ರೂಪಕ್ಕಿಂತ ಗುಣ ಮುಖ್ಯ

ಒಂದೂರಿನಲ್ಲಿ ದೇವಪ್ಪ-ನಂಜಮ್ಮ ದಂಪತಿ ವಾಸವಿದ್ದರು. ಅವರು ತಮ್ಮ ಒಡೆತನದಲ್ಲಿದ್ದ ಅರ್ಧ ಎಕರೆ ಜಮೀನಿನಲ್ಲೇ ಅಚ್ಚುಕಟ್ಟಾಗಿ ಸೊಪ್ಪು, ತರಕಾರಿ ಬೆಳೆದು, ಮಾರಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಉಪಕಾರದ ಸ್ವಭಾವ ಇವರು ಹಣ ಕೂಡಿಡದೆ ಬಡಬಗ್ಗರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಯಥಾಶಕ್ತಿ ನೆರವು ನೀಡುತ್ತಿದ್ದರು. ದೂರದ ಊರುಗಳಿಂದ ಯಾರೇ ಆಗಂತುಕರು ಬಂದರೂ ಅಡುಗೆ ಮಾಡಿ ಬಡಿಸುತ್ತಿದ್ದರು. ಹಾಗಾಗಿ 'ದೇವಜ್ಜ, ನಂಜಜ್ಜಿ ಇರೋತನಕ ಮಳೆ ಬರ್ಲಿ ಬಿಡ್ಲಿ ಊರು ಬರಗಾಲವಿಲ್ಲದೆ ಯಾವತ್ತೂ ಸುಭಿಕ್ಷವಾಗಿರುತ್ತೆ' ಅಂತ ಆಸುಪಾಸಿನ ಊರು ಕೇರಿ ಜನ ಹೊಗಳುತ್ತಿದ್ದರು. ಆಶ್ಚರ್ಯವೆಂದರೆ ದೇವಪ್ಪ, ನಂಜಮ್ಮ ಊರಿನ ಜನರೊಂದಿಗೆ ಬೆರೆಯುತ್ತಿರಲಿಲ್ಲ. ಕಾರಣ ಒಮ್ಮೆ ಅಜ್ಜ ಹೊಲದಲ್ಲಿ ಕಳೆ ಕತ್ತರಿಸುತ್ತಿರುವಾಗ ಆಕಸ್ಮಿಕವಾಗಿ ಮೂಗಿಗೆ ಕುಡುಗೋಲು ತಾಗಿ ತುಸು ತುಂಡಾಗಿತ್ತು. ಇನ್ನು ನಂಜಮ್ಮಳಿಗೆ ಅಕಾಲದಲ್ಲೇ ಹಲ್ಲುಗಳು ಬಿದ್ದು ಬೊಚ್ಚುಬಾಯಿಯಾಗಿತ್ತು. ಹಾಗಾಗಿ ಜನರೆದುರು ಹೇಗೆ ಕಾಣಿಸಿಕೊಳ್ಳುವುದು? ಹೊರಗೆಹೋಗುವುದೇ ಬೇಡ. ಮನೆಯಾಯಿತು, ಹೊಲವಾಯಿತು ಅಂತ ಇದ್ದುಬಿಡೋಣ ಎಂದು ಆ ದಂಪತಿ ತೀರ್ಮಾನಿಸಿದ್ದರು. ಸಂತೆ, ಜಾತ್ರೆ, ಊರಹಬ್ಬಗಳಿಗೂ ಅವರು ಹೋಗುತ್ತಿರಲಿಲ್ಲ.
ಹೀಗಿರಲು, ಊರಿನ ಚೇರ್ಮನ್ ಬಸಣ್ಣ ತಾನು ಚುನಾವಣೆಯಲ್ಲಿ ಮರುಆಯ್ಕೆಗೊಂಡಿದ್ದಕ್ಕಾಗಿ ಊರಿನವರಿಗೆಲ್ಲ ಭೋಜನ ಏರ್ಪಡಿಸಿದ್ದ. ಅವನ ಮನೆಯ ಮುಂದೆ ದೊಡ್ಡ ಪೆಂಡಾಲ್ ಹಾಕಿಸಿದ್ದ. ತನ್ನ ಆಳುಗಳನ್ನು ದೇವಪ್ಪನಲ್ಲಿಗೆ ಕಳಿಸಿ ಖಂಡಿತವಾಗಿ ಪತ್ನಿ ಸಮೇತ ಬಂದು ಪೂಜೆ, ಪುನಸ್ಕಾರದಲ್ಲಿ ಭಾಗವಹಿಸಿ, ಊಟ ಸ್ವೀಕರಿಸಬೇಕೆಂದು ಆಮಂತ್ರಣ ಕಳುಹಿಸಿದ್ದ. ಧರ್ಮಸಂಕಟಕ್ಕೆ ಸಿಲುಕಿದ ವೃದ್ಧರು, ಈಗೇನು ಮಾಡುವುದು? ಬಸಣ್ಣ ಅತಿ ಪ್ರೀತಿ, ವಿಶ್ವಾಸದಿಂದ ತಮ್ಮನ್ನು ಆಮಂತ್ರಿಸಿದ್ದಾನೆ. ಹಿರಿಯರಾದ ತಾವೇ ಅದನ್ನು ಕಡೆಗಣಿಸುವುದು ನ್ಯಾಯಸಮ್ಮತವಲ್ಲ... ಹೀಗೆ ಯೋಚಿಸಿದ ಅವರಿಗೆ ಒಂದುಪಾಯ ಹೊಳೆಯಿತು. ಅದೆಂದರೆ, ದೇವಪ್ಪ ಮೂಗಿನ ಊನ ಕಾಣದಂತೆ ಮೇಣ ಮೆತ್ತಿಕೊಳ್ಳುವುದು. ನಂಜಮ್ಮ ಬಾಯಿ ಹೊಲಿದುಕೊಳ್ಳುವುದು!
ಸರಿ, ಅಂದು ಬಸಣ್ಣನ ಮನೆಗೆ ವೃದ್ಧ ದಂಪತಿ ಬಂದರು. ಕಣ್ಸನ್ನೆಯಿಂದಲೇ ಬಂದವರ ಉಭಯಕುಶಲೋಪರಿ ನಡೆಸಿದರು. ಪೂಜೆ ಸಾಂಗವಾಗಿ ನೆರವೇರಿತು. ಇನ್ನೇನು ಊಟಕ್ಕೆ ಕೂರುವ ಸಮಯ, ಅಜ್ಜ ಹೋಮಕುಂಡದ ಸಮೀಪವೇ ಕುಳಿತಿದ್ದ ಕಾರಣ ಅವನ ಮುಖಕ್ಕೆ ಹೋಮದ ಕಾವು ತಗುಲಿ ಮುಗಿಗೆ ಮೆತ್ತಿದ್ದ ಮೇಣ ಕರಗಿಹೋಯಿತು! ಇದನ್ನು ಕಂಡ ಅಜ್ಜಿ ಜೋರಾಗಿ ನಕ್ಕಿದ್ದರಿಂದ ಆಕೆ ಬಾಯಿಗೆ ಹಾಕಿದ ಹೊಲಿಗೆ ಕೂಡ ಬಿಚ್ಚಿಹೋಯಿತು. ಇವರಿಬ್ಬರನ್ನೂ ಕಂಡ ಜನ ನಗಲು ಪ್ರಾರಂಭಿಸಿದರು.
ಬಸಣ್ಣ ವೃದ್ಧರ ಬಳಿ ಬಂದು, 'ನೋಡಿ, ನಾನು ಅನುಭವದಲ್ಲಿ, ವಯಸ್ಸಿನಲ್ಲಿ ನಿಮಗಿಂತಲೂ ಸಣ್ಣವ. ಆದರೂ ಒಂದು ಮಾತು ಹೇಳಲೇಬೇಕಿದೆ. ನೀವು ಯಾರು, ನಿಮ್ಮ ಗುಣವೇನು, ನೀವೆಷ್ಟು ಸಂಪನ್ನರು, ಉದಾರಿಗಳು ಎನ್ನುವುದು ನಮ್ಮ ಊರಿಗೇನು, ನೆರೆಹೊರೆ ಊರುಗಳಿಗೂ ಗೊತ್ತಿದೆ. ನೀವು ಹೀಗೆ ಜನ ಏನೆಂದು ತಿಳಿಯುತ್ತಾರೆ ಅಂತ ಈ ಅವಸ್ಥೆಯಲ್ಲಿ ಅವರೆದುರಿಗೆ ಕಾಣಿಸಿಕೊಳ್ಳುವ ಅಗತ್ಯವೇ ಇಲ್ಲ. ನೀವು ಹೇಗಿದ್ದರೂ ಜನ ನಿಮ್ಮನ್ನು ಪ್ರೀತಿ, ಗೌರವದಿಂದ ಕಾಣುತ್ತಾರೆ. ಮನುಷ್ಯನಿಗೆ ಬಾಹ್ಯರೂಪ ಮುಖ್ಯವಲ್ಲ. ಅವನ ಅಂತರಂಗ ಎಷ್ಟು ಶುದ್ಧ ಎನ್ನುವುದು ಮುಖ್ಯ. ಬನ್ನಿ ಎಲ್ಲರೊಂದಿಗೆ ಭೋಜನಕ್ಕೆ. ಸಂಕೋಚವಿಲ್ಲದೆ ಕುಳಿತುಕೊಳ್ಳಿ. ನಿಮ್ಮ ಹಾರೈಕೆ ಎಲ್ಲರ ಮೇಲೆ ಇರಲಿ' ಎಂದು ವಿನಂತಿಸಿಕೊಂಡ.
ಇಷ್ಟು ದಿನ ತಮಗೇಕೆ ಇದರ ಅರಿವಾಗಲಿಲ್ಲ ಎಂದು ದೇವಪ್ಪ-ದೇವಮ್ಮ ಪೆಚ್ಚಾದರು. ಬಸಣ್ಣನನ್ನು ತಮ್ಮ ಪಕ್ಕದಲ್ಲಿ ಕೂರಲು ಹೇಳಿ ಸಂತೋಷದಿಂದ ಭೋಜನ ಸವಿದರು.
- ಬಿಂಡಿಗನವಿಲೆ ಭಗವಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


