ಪ್ರಧಾನ ಸುದ್ದಿ

ಅನ್ನದಾತನ ಬಾಳೆ ಬೆಳಗಿತು

Published On :

ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ    ಮೈಸೂರು    ಆ. 10
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕು ಅರೆಮಲೆನಾಡು ಪ್ರದೇಶ. ಆದರೆ ಈ ಬಾರಿ ಕಳೆದ ಮೂರು ತಿಂಗಳಿಂದ ಸತತ ಮಳೆ. ಹೀಗಾಗಿ ಮಲೆನಾಡು ಪ್ರದೇಶ ಎಂಬಂತೆಯಾಗಿದೆ. ಇದರಿಂದ ಶೀತಾಂಶ ಹೆಚ್ಚಾಗಿ ಪ್ರಮುಖ ವಾಣಿಜ್ಯ ಬೆಳೆಗಳಾದ ಹತ್ತಿ, ತಂಬಾಕು ಹಾಳಾಗುತ್ತಿವೆ. ಆದರೆ ತೋಟಗಾರಿಕೆ ಬೆಳೆ ಬಾಳೆ ರೈತನ ಕೈಹಿಡಿಯುತ್ತಿದೆ.
 ಇದು ಎಚ್.ಡಿ. ಕೋಟೆ ತಾಲೂಕು ಸರಗೂರು ಹೋಬಳಿ ದಡದಹಳ್ಳಿಯ ಸಿದ್ದಮಲ್ಲಪ್ಪ ಎಂಬವರ ಪುತ್ರ ಶಾಂತಮಲ್ಲಪ್ಪ ಎಂಬ ರೈತನ ಕಥೆ.
ಶಾಂತಮಲ್ಲಪ್ಪ ಅವರಿಗೆ ಒಟ್ಟು 7 ಎಕರೆ ಜಮೀನಿದೆ. ಇದಲ್ಲದೇ 2 ಎಕರೆ ಗುತ್ತಿಗೆ ಜಮೀನೂ ಇದೆ. ಮೂವತ್ತು ವರ್ಷಗಳ ಹಿಂದೆ ತಂದೆ ನಿಧನರಾಗಿದ್ದರಿಂದ ಜಮೀನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಓದಿಗೆ ಗುಡ್ ಬೈ ಹೇಳಿದರು. 6 ಕೊಳವೆ ಬಾವಿ ಹಾಕಿಸಿದರೂ ವಿಫಲವಾಯಿತು. ಅಂತಿಮವಾಗಿ 1 ರಲ್ಲಿ ನೀರು ಬರುತ್ತಿದೆ. ಅದು ಸಾಕಾಗುತ್ತಿಲ್ಲ. ಆದರೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ ಹೇಗೋ ನಡೆಯುತ್ತಿದೆ.5 ಎಕರೆಯಲ್ಲಿ ಹತ್ತಿ, 2 ಎಕರೆಯಲ್ಲಿ ಹೊಗೆಸೊಪ್ಪು ಬೆಳೆದರು. ಉಳಿದ 2 ಎಕರೆಯಲ್ಲಿ 2000 ರಲ್ಲಿ ಏಲಕ್ಕಿ ಬಾಳೆ ಹಾಕಿದರು.
ಹತ್ತಿ ಎಕರೆಗೆ 6 ರಿಂದ 7 ಕ್ವಿಂಟಾಲ್ನಂತೆ 5 ಎಕರೆಗೆ ಸುಮಾರು 35 ಕ್ವಿಂಟಾಲ್ ಬರುತ್ತಿತ್ತು. ಅದೇ ರೀತಿ ತಂಬಾಕು ಪ್ರತಿ ಎಕರೆಗೆ 1000 ಕೆಜಿಯಂತೆ 2 ಎಕರೆಗೆ 2000 ಕೆಜಿ ಇಳುವರಿ ಬರುತ್ತಿತ್ತು. ಆದರೆ ಈ ಬಾರಿ ಕಳೆದ ಮೂರು ತಿಂಗಳಿಂದಲೂ ಸತತ ಮಳೆ. ಪರಿಣಾಮ ಹತ್ತಿ ಹಾಗೂ ತಂಬಾಕು ಬೆಳೆ ಹಾಳಾಗುತ್ತಿದೆ. ಜಮೀನಿನಲ್ಲಿ ಶೀತಾಂಶ ಹೆಚ್ಚಾಗಿರುವುದು ಇದಕ್ಕೆ ಕಾರಣ. ಹತ್ತಿಯಲ್ಲಿ ಎಕರೆಗೆ 15,000 ವೆಚ್ಚವಾಗಿ, 13,000 ಲಾಭ ಬರುತ್ತಿತ್ತು. ಅದೇ ರೀತಿ ಹೊಗೆಸೊಪ್ಪಿನಲ್ಲಿ ಸುಮಾರು 55,000 ವೆಚ್ಚವಾಗಿ 65,000 ಲಾಭ ಬರುತ್ತಿತ್ತು. ಆದರೆ ಈ ಬಾರಿ ಸೂಜಿದಾರ- ಅಲ್ಲಲ್ಗೆ ನ್ಯಾರ ಎಂಬ ಗಾದೆಯಂತೆ ಆದಾಯ- ಖರ್ಚು ಸಮ ಆಗುತ್ತದೆ ಎನ್ನುತ್ತಾರೆ ಶಾಂತಮಲ್ಲಪ್ಪ.
ನೆರವಿಗೆ ಬಂದ ಅಧಿಕಾರಿಗಳು: ಇಂಥ ಪರಿಸ್ಥಿತಿಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ದೇವರು ಬಂದಂತೆ ಬಂದರು. ಹಿರಿಯ ಸಹಾಯಕ ನಿರ್ದೇಶಕ ಎನ್.ಸಿ. ಸಿದ್ದರಾಜು, ಗೋವಿಂದರಾಜು, ರವಿ, ಹಿಂದೆ ಇದ್ದ ಬಸವರಾಜು ಅವರು ಎಲ್ಲಾ ರೀತಿಯ ನೆರವು ನೀಡಿದರು. ಸಿದ್ದರಾಜು ಅವರಲ್ಲದೇ ಜಿಲ್ಲಾ ಉಪ ನಿರ್ದೇಶಕ ಎಚ್.ಎಂ. ನಾಗರಾಜ್ ಅವರು ಜಮೀನಿಗೆ ಭೇಟಿ ನೀಡಿ, ಅಗತ್ಯ ಸಲಹೆ- ಸೂಚನೆ ನೀಡಿದರು ಎಂದು ಮೆಚ್ಚುಗೆ ಸೂಚಿಸುತ್ತಾರೆ.
ನಾನು ಯಾವಾಗಲೂ ಏಲಕ್ಕಿ ಬಾಳೆ ಬೆಳೆಯುತ್ತಿದ್ದೆ. ಆದರೆ ಈ ಬಾರಿ ಜಿ-9 ಅಂಗಾಂಶ ಬಾಳೆ ಬೆಳೆಯಿರಿ ಎಂದು 1,90,713 ಸಹಾಯಧನ ನೀಡಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರೋತ್ಸಾಹ ನೀಡಿದರು.  ಪರಿಣಾಮ ಈಗ 2 ಎಕರೆಯಲ್ಲಿ 2000 ಬಾಳೆಗಿಡದಲ್ಲಿ ಗೊನೆಗಳು ಬಂದಿವೆ. 8 ರಿಂದ 10 ಚಿಪ್ಪುಗಳಿವೆ. 13 ರಿಂದ 25 ಕೆಜಿವರೆಗೆ ತೂಗುತ್ತಿವೆ. ಇನ್ನೂ ಒಂದೂವರೆ ಎಕರೆಯಲ್ಲಿ 1,800 ಬಾಳೆಗಿಡಗಳನ್ನು ಹಾಕಿದ್ದಾರೆ. ಸಾಲು ಸಾಲುಗಳ ನಡುವೆ 6 ಅಡಿ, ಗಿಡಗಿಡಗಳ ನಡುವೆ 5 ಅಡಿ ಅಂತರ ಕಾಪಾಡಿದ್ದಾರೆ. ಆರಂಭದಲ್ಲಿ ಬೇವಿನಹಿಂಡಿ, ಕೊಟ್ಟಿಗೆ ಗೊಬ್ಬರ ಹಾಕಿದ್ದಾರೆ. ನಂತರ ಅಧಿಕಾರಿಗಳು ಸಲಹೆ ಮಾಡಿದಂತೆ ರಾಸಾಯನಿಕ ಗೊಬ್ಬರವನ್ನು ಹಾಕಿದ್ದಾರೆ. ಒಂದು ಎಕರೆ ಬಾಳೆಗೆ ಸುಮಾರು 1 ಲಕ್ಷ ವೆಚ್ಚವಾಗಿದ್ದು, ಈಗ 2.50 ರಿಂದ 3 ಲಕ್ಷ ಲಾಭ ಬರುವ ನಿರೀಕ್ಷೆಯಲ್ಲಿದ್ದಾರೆ.



ಕೃಷಿಯಲ್ಲಿ ನಷ್ಟವಾಗಲ್ಲ. ನಾವು ಕೆಲ್ಸ ಮಾಡೋದರ ಮೇಲೆ ಹೋಗುತ್ತೆ. ನನ್ಗೆ ಈ ಬಾರಿ ಹತ್ತಿ, ಹೊಗೆಸೊಪ್ಪಿನಿಂದ ಕಡಿಮೆ ಇಳುವರಿ ಬಂದರೂ ಬಾಳೆ ಕೈ ಹಿಡಿದಿದೆ. ಮೊದಲ ಮಗಳ ಮದುವೆಗೆ ಮಾಡಿದ ವೆಚ್ಚ ಬಾಳೆಯಿಂದ ದುಡಿಯುವ ವಿಶ್ವಾಸ ಬಂದಿದೆ. ಬಿಬಿಎಂ ಓದುತ್ತಿರುವ ಮತ್ತೊಬ್ಬ ಮಗಳನ್ನು ಎಂಬಿಎ ಓದಿಸುತ್ತೇನೆ.  ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಒಂದಲ್ಲ ಒಂದರಿಂದ ಆದಾಯ ಬರುತ್ತದೆ. ಇಲಾಖೆಯಿಂದಲೂ ಸಾಕಷ್ಟು ಪ್ರೋತ್ಸಾಹಧನ ಸಿಗುತ್ತದೆ.
ಟಿ ಶಾಂತಮಲ್ಲಪ್ಪ, ದಡದಹಳ್ಳಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.