ಇನ್ನೊಂದು ಅವಕಾಶ? 'ಶೀಲಾ' ದರ್ಬಾರ್ '

ದೆಹಲಿಯ ಹ್ಯಾಟ್ರಿಕ್ ಮುಖ್ಯಮಂತ್ರಿ, 75 ವರ್ಷದ ಹಿರಿಯ ವ್ಯಕ್ತಿ ಶೀಲಾ ದೀಕ್ಷಿತ್ರ ತವರು ದೆಹಲಿಯೇ ಆದರೂ, ಅವರು ಯೌವನದ ದಿನಗಳನ್ನು ಕಳೆದಿದ್ದು ಉತ್ತರ ಪ್ರದೇಶದಲ್ಲಿ.
ಅವರ ಪತಿ ವಿನೋದ್ ದೀಕ್ಷಿತ್ ಐಎಎಸ್ ಅಧಿಕಾರಿ. ಅವರ ಮಾವ ಉಮಾಶಂಕರ ದೀಕ್ಷಿತ್ ಅಲಹಾಬಾದ್ನ ಆನಂದ ಭವನದ ನೆಹರೂ ಮನೆತನದ ಆತ್ಮೀಯ ಮಿತ್ರ. ಉಮಾಶಂಕರ ದೀಕ್ಷಿತ್ ಅವರು ಉತ್ತರ ಪ್ರದೇಶದ ರಾಜಕೀಯದಲ್ಲಿ ಪಳಗಿದವರು. ಕೇಂದ್ರ ಸರ್ಕಾರದ ಗೃಹಮಂತ್ರಿಯಾಗಿದ್ದವರು. ಕರ್ನಾಟಕದ ರಾಜ್ಯಪಾಲರೂ ಆಗಿದ್ದರು. ದೀರ್ಘ ಕಾಲ ಲಖನೌದಲ್ಲೇ ಬಿಡಾರ ಹೂಡಿದ್ದ ಶೀಲಾ ದೀಕ್ಷಿತ್ರಿಗೆ ಆ ಕಾಲದ ರಾಜಕಾರಣಿಗಳ (ಉತ್ತರ ಪ್ರದೇಶವಷ್ಟೇ ಅಲ್ಲ ಇತರ ರಾಜ್ಯಗಳವರೂ) ಜಾತಕ ಕರತಲಾಮಲಕವಾಗಿ ಗೊತ್ತು.
ಆಕೆ ಹುಟ್ಟಿದ್ದು ಪಂಜಾಬಿನ ಕಪೂರ್ತಲಾದಲ್ಲಿ. ವಿದ್ಯಾಭ್ಯಾಸವೆಲ್ಲ ದೆಹಲಿಯ ಅತಿ ಪ್ರತಿಷ್ಠಿತ ಮಿಲಾಂಡ ಹೌಸ್ನಲ್ಲಿ. ಎಂ.ಎ. ಪದವೀಧರೆ. ಸಾರ್ವಜನಿಕ ಜೀವನದಲ್ಲಿ ಶೀಲಾ ದೀಕ್ಷಿತ್ ದೆಹಲಿಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದು ದುಡಿಯುವ- ಉದ್ಯೋಗಸ್ಥ ಮಹಿಳೆಯರ ವಸತಿ ಗೃಹಗಳ ಆಂದೋಲನವನ್ನು ನಡೆಸುವುದರ ಮೂಲಕ.
ಹೇಳಿ ಕೇಳಿ ಮಾವನ ಮನೆ, ರಾಜಕೀಯಕ್ಕೇ ಮೀಸಲಾಗಿದ್ದು, ರಾಜಕಾರಣ ಮದುವೆಯ ಅನಂತರ ಅವರಿಗೆ ಒಂದು ಗೀಳೇ ಆಯಿತು.
ಮಾವ ಉಮಾಶಂಕರ ದೀಕ್ಷಿತ್ ಅವರೂ ಎಂ.ಪಿ. ಆಗಿದ್ದವರು. ಶೀಲಾ ದೀಕ್ಷಿತ್ ಅವರೂ ಉತ್ತರ ಪ್ರದೇಶದ ಕನ್ನೋಜ್ ಕ್ಷೇತ್ರದಿಂದ ಲೋಕಸಭೆಯ ಸದಸ್ಯೆಯಾಗಿ, ಅನಂತರ ಮಂತ್ರಿಯೂ ಆದರು.
ಈಗ ಪುತ್ರ ಸಂದೀಪ್ ದೀಕ್ಷಿತ್ ಪೂರ್ವ ದೆಹಲಿ ಕ್ಷೇತ್ರದ ಲೋಕಸಭೆ ಸದಸ್ಯ. ಮಾವ- ಪತಿ ತೀರಿಕೊಂಡ ಅನಂತರ ಶೀಲಾ ದೀಕ್ಷಿತ್ ಲಖನೌ ಬಿಟ್ಟು ದೆಹಲಿಗೆ ಹಿಂದಿರುಗಿದರು. ದೆಹಲಿಯ ಕಾಂಗ್ರೆಸ್ಸಿಗೆ ನಾಯಕರೇ ಇಲ್ಲದಿದ್ದ ಕಾಲದಲ್ಲಿ, ಅಲ್ಲಿ ಬಿಜೆಪಿಯ ಅಬ್ಬರದ ಪ್ರಚಾರ ನಡೆದಿದ್ದಾಗಲೂ ಕಾಂಗ್ರೆಸ್ ಶೀಲಾ ದೀಕ್ಷಿತ್ರನ್ನೇ ಪಕ್ಷದ ನಾಯಕರೆಂದು ಪ್ರಕಟಿಸದೇ ಹೋದರೂ ಗುರ್ತಿಸಿತ್ತು. 1998ರಿಂದ 2013ರ ವರೆಗೆ ಸತತವಾಗಿ ಮೂರು ಬಾರಿ ದೆಹಲಿಯಲ್ಲಿ ಬಿಜೆಪಿಯನ್ನು ಸೋಲಿಸಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
ಸಾಕಷ್ಟು ಪ್ರತಿಷ್ಠೆಯನ್ನೂ ಗಳಿಸಿದ್ದಾರೆ. ಎದುರಾಳಿಗಳಿಂದ ಟೀಕೆಗಳ ಕೂರಂಬುಗಳನ್ನು ನಿಭಾಯಿಸಿದ್ದಾರೆ. ಈಗಲೂ ಅಷ್ಟೇ. ದೆಹಲಿಯಲ್ಲಿ ನವೆಂಬರ್ನ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಮಾಜಿ ಮಂತ್ರಿ ಹರ್ಷವರ್ಧನ ಅವರೇ ಮುಖ್ಯಮಂತ್ರಿಯಾಗುತ್ತಾರೆಂದು ಆ ಪಕ್ಷ ಬುಧವಾರ ಸಂಜೆ ಡಂಗುರ ಹೊಡೆದಿದೆ. ಕಾಂಗ್ರೆಸ್, ಯಾವ ರಾಜ್ಯದಲ್ಲೂ ಯಾವ ಸಮಯದಲ್ಲೂ ತಮ್ಮ ಪ್ರಧಾನಿ ಅಥವಾ ಮುಖ್ಯಮಂತ್ರಿಯ ಸ್ಥಾನದ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಆದರೆ, ಒಂದು ವೇಳೆ ಕಾಂಗ್ರೆಸ್ ಗೆದ್ದರೆ (ಅದು ಅನುಮಾನವಾಗಿರಬಹುದು) ಶೀಲಾ ದೀಕ್ಷಿತ್ ಅವರೇ ಮುಖ್ಯಮಂತ್ರಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಎಲ್ಲ ರಾಜಕಾರಣಿಗಳನ್ನೂ ಆವರಿಸುವ ಅವ್ಯವಹಾರದ ಆರೋಪಗಳು ಶೀಲಾ ದೀಕ್ಷಿತ್ ಅವರನ್ನೂ ಬಿಟ್ಟಿಲ್ಲ. ಪ್ರಮುಖವಾಗಿ ದೆಹಲಿಯ ಬಿಜೆಪಿ, ಅವರ ವಿರುದ್ಧ ಬೇಕಾದಷ್ಟು ಆರೋಪಗಳನ್ನು ಹೊರಿಸಿದೆ. ಅವುಗಳಲ್ಲಿ ಅನೇಕವು ತಿರಸ್ಕೃತವಾಗಿದ್ದರೂ, ಒಂದೆರಡು ಆರೋಪಗಳನ್ನು ಕುರಿತು ಲೋಕಾಯುಕ್ತ ಆಯೋಗ ತನಿಖೆ ನಡೆಸಿದ್ದೂ ಆಗಿದೆ. ಒಂದು ಆರೋಪವನ್ನು ಲೋಕಾಯುಕ್ತ ತಳ್ಳಿ ಹಾಕಿದ್ದರೆ, ಇನ್ನೊಂದರಲ್ಲಿ ಈಗ ತಾನೇ ವಿಚಾರಣೆ ಕೊನೆಯ ಹಂತ ಮುಟ್ಟಿದ್ದು ಸದ್ಯದಲ್ಲೇ ವಾದ- ವಿವಾದ ನಡೆಯಬೇಕಾಗಿದೆ. ತಿಂಗಳೊಪ್ಪತ್ತಿನಲ್ಲಿ ಲೋಕಾಯುಕ್ತರ ತೀರ್ಪು ಹೊರಬೀಳಬಹುದು.
ಶೀಲಾ ದೀಕ್ಷಿತ್ ದಿಢೀರ್ ಗಟ್ಟಿ ನಿರ್ಧಾರಗಳಿಗೆ ಹೆಸರು ಮಾಡಿದವರು. ಒಮ್ಮೆ ಹೀಗಾಯಿತು; ದೆಹಲಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಶೀಲಾ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಆಗ ಒಂದು ಆಸ್ಪತ್ರೆಯಲ್ಲಿ ಸುಮ್ಮನೆ ಹಾಗೇ ಎನ್ನುವಂತೆ ವೈದ್ಯ ಪರೀಕ್ಷೆ ಮಾಡಿಸಿಕೊಂಡರು. ಪರೀಕ್ಷೆ ಮಾಡಿದ ವೈದ್ಯರು ಸ್ವಲ್ಪ ಹೃದಯದ ತೊಂದರೆ ಇದೆ. ಆದಷ್ಟು ಬೇಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಸದ್ಯಕ್ಕೇನೂ ಅಪಾಯವಿಲ್ಲ ಎಂದರು.
(ಆಗಿನ್ನು ಆಂಜಿಯೋಗ್ರಾವ್, ಆಂಜಿಯೋ ಪ್ಲಾಸ್ಟಿಯ ಬಳಕೆ ಭಾರತದಲ್ಲಿ ಇರಲಿಲ್ಲ).
ಆ ಮಾತನ್ನು ಕೇಳಿದ ಕೂಡಲೇ ಶೀಲಾ ಒಂದೆರಡು ನಿಮಿಷ ಯೋಚನೆ ಮಾಡಿ ಈ ಮಧ್ಯಾಹ್ನವೇ ಯಾಕಾಗಬಾರದು ಎಂದು ಕೇಳಿದರು. ಆಗ ಚಕಿತರಾದ ವೈದ್ಯರು, ಇನ್ನೂ ನಾವು ಆಸ್ಪತ್ರೆಯಲ್ಲಿ ಮಾಡಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ನಾಳೆಯಾದರೆ ಆದೀತು ಎಂದು ಹೇಳಿದಾಗ ಶೀಲಾ ಆಯಿತು, ನಾಳೆ ಎಂಟು ಗಂಟೆಗೆ ಬರ್ತೀನಿ ಎಂದು ಹೇಳಿ ಮನೆಗೆ ತೆರಳಿದರು.
ಕಾಮನ್ ವೆಲ್ತ್ ಗೇಮ್ಸ್ ಹಗರಣ ಹಾಗೂ ಇತರ ಕೆಲವು ಪ್ರಕರಣಗಳಲ್ಲಿ ಆರೋಪಗಳು ಕೇಳಿ ಬಂದಾಗಲೂ, ಶೀಲಾ ಪ್ರಕಟಿಸಿದ್ದು ಅದೇ ಧೋರಣೆಯನ್ನು. ಲೋಕಾಯುಕ್ತ ಆಯೋಗದಿಂದ ತನಿಖೆ ಆಗಬೇಕು ಎಂದಾದರೆ, ಈ ಕ್ಷಣದಲ್ಲೇ ಅದು ಆರಂಭವಾಗಲಿ ಎಂದರಂತೆ.
- ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


