ಪ್ರಧಾನ ಸುದ್ದಿ

ಸಿದ್ರಾಮಯ್ಯಗೆಲ್ಲೋ ಭ್ರಾಂತು

ಸಿದ್ರಾಮಯ್ಯಗೆಲ್ಲೋ ಭ್ರಾಂತು
Published On :

ಬೆಂಗಳೂರು: ಮುಖ್ಯಮಂತ್ರಿ ಸಿದ್ರಾಮಯ್ಯ ಭ್ರಾಂತಿಗೆ ಒಳಗಾಗಿದ್ರೆ ನಾನೇನು ಮಾಡಲು ಸಾಧ್ಯ? 1994 ರಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ತಾವೇ ಅಂತ ಹೇಳಿಕೊಂಡಿದ್ದಾರೆ. ಅವರ್ಯಾರ್ರೀ ನನ್ನನ್ನು ಸಿಎಂ ಮಾಡೋಕೆ? ಅವತ್ತಿಗೆ ಅವರು ಏನಾಗಿದ್ರು? ಜನ ಮತ್ತು ಪಕ್ಷದ ನಾಯಕರು ನನ್ನನ್ನ ಸಿಎಂ ಮಾಡಿದ್ರೇ ಹೊರತು ಸಿದ್ರಾಮಣ್ಣನೂ ಅಲ್ಲ, ತಿಮ್ಮಣ್ಣನೂ ಅಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಗುಟುರು ಹಾಕಿದ್ದಾರೆ.
1996 ಹಾಗೂ 2004 ರಲ್ಲಿ ಅವರು ಸಿಎಂ ಆಗುವುದನ್ನು ತಪ್ಪಿಸಿದವನು ನಾನಂತೆ. ನಾನು ಈ ವಿಚಾರದಲ್ಲಿ ಯಾರನ್ನೂ ಪ್ರೆಸ್ ಮಾಡಲಿಲ್ಲವಂತೆ. 96 ರಲ್ಲಿ ನಾನು ಪ್ರಧಾನಿ ಆದ ಸಂದರ್ಭ ಸಿಎಂ ಪದವಿ ಪೈಪೋಟಿಗೆ ಬಿದ್ದ ಇದೇ ಸಿದ್ದರಾಮಯ್ಯನನ್ನು ಜೆ.ಎಚ್. ಪಟೇಲ್ ಮೆಟ್ಟು ಹಿಡಿದು ಪ್ರಶ್ನೆ ಮಾಡಿದ್ದರು. 2004ರಲ್ಲಿ ಸೋನಿಯಾಗಾಂಧಿ ಸಿಎಂ ಪದವಿ ಕಾಂಗ್ರೆಸ್‌ಗೇ ಬೇಕು ಎಂದು ಪಟ್ಟು ಹಿಡಿದು ಕೈ ಎತ್ತಿದರು. ಸಮಯ, ಸಂದರ್ಭ, ಪರಿಸ್ಥಿತಿ ಎಲ್ಲವಕ್ಕೂ ಪ್ರತ್ಯಕ್ಷಸಾಕ್ಷಿ ಆಗಿದ್ದ ಸಿದ್ದರಾಮಯ್ಯ ಅವತ್ತಿಂದ ಇವತ್ತಿನವರೆಗೂ ನನ್ನ ವಿರುದ್ಧ ಅಪಪ್ರಚಾರ ಮಾಡಿಕೊಂಡೇ ಬಂದಿದ್ದಾರೆ. ಅವರಿಗೆ ಖುಷಿ ಆಗುವುದಿದ್ದರೆ ಇನ್ನಷ್ಟು ಮುಂದುವರಿಸಲಿ ಎಂದು ಹೇಳಿದ್ದಾರೆ.
ನನ್ನನ್ನು ಮುಖ್ಯಮಂತ್ರಿ ಮಾಡುವ ತಾಕತ್ತು ಇದ್ದ ಸಿದ್ದರಾಮಯ್ಯನವರಿಗೆ ತಾವು ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರವಾಗಿರಲಿಲ್ಲವಲ್ಲಾ? ಅವರೇಕೆ ಇಷ್ಟು ವರ್ಷ ಸೈಕಲ್ ತುಳಿಯಬೇಕಿತ್ತು? ಸಿದ್ದರಾಮಯ್ಯ ಯಾವತ್ತಿಗೂ ಸುತ್ತಮುತ್ತಲಿನವರು ಸೃಷ್ಟಿಸಿದ ಭ್ರಮಾಲೋಕದಲ್ಲೇ ಸುತ್ತಿದವರು. ಅದು ಇವತ್ತಿಗೂ ಮುಂದುವರಿದಿದೆ. ಹೀಗಾಗಿ ಅವರನ್ನು ನಂಬಿಸಲು ಈ ಪ್ರಪಂಚದಲ್ಲಿ ಯಾರಿಗೂ ಸಾಧ್ಯವಿಲ್ಲ. ಸತ್ಯ ಸಂಗತಿಗಳು ಅವರಿಗೆ ಮನವರಿಕೆ ಆಗುವುದೂ ಇಲ್ಲ. ಅವರನ್ನು ನಂಬಿಸಲು ಹೋದವರು ಮೂರ್ಖರಾಗುತ್ತಾರೆ. ಕಾಲ ಬಂದಾಗ ಅವರ ಭ್ರಮೆ ತನ್ನಂತಾನೇ ಕಳಚಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಯಾರು ಯಾರನ್ನು ಮುಖ್ಯಮಂತ್ರಿ ಮಾಡಿದರು, ಯಾರು ಯಾರಿಗೆ ತಪ್ಪಿಸಿದರು ಎಂಬ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಇತ್ತೀಚೆಗೆ ಕಿತ್ತಾಡಿಕೊಂಡದ್ದು, ಬೆಂ. ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳ ಮರುಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗಳಲ್ಲಿ ಬಿಜೆಪಿ ಜತೆ ಜೆಡಿಎಸ್ ಒಳಒಪ್ಪಂದಕ್ಕೆ ಮುಂದಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಗೌಡರು ಪತ್ರಿಕೆ ಜತೆ ಸುದೀರ್ಘವಾಗಿ ಮಾತಾಡಿದ್ದಾರೆ.          

ಸಂದರ್ಶನದ ಪೂರ್ಣಪಾಠ ಹೀಗಿದೆ:
1994 ರಲ್ಲಿ ನಾನು ಮುಖ್ಯಮಂತ್ರಿ ಆಗುವಾಗ ಯಾರ್ಯಾರು ಏನೇನು ಕಷ್ಟಕೋಟಲೆ ಕೊಟ್ಟರು, ಯಾರ್ಯಾರು ಅಡ್ಡಗಾಲು ಹಾಕಿದರು, ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ಮಾಡಿದರು ಎಂಬುದು ಚೆನ್ನಾಗಿ ಗೊತ್ತಿದೆ. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗೆ ದಿಲ್ಲಿಯಿಂದ ಬೆಂಗಳೂರಿಗೆ ವೀಕ್ಷಕರಾಗಿ ಬಂದ ಬಿಜುಪಟ್ನಾಯಕ್ ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಾ, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಈಗಾಗಲೇ ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಆ ಹುದ್ದೆಗೆ ಈಗ ದೇವೇಗೌಡ ಸಹಜ ಆಯ್ಕೆ ಎಂದು ಹೇಳಿದ್ದರು. ನಂತರ ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಉಪಾಹಾರ ಸಭೆಗೆ ನಾನು, ಹೆಗಡೆ, ಬೊಮ್ಮಾಯಿ, ಪಟೇಲ್ ಹೋಗಿದ್ದೆವು. ಆಗ ಸಹನೆ ಕಳೆದುಕೊಂಡು ಬುಸುಗುಡುತ್ತಿದ್ದ ಹೆಗಡೆ, ಸಿಎಂ ಗಾದಿಗೆ ದೇವೇಗೌಡರನ್ನು ಸಹಜ ಆಯ್ಕೆ ಎಂದು ಘೋಷಣೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು ಅಂತ ಟೇಬಲ್ ಕುಟ್ಟಿ ಬಿಜುಪಟ್ನಾಯಕ್ ಅವರನ್ನು ಪ್ರಶ್ನಿಸಿದರು. ಬಿಜು ನೋವು ಮಾಡಿಕೊಂಡರು. ಅಲ್ಲಿಯವರೆಗೂ ಸುಮ್ಮನಿದ್ದ ನಾನು, ಮುಖ್ಯಮಂತ್ರಿ ಗಾದಿಗೆ ನಾನೂ ಒಬ್ಬ ಸ್ಪರ್ಧಿ ಎಂದು ಹೆಗಡೆ ಮುಖಕ್ಕೆ ಹೇಳಿ ಪಟೇಲ್ ಕರೆದುಕೊಂಡು ಆಚೆ ಬಂದೆ. ವಿಷಯ ಹಬ್ಬಿ ವಿಧಾನಸೌಧದ ಸುತ್ತ ಲಕ್ಷಾಂತರ ಮಂದಿ ಮತದಾರ ಅಭಿಮಾನಿಗಳು ಸೇರಿದರು. ಗೊಂದಲ, ದೊಂಬಿ ಏನೆಲ್ಲ ಆಯಿತು. ಯಾರೋ ಹೆಗಡೆ ಅವರಿಗೆ ಚಪ್ಪಲಿಯಲ್ಲಿ ಹೊಡೆದರು. ಅದನ್ನು ರೇವಣ್ಣ ಮಾಡಿಸಿದ ಅಂತ ಅಪಪ್ರಚಾರ ಮಾಡಲಾಯಿತು. ವಾಸ್ತವವಾಗಿ ರೇವಣ್ಣ ಮರುಎಣಿಕೆಗಾಗಿ ಹೊಳೆನರಸೀಪುರದಲ್ಲಿದ್ದ. ಕೋದಂಡರಾಮಯ್ಯ ಪೊಲೀಸ್ ಕಮಿಷನರ್. ಅವರೇ ನನ್ನನ್ನು ಕರೆದುಕೊಂಡು ಹೋದರು. ಗಲಾಟೆ ರಾಜ್ಯಾದ್ಯಂತ ಹಬ್ಬುವ ಸೂಚನೆ ಸಿಕ್ಕಿ, ಪ್ರಮಾಣ ಬೋಧಿಸುವುದೇ ಪರಿಹಾರ ಎಂದು ಗುಪ್ತಚರ ಇಲಾಖೆ ರಾಜ್ಯಪಾಲ ಖುರ್ಷಿದ್ ಅಲಂಖಾನ್ ಅವರಿಗೆ ವರದಿ ಕೊಟ್ಟಿತು. ನಂತರ ನಾನು ಸಿಎಂ ಆಗಿ ಪ್ರಮಾಣ ಸ್ವೀಕರಿಸಿದೆ. ಪಾಪ, ಸಿದ್ದರಾಮಯ್ಯ ಅವರಿಗೆ ಈ ಘಟನೆಗಳೆಲ್ಲವೂ ಮರೆತು ಹೋಗಿರಬಹುದು. ಸಾಧ್ಯವಾದರೆ ನೆನಪಿಸಿಕೊಳ್ಳಲಿ. ನನ್ನನ್ನು ಸಿಎಂ ಮಾಡಿದ್ದು ಯಾರು ಅಂತಾ..!
ಹೆಗಡೆ ಮತ್ತು ನನಗೆ ಮೊದಲಿಂದರೂ ರಾಜಕೀಯ ವ್ಯತ್ಯಾಸ, ವೈಮನಸ್ಯ ಇತ್ತು ಎಂಬುದು ಸುಳ್ಳಲ್ಲ.
ಅವರು ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟ ನೋವನ್ನು ಮೂರು ವರ್ಷ ನಿರಂತರವಾಗಿ ಊಟ ಮಾಡಿದೆ. ನೋವು ತಡೆದುಕೊಳ್ಳಲು ಆಗದಿದ್ದಾಗ ಕುಮಾರಕೃಪಾದಲ್ಲಿ ಇಬ್ಬರೇ ಚರ್ಚೆಗೆ ಕುಂತೆವು. ನೀರಾವರಿಗೆ ಆದ್ಯತೆ ಕೊಡದಿದ್ದರೆ ಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟು ಹೋಗ್ತೀನಿ ಅಂತ ಅಂದೆ. ರೈತರನ್ನು ಮರೆತರೆ ಪಕ್ಷಕ್ಕೆ ಉಳಿಗಾಲ ಇಲ್ಲ ಅಂದೆ. ಕಾಲ ಮೇಲೆ ಕಾಲು ಹಾಕಿಕೊಂಡು, ಅಹಂಕಾರ, ಉದಾಸೀನತೆ ಮೆರೆದ ಹೆಗಡೆ ನನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ನಾನೆಲ್ಲಿ ಸಿಎಂ ಆಗಿಬಿಡುತ್ತೇನೋ ಎಂಬ ಕಾರಣಕ್ಕೆ ಪಕ್ಷದಿಂದಲೇ ಹೊರ ಹೋಗುವಂತೆ ಮಾಡಿದರು. ವಿ.ಪಿ. ಸಿಂಗ್ ನಂತರ ಪ್ರಧಾನಿ ಆದ ಚಂದ್ರಶೇಖರ್ ಅವರ ಸಮಾಜವಾದಿ ಜನತಾ ಪಾರ್ಟಿ (ಎಸ್‌ಜೆಪಿ) ಸೇರಿದೆ. ನಾನೊಬ್ಬ ಎಂಪಿ ಆದೆ. ಆದರೆ ಜನತಾದಳ ಮುಗುಚಿಕೊಂಡು ಬಿದ್ದಿತ್ತು. ಯಲಹಂಕ ಮರುಚುನಾವಣೆಯಲ್ಲಿ ಜನತಾದಳಕ್ಕೆ ಠೇವಣಿ ಸಿಗಲಿಲ್ಲ. ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ನಿಂತ ಹೆಗಡೆ ಕಾಂಗ್ರೆಸ್‌ನ ಸಿದ್ದುನ್ಯಾಮಗೌಡ ವಿರುದ್ಧ ಸೋಲು ಅನುಭವಿಸಿದರು. ಆಗ ಹೆಗಡೆ ನೋವು ಹೇಳತೀರದಾಗಿತ್ತು. ಉದ್ಯಮಿಯೊಬ್ಬರು ನಮ್ಮಿಬ್ಬರ ನಡುವೆ ರಾಜಿ ಮಾಡಿಸಿದರು. ಅವರ ಅಳಿಯನ ಮನೆಯಲ್ಲಿ ಭೇಟಿ ಆಯಿತು. ನೀನಿಲ್ಲದೆ ಪಕ್ಷ ಕಟ್ಟೋಕೆ ಆಗಲ್ಲ, ಬಂದುಬಿಡು, ಇಬ್ಬರೂ ಸೇರಿ ಕಟ್ಟೋಣ ಅಂದ್ರು ಹೆಗಡೆ. ತಮಿಳುನಾಡಿನ ಶಿಕ್ಷಣ ಸಂಸ್ಥೆ ಮಾಲೀಕರೊಬ್ಬರು ಕೊಟ್ಟ ನೆರವಿನಿಂದ ಪಕ್ಷ ಕಟ್ಟಿದೆವು.
ಆದರೆ 1994 ರಲ್ಲಿ ಜನತಾದಳ ಗೆದ್ದು ಬಂದಾಗ ಹೆಗಡೆ ತಲೆ ಮತ್ತೆ ತಿರುಗಿತು. ದೇವೇಗೌಡ ಯಾವುದೇ ಕಾರಣಕ್ಕೂ ಸಿಎಂ ಆಗಬಾರದು ಎಂದರು. ಒಂದು ಸಾರಿ ಹಾಸನ, ಇನ್ನೊಂದು ಸಾರಿ ಕನಕಪುರ, ಮತ್ತೊಂದು ಬಾರಿ ರಾಮನಗರದಿಂದ ಚುನಾವಣೆಗೆ ನಿಲ್ಲುವ ಗೌಡ ನಾಯಕನೇ ಅಲ್ಲ. ಅವನು ಹೇಗೆ ತಾನೇ ಈ ರಾಜ್ಯದ ಮುಖ್ಯಮಂತ್ರಿ ಆಗಬಲ್ಲ ಎಂದು ಪ್ರಶ್ನೆ ಮಾಡಿದರು. ಪಾಪ, ಅವರು ಬೆಂಗಳೂರಿ ಬಿಟ್ಟು ಬಾಗಲಕೋಟೆಗೆ ಹೋಗಿ ಸೋತಿದ್ದನ್ನು ಮರೆತು ಹೋಗಿದ್ದರು. ಇಂಥವರ ಜತೆ ಏಗಿ ನನಗೆ ಅನುಭವ ಇದೆ. ಸಿದ್ದರಾಮಯ್ಯ ಮಾತು ತಿರುಚಿದರೆ ನಾನೇನು ಮಾಡಲಿ?
1996, 2004 ರಲ್ಲಿ ಅವರು ಸಿಎಂ ಆಗೋದನ್ನ ನಾನು ತಪ್ಪಿಸಿದೆ ಅಂತ ಸಿದ್ರಾಮಯ್ಯ ಬಲವಾಗಿ ನಂಬಿದ್ದಾರೆ. ಅದನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಆಗೆಲ್ಲ ನಡೆದದ್ದೇ ಬೇರೆ. '96 ರಲ್ಲಿ ನಾನು ಪ್ರಧಾನಿ ಆಗುವ ಮುನ್ನಾದಿನ ಪಟೇಲ್ ಮತ್ತು ಸಿದ್ದರಾಮಯ್ಯ ಜತೆ ದಿಲ್ಲಿಯ ಕರ್ನಾಟಕ ಭವನದಲ್ಲಿದ್ದೆ. ಆಗ ಮುಖ್ಯಮಂತ್ರಿ ಪದವಿಗೆ ಪಟೇಲ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಏರ್ಪಟ್ಟಿತ್ತು. ಹೊರಗೆಲ್ಲೋ ಹೋಗಿ ಬಂದ ಪಟೇಲ್ ಇದ್ದಕ್ಕಿದ್ದಂತೆ ಮೆಟ್ಟು ಕಳಚಿ ಕೈಯಲ್ಲಿಡಿದು, ಸಿದ್ದರಾಮಯ್ಯ ಕಡೆ ಅದನ್ನು ತೋರಿಸುತ್ತಾ, ಅವಾಚ್ಯ ಶಬ್ದಗಳೊಡನೆ, 'ಏನೋಲೇ..., ಮುಖ್ಯಮಂತ್ರಿ ಅಗ್ಬೇಕಾ ನೀನು? ನನ್ಜೊತೆನೇ ಫೈಟ್ ಮಾಡ್ತೀಯಾ? ನಾನು ಸೀನಿಯರ್ ಅಲ್ವಾ? ಪಕ್ಷಕ್ಕೆ ಕೆಲ್ಸ ಮಾಡಿಲ್ಲವಾ...?' ಅಂತ ಕೂಗಾಡಿದರು. ಸಿದ್ದರಾಮಯ್ಯ ಕೂಡ ಎಮೋಷನಲ್ ವ್ಯಕ್ತಿ. ಆದರೆ ಅವತ್ತು ಸಿಟ್ಟಿಗೆ ಬೀಳಲಿಲ್ಲ. ಪಟೇಲ್ ಗಲಾಟೆ ಜೋರಾಗಿತ್ತು. ಆಗ ಎಸ್‌ಪಿಜಿ ರಕ್ಷಣೆ ಕೊಟ್ಟಿದ್ದ ಉತ್ತರಭಾರತದ ಉಪಾಧ್ಯಾಯ, ಇಂಥ ಗಲಾಟೆಯನ್ನೆಲ್ಲ ಸಹಿಸೋಕೆ ಆಗಲ್ಲ. ಪರಿಸ್ಥಿತಿ ಕ್ಲಿಯರ್ ಮಾಡಿ ಅಂದ್ರು. ಪಟೇಲ್ ಅವರನ್ನು ಕಷ್ಟಪಟ್ಟು ಸಮಾಧಾನಪಡಿಸಿದೆ. ಆಗ ಬೊಮ್ಮಾಯಿ ಜನತಾದಳದ ರಾಷ್ಟ್ರೀಯ ಅಧ್ಯಕ್ಷರು. ನೋಡು ಗೌಡ, 113 ಜನರ ಪೈಕಿ ನಾವು 34 ಮಂದಿ ಲಿಂಗಾಯತರು ಇದ್ದೇವೆ. ಒಂದೊಮ್ಮೆ ನೀನೇನಾದಾರೂ ಪಟೇಲ್ ಅವರನ್ನು ಸಿಎಂ ಮಾಡಲಿಲ್ಲ ಅಂದ್ರೆ, ಅಲ್ಲಿ ದಿಲ್ಲಿಯಲ್ಲಿ ನೀನು ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುತ್ತಿದ್ದಂತೆ ಕರ್ನಾಟಕದಲ್ಲಿ ಪಕ್ಷದ ಸರಕಾರ ಕಳೆದುಕೊಳ್ಳುತ್ತೀಯಾ ಆಂತ ಧಮಕಿ ಹಾಕಿದರು. ಆಗ ಪಕ್ಷಾಂತರ ನಿಷೇಧ ಕಾಯಿದೆ ಕೂಡ ಇರಲಿಲ್ಲ. ನಾನೇನು ಮಾಡಬೇಕಿತ್ತು. ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿ ಆಗಲು ಒಪ್ಪಿಸಿದೆ. ಇದು ಕೂಡ ಅವರಿಗೆ ಮರೆತು ಹೋಗಿದೆಯೇ..? ಆಗ 86 ಜನ ಶಾಸಕರು ನನ್ನ ಜತೆ ಇದ್ದರು ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಒಬ್ಬನೇ ಒಬ್ಬ ನನ್ನ ಹತ್ತಿರ ಬಂದು ಸಿದ್ದರಾಮಯ್ಯನನ್ನೇ ಮುಖ್ಯಮಂತ್ರಿ ಮಾಡಿ ಅಂತ ಅನ್ನಲಿಲ್ಲ.
ಇನ್ನು 2006 ರ ವಿಷಯ. ಕಾಂಗ್ರೆಸ್ ಜತೆ ಮೈತ್ರಿ ಸರಕಾರ ರಚನೆ ಆದ ಸಂದರ್ಭ. ಬಿಜೆಪಿಯವರು ಸಮ್ಮಿಶ್ರ ಸರಕಾರಕ್ಕಾಗಿ ಕುಮಾರಸ್ವಾಮಿ ಜತೆ ಸಂಪರ್ಕ ಸಾಧಿಸಿದ್ದರು. ಆದರೆ ಅವರ ಜತೆ ಹೋಗುವುದು ಇಷ್ಟ ಇರಲಿಲ್ಲ. ವಾಸ್ತವವಾಗಿ ಎಸ್.ಎಂ. ಕೃಷ್ಣ, ಅವರ ಅಳಿಯ ಹಾಗೂ ಈ ಸಂಜೆ ವೆಂಕಟೇಶ್ ನನ್ನನ್ನು ಭೇಟಿ ಮಾಡಿ ಕೃಷ್ಣ ಅವರು ಇನ್ನೊಂದು ಬಾರಿಗೆ ಮುಖ್ಯಮಂತ್ರಿ ಆಗಲು ಸಹಕರಿಸಿ ಅಂದರು. ನಾನು ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದರಿಂದ ಸೇಡಿಗೆ ಬಿದ್ದ ಶ್ರೀಮಾನ್ ಕೃಷ್ಣ ಮಾಡಿದ ಪುಣ್ಯದ ಕೆಲಸ ಏನೆಂದರೆ ಸಿದ್ದರಾಮಯ್ಯನನ್ನು ನನ್ನ ವಿರುದ್ಧ ಎತ್ತಿ ಕಟ್ಟಿದ್ದು. ಪಟ್ಟು ಹಿಡಿ, ನೀನೇ ಸಿಎಂ ಆಗುತ್ತೀಯಾ? ಎಂದು ಹೇಳಿಕೊಟ್ಟರು. ಸಿದ್ದರಾಮಯ್ಯ ಅವರ ಮಾತು ನಂಬಿಕೊಂಡರು. ಆದರೆ ಸೋನಿಯಾಗಾಂಧಿ ಕಾಂಗ್ರೆಸ್‌ಗೇ ಸಿಎಂ ಪಟ್ಟ ಬೇಕು ಎಂದರು. ಐದು ಬಾರಿ ಭೇಟಿ ಮಾಡಿ, ಕೇಳಿಕೊಂಡರೂ ಒಪ್ಪಿಕೊಳ್ಳಲಿಲ್ಲ. ಇದಕ್ಕೆಲ್ಲ ಸಾಕ್ಷಿಯಾಗಿದ್ದ ಅಹಮದ್ ಪಟೇಲ್, ಪೃಥ್ವಿರಾಜ್ ಚೌಹಾಣ್, ಶರದ್ ಪವಾರ್ ನನ್ನಂತೆಯೇ ಇನ್ನೂ ಜೀವಂತರಿದ್ದಾರೆ. ಈಗ ಅವರ ಪಕ್ಷದಲ್ಲೇ ಇರುವ ಸಿದ್ದರಾಮಯ್ಯ ಅವರನ್ನು ಕೇಳಿ, ಸ್ಪಷ್ಟಪಡಿಸಿಕೊಳ್ಳಲಿ. ಆಗ ಸಿದ್ದರಾಮಯ್ಯನನ್ನು ಎತ್ತಿ ಕಟ್ಟಿದ ಕೃಷ್ಣ ಮಾತ್ರ ಈ ಬಗ್ಗೆ ಸೋನಿಯಾಗಾಂಧಿ ಅವರ ಜತೆ ಒಂದೇ ಒಂದು ಶಿಫಾಸರು ಮಾತು ಆಡಲಿಲ್ಲ.
ಆಗ ಇಷ್ಟೇ ಆಗಲಿಲ್ಲ. ಸಿದ್ದರಾಮಯ್ಯನನ್ನು ಮತ್ತೆ ಉಪಮುಖ್ಯಮಂತ್ರಿ ಆಗಲು ಕೋರಿದೆ. ಅವರು ಮುನಿಸಿಕೊಂಡಿದ್ದರು. ಆಗ ಎಂ.ಪಿ. ಪ್ರಕಾಶ್ ಬಂದು, ಈ ಹುದ್ದೆಗೆ ನಾನು, ಸಿಂಧ್ಯ ಅವರಂಥ ಬಹಳ ಮಂದಿ ಇದ್ದೇವೆ. ನಮ್ಮನ್ನೂ ಪರಿಗಣಿಸಿ ಅಂದಿದ್ದರು. ಸಿಂಧ್ಯ ಇದಕ್ಕೆ ಸಾಕ್ಷಿ. ಕೇಳಿ ನೋಡಿ. ಆದರೆ ಸಿದ್ದರಾಮಯ್ಯ ನಾನು ಸೋನಿಯಾಗಾಂಧಿ ಅವರನ್ನು ಪ್ರೆಸ್ ಮಾಡದೇ ಮೋಸ ಮಾಡಿದೆ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ.

ಬ್ರಾಂಡ್ ಕುತಂತ್ರ
ನನ್ನನ್ನು ಲಿಂಗಾಯತ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ, ಬ್ರಾಹ್ಮಣರ ವಿರೋಧಿ, ಪರಿಶಿಷ್ಟರ ವಿರೋಧಿ ಅಂತ ಬ್ರಾಂಡ್ ಮಾಡುತ್ತಿರುವುದರ ಹಿಂದೆ ಸುದೀರ್ಘ ಸಂಚು ಆಡಗಿದೆ. ಹೆಗಡೆ ಸಿಎಂ ಆಗುವುದರಲ್ಲಿ ನನ್ನ ಪಾತ್ರವೂ ಇತ್ತು. ನನ್ನ ಬೆನ್ನಿಗೆ ಚೂರಿ ಹಾಕಿದ ನಂತರವೂ ಅವರನ್ನು ರಾಜ್ಯಸಭೆಗೆ ಕಳುಹಿಸಿದೆ. ಸಿದ್ದರಾಮಯ್ಯನನ್ನು ಹಣಕಾಸು ಮಂತ್ರಿ, ಉಪಮುಖ್ಯಮಂತ್ರಿ ಮಾಡಿದೆ. 1994ರಲ್ಲಿ ಸಿಎಂ ಆಗಿದ್ದಾಗ ನನ್ನ ಸಂಪುಟದಲ್ಲಿ ಎಲ್ಲ ವರ್ಗದವರಿಗೂ ಸಮಾನ ಅದ್ಯತೆ ನೀಡಿದ್ದೆ. ಅನ್ಯ ಸಮುದಾಯದವರಿಗೆ ಪ್ರಮುಖ ಖಾತೆಗಳನ್ನು ಕೊಟ್ಟಿದ್ದೆ. ಹಿಂದುಳಿದ ವರ್ಗದ ಜಾಲಪ್ಪ, ಸಿದ್ದರಾಮಯ್ಯ, ಮುನಿಯಪ್ಪ ಮುದ್ದಪ್ಪ, ಸಿಂಧ್ಯ, ಲಲಿತಾ ನಾಯಕ್, ಮೇಟಿ, ತಿಪ್ಪೇಸ್ವಾಮಿ ಇದ್ದರು. ಲಿಂಗಾಯತ ಸಮುದಾಯದ ಪಟೇಲ್, ಪ್ರಕಾಶ್, ಎಸ್.ಎಸ್. ಪಾಟೀಲ್, ವೈಜನಾಥ್ ಪಾಟೀಲ್, ಕೌಜಲಗಿ, ಸಿದ್ದನಗೌಡರ್ ಪ್ರಾತಿನಿಧ್ಯ ಇತ್ತು. ಪರಿಶಿಷ್ಟರಿಗೂ ಆದ್ಯತೆ ಕೊಟ್ಟಿದ್ದೇನೆ. ನಾನೂ ಸೇರಿದಂತೆ ಒಕ್ಕಲಿಗ ಸಮುದಾಯದ ಆರು ಮಂದಿ ಇದ್ದೆವು. ಆದರೂ ನಾನು ಅನ್ಯ ಸಮುದಾಯ ವಿರೋಧಿ. ಪಟೇಲ್ ಸಂಪುಟದಲ್ಲಿ 18 ಮಂದಿ ಲಿಂಗಾಯತ ಮಂತ್ರಿಗಳಿದ್ದರು. ಆದರೂ ಅವರು ಜಾತ್ಯತೀತರು.

ಒಳಒಪ್ಪಂದ ಸುಳ್ಳು
ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬುದು ಶುದ್ಧ ಸುಳ್ಳು. ಹಾವೇರಿ, ಚಿತ್ರದುರ್ಗದಿಂದ ನಾವು ಅಭ್ಯರ್ಥಿಗಳನ್ನು ತರುವುದಾದರೂ ಹೇಗೆ? ಆರ್ಥಿಕವಾಗಿ ಸಬಲವಾಗಿರುವ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಸಿಂಬಲ್ ಮೇಲೆ ಗೆದ್ದ ಅಭ್ಯರ್ಥಿಗಳನ್ನು ಮೊದಲಿಂದಲೂ ದಾರಿ ತಪ್ಪಿಸುತ್ತಿದೆ. ಬಿಜೆಪಿ ಮನಸ್ಸಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ನನಗೆ ಒಂದೇ. ಯಾವುದರ ಬಗ್ಗೆಯೂ ಆಗೌರವವಾಗಿ ಮಾತಾಡಲ್ಲ.
ಹಳೇ ಜಿದ್ದು
ಮೊನ್ನೆ ವಿಧಾನಸಭೆಯಲ್ಲಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಪರಸ್ಪರ ಕೆಸರು ಎರಚಿಕೊಂಡದ್ದು ಸರಿಯಲ್ಲ. ಬೀದೀಲಿ ಮಾತಾಡಿದ ವಿಷಯಕ್ಕೆ ಸದನದಲ್ಲಿ ಕಿತ್ತಾಡಿದ್ದು ಗೌರವ ತರುವ ವಿಚಾರವಲ್ಲ. ಈ ಬಗ್ಗೆ ಕುಮಾರಸ್ವಾಮಿಗೆ ಬುದ್ಧಿಮಾತು ಹೇಳಿದ್ದೇನೆ. ಕಳೆದ ಐದು ವರ್ಷದಲ್ಲಿ ವಿಧಾನಮಂಡಲ ಅಧಿವೇಶನ ಕಲಾಪ ಕಳಾಹೀನವಾಗಿದೆ. ಪ್ರತಿಪಕ್ಷ ನಾಯಕನಾದ ನಿನ್ನ ಮೇಲೆ ಭಾರಿ ಜವಾಬ್ದಾರಿ ಇದೆ. ಮುಖ್ಯಮಂತ್ರಿ ಬಗ್ಗೆ ಯಾವುದೇ ಕಾರಣಕ್ಕೂ ಹಗುರವಾಗಿ ಮಾತಾಡಬೇಡ. ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಐದು ವರ್ಷ ಆಳ್ವಿಕೆ ಮಾಡಲಿ ಅಂತ ಕಿವಿಮಾತು ಹೇಳಿದ್ದೇನೆ.
ಕುಮಾರಸ್ವಾಮಿ, ಸಿದ್ದರಾಮಯ್ಯ ನಡುವೆ ಹಳೇ ಜಿದ್ದು ಇದೆ. ತಾವು ಪ್ರತಿನಿಧಿಸುವ ಮೈಸೂರು ಜಿಲ್ಲೆಯ ರಾಜಶೇಖರಮೂರ್ತಿ ಅವರಿಗೆ ಕುಮಾರಸ್ವಾಮಿ ಸ್ಕೋಪ್ ಕೊಟ್ಟಿದ್ದು ಸಹಜವಾಗಿಯೇ ಸಿದ್ದರಾಮಯ್ಯ ಕೋಪಕ್ಕೆ ಕಾರಣವಾಗಿದೆ. ನನಗೊಬ್ಬ ಪರ್ಯಾಯ ನಾಯಕನನ್ನು ಬೆಳೆಸಲು ಹೊರಟಿದ್ದಾನೆ ಅಂತ. ಇದರ ಜತೆಗೆ ಶ್ರೀನಿವಾಸ ಪ್ರಸಾದ್ ಅವರನ್ನು ಪಕ್ಷಕ್ಕೆ ಕರೆತಂದಿದ್ದು ಅವರದೇ ಸಮುದಾಯದ ಮಹದೇವಪ್ಪ ಅವರಂಥವರಿಗೆ ಅರಗಿಸಿಕೊಳ್ಳಲು ಆಗಿರಲಿಲ್ಲ. ಆದರೂ ಕುಮಾರಸ್ವಾಮಿಗೆ ಹೇಳಿದ್ದೇನೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರು ಅಲ್ಲ. ಶಾಶ್ವತ ಮಿತ್ರನೂ ಅಲ್ಲ ಅಂತ.

- ಸಂದರ್ಶನ: ಪಿ. ತ್ಯಾಗರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.