ಡ್ರಾಮಾದಲ್ಲೇ ನಾಟಕ

ಕೆಲವೊಮ್ಮೆ ಜೀವನದ ಘಟನೆಗಳು ನಾಟಕದ ವಸ್ತುವಾಗುತ್ತವೆ, ಹಾಗೆಯೇ ಕೆಲವು ಸಾರಿ ಜೀವನವೇ ಒಂದು ನಾಟಕವೇನೋ ಎಂದು ಅನ್ನಿಸುತ್ತಿರುತ್ತದೆ. ಅಂತಹ ನಾಟಕದೊಳಗೊಂದು ನಾಟಕ ರೂಪಿಸುವ, visual enactment ತಂತ್ರದ ಒಂದು ವಿಶೇಷ ಪ್ರಯೋಗ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ 'ಸದ್ದು.. ವಿಚಾರಣೆ ನಡೆಯುತ್ತಿದೆ..' (ರಚನೆ: ಖ್ಯಾತ ಮರಾಠಿ ನಾಟಕಕಾರ ವಿಜಯ್ ತೆಂಡೂಲ್ಕರ್, ನಿರ್ದೇಶನ: ಮೌನೇಶ್ ಬಡಿಗೇರ್).
ಶೋಷಣೆ, ಸಾಮಾಜಿಕ ಕ್ರೌರ್ಯಕ್ಕೆ ಬಲಿಯಾಗುವ ಈ ನಾಟಕದ ನಾಯಕಿ, ನಕಲಿ ಕೋರ್ಟಿನ ನಾಟಕವೊಂದರಲ್ಲಿ ಪಾಲ್ಗೊಳ್ಳಲು ಬಂದು ಅಸಲಿ ವಿಚಾರಣೆಗೆ ತುತ್ತಾಗುತ್ತಾಳೆ. ಒಂಟಿ ಹೆಣ್ಣಿನ ವೈಯಕ್ತಿಕ ವಿಚಾರವೊಂದು ಸಮಾಜದ ಬಾಯಿಗೆ ವಸ್ತುವಾದಾಗ, ಎಲ್ಲರಿಂದಲೂ ಸಾಕ್ಷ್ಯಗಳು ಸೃಷ್ಟಿಯಾಗುತ್ತವೆ. ನಕಲಿ ಕೋರ್ಟ್ನ ಜಡ್ಜೇ ಸಾಕ್ಷ ನುಡಿದು 'ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ' ಎನ್ನುವ ಪುರುಷ ಪ್ರಧಾನ ಸಮಾಜದ ಕಟ್ಟನ್ನು ಬಿಗಿ ಮಾಡುತ್ತಾನೆ. ಇಲ್ಲಿ ನಾಟಕಕ್ಕೆ ....ತೋರಿಸಲು ಬಂದಿದ್ದ ಮುಗ್ಧ ಸಹ ಬೇರೆಯವರ ಪ್ರಭಾವಕ್ಕೆ ಒಳಗಾಗಿ ಸಾಕ್ಷಿಯ ಕಥೆ ಕಟ್ಟುತ್ತಾನೆ. ಮುಗ್ಧತೆಯು ಸನ್ನಿವೇಶದ ಪ್ರಭಾವಕ್ಕೆ ಒಳಗಾಗಿ ಸಹಜತೆ ಕಳೆದುಕೊಳ್ಳುವುದನ್ನು ನಾಟಕ ಬಹಳ ಚೆನ್ನಾಗಿ ನಿರೂಪಿಸುತ್ತದೆ.
ಲವಲವಿಕೆಯ ಅಭಿನಯ ಈ ನಾಟಕದ ಹೂರಣ. ದುರಂತ ನಾಯಕಿ ಲೀಲಾಳ ಪಾತ್ರಧಾರಿ ಅಭಿನಯ ಮನಸ್ಸಿನಲ್ಲಿ ನಿಲ್ಲುವಂಥಾದ್ದು. ನೋವು-ನಲಿವು, ಆಘಾತಗಳನ್ನು ಸ್ಪಷ್ಟ ಏರಿಳಿತದ ಧ್ವನಿಯಲ್ಲಿ ವ್ಯಕ್ತಪಡಿಸುವ ತಲ್ಲೀನತೆ ಈ ಪಾತ್ರದಲ್ಲಿತ್ತು. ಮುಗ್ಧ ಸಾವಂತನ ವ್ಯಕ್ತಿತ್ವ ರೂಪಾಂತರ ಸಹಾ ಉತ್ತಮ ಅಭಿನಯದಲ್ಲಿ ವ್ಯಕ್ತವಾಯಿತು. ಉಳಿದ ಪಾತ್ರಧಾರಿಗಳ ಅಭಿನಯ ಚೆನ್ನಾಗಿತ್ತಾದರೂ, ಸಂಭಾಷಣೆ ಹಾಗೂ ಸನ್ನಿವೇಶಗಳ ನಿರ್ವಹಣೆಯಲ್ಲಿ ಇನ್ನೂ ಪಕ್ವತೆ ಅಗತ್ಯ ಎನ್ನಿಸಿತು. ಉತ್ತಮ ಬೆಳಕಿನ ಸಂಯೋಜನೆ, ಸನ್ನಿವೇಶಕ್ಕೆ ತಕ್ಕಂತೆ ಸಂಗೀತ ನಿರ್ವಹಣೆ ನಾಟಕದ ಹೈಲೆಟ್.
ಸಮಾಜದಲ್ಲಿ ಹಾಸುಹೊಕ್ಕಾಗಿರುವ ಕ್ರೌರ್ಯ, ನಾಗರಿಕತೆಯ ಮುಖವಾಡದೊಂದಿಗೆ ಗೋಚರಿಸಿಕೊಳ್ಳುವುದರ ಮೂಲಕ ಮಾನವೀಯತೆ ಎಂಬುದು ಅವಶೇಷವಾಗಿದೆ ಎಂಬುದನ್ನು ಸಮರ್ಥವಾಗಿ ಹೇಳುವ ವಿಜಯ್ ತೆಂಡೂಲ್ಕರ್ ಅವರ ಈ ನಾಟಕ ಕನ್ನಡದ ಪ್ರಾಯೋಗಿಕ ರಂಗಭೂಮಿಗೊಂದು ಉತ್ತಮ ಕೊಡುಗೆ. ಅಭಿನಯವನ್ನೇ ಬದುಕಾಗಿಸಿಕೊಳ್ಳಲು ಹೊರಟಿರುವ ರಂಗಪ್ರಯೋಗ ಶಾಲಾ ವಿದ್ಯಾರ್ಥಿಗಳಿಗೆ, ಸಾಮಾಜಿಕ ನೆಲೆಯ ಉತ್ತಮ ನಾಟಕ ನಿರ್ಮಾಣದ ಸಾಧ್ಯತೆಗಳನ್ನು ತೆರೆದಿಡುವ ಈ ನಾಟಕ ಪ್ರೇಕ್ಷಕರ ಮನ ಗೆದ್ದಿದಂತೂ ನಿಜ.
- ಎಚ್.ಎಸ್. ನವೀನಕುಮಾರ್ ಹೊಸದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


