು ಮನಗಂಡರು. ಕರ್ನಾಟಕಕ್ಕೆ ರೇಲ್ವೆ ಅಭಿವೃದ್ಧಿಯ ವಿಚಾರದಲ್ಲಿ ಜಾಫರ್ ಷರೀಫ್ ಹರಿಕಾರರೇ ಎನ್ನಬಹುದು. ಎಚ್.ಸಿ. ದಾಸಪ್ಪ, ಕೆಂಗಲ್ ಹನುಮಂತಯ್ಯ, ಸಿ.ಎಂ. ಪೂಣಚ್ಚ ಅವರ್ಯಾರೂ ಮಾಡದೇ ಇರುವಷ್ಟು ಕೆಲಸವನ್ನು ಮಾಡಿದರು.
ಬಡವರಿಗೆ ನೆರವಾಗಲು ಷರೀಫ್ ನಿರಂತರವಾಗಿ ಎಚ್ಚರದಿಂದಿರುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ವಿಪರೀತ ಮಳೆ ಬಿದ್ದು ಮಿಲ್ಲರ್ ಟ್ಯಾಂಕ್ ಪ್ರದೇಶದ ನಿವಾಸಿಗಳೆಲ್ಲ ಅಕ್ಷರಶಃ- ವಸ್ತುಶಃ ಬೀದಿ ಪಾಲಾದಾಗ, ಷರೀಫ್ ಕಲ್ಲಿದ್ದಲು ಮಂತ್ರಿ. ಕೋಲ್ ಇಂಡಿಯಾ ಲಿಮಿಟೆಡ್ ಮೂಲಕ ಸಂತ್ರಸ್ತರಿಗೆ ರಾತ್ರೋ ರಾತ್ರಿ ಪುನರ್ ವಸತಿಯ ವ್ಯವಸ್ಥೆ ಮಾಡಿದರು. ಆ ವಿಚಾರವೇ ಒಂದು ದೊಡ್ಡ ವಿವಾದಕ್ಕೆ ಗ್ರಾಸವನ್ನು ಒದಗಿಸಿತ್ತು. ಕೋಲ್ ಇಂಡಿಯಾ ಅಲ್ಲ, ಕಲ್ಲಿದ್ದಲ ಗಣಿ ಕಾರ್ಮಿಕರ ಸಂಘಟನೆಯ ನೆರವು ಅದು ಎನ್ನುವ ವಿವರಣೆ ಹೊರಬಿತ್ತು. ಆ ವಿವಾದ ಹೇಗಾದರೂ ಇರಲಿ ಕನಿಷ್ಠ ಸಾವಿರ ಬಡ ಸಂಸಾರಗಳಿಗೆ ರಕ್ಷಣೆ ನೀಡಿದ ಕೆಲಸ ಅದು.
ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ, ಅವರಿಗೆ ಅನಾರೋಗ್ಯವಾಗಿತ್ತು. ಆ ಸಮಯದಲ್ಲೇ ರಾಮನಗರ, ಚನ್ನಪಟ್ಟಣ, ಮೈಸೂರು, ದಾವಣಗೆರೆಗಳಲ್ಲಿ ಕೋಮು ಗಲಭೆ ಗೊಂದಲಗಳು ನಡೆದವು. ಒಂದು ರೀತಿಯಲ್ಲಿ ಆಗ ಸರ್ಕಾರಕ್ಕೇ ಲಕ್ವ ಹೊಡೆದಿತ್ತು. ಆಗ ಧ್ವನಿ ಎತ್ತಿದವರು ಜಾಫರ್ ಷರೀಫ್ ಒಬ್ಬರೇ. ವೀರೇಂದ್ರ ಪಾಟೀಲರ ನಂತರ ಬಂಗಾರಪ್ಪ, ಆಮೇಲೆ ವೀರಪ್ಪ ಮೊಯಿಲಿ ಮುಖ್ಯಮಂತ್ರಿಗಳಾದರು. ಆ ಕಾಲದಲ್ಲಿ ರೆವಿನ್ಯೂ ಮಂತ್ರಿಯಾಗಿದ್ದ ರಾಜಶೇಖರಮೂರ್ತಿ, ಬೆಂಗಳೂರು ಸುತ್ತಮುತ್ತ ಜಾಫರ್ ಷರೀಫರ ಭೂ ಕಬಳಿಕೆಯ ಪ್ರಕರಣಗಳನ್ನು ಕುರಿತ ಫೈಲುಗಳನ್ನೇ ಸಿದ್ಧಪಡಿಸಿದ್ದರು. ಅದೇನೂ ನಿಜವಾದ ಅರ್ಥದಲ್ಲಿ ವಿಚಾರಣೆಗೆ ಸಿಕ್ಕಿ ಬೀಳಲಿಲ್ಲ. ಜಾಫರ್ ಷರೀಫರ ಎರಡನೇ ಪುತ್ರ ಖಾದರ್ ಷರೀಫ್ ನಿಧನ ಅವರನ್ನು ಕಂಗಾಲು ಮಾಡಿತ್ತು. ಅನಂತರ ಅವರ ಪತ್ನಿಯೂ ನಿಧನರಾದರು.
ಕರ್ನಾಟಕದ ಜನರಿಗೆ ಪ್ರತಿಯೊಂದು ರೇಲ್ವೆ ಬಜೆಟ್‌ನಲ್ಲೂ ಅನ್ಯಾಯವಾಗಿದೆ ಎನ್ನುವ ಭಾವನೆ ಮೂಡಿರುವುದಕ್ಕೆ ಜಾಫರ್ ಷರೀಫರ ಕಾಲದಲ್ಲಿ ವಿಪರೀತ ನ್ಯಾಯ ಸಿಕ್ಕಿದ್ದೇ ಕಾರಣವೇ ಎಂದು ಅನೇಕರು ಈಗ ಕೇಳುತ್ತಿದ್ದಾರೆ.

-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com