ಕೊಚ್ಚಿ ಹೋದ ಅರ್ಜಿ!
- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಕಾವೇರಿ ನಿಯಂತ್ರಣ ಮಂಡಳಿ ರಚಿಸಬೇಕೆಂಬ ತಮಿಳುನಾಡು ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
ದೇವರ ಕೃಪೆಯಿಂದ ಒಳ್ಳೆಯ ಮಳೆಯಾಗಿದೆ. ಕಾವೇರಿ ಜಲ ವಿವಾದ ಕುರಿತು ಯಾವುದೇ ವಿಚಾರಣೆ ಸದ್ಯಕ್ಕೆ ಬೇಡ ಎಂದು ನ್ಯಾ. ಆರ್.ಎಂ. ಲೋಧ ಮತ್ತು ನ್ಯಾ.ಮದನ್ ಬಿ. ಲೋಕೂರ್ ಅವರಿದ್ದ ದ್ವಿಸದಸ್ಯ ಪೀಠವು ತಮಿಳುನಾಡಿಗೆ ತಿಳಿ ಹೇಳಿತು.
ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಕಾವೇರಿ ನಿಯಂತ್ರಣ ಮಂಡಳಿ ರಚಿಸಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆತ್ತಿಕೊಂಡ ದ್ವಿಸದಸ್ಯ ಪೀಠವು, ಒಳ್ಳೆ ಮಳೆಯಾಗಿದೆ. ಕಾವೇರಿ ತುಂಬಿ ಹರಿಯುತ್ತಿದ್ದಾಳೆ. ಈ ಹೊತ್ತಿನಲ್ಲಿ ಕಾವೇರಿ ಜಲ ವಿವಾದ ಕುರಿತು ಯಾವುದೇ ಚರ್ಚೆ ಬೇಡ. ಕಾವೇರಿ ನ್ಯಾಯಮಂಡಳಿ ರಚನೆ ಕುರಿತು ಈ ನ್ಯಾಯಪೀಠವು ಯಾವುದೇ ಆದೇಶವನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ, ಅರ್ಜಿಯನ್ನು ವಿಲೇವಾರಿ ಮಾಡಿ ವಜಾಗೊಳಿಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ತಮಿಳುನಾಡಿನ ಪರ ವಕೀಲ ವೈದ್ಯನಾಥನ್ ಅವರು, 'ಕಾವೇರಿ ಉಸ್ತುವಾರಿ ಸಮಿತಿ ಮೂರು ಸಭೆಗಳಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಕೂಡಲೇ ಕಾವೇರಿ ನಿಯಂತ್ರಣ ಮಂಡಳಿ ರಚಿಸುವಂತೆ ಕೇಂದ್ರಕ್ಕೆ ಆದೇಶ ನೀಡಬೇಕು' ಎಂದು ಮನವಿ ಮಾಡಿದರು.
ಕಾವೇರಿ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ಕೈಗೆತ್ತಿಕೊಳ್ಳುವಂತೆಯೂ ವೈದ್ಯ ನಾಥನ್ ಮನವಿ ಮಾಡಿದರು.
ಜನವರಿಗೆ ಮುಂದೂಡಿಕೆ: ಆದರೆ, ತಕ್ಷಣ ಕೈಗೆತ್ತಿಕೊಳ್ಳಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಪೀಠವು, ಕಾವೇರಿ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ 4 ರಾಜ್ಯಗಳು ಮೇಲ್ಮನವಿ ಸಲ್ಲಿಸಿವೆ. ಹೀಗಾಗಿ ಈಗಲೇ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಬರುವ ಜನವರಿ ಎರಡನೇ ವಾರದಲ್ಲಿ ವಿಚಾರಣೆಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದರು. ಈ ಹಿಂದಿನ ವೇಳಾಪಟ್ಟಿಯಂತೆ ನಾಲ್ಕು ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ಮಂಗಳವಾರದಿಂದ ಆರಂಭವಾಗಬೇಕಿತ್ತು. ಆದರೆ, ಸೋಮವಾರ ನ್ಯಾಯಪೀಠವು ಆ ಅರ್ಜಿಗಳ ವಿಚಾರಣೆಯನ್ನು ಜನವರಿಗೆ ಮುಂದೂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

