ಸಾಪ್ತಾಹಿಕಪ್ರಭ

ಹಾಡು ಹಾದಿಯ ತೋರಿತು

ಹಾಡು ಹಾದಿಯ ತೋರಿತು
Published On :

1976 ರ ಏಪ್ರಿಲ್, 26ರಂದು ಗಿರಿಜಾಳಿಂದ ನನಗೆ 'ಕುಮಾರ ಸಂಭವ'ವಾಯಿತು. ನನ್ನ ಮೊದಲ ಮಗ ಹರ್ಷ ಅಂದು ಜನ್ಮ ತಳೆದ. ತುಂಬು ಗರ್ಭಿಣಿಯಾಗಿದ್ದ ಮಡದಿಯನ್ನು ಕಾಣಲೆಂದು ನಾನು ಚಿಂತಾಮಣಿಯಿಂದ ಅದೇ ವೇಳೆಗೆ ಶಿವಮೊಗ್ಗಕ್ಕೆ ಬಂದಿದ್ದೆ. ನನ್ನ ಸಮಕ್ಷಮದಲ್ಲೇ ಈ ಇಳೆಗೆ ಬಂದಿಳಿಯಬೇಕೆಂಬ ತರಾತುರಿಯಲ್ಲಿ ನಿಗದಿತ ವೇಳೆಗೂ ಕೆಲವು ದಿನ ಮೊದಲೇ ಮಗರಾಯ ಹುಟ್ಟಿ ಬಂದಂತಿತ್ತು. ಚೊಚ್ಚಲ ಹೆರಿಗೆ ಸುಸೂತ್ರವಾಗಿ ಮುಗಿದಿತ್ತು. ನಮಗಾದ ಹರ್ಷಕ್ಕೆ ಅನ್ವರ್ಥವಾಗಿ ಮಗನಿಗೆ ಹರ್ಷನೆಂದೇ ಹೆಸರಿಟ್ಟೆವು.
ಶಿವಮೊಗ್ಗದಿಂದ ಬಸ್ಸಿನಲ್ಲಿ ನನ್ನೂರಿಗೆ ಹಿಂತಿರುಗುತ್ತಿದ್ದೆ. ಗಿರಿಜಾಳ ಬಗ್ಗೆ ಮನಸ್ಸಿನಲ್ಲಿ ಒಂದು ಅನಿರ್ವಚನೀಯ ಕೃತಜ್ಞತಾಭಾವ ತುಂಬಿತ್ತು. ಆಗ 'ಮಿಸ್ಸಮ್ಮ' ಎಂಬ, ನಾನು ಹುಡುಗನಾಗಿದ್ದಾಗ ನೋಡಿದ ತೆಲುಗು ಸಿನಿಮಾದ ನನಗೆ ಪ್ರಿಯವಾದ ಹಾಡೊಂದು ನೆನಪಾಗಿ ಗುನುಗಿಕೊಂಡೆ:
ಕಾವಾಲಂಟೆ ಇಸ್ತಾಲೇ
ನಾವನ್ನೀ ಇಕ ನೀವೇಲೇ
(ಬೇಕೂಂದ್ರೆ ಕೊಡ್ತೀನಿ ತಗೋ, ಪ್ರಿಯೆ
ನನ್ನದೆಲ್ಲವು ಇನ್ನು ಮುಂದೆ ನಿನ್ನದಲ್ಲವೇ?)
ಆಗ ಥಟ್ಟಂತ ಹೊಳೀತು ಈ ಪಲ್ಲವಿ:
ಸುಬ್ಬಾಭಟ್ಟರ ಮಗಳೇ,
ಇದೆಲ್ಲಾ ನಂದೇ ತಗೊಳ್ಳೇ


ಪಲ್ಲವಿಯನ್ನು ಅನುಸರಿಸಿ, ಹಲವು ಸಾಲುಗಳು ತಾವಾಗಿ ಸ್ಫುರಿಸತೊಡಗಿದವು. ಜೇಬಲ್ಲಿದ್ದ ಯಾವುದೋ ಚೀಟಿಯ ಮೇಲೆ ಗೀಚಿಕೊಂಡೆ. ಊರು ತಲುಪಿದ ನಂತರ ಪಟ್ಟಾಗಿ ಕೂತು, ಕವಿತೆ ಬರೆದು ಮುಗಿಸಿದೆ. 'ರಗಳೆ' ಎಂದು ಹೆಸರಿಟ್ಟು, ಮಾಮೂಲಿನಂತೆ 'ಪ್ರಜಾವಾಣಿ'ಗೆ ರವಾನಿಸಿದೆ. ಒಂದು ಭಾನುವಾರ ಅದು ಪ್ರಕಟವೂ ಆಯಿತು. ಹಲವರ ಮೆಚ್ಚಿಗೆಗೆ ಪಾತ್ರವೂ ಆಯಿತು. ಗೋಪಾಲಕೃಷ್ಣ ಅಡಿಗರು ಮೊಖ್ತಾ ಸಿಕ್ಕಾಗ, 'ನಿನ್ನ ಪದ್ಯ "ರಗಳೆ" ತುಂಬಾ ಚೆನ್ನಾಗಿದೆ, ಕಣಯ್ಯ' ಎಂದರು. ಆಗ ಗಿರಿಜಾಳಿಗೆ ತನ್ನ ಹೆರಿಗೆಯ ನಂತರ ಆದಷ್ಟೇ ಸಂತೋಷ, ನೆಮ್ಮದಿ ನನಗೂ ಆಯಿತು.

ಆದರೆ ಆ ಕವಿತೆಯಿಂದ ಶಿವಮೊಗ್ಗದಲ್ಲಿ ಕೊಂಚ ರಗಳೆಯೇ ಆಯಿತಂತೆ (ನಂತರದಲ್ಲಿ ಗಿರಿಜಾ ನನಗೆ ಹೇಳಿದ್ದು). ಅದು ಪ್ರಕಟವಾದ ಭಾನುವಾರದ ದಿನ ಬೆಳಗ್ಗೆ ನನ್ನ ಮಾವನವರಾದ ಸುಬ್ಬಾಭಟ್ಟರು ಪೇಟೆಬೀದೀಲಿ ಹೋಗುತ್ತಿದ್ದಾಗ, ಅವರ ಪರಿಚಿತರೊಬ್ಬರು ಅವರನ್ನು ತಡೆದು ನಿಲ್ಲಿಸಿ, 'ಏನು, ಸುಬ್ಬಾಭಟ್ಟರೇ, ನಿಮ್ಮ ಅಳಿಯ ನಿಮ್ಮ ಬಗ್ಗೆ ಈವತ್ತು ಪ್ರಜಾವಾಣೀಲಿ ಅದೆಂಥದೋ ರಗಳೆ ಅಂತ ಪದ್ಯ ಬರೆದಿದ್ದಾರೆ. ನೋಡಲಿಲ್ಲವೋ?' ಅಂದರಂತೆ. ಭಟ್ಟರು ಗಾಬರಿಯಾಗಿ, ಕೂಡಲೇ ಅಂಗಡಿಗೆ ಹೋಗಿ, ಪ್ರಜಾವಾಣಿ ಕೊಂಡು, ನನ್ನ ಪದ್ಯ ಓದಿದ್ದಾರೆ. 'ರಗಳೆ' ಅನ್ನೋ ಪದ ಬಿಟ್ಟರೆ ಇನ್ನು ಏನೇನೂ ಅರ್ಥವಾಗಿಲ್ಲ. ಅಳಿಯದೇವರಿಗೆ ಯಾಕೋ ಅಸಮಾಧಾನವಾದಂತಿದೆ ಎಂಬ ಅಳುಕು ಮೂಡಿದೆ. ಹೀಗಾಗಿ, ಮನೆಗೆ ಸರಸರ ಹಿಂತಿರುಗಿ, ಗಿರಿಜಾಳಿಗೆ ಪತ್ರಿಕೆ ಕೊಟ್ಟು, ವಿಷಯ ತಿಳಿಸಿದ್ದಾರೆ. ಗಿರಿಜಾ ಆ ವೇಳೆಗಾಗಲೇ ನನ್ನ ಮೊದಲ ಕವನ ಸಂಕಲನದ ಜೊತೆಗೆ ನಂತರದ ಕೆಲವು ಬಿಡಿ ಕವನಗಳನ್ನೂ ಓದಿ ಪಳಗಿದ್ದವಳು. ಆದ್ದರಿಂದ, ನನ್ನ ಪದ್ಯ ಓದಿನೋಡಿ ಹೇಳಿದ್ದಾಳೆ, 'ಅಯ್ಯೋ, ಅಂಥಾ ಗಾಬರಿಯಾಗೋ ಸಂಗತಿ ಎಂಥದೂ ಇಲ್ಲ ಅಪ್ಪಯ್ಯ. ಇವರು ಹಿಂಗೇಯ, ಹುಚ್ಚುಚ್ಚಾಗಿ ಎಂಥೆಂಥದೋ ಬರೀತಿರ್ತಾರೆ. ಮಂಡೆ ಬಿಸಿ ಮಾಡ್ಕಂಬ್ಯಾಡ'.
'ರಗಳೆ' ಕವಿತೆಯ ಮೊದಲ ಭಾಗ ಕವಿಯ ಹೊರಮುಖ (ಶೋರೂಂ). ಎರಡನೇ ಭಾಗ ಒಳಮುಖ (ಗೋಡೋನು). ಮೊದಲ ಭಾಗ ಹಾಡಿಗೆ ಅನುಕೂಲವಾಗಿದೆ, ಅನ್ನಿಸಿತು. ವಸ್ತುವಿನ ದೃಷ್ಟಿಯಿಂದ ಬೇಂದ್ರೆ ಅವರ 'ನಾನು ಬಡವಿ, ಆತ ಬಡವ' ಹಾಡನ್ನು ನೆನಪಿಸುವಂತಿತ್ತು. ಆದ್ದರಿಂದ ಅದರ ಕೆಲವು ಚರಣಗಳನ್ನು ಆರಿಸಿ, ಅಲ್ಲಲ್ಲಿ ತಿದ್ದಿ, 'ಕವಿ ಖಜಾನೆ' ಎಂಬ ಭಾವಗೀತೆಯಾಗಿ ಸಿದ್ಧಪಡಿಸಿದೆ. ಅದು ನನ್ನ 'ಪ್ರೇಮ ಸುಳಿವ ಜಾಡು' ಸಂಕಲನದಲ್ಲಿ ಸೇರಿಕೊಂಡಿತು.

1984ರಲ್ಲಿ ಬೆಂಗಳೂರಿನ 'ಯುವಜನ ಕೇಂದ್ರ'ದಲ್ಲಿ, ಕೆ.ಎಸ್. ನಿಸಾರ್ ಅಹಮದ್‌ರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಏರ್ಪಾಟಾಗಿತ್ತು. ಕನ್ನಡದ ಅಂದಿನ ಬಹುಪಾಲು ಮುಖ್ಯ ಕವಿಗಳು ಆ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇನ್ನೊಂದು ವಿಶೇಷವೆಂದರೆ, ಆ ಕವಿಗೋಷ್ಠಿಯನ್ನು ಚಿತ್ರೀಕರಿಸಲು ಆಗಷ್ಟೇ ಪ್ರಾರಂಭವಾಗಿದ್ದ 'ಬೆಂಗಳೂರು ದೂರದರ್ಶನ ಕೇಂದ್ರ'ದ ಸಿಬ್ಬಂದಿ ತಮ್ಮ ಕ್ಯಾಮೆರಾಗಳೊಂದಿಗೆ ಬಂದಿದ್ದರು. ಅದರ ಪ್ರಸಾರ ಆಗ ಬೆಂಗಳೂರಿಗಷ್ಟೇ ಸೀಮಿತವಾಗಿತ್ತು. ಕವಿಗೋಷ್ಠಿಯ ನಿರ್ವಹಣೆಯನ್ನು ನನಗೆ ವಹಿಸಲಾಗಿತ್ತು. ಎಲ್ಲ ಕವಿಗಳನ್ನೂ ಸಭೆಗೆ ನಾನು ಪರಿಚಯಿಸಿದೆ. ಕೊನೆಗೆ ನನ್ನ ಸರದಿ ಬಂದಾಗ, ನನ್ನನ್ನು ಪರಿಚಯಿಸಲು ಸ್ವತಃ ನಿಸಾರ್ ಅವರೇ ಮುಂದೆ ಬಂದರು.

'ಈ ಲಕ್ಷ್ಮಣ ನನ್ನ ಪ್ರಿಯ ಶಿಷ್ಯ. ಇವನು ಚೆನ್ನಾಗಿ ಕವಿತೆ ಬರೆಯೋದಷ್ಟೇ ಅಲ್ಲದೆ ಸೊಗಸಾಗಿ ಹಾಡ್ತಾನೆ ಕೂಡ. ಆದ್ದರಿಂದ ಒಂದು ಕವನ ಓದಿ, ಒಂದು ಕವನ ಹಾಡಲೇ ಬೇಕೂಂತ ಶ್ರೋತೃಗಳ ಪರವಾಗಿ ಫರ್ಮಾನು ಹೊರಡಿಸುತ್ತೇನೆ' ಎಂದುಬಿಟ್ಟರು. ಹೀಗಾಗಿ, ಅಂದು ನಾನು ನನ್ನ 'ನಿಂಬೆಗಿಡ' ಎಂಬ ಹಾಡನ್ನು ಮೊದಲ ಬಾರಿಗೆ ಆ ಸಭೆಯಲ್ಲಿ ಹಾಡಿದೆ. ಸಭೆಯ ವಿಶೇಷ ಪ್ರಶಂಸೆ ಮತ್ತು ಚಪ್ಪಾಳೆಗೆ ಅದು ಪಾತ್ರವಾಯಿತು.

'ನಿಂಬೆಗಿಡ' ಮೂಲದಲ್ಲಿ ಟ್ರಿನಿ ಲೊಪೆಝ್ ಎಂಬ ಗಾಯಕ ಹಾಡಿದ 'ಲೆಮನ್ ಟ್ರೀ' ಎಂಬ ಒಂದು ಜನಪ್ರಿಯ ಇಂಗ್ಲಿಷ್ ಹಾಡು. ಅದನ್ನು ನಾನು ನನ್ನ ಕಾಲೇಜಿನ ದಿನಗಳಲ್ಲಿ ಹಾಡುತ್ತಿದ್ದೆ. ಆ ಮೇಲೆ ಅದನ್ನು ಕನ್ನಡಕ್ಕೆ ನಾನೇ ರೂಪಾಂತರಿಸಿಕೊಂಡು ಹಾಡತೊಡಗಿದೆ. ನಂತರದಲ್ಲಿ ಅದನ್ನೊಂದು ಪೂರ್ಣಪ್ರಮಾಣದ ಕವಿತೆಯಾಗಿಸಿ, 'ಪ್ರಜಾವಾಣಿ'ಯಲ್ಲಿ ಪ್ರಕಟಿಸಿದೆ. ಆದರೆ ಅದು ಜನಮಾನಸದಲ್ಲಿ ಈಗಲೂ ಉಳಿದಿರುವುದು ತನ್ನ ಹಾಡಿನ ರೂಪದಲ್ಲೇ.
ಆ ಕಾಲದಲ್ಲಿ ಬೆಂಗಳೂರಿನ ದೂರದರ್ಶನಕ್ಕೆ ತನ್ನದೇ ಆದ ಸ್ಟುಡಿಯೋ ಇರಲಿಲ್ಲ. ಮುದ್ರಿತ ಕಾರ್ಯಕ್ರಮಗಳ ಸಂಖ್ಯೆಯೂ ವಿರಳವಾಗಿತ್ತು. ಹೀಗಾಗಿ, ಅಂದಿನ ಕವಿಗೋಷ್ಠಿ ಮತ್ತೆ ಮತ್ತೆ ಪ್ರಸಾರವಾಯಿತು. ಜೊತೆಗೆ, ಸಮಯ ಸಿಕ್ಕಾಗಲೆಲ್ಲ ದೂರದರ್ಶನ ನನ್ನ 'ನಿಂಬೆಗಿಡ' ಹಾಡನ್ನು ಪ್ರಸಾರ ಮಾಡತೊಡಗಿತು. ಹೀಗಾಗಿ ಆ ಹಾಡು ಬೆಂಗಳೂರಲ್ಲಿ ತುಂಬ ಜನಪ್ರಿಯವಾಯಿತು. ಎಷ್ಟು ಜನಪ್ರಿಯವೆಂದರೆ, ನಾನು ಬೆಂಗಳೂರಲ್ಲಿ ಎಲ್ಲಿ ಕಂಡರೂ ಜನ ನನ್ನನ್ನು 'ನಿಂಬೆಗಿಡ' ಎಂದು ಕರೆಯುತ್ತಿದ್ದರು.

ಅಂದಿನ ಕವಿಗೋಷ್ಠಿ ಇನ್ನೊಂದು ಕಾರಣಕ್ಕೂ ನನಗೆ ಸ್ಮರಣೀಯ. ಅದೇನೆಂದರೆ ಅಂದಿನ ಸಭೆಗೆ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ಸಿ. ಅಶ್ವತ್ಥ್ ಕೇಳುಗರಾಗಿ ಬಂದಿದ್ದರು. ಗೋಷ್ಠಿ ಮುಗಿದ ನಂತರ, ಅವರು ನನ್ನನ್ನು ಭೇಟಿಯಾಗಿ, ನನ್ನೊಂದಿಗೆ ಕೊಂಚ ಮಾತಾಡುವುದಿದೆ, ಎಂದರು. ನಾನು ನನ್ನ ಆಪ್ತಮಿತ್ರ, ಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿಯನ್ನು ಜೊತೆ ಮಾಡಿಕೊಂಡು, ಅವರೊಂದಿಗೆ ಕಾಫಿಗೆ ಹೋದೆ. ಅಶ್ವತ್ಥ್ ಹೇಳಿದರು, 'ಹೊಸ ಕವಿಗಳ ಭಾವಗೀತೆಗಳಿಗೆ ಸ್ವರ ಸಂಯೋಜಿಸಿ, ಒಂದು ಧ್ವನಿಸುರುಳಿ ಹೊರತರಬೇಕೇಂದಿದ್ದೇನೆ. ಹಾಡುಗಳನ್ನು ನೀವು ಆರಿಸಿ ಕೊಡಬೇಕು'. ನಾವಿಬ್ಬರೂ ಸಂತೋಷದಿಂದ ಒಪ್ಪಿಕೊಂಡೆವು. ಹೀಗೆ ರೂಪುಗೊಂಡದ್ದು, 1985ರಲ್ಲಿ ಹೊರ ಬಂದ, 'ಕೆಂಗುಲಾಬಿ'. ಆ ಧ್ವನಿಸುರುಳಿಯಲ್ಲಿ ಎಚ್ಚೆಸ್ವಿ, ವ್ಯಾಸರಾವ್, ದೊಡ್ಡರಂಗೇಗೌಡ, ಜಯಸುದರ್ಶನ ಮತ್ತು ನಾನು ಬರೆದ ಒಟ್ಟು ಎಂಟು ಹಾಡುಗಳಿದ್ದವು. 'ಕೆಂಗುಲಾಬಿ' ಪ್ರಚಂಡ ಯಶಸ್ಸು ಮತ್ತು ಜನಪ್ರಿಯತೆ ಗಳಿಸಿತು. ಹಾಗೆಯೇ ಅಶ್ವತ್ಥ್ ಅವರ ಗಾಢಸ್ನೇಹವನ್ನೂ ನನಗೆ ಗಳಿಸಿಕೊಟ್ಟಿತು.

ಮುಂದೆ, 1987ರಲ್ಲಿ ನನ್ನದೇ ಎಂಟು ಭಾವಗೀತೆಗಳ 'ಸುಬ್ಬಾಭಟ್ಟರ ಮಗಳೇ' ಎಂಬ ಧ್ವನಿಸುರುಳಿ ಅಶ್ವತ್ಥ್ ಅವರ ಸಂಗೀತದಲ್ಲಿ 'ಲಹರಿ' ಸಂಸ್ಥೆಯಿಂದ ಹೊರಬಂದಿತು. ಅದರ ಶೀರ್ಷಿಕೆಗೀತೆಯನ್ನು ಅಶ್ವತ್ಥ್ ಹಾಡಿದರು. 'ನಿಂಬೆಗಿಡ' ಹಾಡನ್ನು ನನ್ನಿಂದಲೇ ಹಾಡಿಸಿದರು. ಧ್ವನಿಸುರುಳಿ ಲಕ್ಷದ ಲೆಕ್ಕದಲ್ಲಿ ಮಾರಾಟವಾಗಿ ಯಶಸ್ವಿಯಾಯಿತು. ನನಗೆ ಜನಪ್ರಿಯತೆಯ ಜೊತೆಗೆ ಭಾವಗೀತೆಗಳ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ದೊರಕಿಸಿಕೊಟ್ಟಿತು.
ಭಾವಗೀತೆಗಳ ಧ್ವನಿಸುರುಳಿಗಳಿಂದ ನನಗೆ ಜನಪ್ರಿಯತೆಯ ಜೊತೆಗೆ ಒಂದು ಅಪಖ್ಯಾತಿಯೂ ಬಂತು. ಎನ್ನೆಸ್ಸೆಲ್, ಎಚ್ಚೆಸ್ವಿ, ವ್ಯಾಸರಾವ್ ಮತ್ತು ನನ್ನನ್ನು, ಅಂದಿನ ಸಾಹಿತ್ಯ ವಿಮರ್ಶೆಯ ಒಂದು ವಲಯ 'ಕ್ಯಾಸೆಟ್ ಕವಿಗಳು' ಎಂಬ ಹಣೆಪಟ್ಟಿ ಹಚ್ಚಿ, ಜನಪ್ರಿಯತೆಯ ಆಮಿಷಕ್ಕೆ ಕಾವ್ಯವನ್ನು ಬಲಿಕೊಡುತ್ತಿರುವ ದ್ರೋಹಿಗಳು, ಎಂಬಂತೆ ಹೀನಾಮಾನ ಹೀಯಾಳಿಸಿತು. ಅವರಿಗೆ ನಾವು ಮಾಡಿಕೊಂಡ ಅಹವಾಲು ಇಷ್ಟು: 'ಹಾಡುಗಳನ್ನು ದಯವಿಟ್ಟು ಗಂಭೀರ ಕಾವ್ಯದೊಂದಿಗೆ ಹೋಲಿಸಬೇಡಿ. ಅದನ್ನು ಒಂದು ಸದಭಿರುಚಿಯ, ಜನಮಾನಸಕ್ಕೆ ಸುಲಭವಾಗಿ ದಕ್ಕುವ ಪ್ರತ್ಯೇಕ ಕಾವ್ಯಪ್ರಕಾರವಾಗಿ ಪರಿಗಣಿಸಿ. ಅಲ್ಲಿ ಇರಬಹುದಾದ ಕಾವ್ಯಾಂಶಕ್ಕೆ ವಸ್ತುನಿಷ್ಠವಾಗಿ ಬೆಲೆ ಕಟ್ಟಿ. ಅಗ್ಗದ ಸರಕನ್ನು ಪಕ್ಕಕ್ಕಿಡಿ. ಬೆಲೆಯುಳ್ಳದ್ದಕ್ಕೆ ತಕ್ಕ ಬೆಲೆ ಕೊಡಿ. ಅಷ್ಟೇ ಹೊರತು, ಹಾಡುಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಡಿ'.

ಒಟ್ಟಾರೆ ಜನಮಾನ್ಯತೆಯ ಮುಂದೆ ಅಂಥ ಕಾವ್ಯ ವಿಮರ್ಶಕರ ಧ್ವನಿ ಕ್ರಮೇಣ ಉಡುಗಿಹೋಯಿತು. ಇಂದು ಸುಗಮ ಸಂಗೀತ ಅಥವಾ ಕವಿಕಾವ್ಯ ಗಾಯನ ಕನ್ನಡದ ಒಂದು ವಿಶಿಷ್ಟ ಸಂಗೀತ ಪ್ರಕಾರವಾಗಿ, ನಮ್ಮ ನಾಡಿನಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಜನಪ್ರಿಯವಾಗಿದೆ. ನಮ್ಮ ಹಾಡುಗಳನ್ನು, ಆ ಮೂಲಕ ನಮ್ಮ ಕಾವ್ಯದ ಒಂದಂಶವನ್ನು ಸಹೃದಯರ ಮನೆ, ಮನಗಳಿಗೆ ತಲುಪಿಸುವ ಸಾರ್ಥಕ ಕಾರ್ಯದಲ್ಲಿ ಮುಂದುವರಿದಿದೆ. <

ರಗಳೆ
-1-
ಸುಬ್ಬಾಭಟ್ಟರ ಮಗಳೇ,
ಇದೆಲ್ಲಾ ನಂದೇ ತಗೊಳ್ಳೇ:
 
ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ ಆಕಾಶದ ಸೀರೆ,
ದಿಗಂತಗಳೇ ಮೇರೆ;
ಮುಂಜಾವಿನ ಬಂಗಾರದ ಬೆಟ್ಟ, ಬೆಳದಿಂಗಳ ಬೆಳ್ಳಿ;
ನಿನ್ನ ಭಾಗ್ಯಕ್ಕೆ ಎಣೆಯೆಲ್ಲಿ?
 
ರಾತ್ರಿ ತೆರೆಯುವುದು, ಅದೂ ನನ್ನದೇ, ಜಿಗಿಜಿಗಿ ಜ್ಯುಯೆಲ್ಲುಗಳ ಸ್ಟೋರು
ಯಾವುದು ಬೇಕೋ ಕೋರು:
ಚಿಕ್ಕೆ ಮೂಗುತಿಗೆ, ಚಂದ್ರ ಪದಕಕ್ಕೆ, ನೀಹಾರಿಕೆ ಹಾರ;
ನನ್ನ ಸಂಪತ್ತೆಷ್ಟು ಅಪಾರ!
 
ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ ರಾಶಿ ರಾಶಿ ಮುತ್ತು,
ಇನ್ನು ನಿನ್ನ ಸೊತ್ತು;
ಸುಗಂಧ ತೀಡುವ ವಸಂತ ಪವನ, ಸಪ್ತವರ್ಣಗಳ ಕಮಾನು;
ನಿನಗೇ ಅವೂನೂ.
 
ಪಾತರಗಿತ್ತಿಯ ಪಕ್ಕವನೇರಿ, ಹೂ-ಪಡಖಾನೆಗೆ ಹಾರಿ,
ಪ್ರಾಯದ ಮಧು ಹೀರಿ,
ಜುಳುಜುಳು ಹರಿಯುವ ಕಾಲದ ಹೊಳೆಯಲಿ ಏಳುವ ಮುಳುಮುಳುಗಿ,
ಪ್ರತಿದಿನ ಹೊಸತನದಲಿ ಬೆಳಗಿ.
 
ಮಕ್ಕಳ ನಗುವಿನ ಮಲ್ಲಿಗೆ ತೋಟ, ಅಲ್ಲಿವೆ ಸರಸರ ಹಾವು
ನಾವಾಗುವ ಆಡಂ ಈವು;
ಇಲ್ಲದ ಹಣ್ಣಿಗೆ ಸಲ್ಲದ ಆಸೆ ಪಡದಿದ್ದರೆ ನೀ ಜಾಣೆ;
ಅಕ್ಷಯ ಸುಖದ ಖಜಾನೆ.
 
-2-
 
ಇದೆಲ್ಲ ಶೋರೂಮಿನ ಮಾತಾಯಿತು, ನೋಡುವೆಯಾ ಗೋಡೋನು?
ಬಾ ಅಲ್ಲಿಗೂ ಹೋಗೋಣು:
ಮಬ್ಬು, ಮೆಟ್ಟಿಲುಗಳ ಹುಷಾರಾಗಿ ಇಳಿ, ಹೀಗೆ ನನ್ನ ತಬ್ಬು,
ಈಗ ಬಲವಾಗಿ ಬಾಗಿಲ ದಬ್ಬು.
 
ಅರರೆ ಹೆದರದಿರು! ಇವೂ ನನ್ನವೇ, ನನ್ನ ಸ್ವಯಾರ್ಜಿತ ಸೊತ್ತುಗಳು,
ನನ್ನ ನಿಗೂಢ ಸಂಪತ್ತುಗಳು.
ಈ ಕತ್ತಲೆ, ಈ ಕೊಳೆತ ವಾಸನೆ, ಈ ಧಗೆ, ಭಣಭಣ ಭೀತಿಗಳು,
ನನ್ನ ವಿಕಾರದ ರೀತಿಗಳು.
 
ಈ ಕಂಗಳು ಈ ಕನ್ನಡಕಗಳು, ನಕಲಿ ಹೃದಯ, ಮಿದುಳು
ಈ ಮುಖವಾಡಗಳು;
ಬಗೆಬಗೆ ನಗೆಗಳು, ಭಾವಭಂಗಿಗಳು, ಲಾಗಲಗಾಟೆಗಳು,
ಅಭೇದ್ಯ ಕೋಟೆಗಳು.
 
ನೆಲದ ಮೇಲೆಲ್ಲ ಗೀಚಿದ ಸುದ್ದೆಯ, ಇದ್ದಿಲ ಗೋಜಲು ಹಸೆಗಳು,
ಆಂತರ್ಯದ ಹಾವಸೆಗಳು;
ತೋರಣ ತೂಗಿದ ಹಾಳೆಗಳಲ್ಲಿ ನನ್ನ ಅಮುದ್ರಿತ ಪದ್ಯಗಳು,
ನೇಣು ಜೋತಿರುವ ಸದ್ಯಗಳು.
 
ತಿರುಗುಮುರುಗುಪಾದಿಗಳ ಕ್ಯಾಬರೇ ಆ ವೇದಿಕೆ ಮೇಲೆ,
ನನ್ನ ಏಕಾಂತದ ವೇಳೆ
ಹೂತಿಟ್ಟ ಕನಸುಗಳು ಹುಳಿನೊರೆಯೇರಿ ಹೆಂಡ ಮಂಡೆಯಲ್ಲಿ,
ಕನಲುವೆ ಅಮಲಲ್ಲಿ.
 
ಅಲ್ಲಿ ಬೋನ ಸರಳುಗಳ ಹಿಂದೆ ನನ್ನ ನೆರಳಿನಂಥ ಆ ಪಶು,
ಅದರ ನರಳ ಆಲಿಸು;
ಮೂಲೆಮೂಲೆಯಲೂ ಅಡಗಿ ಹೊಂಚುತ್ತಿವೆ
ಗೆರಿಲ್ಲಾ ಗದ್ದಲ ಕೇಕೆ,
ಕ್ರಾಂತಿಯ ರಕ್ತಪತಾಕೆ.
 
ಈ ಸಿಂಹಾಸನದಲ್ಲಿ ಕುಳಿತಿರುವ ಹೆಣ, ಈ ಒಣಗಿದ ಬೇರು,
ಒಳಗಡೆ ಹುಳು ನೂರಾರು;
ಸೋತು ಜೋಲುತಿವೆ ಆಲದ ಮರದಲಿ ಬಿಳಲು ಶಿಶ್ನಸರ್ಪ,
ಹಲ್ಲು ಮುರಿದ ದರ್ಪ.
 
ಸುಬ್ಬಾಭಟ್ಟರ ಮಗಳೇ,
ಏಕೆ, ಸಾಕಾಯಿತೇ ನನ್ನ ರಗಳೆ?

ನಿಂಬೆಗಿಡ
ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು:
'ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲೀ, ಮಗು,
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡ, ಮರೀ,
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ:
 
ನಿಂಬೆಗಿಡ ತುಂಬಾ ಚಂದ, ನಿಂಬೆಯ ಹೂವು ತುಂಬಾ ಸಿಹಿ,
ಆದರೆ ನಿಂಬೆಯ ಹಣ್ಣೋ, ಕಂದ, ತಿನ್ನಲು ಬಹಳ ಹುಳಿ, ಕಹಿ.'
 
ಯೌವನದಲ್ಲಿ ನಾನೂ ಒಂದು ಹುಡುಗಿಯ ಪ್ರೇಮಿಸಿದೆ.
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವೂ ಪ್ರೇಮಸುಧೆ.
ಸೂರ್ಯನತ್ತಲೇ ಸೂರ್ಯಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ:
 
'ನಿಂಬೆಗಿಡ ತುಂಬಾ ಚಂದ, ನಿಂಬೆಯ ಹೂವು ತುಂಬಾ ಸಿಹಿ,
ಆದರೆ ನಿಂಬೆಯ ಹಣ್ಣೋ, ಕಂದ, ತಿನ್ನಲು ಬಹಳ ಹುಳಿ, ಕಹಿ.'
 
ನಾವಿಬ್ಬರೂ ಕೊಟ್ಟುಕೊಂಡ ಮುತ್ತುಗಳದ್ದೇ ಅಂಕಗಣಿತ;
ನಾವಿಬ್ಬರೂ ಒಟ್ಟಿಗೆ ಕೂತ ತಾಣವೇ ನಮ್ಮ ಭೂಗೋಳ;
ನಮ್ಮಿಬ್ಬರ ದಾರಿಗೆ ಅಡ್ಡಬಂದ ದುರಾತ್ಮರ ಇತಿಹಾಸ;
ಅನ್ನಿಸುತ್ತಿತ್ತು, ಅಪ್ಪನ ಮಾತು ಮಾತ್ಸರ್ಯದ ಮೋಸ:
 
'ನಿಂಬೆಗಿಡ ತುಂಬಾ ಚಂದ, ನಿಂಬೆಯ ಹೂವು ತುಂಬಾ ಸಿಹಿ,
ಆದರೆ ನಿಂಬೆಯ ಹಣ್ಣೋ, ಕಂದ, ತಿನ್ನಲು ಬಹಳ ಹುಳಿ, ಕಹಿ.'
 
ಜಗದ ಎಲ್ಲ ಕಲೆ, ಸಾಹಿತ್ಯಗಳಿಗೂ ಪ್ರೇಮದಿಂದ ಉಸಿರು;
ಎಲ್ಲ ಆಸೆ, ಆಕಾಂಕ್ಷೆಗಳೂ ಈ ಪ್ರೇಮದಿಂದ ಬಸಿರು;
ಪ್ರಕೃತಿಯಂತೆಯೇ ಪ್ರೇಮವು ಸಹ ಚಿರನೂತನ, ರಮ್ಯ;
ಅಂಗನೆಯೊಲಿವುದು ಸಂಗಯ್ಯನೊಲುಮೆ, ತಿಳಿದುಕೊ, ಅಪ್ಪಯ್ಯ.
 
'ನಿಂಬೆಗಿಡ ತುಂಬಾ ಚಂದ, ನಿಂಬೆಯ ಹೂವು ತುಂಬಾ ಸಿಹಿ,
ಆದರೆ ನಿಂಬೆಯ ಹಣ್ಣೋ, ಕಂದ, ತಿನ್ನಲು ಬಹಳ ಹುಳಿ, ಕಹಿ.'
 
ನಿಂಬೆಯ ಗಿಡದ ರೆಂಬೆ ರೆಂಬೆಯಲೂ ನೂರು ನೂರು ಮುಳ್ಳು;
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ, ಸುಳ್ಳು;
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿಯಿಂದು;
ಅಪ್ಪನ ಕಿರುನಗೆ ರೇಗಿಸುತ್ತಿದೆ, 'ಬುದ್ಧಿ ಬಂತೆ?' ಎಂದು:
 
'ನಿಂಬೆಗಿಡ ತುಂಬಾ ಚಂದ, ನಿಂಬೆಯ ಹೂವು ತುಂಬಾ ಸಿಹಿ,
ಆದರೆ ನಿಂಬೆಯ ಹಣ್ಣೋ, ಕಂದ, ತಿನ್ನಲು ಬಹಳ ಹುಳಿ, ಕಹಿ.'

- ಬಿ.ಆರ್.ಲಕ್ಷ್ಮಣ್ ರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.