ಡಬಲ್ ಕಮಾಯ್, ಸಚಿವರ ಎಂಜಾಯ್!
ಅಲ್ಲಿ ಬಾಡಿಗೆ ಭತ್ಯೆಯನ್ನೂ ಪಡೆಯುತ್ತಿದ್ದಾರೆ, ಇಲ್ಲಿ ವಾಸ್ತವ್ಯವನ್ನೂ ಹೂಡಿದ್ದಾರೆ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.12-
ಬಾಡಿಗೆಗಾಗಿ ತಿಂಗಳಿಗೆ ಲಕ್ಷ ರುಪಾಯಿ ಕೊಡುತ್ತೇವೆ ವಾಸ್ತವ್ಯಕ್ಕೊಂದು ಮನೆ ಮಾಡಿಕೊಳ್ಳಿ ಎಂದು ಸರ್ಕಾರ ಹೇಳಿದರೂ, ಸಚಿವರ ಪೈಕಿ ಕೆಲವರು ಶಾಸಕ ಭವನದಲ್ಲಿ ಹೂಡಿರುವ ಬಿಡಾರ ಖಾಲಿ ಮಾಡುತ್ತಿಲ್ಲ.
ಅದೇಕೋ ಏನೋ ರಾಜ್ಯ ಸಚಿವ ಸಂಪುಟದ ಹಲವು ಸದಸ್ಯರಿಗೆ ಶಾಸಕರ ಭವನದ ಕೊಠಡಿ ಮೇಲೆ ಎಲ್ಲಿಲ್ಲದ ಪ್ರೀತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ತಿಂಗಳು ಕಳೆಯುವಷ್ಟರಲ್ಲಿ ಮನೆ ಭತ್ಯೆಯನ್ನು ಮಾಸಿಕ 50 ಸಾವಿರದಿಂದ 1 ಲಕ್ಷಕ್ಕೆ ಏರಿಸಿದರೂ ಶಾಸಕ ಭವನದ ಮೇಲಿನ ತಮ್ಮ ಹಕ್ಕು ಬಿಟ್ಟು ಕೊಡುವುದಕ್ಕೆ ಈ ಸಚಿವ ಮಹಾಶಯರಿಗೆ ಮನಸಿಲ್ಲ.
ಎಂಟು ಮಂದಿ ಸಚಿವರು ಹಾಗೂ ವಿಧಾನ ಪರಿಷತ್ ಉಪಸಭಾಪತಿ ಮತ್ತು ಪ್ರತಿಪಕ್ಷದ ಸಚೇತಕರೊಬ್ಬರು ಬಾಡಿಗೆ ಭತ್ಯೆಯಾಗಿ ಲಕ್ಷ ರು.ಜತೆಗೆ ಶಾಸಕರ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ರೀತಿ ಡಬಲ್ ಸೌಲಭ್ಯ ಪಡೆಯುವುದು ಒಂದೆಡೆ ನಿಯಮವನ್ನು ಗಾಳಿಗೆ ತೂರಿದರೆ ಇನ್ನೊಂದೆಡೆ ಬೇರೆ ಶಾಸಕರಿಗೆ ಕೊಠಡಿ ಸಿಗದೇ ಪರದಾಡುವುದಕ್ಕೆ ಕಾರಣವಾಗಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್, ವಕ್ಫ್ ಮತ್ತು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್, ಜವಳಿ ಸಚಿವ ಬಾಬುರಾವ್ ಚಿಂಚನಸೂರ್, ಕೃಷಿ ಸಚಿವ ಕೃಷ್ಣ ಭೈರೇಗೌಡ, ವೈದ್ಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್, ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಅವರು ಜಪ್ಪಯ್ಯ ಎಂದರೂ ಶಾಸಕರ ಭವನದ ಕೊಠಡಿ ಖಾಲಿ ಮಾಡಲು ಸಿದ್ದರಿಲ್ಲ. ಇದರ ಜತೆಗೆ ವಿಧಾನ ಪರಿಷತ್ ಉಪಸಭಾಪತಿ ವಿಮಲಾಗೌಡ, ವಿಧಾನಪರಿಷತ್ ಬಿಜೆಪಿ ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾವು ಅವರೂ ಭತ್ಯೆ ಜತೆಗೆ ಭವನದ ಕೊಠಡಿ ಬಳಸಿಕೊಳ್ಳುತ್ತಿದ್ದಾರೆ.
ಅರಣ್ಯ ಸಚಿವ ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಸಹಕಾರ ಸಚಿವ ಎಚ್.ಎಸ್. ಮಹಹಾದೇವ ಪ್ರಸಾದ್ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರೂ ಶಾಸಕರ ಭವನದ ಕೊಠಡಿ ಬಿಟ್ಟುಕೊಡುವುದಕ್ಕೆ ಮೀನಮೇಷ ಎಣಿಸುತ್ತಿದ್ದರು. ಆದರೆ ನೋಟಿಸ್ ರವಾನೆಯಾದ ಹಿನ್ನೆಲೆಯಲ್ಲಿ ಖಾಲಿ ಮಾಡಿದ್ದಾರೆ.
ನಿಯಮ ಬಾಹಿರ: ನಿಯಮ ಪ್ರಕಾರ ಈ ಕೊಠಡಿಗಳನ್ನು ವಿಧಾನಸಭೆ ಹಾಗೂ ಪರಿಷತ್ ಸದಸ್ಯರಿಗೆ ನೀಡಲಾಗುತ್ತದೆ.
ಆದರೆ ಅಧಿವೇಶನ ಸಂದರ್ಭದಲ್ಲಿ ಕೆಲ ಶಾಸಕರನ್ನು ಹೊರತು ಪಡಿಸಿದರೆ ಉಳಿದವರು ಇಲ್ಲಿರುವುದಿಲ್ಲ. ಅವರ ಸಹಾಯಕರು, ಬೆಂಬಲಿಗರೇ ಝಾಂಡಾ ಹೂಡಿರುತ್ತಾರೆ.
ಶಾಸಕರಿಗೆ ವಾಸ್ತವ್ಯದ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಭವನವನ್ನು ಕಟ್ಟಿಸಲಾಗಿದ್ದು, ಮೊದಲ ಬಾರಿಗೆ ಆಯ್ಕೆಯಾದವರಿಗೆ ಒಂದು ಕೊಠಡಿ, ಹಾಲ್, ಶೌಚಾಲಯ, ಬೆಡ್, ಮಂಚವನ್ನು ಒಳಗೊಂಡ ರೂಂ ನೀಡಲಾಗುತ್ತದೆ. ಮೂರು ಹಾಗೂ ಅದಕ್ಕಿಂತ ಹೆಚ್ಚು ಬಾರಿ ಗೆದ್ದವರಿಗೆ ಡಬಲ್ ರೂಂ ಅಥವಾ ಫ್ಯಾಮಿಲಿ ರೂಂ ಕೊಡಲಾಗುತ್ತದೆ. ಆದರೆ ಹೊಸದಾಗಿ ಗೆದ್ದ ಶಾಸಕರು ಭವನದ ಕೊಠಡಿಯಲ್ಲೇ ಇರಲು ಇಚ್ಛೆ ಪಡುತ್ತಾರೆ. ಸಚಿವರು ಇಲ್ಲೇ ಇರುವುದರಿಂದ ಇನ್ನೂ ಕೊಠಡಿ ಸಿಗದೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ಭವನದ ವ್ಯವಸ್ಥಾಪಕ ಸಿಬ್ಬಂದಿ ರೂಂ ಖಾಲಿ ಮಾಡುವಂತೆ ಈಗಾಗಲೇ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿಲ್ಲ.
ಕ್ವಾಟ್ರರ್ಸ್ ಇಲ್ಲವೆಂಬ ನೆವ: ಕೊಠಡಿ ಖಾಲಿ ಮಾಡದ ಸಚಿವರು ಹಾಗೂ ಆ ಸ್ಥಾನಮಾನ ಪಡೆದಿರುವ ಗಣ್ಯರು ತಮಗೆ ಸರ್ಕಾರ ಕ್ವಾರ್ಟ್ರಸ್ ನೀಡಿಲ್ಲ ಎಂಬ ನೆಪ ಮುಂದಿಟ್ಟಿದ್ದಾರೆ. ಆದರೆ ಇವರೆಲ್ಲರಿಗೂ ಸರ್ಕಾರ ಮನೆ ಬಾಡಿಗೆ ಭತ್ಯೆ ನೀಡುತ್ತಿದೆ.
ಸರ್ಕಾರಿ ಬಂಗಲೆ ಇಲ್ಲದ ಸಚಿವರು ಮಾಸಿಕ 3000 ನೀಡಿ ಶಾಸಕರ ಭವನದಲ್ಲಿ ಕೊಠಡಿ ಪಡೆಯುವುದಕ್ಕೆ ಅವಕಾಶವಿದೆ. ಆದರೆ ಅಂಥವರು ಮನೆ ಭತ್ಯೆ ರೂಪದಲ್ಲಿ ಸರ್ಕಾರದಿಂದ ಹಣ ಪಡೆಯಕೂಡದು. ಒಂದೊಮ್ಮೆ ಪಡೆದರೆ ಆರು ತಿಂಗಳವರೆಗೆ ಮಾಸಿಕ 20 ಸಾವಿರ ನಂತರದ ಅವಧಿಯಲ್ಲಿ 30 ಸಾವಿರ ಬಾಡಿಗೆ ನೀಡಬೇಕಾಗುತ್ತದೆ. ಆದರೆ ಈ ಪಟ್ಟಿಯಲ್ಲಿರುವ ಗಣ್ಯರು ಬಾಡಿಗೆ ಮಾತ್ರ ಕೊಡುತ್ತಿಲ್ಲ.
ಲಕ್ಷಕ್ಕೆ ಹೆಚ್ಚಳ: ಸಚಿವ ಸಂಪುಟದ ಕೆಲವರಿಗೆ, ಪ್ರತಿಪಕ್ಷ ಮುಖಂಡರಿಗೆ ಹಾಗೂ ಸಚೇತಕರಿಗೆ ಮನೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮನೆ ಭತ್ಯೆ ನೀಡುತ್ತಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರ ಇದನ್ನು 1ಲಕ್ಷಕ್ಕೆ ಹೆಚ್ಚಿಸಿದ್ದಾರೆ.
- ರಾಘವೇಂದ್ರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

