ಇಲಿ ಮರಿಯೂ, ಗಡವ ಬೆಕ್ಕೂ

ಪುಟಾಣಿ ಇಲಿ ಮರಿಯೊಂದು ಉಗ್ರಾಣದಲ್ಲಿ ಸೇರಿಕೊಂಡು ಅಲ್ಲಿ ಅಕ್ಕಿಯೋ, ಗೋಧಿಯೋ ..
ಇಲಿ ಮರಿಯೂ, ಗಡವ ಬೆಕ್ಕೂ
Updated on: 

ಪುಟಾಣಿ ಇಲಿ ಮರಿಯೊಂದು ಉಗ್ರಾಣದಲ್ಲಿ ಸೇರಿಕೊಂಡು ಅಲ್ಲಿ ಅಕ್ಕಿಯೋ, ಗೋಧಿಯೋ ಏನಾದರೂ ತಿನ್ನುವುದನ್ನು ಬಿಟ್ಟು ಚಾಕಲೇಟ್, ಗೋಡಂಬಿ, ದ್ರಾಕ್ಷಿ ಮತ್ತು ಬಾದಾಮಿಯನ್ನು ಮೇಯುತ್ತಿತ್ತು. ಅದೇ ರೀತಿ ಅಂದೂ ಕೂಡ ಅದೇ ಬೇಟೆಯಲ್ಲಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಪುಟು ಪುಟು ಓಡಾಡುತ್ತಿತ್ತು. ಅದರ ಕಾಟ ತಡೆಯಲಾಗದೇ ಎಲ್ಲವನ್ನೂ ಡಬ್ಬಿಗಳಲ್ಲಿ ಭದ್ರ ಮಾಡಿದ್ದರು. ಘಮ ಘಮ ವಾಸನೆ ಮೂಗಿಗೆ ಬಡಿಯುತ್ತಿದ್ದರೂ ಬಾಯಿಗೆ ಸಿಕ್ಕುತ್ತಿಲ್ಲ.. ಹೊಟ್ಟೆ ತುಂಬುತ್ತಿಲ್ಲ.. ಎಂಬ ಹತಾಶೆಯಿಂದ ಹಪಹಪಿಸುತ್ತಾ ಅಲ್ಲೆಲ್ಲಾ ಪರದಾಡುತ್ತಿದ್ದಾಗ ಒಂದು ಬಿಳಿ ಗಡವ ಬೆಕ್ಕು ಇಲಿಯತ್ತ ಛಂಗನೆ ಎಗರಿ ಹಿಡಿಯುವುದರಲ್ಲಿತ್ತು. ಹಸಿದಿದ್ದ ಇಲಿಯ ಮೇಲೆ ಹಸಿದ ಬೆಕ್ಕಿನ ಆಕ್ರಮಣ ಜೋರಾಗಿಯೇ ಇತ್ತು. ಇದನ್ನು ನಿರೀಕ್ಷಿಸದ ಇಲಿ ತನ್ನ ಆರನೇ ಇಂದ್ರಿಯದ ಎಚ್ಚರಿಕೆಯಂತೆ ಜೀವ ಭಯದಿಂದ ಓಟಕಿತ್ತಿತ್ತು.
ಉಗ್ರಾಣದಿಂದ ಹೊರಕ್ಕೆ, ಅಂಗಳಕ್ಕೆ, ಅಂಗಳದಿಂದ ಪಕ್ಕದ ದೇವಾಲಯದ ಪ್ರಾಂಗಣ, ಧ್ವಜಸ್ತಂಭದ ಸುತ್ತ, ಅರಳಿಕಟ್ಟೆಯ ಮರದ ಮೇಲೆ, ಕೆಳಗೆ, ಗಿಡಗಳ ಮಧ್ಯೆದಲ್ಲಿ ಓಡಿದ್ದೇ ಓಡಿದ್ದು... ಆದರೆ ಸಿಕ್ಕ ಆಹಾರವನ್ನು ಬಿಟ್ಟವರುಂಟೆ ಎಂದು ಗಡವ ಕೂಡ ಇದರ ಬೆನ್ನಟ್ಟಿತ್ತು. ಆದರೆ ಚೋಟಾ ಚುವ್ವಾದ ರನ್ನಿಂಗ್ ರೇಸ್‌ನಲ್ಲಿ ಯಾವ ಅಥ್ಲೆಟ್‌ಗೂ ಕಡಿಮೆ ಇರಲಿಲ್ಲ. ಏಕೆಂದರೆ ಸಾವು-ಬದುಕಿನ ಹೋರಾಟವಲ್ಲವೆ? ಇದರ ಮಧ್ಯೆ ತಪ್ಪಿಸಿಕೊಂಡು ಯಾವುದಾದರೂ ಸಂದಿ ಇದೆಯೇ ಎಂದು ಎಷ್ಟು ಹುಡುಕಿದರೂ ಕಣ್ಣಿಗೆ ಕಾಣುತ್ತಿಲ್ಲ.. ಹೀಗಿರುವಾಗ ಅಲ್ಲೇ ಮನೆಯ ನಿರ್ಮಾಣಕ್ಕಾಗಿ ತಂದು ಹಾಕಿದ್ದ ಪೈಪ್‌ಗಳು ಗೋಚರಿಸಿದವು. ಒಂದೇ ನೆಗೆತದಲ್ಲಿ ಆ ಪೈಪ್‌ನಲ್ಲಿ ತೂರಿಕೊಂಡು ಬದುಕಿದೆಯಾ ಬಡ ಜೀವವೇ ಎಂದು ತಿರುಗಿ ನೋಡುತ್ತಿದ್ದಂತೆ ಕೊಳವೆಯೊಳಗೆ ಒಮ್ಮೆಲೆ ಕತ್ತಲು ಆವರಿಸಿತು ನೋಡೋಣವೆಂದು ಇನ್ನೊಂದು ಮೂತಿಯಿಂದ ಹೊರಬಂದು ನೋಡಿದರೆ ತನ್ನ ಶತ್ರು ಮಹಾಶಯ ತನ್ನತ್ತ ನುಗ್ಗುವ ಆತುರದಲ್ಲಿ ಆ ಪೈಪ್‌ನಲ್ಲಿ ತಲೆ ಹಾಕಿದ್ದ, ದೇಹವು ಹೊರಗೆ ಉಳಿದಿದೆ.. ಒಳ ಹೋಗುವ ಹಾಗೂ ಇಲ್ಲ, ಹೊರ ಬರಲೂ ಆಗುತ್ತಿಲ್ಲ. ವಿಲವಿಲನೆ ಒದ್ದಾಡುತ್ತಾ 'ಹೆಲ್ಪ್.. ಹೆಲ್ಪ್‌'ಎಂಬ ದನಿಯಲ್ಲಿ 'ಮಿಯಾವ್ ಮಿಯಾವ್‌' ಎನ್ನುತ್ತಿತ್ತು... ಇಂತಹ ದೃಶ್ಯವನ್ನು ನಿರೀಕ್ಷಿಸದೇ ಇದ್ದ ಇಲಿಮರಿಗೆ ಆತಂಕ, ನೋವು, ಕನಿಕರಗಳು ಒತ್ತರಿಸಿ ಬಂದವು.
ಸರಿ, ಶತ್ರುವಾದರೇನು ಸಂಕಷ್ಟದಲ್ಲಿ ಇರುವವರನ್ನು ರಕ್ಷಿಸಬೇಕಾದದ್ದು ಧರ್ಮವೆಂದು ಅಂದೆಂದೋ ವಿದ್ವಾಂಸರು ಪುರಾಣ ಕಥೆಗಳನ್ನು ಹೇಳುವಾಗ ಕೇಳಿದ್ದ ಮಾತು ನೆನಪಾಯ್ತು. ತಾನೂ ಹಸಿದಿದ್ದರಿಂದ ಹಸಿದವರ ಸ್ಥಿತಿಯನ್ನು ಅರ್ಥ ಮಾಡಿಕೊಂಡ ಇಲಿ, ಬೆಕ್ಕಿನ ಹತ್ತಿರ ಹೋಗಿ ಅದರ ಮೈಮೇಲೆಲ್ಲ ಓಡಾಡಿತು. ಬಾಲವನ್ನು ಹಿಡಿದು ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ಜಗ್ಗಿತು. ಹೀಗೆಲ್ಲ ತನ್ನ ಆಹಾರವೇ ತನ್ನ ಮೇಲೆ ಓಡಾಡುತ್ತಿದೆಯಲ್ಲ ಎಂದು ಗೊತ್ತಾಗುತ್ತಿದ್ದಂತೆ ಏನೆಲ್ಲ ಹರಸಾಹಸ ಮಾಡಿ ಬೆಕ್ಕು ತಲೆಯನ್ನು ಹೊರಗೆಳೆದುಕೊಂಡಿತು. ಮರುಜನ್ಮ ಬಂದಂತೆ ಅನ್ನಿಸಿ ಮೈ ಜಾಡಿಸಿಕೊಂಡಿತು. ಸದ್ಯ ಈ ಗಡವ ಬೆಕ್ಕು ಜೀವ ಸಹಿತ ಬದುಕುಳಿಯಿತಲ್ಲ ಎಂದು ಹರ್ಷ ಪಡುತ್ತಲೇ ತನ್ನ ಜೀವ ಉಳಿಸಿಕೊಳ್ಳಲು ಎಗರಿ ಓಡಿತು. ತನ್ನನ್ನು ಬದುಕಿಸಿದ ಇಲಿಮರಿಗೆ ಕೃತಜ್ಞತೆ ಹೇಳಲು ಬೆಕ್ಕು ಮುಂದಾದರೂ ಆ ಇಲಿಸುಂಡ ಮಾತ್ರ ಜಾಗ ಖಾಲಿ ಮಾಡಿತ್ತು. ಆದರೂ ಮನದಲ್ಲೇ ಹರಸಿ ಪಕ್ಕದ ಮನೆಯಿಂದ ಬರುತ್ತಿದ್ದ ಹಾಲಿನ ವಾಸನೆಯ ಜಾಡನ್ನು ಹಿಡಿದು ಬದುಕಿದೆಯಾ ಬಡ ಜೀವವೆ ಎಂದುಕೊಳ್ಳುತ್ತಾ ಅಲ್ಲಿಂದ ಹೊರಟಿತು.


- ಕೆ. ಶ್ರೀನಿವಾಸರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com