ಪ್ರಧಾನ ಸುದ್ದಿ

ಮುಗಿದಿಲ್ಲ ಪಾಕ್ ಪುಂಡಾಟ

Published On :

ಶ್ರೀನಗರ: ಭಾರತದ ಐವರು ಯೋಧರ ಹತ್ಯೆ ನಡೆದು ವಾರವೂ ಆಗಿಲ್ಲ. ಅಷ್ಟರಲ್ಲೇ ಜಮ್ಮು ಮತ್ತು ಕಾಶ್ಮೀರ ಗಡಿಯುದ್ದಕ್ಕೂ ಪಾಕ್ ಸೈನಿಕರು ಯುದ್ಧದ ವಾತಾವರಣ ನಿರ್ಮಿಸುತ್ತಿದ್ದಾರೆ. ಶನಿವಾರ ರಾತ್ರಿಯ ಭಾರಿ ಗುಂಡಿನ ಚಕಮಕಿ ಬೆನ್ನಲ್ಲೇ ಗಡಿಯಾಚೆಯಿಂದ ಭಾನುವಾರ ಬೆಳಗ್ಗಿನಿಂದೀಚೆಗೆ ಎರಡು ಬಾರಿ ಕದನ ವಿರಾಮ ಉಲ್ಲಂಘಿಸಲಾಗಿದೆ. ಮೊದಲ ದಾಳಿ ಕನಚ್ಚಕ್ ವ್ಯಾಪ್ತಿಯ ಅಂತಾರಾಷ್ಟ್ರೀಯ ಗಡಿಯಲ್ಲಿ ಹಾಗೂ ಎರಡನೇ ದಾಳಿ ಪೂಂಛ್ ಜಿಲ್ಲೆಯಲ್ಲಿ ನಡೆದಿದೆ.
ಅಂತಾರಾಷ್ಟ್ರೀಯ ಗಡಿಯಲ್ಲಿರುವ ಮೂರು ಸೇನಾ ಶಿಬಿರಗಳ ಮೇಲೆ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಬಿಎಸ್‌ಎಫ್ ಯೋಧನೊಬ್ಬ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದರ ಬೆನ್ನಲ್ಲೇ ಪೂಂಛ್ ಜಿಲ್ಲೆಯ ಬಾಲಕೋಟ್- ಮಹೇಂದರ್ ಸೆಕ್ಟರ್‌ನ 10 ಸೇನಾ ಶಿಬಿರಗಳ ಮೇಲೂ ಬೆಳಗ್ಗೆ 11.30ರ ವೇಳೆಗೆ ಅಪ್ರಚೋದಿತ ದಾಳಿ ನಡೆಸಲಾಗಿದೆ. ಪಾಕ್‌ನ ದುಷ್ಕೃತ್ಯಕ್ಕೆ ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕ್ ಪಡೆಗಳು ಈ ರೀತಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವುದು ಕಳೆದ 48 ಗಂಟೆಗಳಲ್ಲಿ ಇದು ಮೂರನೇ ಬಾರಿ. ಶನಿವಾರ ರಾತ್ರಿ ಗಡಿಯಾಚೆಯಿಂದ 7000 ಸುತ್ತು ಗುಂಡು ಹಾರಿಸಲಾಗಿತ್ತು.
ಭಾರತದ ಮೇಲೆ ಆರೋಪ: ಗಡಿಯುದ್ದಕ್ಕೂ ಪಾಕ್ ಪಡೆಗಳೇ ಕದನ ವಿರಾಮ ಉಲ್ಲಂಘಿಸುತ್ತಿದ್ದರೂ ಇದಕ್ಕಾಗಿ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಭಾರತೀಯ ಪಡೆಗಳೇ ಮೊದಲು ದಾಳಿ ನಡೆಸಿವೆ ಎಂದು ಪಾಕ್ ಮಾಧ್ಯಮಗಳು ಆರೋಪಿಸಿವೆ.   

ಯೋಧ ಸಾವು: ಜಮ್ಮುವಿನ ಸಾಂಬಾದಲ್ಲಿ ಗಡಿಯಾಚೆಗಿನ ಅಪ್ರಚೋದಿತ ಗುಂಡಿನ ದಾಳಿಯಿಂದ ಆ.5ರಂದು  ಗಾಯಗೊಂಡಿದ್ದ ಯೋಧ ರಾಮ್ ನಿವಾಸ್ ಮೀನ ಭಾನುವಾರ ಕೊನೆಯುಸಿರೆಳೆದರು. ಗಂಭೀರ ಗಾಯಗೊಂಡಿದ್ದ ರಾಮ್‌ನಿವಾಸ್ ಅವರನ್ನು ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾತುಕತೆ ನಡೆಸುವುದಿಲ್ಲ ಎಂದು ಘೋಷಿಸಿ: ರಾಜನಾಥ್ ಆಗ್ರಹ
ಭಾರತದ ಐವರು ಯೋಧರ ಹತ್ಯೆ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಜತೆಗೆ ವಿಶ್ವಸಂಸ್ಥೆಯಲ್ಲಿ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದು ತಕ್ಷಣ ಘೋಷಿಸಬೇಕು. ಪಾಕಿಸ್ತಾನದ ಜತೆಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಆಗ್ರಹಿಸಿದ್ದಾರೆ. ಗಡಿಯಾಚೆಗಿನ  ಈ ಅಪ್ರಚೋದಿತ ದಾಳಿಗೆ ತಕ್ಕ ಪ್ರತ್ಯುತ್ತರ ನೀಡದ್ದಕ್ಕೆ ಯುಪಿಎ ಅನ್ನು ದೂರಿದ ರಾಜನಾಥ್, ಪಾಕಿಸ್ತಾನ ಈಗ ಲಕ್ಷ್ಮಣರೇಖೆ ದಾಟಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಈ ಹಿಂದೆಯೇ ಪಾಕಿಸ್ತಾನದ ದುಸ್ಸಾಹಸಕ್ಕೆ ತಕ್ಕ ಉತ್ತರ ನೀಡಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ರಾಜನಾಥ್ ಅಭಿಪ್ರಾಯಪಟ್ಟಿದ್ದಾರೆ.

ತಕ್ಕ ಪ್ರತ್ಯುತ್ತರ ನೀಡಿ: ಬಿಕ್ರಂ ಸಿಂಗ್
ಪಾಕ್ ಸೇನೆಯೇನಾದರೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದರೆ ತಕ್ಕಪಾಠ ಕಲಿಸಿ. ತೋಪುಗಳನ್ನು ಬಳಸಿ ದಾಳಿ ನಡೆಸಿ ಎಂದು ಸೇನಾ ಮುಖ್ಯಸ್ಥ ಬಿಕ್ರಂ ಸಿಂಗ್ ಸೂಚಿಸಿದ್ದಾರೆ. ಭಾರತದ ಐವರು ಯೋಧರ ಹತ್ಯೆ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅವರು ಈ ವೇಳೆ ಸ್ಥಳೀಯ ಕಮಾಂಡರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕ್ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಜ.8ರಂದು ನಡೆದ ಭಾರತೀಯ ಯೋಧನೊಬ್ಬನ ಶಿರಚ್ಛೇದ ಘಟನೆ ಬೆನ್ನಲ್ಲೇ ಬಿಕ್ರಂಸಿಂಗ್ ಪಾಕ್ ಸೇನೆಯ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುವಂತೆ ಸೂಚಿಸಿದ್ದರು.

ಐವರು ಯೋಧರ ಹತ್ಯೆ ಬಗ್ಗೆ ರಕ್ಷಣಾ ಸಚಿವರ ಹೇಳಿಕೆ ಸರ್ಕಾರದ ವರ್ಚಸ್ಸಿಗೆ ಹಾನಿ ಉಂಟು ಮಾಡಿದೆ. ಪಾಕಿಸ್ತಾನ  ಕುರಿತು ದೇಶಾದ್ಯಂತ ಜನರು ಭಾರಿ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರಿಂದಲೇ ಆ್ಯಂಟನಿ ಸಂಸತ್‌ನಲ್ಲಿ ತಮ್ಮ ಹೇಳಿಕೆ ಬದಲಾಯಿಸಬೇಕಾಯಿತು.
- ಎಲ್.ಕೆ.ಆಡ್ವಾಣಿ, ಬಿಜೆಪಿ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.