ದಾರಿ ತೋರಿಸಿದ ತಾಯಿ

ಬಹಳ ಹಿಂದೆ ಒಂದು ಜನಾಂಗದಲ್ಲಿ ವಿಚಿತ್ರ ಪದ್ಧತಿಯಿತ್ತು. ಕುಟುಂಬದ ಚಿಕ್ಕ ಮಗ ತನ್ನ ತಂದೆ ಅಥವಾ ತಾಯಿಗೆ ಎಪ್ಪತ್ತೈದು ವರ್ಷವಾಗುತ್ತಿದ್ದಂತೆ ಅವರನ್ನು ಕಾಡಿನಲ್ಲಿ ಬಿಟ್ಟು ಬರಬೇಕಿತ್ತು. ದೊಡ್ಡ ಗಾತ್ರದ ಬ್ರೆಡ್ಡ್ ತುಂಡನ್ನು ನೀಡಿ ಕಾಡು ಮೃಗಗಳಿರುವ ದಟ್ಟ ಪರ್ವತ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದರು. ಶಕ್ತಿಗುಂದಿದ ದೇಹವಾದುದರಿಂದ ಆಹಾರ ಗಳಿಸಲು ಸಾಧ್ಯವಾಗದೆ ಹಸಿವಿನಿಂದ ಪ್ರಾಣ ಬಿಡುತ್ತಿದ್ದರು ಅವರು. ಹಲವು ಸಂದರ್ಭಗಳಲ್ಲಿ ಕಾಡು ಪ್ರಾಣಿಗಳ ಬಾಯಿಗೆ ತುತ್ತಾಗುತ್ತಿದ್ದರು.
ಆ ವಿಚಿತ್ರ ಜನಾಂಗದ ಸದಸ್ಯ ಪ್ರಸಾದನ ತಾಯಿಗೂ ಎಪ್ಪತ್ತೈದು ತುಂಬಿತು. ಅಂತೆಯೇ ಪ್ರಸಾದ ತನ್ನ ತಾಯಿಯನ್ನು ಕಾಡಿಗಟ್ಟಲು ಅನುವಾದ. ಒಂದು ಬ್ರೆಡ್ಡನ್ನು ಕೊಟ್ಟು ಆಕೆಯನ್ನು ಕಾಡಿಗೆ ಕರೆತಂದ. ಅವರಿಬ್ಬರು ಮೌನವಾಗೇ ಬಹಳ ದೂರ ಸಾಗಿದರು. ದಟ್ಟವಾದ ಕಾಡಿನ ಭಾಗ ತಲುಪಿದಾಗ ತನ್ನ ಕರ್ತವ್ಯ ಮುಗಿಸಲು ಪ್ರಸಾದ ಅಣಿಯಾದನು. ತಾಯಿಗೆ ಕೊನೆಯ ಬಾರಿ ಎಂಬಂತೆ ನಮಸ್ಕರಿಸಿದ.
ಇನ್ನೇನು ಊರಿನ ಕಡೆಗೆ ಮುಖ ಮಾಡಬೇಕೆನ್ನುವಷ್ಟರಲ್ಲಿ ತಾಯಿ ಮಮತೆಯ ಸ್ವರದಲ್ಲಿ, 'ಮಗನೇ... ನೀನೇಕೆ ನನ್ನನ್ನಿಲ್ಲಿಗೆ ಕರೆ ತಂದಿರುವೆ ಎಂಬುದು ನನಗೆ ಗೊತ್ತು. ಆದರೆ ನಿನ್ನ ಕ್ಷೇಮ ನನಗೆ ಬಹಳ ಮುಖ್ಯ. ಈಗ ಕತ್ತಲಾಗುತ್ತಿದೆ. ಹಿಂದಿರುಗಿ ಹೋಗುವಾಗ ನಿನಗೆ ದಾರಿ ತಪ್ಪಬಹುದು. ಅದಕ್ಕಾಗಿ, ನೀನು ಕೊಟ್ಟಿದ್ದ ಬ್ರೆಡ್ಡನ್ನು ದಾರಿಯುದ್ದಕ್ಕೂ ಹಾಕಿದ್ದೇನೆ. ಅದರ ಸಹಾಯದಿಂದ ನೀನು ಕ್ಷೇಮವಾಗಿ ಮನೆ ತಲುಪಬಹುದು' ಎಂದಳು.
ಪ್ರಸಾದನಿಗೆ ತನ್ನ ಪಾಪ ಕೃತ್ಯದ ಅರಿವಾಗಿತ್ತು. ತನ್ನನ್ನು ಕಾಡಲ್ಲಿ ಒಬ್ಬಂಟಿಯಾಗಿ ಬಿಟ್ಟು ಕಾಡು ಮೃಗಗಳಿಗೆ ಆಹಾರ ಒದಗಿಸುತ್ತಿದ್ದಾನೆ ಎಂಬ ಅರಿವಿದ್ದರೂ ಮಗನ ಕ್ಷೇಮ ಬಯಸಿದ ತಾಯಿ ದೇವತೆ ಎಂಬುದು ಅರಿವಿಗೆ ಬಂತು. ಅಮ್ಮನ ಕಾಲಿಗೆರಗಿ ಕ್ಷಮೆ ಕೋರಿದ. ಮರಳಿ ತನ್ನ ಜೊತೆ ಮನೆಗೆ ಬರುವಂತೆ ಕೇಳಿಕೊಂಡ. ಆಗ ಅವಳು 'ನಿನ್ನ ಜನಾಂಗ ನಿಯಮಿಸಿರುವ ಕರ್ತವ್ಯ ಮಾಡು' ಎಂದಳು.
ಇದರಿಂದ ತನ್ನ ಜನಾಂಗ ಮಾಡುತ್ತಿರುವ ಘನಘೋರ ತಪ್ಪಿನ ಅರಿಕೆ ಪ್ರಸಾದನಿಗಾಯಿತು. ತನ್ನವರಿಗೆ ತಂದೆ ತಾಯಿಯರ ಮಹತ್ವವನ್ನು ತಿಳಿಸಿ ಇಂಥ ತಪ್ಪುಗಳನ್ನು ಮಾಡಬಾರದು ಎಂದು ಮನವರಿಕೆ ಮಾಡುವ ಸಂಕಲ್ಪವನ್ನು ಕೈಗೊಂಡ. ಇದರಿಂದ ತೃಪ್ತಿಗೊಂಡ ತಾಯಿ ಮಗನೊಂದಿ ವಾಪಸಾಗಲು ಒಪ್ಪಿಕೊಂಡಳು.
ಮನೆಗೆ ಹಿಂದಿರುಗಿದ ಪ್ರಸಾದ ನಡೆದ ಘಟನೆಯನ್ನು ಎಲ್ಲರಿಗೂ ತಿಳಿಸಿ, ತಂದೆ ತಾಯಿಯೇ ದೇವರ ಪ್ರತಿರೂಪ ಎಂದು ಪ್ರತಿಪಾದಿಸಿದ. ವಯಸ್ಸಾದ ತಂದೆ ತಾಯಿಯನ್ನು ಅಡವಿಯಲ್ಲಿ ಬಿಟ್ಟು ಬರುವ ಪದ್ಧತಿಯನ್ನು ತೊಡೆದು ಹಾಕುವಂತೆ ಬೇಡಿಕೊಂಡ.
- ಎಚ್. ಗವಿಸಿದ್ದಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


