ಇಲಿಗೂ ಚೆಲ್ಲಾಟ

ಬೆಕ್ಕಿಗೆ ಇಲಿಯೆಂದರೆ ಪಂಚಪ್ರಾಣ. ಬೆಕ್ಕು, ಇಲಿಯನ್ನು ಬೇಟೆಯಾಡಿ ಹಿಡಿದು ತಿನ್ನಲು ಸದಾ ಹೊಂಚು ಹಾಕುತ್ತಿರುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ...
Updated on: 

ಬೆಕ್ಕಿಗೆ ಇಲಿಯೆಂದರೆ ಪಂಚಪ್ರಾಣ. ಬೆಕ್ಕು, ಇಲಿಯನ್ನು ಬೇಟೆಯಾಡಿ ಹಿಡಿದು ತಿನ್ನಲು ಸದಾ ಹೊಂಚು ಹಾಕುತ್ತಿರುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದ್ದರೆ ಬೆಕ್ಕನ್ನು ಸಾಕುತ್ತಾರೆ. ಆದರೆ, ಚೀನಾದ ಚಾಂಗ್‌ಚೂನ್ ಎಂಬ ಊರಿನ ಒಂದು ಬೆಕ್ಕು ಇದಕ್ಕೆ ಸಂಪೂರ್ಣ ಅಪವಾದ. ಇಲ್ಲಿ ವಾಸವಾಗಿರುವ ಲೀ ಎಂಬಾತನ ಮನೆಯ ಮುರಿದ ಕಿಟಕಿಯಿಂದ ಇಲಿ ಹೇಗೋ ಒಳಗೆ ಸೇರಿಕೊಂಡಿತಂತೆ. ಇದರ ಉಪಟಳ ತಾಳಲಾರದ ಲೀ, ಇದನ್ನು ಹಿಡಿಯಲು ವಿಧವಿಧವಾಗಿ ಪ್ರಯತ್ನಿಸಿದ. ಆದರೂ ಇಲಿಯು ಈತನ ಬಲೆಗೆ ಬೀಳಲಿಲ್ಲ. ಪಕ್ಕದ ಮನೆಯವರು ಸಾಕಿದ 'ಡಾ ಹ್ವಾಂಗ್‌' ಹೆಸರಿನ ಬೆಕ್ಕನ್ನು ತನ್ನ ಮನೆಗೆ ಕರೆದುಕೊಂಡು ಬಂದ. ಬೆಕ್ಕಿಗೆ ಊಟ ನೀಡದೇ ಉಪವಾಸವಿಡಲು ಅದರ ಒಡೆಯನಿಗೆ ಲೀ ಮೊದಲೇ ತಿಳಿಸಿದ್ದನಂತೆ. ಇದು ತನ್ನ ಮನೆಯೊಳಗೆ ಸೇರಿಕೊಂಡಿದ್ದ ಇಲಿಯನ್ನು ಹೆದರಿಸಿ ಅದನ್ನು ಬೇಟೆಯಾಡುತ್ತದೆ ಎಂದೇ ಭಾವಿಸಿದ್ದ ಲೀಗೆ ಅಚ್ಚರಿ. ಬೆಕ್ಕನ್ನು ಕಂಡ ಇಲಿ, ಮೊದಲು ಹೆದರಿ ನಡುಗಲು ಪ್ರಾರಂಭಿಸಿತಂತೆ. ಆದರೆ ಬೆಕ್ಕು ಮಾತ್ರ ಅದನ್ನು ತಿನ್ನದೇ ಪ್ರೀತಿಯಿಂದ ಅದರ ಮೈಯನ್ನೆಲ್ಲಾ ನೆಕ್ಕತೊಡಗಿತಂತೆ. ಅದ್ಯಾವ ಜನ್ಮದ ಮೈತ್ರಿಯೋ ಏನೋ ಎಂಬಂತೆ ಇಲಿಯೂ ಬೆಕ್ಕಿನೊಡನೆ ಚೆಲ್ಲಾಟ ಆಡಲು ಪ್ರಾರಂಭಿಸಿತಂತೆ. ಬಲು ಅಪರೂಪದ ಈ ಬೆಕ್ಕು ಇಲಿಗಳ ಗೆಳೆತನದ ವಿಡಿಯೋವನ್ನು ಇಂಟರ್ನೆಟ್‌ನಲ್ಲಿ ವೀಕ್ಷಿಸಿದ್ದ ಜನರೆಲ್ಲರೂ ಬೆರಗುಗೊಂಡಿರುವುದಂತೂ ದಿಟ.

- ವಿದ್ಯಾ ವಿ. ಹಾಲಭಾವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com