ಪಾಕ್ ಸೈನಿಕರದ್ದೇ ಕೃತ್ಯ

ನವದೆಹಲಿ: ಕಾಶ್ಮೀರದಲ್ಲಿ ನಡೆದ ಐವರು ಭಾರತೀಯ ಯೋಧರ ಹತ್ಯೆಗೆ ಸಂಬಂಧಿಸಿ ಸಂಸತ್ತಿನಲ್ಲಿ ನೀಡಿದ ತಮ್ಮ ಹೇಳಿಕೆಯನ್ನು ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಕೊನೆಗೂ ಪರಿಷ್ಕರಿಸಿದ್ದಾರೆ. ಈ ಪಾಶವೀ ಕೃತ್ಯದ ಹಿಂದೆ ಪಾಕ್ ಸೇನೆಯ ನೇರ ಕೈವಾಡ ಇದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಬುಧವಾರ ನೀಡಿದ್ದ ಹೇಳಿಕೆಯನ್ನು ರಕ್ಷಣಾ ಸಚಿವ ಬದಲಿಸಿದ್ದಾರೆ.
ಸೋಮವಾರ ರಾತ್ರಿಯ ಘಟನೆ ಹಿಂದೆ ಪಾಕ್ ಸೇನೆಯ ವಿಶೇಷ ದಳದ ಕೈವಾಡ ಇರುವುದು ಸ್ಪಷ್ಟವಾಗಿದೆ. ಪಾಕ್ ಸೇನೆಯ ನೆರವು, ಸೌಲಭ್ಯ ಮತ್ತು ನೇರ ಭಾಗವಹಿಸುವಿಕೆ ಇಲ್ಲದೆ ಈ ರೀತಿಯ ಘಟನೆ ನಡೆಯಲು ಸಾಧ್ಯವೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ ಎಂದು ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ ನೀಡಿದ ಹೇಳಿಕೆಯಲ್ಲಿ ಆ್ಯಂಟನಿ ಸ್ಪಷ್ಟನೆ ನೀಡಿದ್ದಾರೆ.
ಇದು ಸಹಜವಾಗಿಯೇ ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿ ಭಾರತದ ವರ್ತನೆ ಹಾಗೂ ಪಾಕಿಸ್ತಾನದ ಜತೆಗಿನ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೂ ಅವರು ಎಚ್ಚರಿಸಿದ್ದಾರೆ. ಸಂಸತ್ತಿನಲ್ಲಿ ಬುಧವಾರ ನೀಡಿದ ಹೇಳಿಕೆಯು ಆ ಕ್ಷಣದಲ್ಲಿ ಲಭ್ಯವಾದ ಮಾಹಿತಿಯನ್ನು ಆಧರಿಸಿತ್ತು.
ಈಗ ಘಟನೆ ಕುರಿತು ಹೆಚ್ಚಿನ ಮಾಹಿತಿ ಸಿಕ್ಕಿದೆ. ಪಾಕ್ ಸೇನೆಯ ನೇರ ಕೈವಾಡ ಕುರಿತು ಸ್ಪಷ್ಟ ಪುರಾವೆ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ಆ್ಯಂಟನಿ ನೀಡಿದ ಸ್ಪಷ್ಟೀಕರಣಕ್ಕೆ ಪ್ರತಿಪಕ್ಷ ನಾಯಕಿ ಸುಷ್ಮಾಸ್ವರಾಜ್, ಬಿಎಸ್ಪಿ ನಾಯಕಿ ಮಾಯಾವತಿ ಸೇರಿದಂತೆ ಅನೇಕ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಕೊನೆಗೂ ತಪ್ಪು ಒಪ್ಪಿಕೊಂಡು ನೀಡಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ಸುಷ್ಮಾ ಹೇಳಿದ್ದಾರೆ.
ಭಾರತೀಯ ಯೋಧರ ಹತ್ಯೆ ಪಾಕ್ ಸೈನಿಕರಂತೆ ಸಮವಸ್ತ್ರ ಧರಿಸಿದ 20 ಶಸ್ತ್ರಸಜ್ಜಿತ ಉಗ್ರರ ಕೃತ್ಯ ಎಂದು ಆ್ಯಂಟನಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.
ತನಿಖೆಗೆ ಆದೇಶ: ಐವರು ಯೋಧರ ಹತ್ಯೆಗೆ ಸಂಬಂಧಿಸಿ ಸೇನೆಯು ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


