ಈಸೂರಿನ ಕಥೆ ಕೇಳಿ....
ಶಿವಮೊಗ್ಗ: ಗಾಂಧೀಜಿಯನ್ನು ಆಹ್ವಾನಿಸಿಕೊಂಡಂತೆ ಮಾತನಾಡುವ, ಮಾತುಮಾತಿಗೂ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಕಟ್ಟಿದ ಹಾಡುಗಳನ್ನು ಹಾಡುವ ಈಸೂರು ಗ್ರಾಮದ ಹಿರಿಯಜ್ಜ ಸ್ವಾತಂತ್ರ್ಯ ಹೋರಾಟಗಾರ ಹುಚ್ರಾಯಪ್ಪನವರಿಗೆ ಈಗ 110 ವರ್ಷ.
ಹುಚ್ರಾಯಪ್ಪ ಅವರು ಓದಿದ್ದು ಮೂರನೇ ತರಗತಿಯಾದರೂ ಇಂಗ್ಲಿಷ್, ಹಿಂದಿ ಪದಗಳು ನಾಲಿಗೆ ಮೇಲೆ ತಟಪಟನೆ ಮೇಲೆ ನಲಿದಾಡುತ್ತವೆ. ಇನ್ನೂ ಹೋರಾಟದ ನೆನಪುಗಳು ಮಾಸಿಲ್ಲ. ಸ್ವಾತಂತ್ರ್ಯ ಹೋರಾಟದ ದಿನಾಂಕ, ಇಸವಿ ಸಹಿತ ಪ್ರತಿ ಘಟನೆಗಳನ್ನೂ ಬಿಡಿಸಿಡುತ್ತಾ ಹೋಗುತ್ತಾರೆ. ಅವರ ಒಂದು ಕಣ್ಣು ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರ ಲಾಠಿ ಏಟಿನ ಪೆಟ್ಟಿಗೆ ಗಾಯಗೊಂಡಿದ್ದು, ಅದಕ್ಕಾಗಿ ಬೇಸರವಿಲ್ಲ. ನನ್ನದು ಒಂದು ಕಣ್ಣು ಹೋದರೆ, ನನ್ನ ಜೊತೆಗಿದ್ದವರು ಜೀವವನ್ನೇ ಕೊಟ್ಟರು ಎಂದು ಭಾವುಕವಾಗಿ ನೆನಪಿಸಿಕೊಳ್ಳುತ್ತಾರೆ. 67ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ 'ಕನ್ನಡಪ್ರಭ' ಓದುಗರಿಗಾಗಿ ಹುಚ್ರಾಯಪ್ಪ ತಮ್ಮ ನೆನಪಿನ ಸುರಳಿಯಿಂದ ಅನೇಕ ಘಟನೆಗಳನ್ನು ತೆರೆದಿಟ್ಟಿದ್ದು ಹೀಗೆ...
- ಈಸೂರಿನ ಸಾಹುಕಾರ ಬಸವಣ್ಣಪ್ಪ ಕುಟುಂಬ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಸಹಕರಿಸುತ್ತಿತ್ತು. ಇದನ್ನು ಅರಿತ ಬ್ರಿಟಿಷರು ಅವರ ಮನೆಗೆ ಬೆಂಕಿ ಇಟ್ಟಿದ್ದರು. ಆ ಬೆಂಕಿ ಒಂದು ವಾರ ಉರಿದಿತ್ತು. ಗ್ರಾಮದಲ್ಲಿ ಹೋರಾಟದ ಕಿಚ್ಚು ನಂದಿಸಲು ಊರಿನ ಅನೇಕ ಮನೆಗಳಿಗೂ ಬ್ರಿಟಿಷರು ಬೆಂಕಿ ಇಟ್ಟರು. ಮಾನಭಂಗ ಮಾಡಿದರು, ಬಂಗಾರ ಸೇರಿದಂತೆ ಸಾಮಾನು ಸರಂಜಾಮು ದೋಚಿದರು.
- ಈಸೂರಿನ ಹೋರಾಟಗಾರರನ್ನು ಕೆಣಕಿದ ಇನ್ಸ್ಪೆಕ್ಟರ್ ಹಾಗೂ ಅಮಲ್ದಾರನಿಗೆ ಖಾದಿ ಟೋಪಿ ತೊಡಿಸಲು ಊರಿನ ಹೋರಾಟಗಾರರು ಮುಂದಾದರು. ಈ ಸಂದರ್ಭದಲ್ಲಿ ಲಾಠಿಚಾರ್ಜ್ ಸಹ ನಡೆಯಿತು. ನಮ್ಮ ತಂಡದ ಮೇಲೆ ಗುಂಡು ಹಾರಿಸಲಾಯಿತು. ಪಣಿಯಪ್ಪಾಚಾರ್, ಗುರುಶಾಂತಪ್ಪ, ಕೆಂಚೇಗೌಡರಿಗೆ ಗುಂಡು ಬಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಇನ್ಸ್ಪೆಕ್ಟರ್ ಹಾಗೂ ಅಮಲ್ದಾರ್ ಅವರನ್ನು ಹೋರಾಟಗಾರರು ಬಡಿದು ಹಾಕಿದರು.
- ಬ್ರಿಟಿಷರು ಎಷ್ಟು ಕಿರುಕುಳ ಕೊಟ್ಟರೆಂದರೆ ಅದನ್ನು ಅನುಭವಿಸಿದ ನಮಗೇ ಗೊತ್ತು. ಹೋರಾಟಗಾರರನ್ನು ನಮ್ಮೂರಿನಲ್ಲಿ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲೂ ಉಳಿಯದಂತೆ ನೋಡಿಕೊಂಡರು. ನೆಂಟರಿಷ್ಟರ ಮನೆಗಳಲ್ಲೂ ಆಗ ಜಾಗ ಸಿಗಲಿಲ್ಲ. ಕೊನೆಗೆ ಕಾಡು ಪಾಲಾದೆವು. ಊರಿನಿಂದ ದನ ಕಾಯುವವರು ಊಟ ತಂದು ಕಾಡಿನಂಚಿನಲ್ಲಿಟ್ಟು ಹೋಗುತ್ತಿದ್ದರು.
- ಈ ಘಟನೆಯಿಂದ ಕೆರಳಿದ ಬ್ರಿಟಿಷ್ ಸರ್ಕಾರ 500 ಸೈನಿಕರನ್ನು ಕರೆಯಿಸಿ ನಮ್ಮನ್ನೆಲ್ಲಾ ಬಂಧಿಸಲು ಮುಂದಾಯಿತು. ಅನೇಕರು ಕಾಡು ಸೇರಿದರು. ನಾನು ನ್ಯಾಮತಿಯಲ್ಲಿ ಸಹೋದರಿ ಮನೆಯಲ್ಲಿದ್ದೆ. ನನ್ನನ್ನೂ ಬಂಧಿಸಿ, ಸಾಗರ ಜೈಲಲ್ಲಿಡಲಾಯಿತು. ಘಟನೆಗೆ ಸಂಬಂಧಿಸಿದಂತೆ ಒಟ್ಟು 22 ಮಂದಿಗೆ ಜೀವಾವಧಿ ಶಿಕ್ಷೆ, 11 ಮಂದಿಗೆ ಗಲ್ಲು ಶಿಕ್ಷೆ ಎಂದು ಕೋರ್ಟ್ ಆದೇಶಿಸಿತು. ಗಲ್ಲುಶಿಕ್ಷೆಯಾದವರ ಹೆಸರಿನಲ್ಲಿ ಸುಂದರ್ ಎಂಬ ನ್ಯಾಯಧೀಶರು ನನ್ನ ಹೆಸರನ್ನೂ ಸೇರಿಸಿದ್ದರು.
- ಈ ಸಂದರ್ಭದಲ್ಲಿ ನಮ್ಮ ಪರವಾದ ವಕೀಲರು ಪ್ರಕರಣವನ್ನು ಬೆಂಗಳೂರಿನ ಹೈಕೋರ್ಟ್ಗೆ ತೆಗೆದುಕೊಂಡು ಹೋದರು. ಅಲ್ಲಿ ಆರು ಮಂದಿಗೆ ಗಲ್ಲು, ಉಳಿದವರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಯಿತು. 1943ರ ಮಾರ್ಚ್ 1ರಂದು ರ್ಯಾಲಿ ಎಂಬ ನ್ಯಾಯಾಧೀಶ ಈ ಆದೇಶ ನೀಡಿ ಬಿಟ್ಟರು. ಆದೇಶದಂತೆ ಹಾಲಪ್ಪ, ಗುರಪ್ಪ, ಮಲ್ಲಪ್ಪ, ಸೂರ್ಯನಾರಾಯಣರನ್ನು ಮಾ.9ರಂದು ಗಲ್ಲಿಗೇರಿಸಲಾಯಿತು.
- 1946ರ ಅಕ್ಟೋಬರ್ 26ರಂದು ರಾಣಿ ಗಾಯತ್ರಿ ದೇವಿ ಜನಿಸಿದಳೆಂದು ನಮ್ಮನ್ನು ಜೈಲಿನಿಂದ ಮುಕ್ತಗೊಳಿಸಲಾಯಿತು.
- ಗಾಂಧೀಜಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಮೈಸೂರಿನಲ್ಲಿ ಉಳಿದು, ಅಲ್ಲಿಂದ ಶಿವಪುರ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ಶಿವಮೊಗ್ಗಕ್ಕೆ ಬಂದರು. ಇಲ್ಲಿಂದ ಹೊನ್ನಾಳಿ ಮೂಲಕ ಹರಿಹರಕ್ಕೆ ತೆರಳಿ, ಅಂಕೋಲಕ್ಕೂ ಹೋಗಿದ್ದರು.
- ಶಿಕಾರಿಪುರ ಜೈಲಿನಲ್ಲಿಟ್ಟಾಗ ನಾವು ದೇಶಭಕ್ತಿಗೀತೆಗಳನ್ನು ಹಾಡುತ್ತಿದ್ದೆವು. ಇದರಿಂದ ಕೆರಳಿದ ಬ್ರಿಟಿಷ್ ಅಧಿಕಾರಿಗಳು, 'ಸೂಳೆಮಕ್ಕಳ ಪದ್ಯ ಹೇಳ್ತೀರಾ' ಎಂದು ಬೂಟು ಕಾಲಲ್ಲಿ ಒದ್ದರು. ಗಾಂಧಿ ಮಾತು ಕೇಳಿ ಕುಣಿತೀರಾ ಎಂದು ತಿವಿದರು. ನಾವು ಅಂಜಲಿಲ್ಲ, ಅಳುಕಲಿಲ್ಲ. ಬೆಂಗಳೂರು ಜೈಲಿನಲ್ಲಿದ್ದಾಗ ಬ್ರಿಟಿಷರ ಲಾಠಿ ಏಟಿಗೆ ನಾನು ಒಂದು ಕಣ್ಣುಕಳೆದುಕೊಂಡೆ.
- ಕ್ವಿಟ್ ಇಂಡಿಯಾ ಚಳವಳಿಗೆ ಗಾಂಧೀಜಿ ಕರೆಕೊಟ್ಟಾಗ ಈಸೂರನ್ನು ಸ್ವತಂತ್ರ ಗ್ರಾಮ ಎಂದು ಘೋಷಿಸಲಾಯಿತು. ಈ ಗ್ರಾಮಕ್ಕೆ ಪ್ರತ್ಯೇಕ ಸರ್ಕಾರವನ್ನು ರಚಿಸಲಾಯಿತು. ಊರಿನ ಪ್ರಮುಖರೆಲ್ಲಾ ಬ್ರಿಟಿಷರ ಉಪಟಳ ತಾಳಲಾರದೇ ಕಾಡು ಸೇರಿದ್ದರಿಂದ ಊರಿನ ಬಾಲಕ ಜಯಣ್ಣನ ನೇತೃತ್ವದಲ್ಲಿ ಸರ್ಕಾರ ರಚಿಸಿದೆವು.
- ಜಾಗಟೆ ಸದ್ದೇ ನಮಗೆ ಸಿಗ್ನಲ್. ಬ್ರಿಟಿಷ್ ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ನಾವು ಏನು ಮಾಡಬೇಕೆಂಬುದು ನಮ್ಮ ಜಾಗಟೆ ಸದ್ದಿನಿಂದಲೇ ಗೊತ್ತಾಗುತ್ತಿತ್ತು. ಅದೇ ರೀತಿ ನಾಟಕ ಕಟ್ಟಿದ್ದು, ಹರಿಕಥೆ, ಪದ್ಯದ ಮೂಲಕ ಮನಮನಗಳಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದೆವು.
- ಒಮ್ಮೆ ಶಿಕಾರಿಪುರದ ನಾಡ ಕಚೇರಿ ಮೇಲೆ ಧ್ವಜ ಹಾರಿಸಬೇಕೆಂಬ ತೀರ್ಮಾನಕ್ಕೆ ಬಂದೆವು. ಬ್ರಿಟಿಷ್ ಅಧಿಕಾರಿಗಳಿಗೆ ಯಾವುದೇ ಸುಳಿವು ಬಿಟ್ಟುಕೊಡದೇ ಕಾರ್ಯತಂತ್ರ ರೂಪಿಸಿದೆವು. ಶಿಕಾರಿಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಯಿತು. ದೂರವಾಣಿ ಸಂಪರ್ಕ ಕಡಿತಗೊಳಿಸಿ, ಯಶಸ್ವಿಯಾಗಿ ಧ್ವಜಾರೋಹಣ ಮಾಡಿದೆವು.
- ಗಾಂಧೀಜಿಯವರನ್ನು ಜೈಲಿನಲ್ಲಿಟ್ಟಾಗ ಮಹಿಳೆಯರೆಲ್ಲಾ ದೇವರಿಗೆ ಮೊರೆ ಇಟ್ಟಿದ್ದು, ಗಾಂಧಿ ಹತ್ಯೆಗೊಳಗಾದ ಸುದ್ದಿ ಕೇಳಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದು ಸೇರಿದಂತೆ ಹಲವು ಘಟನೆಗಳನ್ನು ಹಂಚಿಕೊಂಡರು.
- ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

