ಖಾಸಗಿ ಲೆಕ್ಕ ಇಲ್ಲ ಪಕ್ಕಾ...
ಕನ್ನಡಪ್ರಭ ವಾರ್ತೆ ಬೆಂಗಳೂರು ಆ.17
ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಶುಲ್ಕದ ಲೆಕ್ಕ ತೋರಿಸುವ ವಿಚಾರದಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿವೆ. ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ಆ.15ರೊಳಗೆ ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ಗೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದರು.
ಆದರೆ, ವೆಬ್ತಾಣದಲ್ಲಿ ಯಾವೊಂದು ಕಾಲೇಜಿನ ಮಾಹಿತಿ ಸಿಗುತ್ತಿಲ್ಲ. ಕೆಲ ಕಾಲೇಜುಗಳು ತಮ್ಮ ವೆಬ್ಸೈಟಿನಲ್ಲಿ ಪ್ರತಿ ವಿದ್ಯಾರ್ಥಿಯಿಂದ ಪಡೆದ ಶುಲ್ಕದ ವಿವರ ಪ್ರಕಟಿಸಿವೆ. ಆದರೆ ಅದರಲ್ಲಿ ವಿಟಿಯು ಹಾಗೂ ಇತರೆ ಶುಲ್ಕ ಎಂದು ಪ್ರಕಟಿಸಲಾಗಿದೆ.
ವಿಷಯವಾರು ಶುಲ್ಕದ ಬಗ್ಗೆ ಕಾಲೇಜುಗಳು ಮಾಹಿತಿ ಕೊಟ್ಟಿಲ್ಲ. ಮತ್ತೊಂದೆಡೆ ವೆಬ್ತಾಣದಲ್ಲಿ ಕೆಲ ಕಾಲೇಜುಗಳು ಪ್ರಕಟಿಸಿರುವ ವಿಟಿಯು ಶುಲ್ಕ ಹಾಗೂ ನೈಜ ಶುಲ್ಕಕ್ಕೆ ಸಂಬಂಧವೇ ಇಲ್ಲ. ಇದರಿಂದ ಖಾಸಗಿ ಕಾಲೇಜುಗಳು ಮನಸಿಗೆ ತೋಚಿದಂತೆ ಹಣ ವಸೂಲಿ ಮಾಡಿರುವುದು ಬಹಿರಂಗವಾಗಿದೆ.
ಈ ವಿಚಾರವನ್ನು ವಿಟಿಯು ಹಾಗೂ ರಾಜ್ಯ ವೃತ್ತಿಪರ ಮಹಾವಿದ್ಯಾಲಯಗಳ ಪ್ರವೇಶ ಮೇಲ್ವಿಚಾರಣೆ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದಾಗ, 'ನಮ್ಮ ಗಮನಕ್ಕೆ ಬಂದಿಲ್ಲ, ಪರಿಶೀಲಿಸುತ್ತೇವೆ' ಎಂಬ ಹಾರಿಕೆ ಉತ್ತರ ನೀಡಿದರು.
ಸುಳ್ಳು ಲೆಕ್ಕ ನೀಡುತ್ತಿರುವ ಕಾಲೇಜುಗಳು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರು 'ಕನ್ನಡಪ್ರಭ'ಕ್ಕೆ ನೀಡಿದ ಮಾಹಿತಿ ಪ್ರಕಾರ ಪ್ರತಿ ವಿದ್ಯಾರ್ಥಿಯಿಂದ ಕಾಲೇಜುಗಳು ವಿವಿಗೆ 4340 ಶುಲ್ಕ ಭರಿಸಬೇಕು. ಇದನ್ನು ಹೊರತುಪಡಿಸಿ 500 ಪರೀಕ್ಷಾ ಶುಲ್ಕ ಪಾವತಿಸಬೇಕು.
ಈ ಶುಲ್ಕವು ಸಿಇಟಿ, ಕಾಮೆಡ್-ಕೆ ಹಾಗೂ ಆಡಳಿತ ಮಂಡಳಿ ಕೋಟಾದ ಸೀಟುಗಳಿಗೆ ಅನ್ವಯವಾಗುತ್ತದೆ. ಆದರೆ ಸಿಇಟಿ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸೀಟು ಪಡೆಯುವಾಗ ವಿವಿಗೆ 3090 ಶುಲ್ಕ ಪಾವತಿ ಮಾಡಿರುತ್ತಾರೆ. ಇದರಲ್ಲಿ 2 ಸಾವಿರ ಪ್ರಾಧಿಕಾರದಿಂದ ವಿವಿಗೆ ಹೋಗುತ್ತದೆ. ಇದರರ್ಥ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಸೇರಿಸಿ ಕೇವಲ 2840 ಶುಲ್ಕ ಪಾವತಿಸಬೇಕು.
ಪ್ರಾಧಿಕಾರ ಪಡೆಯುವ 3090ರಲ್ಲಿ, 2 ಸಾವಿರ ವಿವಿಗೆ ಹಾಗೂ 590 ಕಾಲೇಜಿಗೆ ಸಲ್ಲಿಕೆಯಾಗುತ್ತದೆ. ಉಳಿದ 500ನ್ನು ಪ್ರಾಧಿಕಾರ ಇರಿಸಿಕೊಳ್ಳುತ್ತದೆ.
ಪ್ರತಿಷ್ಠಿತ ಆರ್.ವಿ.ಕಾಲೇಜು ವಿವಿಯ ಶುಲ್ಕದ ರೂಪದಲ್ಲಿ ಕೇವಲ 1750 ಪಡೆಯುತ್ತದೆ. ಅದೇ ಬಿಎಂಎಸ್ ಕಾಲೇಜು 4840 ಪಡೆಯುತ್ತದೆ. ಈ ವ್ಯತ್ಯಾಸವೇ ಕಾಲೇಜುಗಳ ಸುಳ್ಳು ಲೆಕ್ಕಾಚಾರವನ್ನು ತೋರಿಸುತ್ತದೆ.
ಅಧಿಕ ಶುಲ್ಕ ಪಡೆಯುತ್ತಿರುವ ಬಿಎಂಎಸ್: ಬಿಎಂಎಸ್ ಕಾಲೇಜು ತನ್ನ ವೆಬ್ತಾಣದಲ್ಲಿ ಹಾಕಿರುವ ಮಾಹಿತಿ ಪ್ರಕಾರ ವಿಟಿಯು ಶುಲ್ಕ 2500 ಹಾಗೂ ವಿಟಿಯು ಪರೀಕ್ಷಾ ಶುಲ್ಕ 2340. ಆದರೆ ವಿವಿಯ ಅಧಿಕಾರಿಗಳ ಪ್ರಕಾರ ಈ ಪ್ರಮಾಣದಲ್ಲಿ ಶುಲ್ಕ ಪಡೆಯುವ ಹಾಗಿಲ್ಲ.
ಕಾಲೇಜುಗಳು ವಿವಿಗೆ ಕೇವಲ 2840 ಮಾತ್ರ ಹಿಂತಿರುಗಿಸುತ್ತವೆ. ಇದಲ್ಲದೇ ಬಿಎಂಎಸ್ ಕಾಲೇಜು ಕಾಮೆಡ್-ಕೆ ಹಾಗೂ ಆಡಳಿತ ಮಂಡಳಿ ಕೋಟಾದ ವಿದ್ಯಾರ್ಥಿಗಳಿಂದ ವಿಟಿಯು ಶುಲ್ಕ ರೂಪದಲ್ಲಿ 6840 ಶುಲ್ಕ ಪಡೆಯುತ್ತಿದೆ. ವಿವಿ ಅಧಿಕಾರಿಗಳ ಪ್ರಕಾರ ಈ ವಿಭಾಗದಲ್ಲಿಯೂ 2 ಸಾವಿರ ಅಧಿಕ ಶುಲ್ಕ ಪಡೆಯಲಾಗುತ್ತಿದೆ. ಇದಕ್ಕೆ ಸಮಜಾಯಿಷಿ ನೀಡಿರುವ ಬಿಎಂಎಸ್ ಕಾಲೇಜು, ನಮ್ಮದು ಸ್ವಾಯತ್ತ ಸಂಸ್ಥೆ ಆಗಿರುವುದರಿಂದ ಶುಲ್ಕ ಪ್ರಮಾಣ ಹೆಚ್ಚಿದೆ ಎಂದಿದೆ.
ಅಧಿಕೃತ ಲೆಕ್ಕ ನೀಡಿದ ಆರ್ವಿ ಕಾಲೇಜು: ಆರ್ವಿ ಕಾಲೇಜು 20 ಸಾವಿರ ಹೆಚ್ಚುವರಿ ಶುಲ್ಕದ ಕುರಿತಂತೆ ವಿಷಯವಾರು ಮಾಹಿತಿಯನ್ನು ವೆಬ್ಸೈಟಿಗೆ ಹಾಕಿದೆ. ಆದರೆ ವಿದ್ಯಾರ್ಥಿವಾರು ಶುಲ್ಕ ವಿವರ ಪ್ರಕಟಿಸಿಲ್ಲ. ಬಹುತೇಕ ಎಲ್ಲ ಕಾಲೇಜುಗಳು ವಿಟಿಯು ಶುಲ್ಕದ ಹೆಸರಲ್ಲಿ 4840ರಿಂದ 10 ಸಾವಿರದವರೆಗೂ ವಸೂಲಿ ಮಾಡಿವೆ. ಆದರೆ ಆರ್ವಿ ಕಾಲೇಜು ಕೇವಲ 1750 ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.
ನನಗೆ ಗೊತ್ತಿಲ್ಲ!
ರಾಜ್ಯದ ಎಲ್ಲ ವೃತ್ತಿಪರ ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ ಪಡೆದ ಶುಲ್ಕದ ಮಾಹಿತಿ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಆಯಾ ಕಾಲೇಜಿನ ವೆಬ್ಸೈಟಿನಲ್ಲಿ ಇನ್ನೂ ಪ್ರಕಟವಾಗಿಲ್ಲ ಏಕೆ ಎಂದು ರಾಜ್ಯ ವೃತ್ತಿಪರ ಮಹಾವಿದ್ಯಾಲಯಗಳ ಪ್ರವೇಶ ಮೇಲ್ವಿಚಾರಣೆ ಸಮಿತಿ ಅಧ್ಯಕ್ಷ ಪ್ರೊ.ಎಸ್.ಕೆ.ಸೈದಾಪೂರ್ ಅವರನ್ನು ಕೇಳಿದಾಗ, 'ನನಗೆ ಈ ವಿಚಾರ ಗೊತ್ತಿಲ್ಲ. ಕಾಲೇಜುಗಳು ಮಾಹಿತಿ ತಯಾರಿಸುತ್ತಿರಬಹುದು' ಎಂದು ಹೇಳಿದ್ದಾರೆ.
ನಾಟ್ ರೀಚೆಬಲ್ ಗೋಯಲ್!
ಅಧಿಕ ಶುಲ್ಕಕ್ಕೆ ಸಂಬಂಧಿಸಿ ಸರ್ಕಾರದ ಇಬ್ಬಗೆಯ ನೀತಿ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಮಾಧ್ಯಮಗಳಿಂದ ದೂರವಾಗುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಕರೆ ಬಂದರೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಕೊನೆಯ ಪಕ್ಷ ಪ್ರತಿನಿಧಿಗಳು ಕಳುಹಿಸುವ ಸಂದೇಶಕ್ಕೂ ಉತ್ತರಿಸುವುದಿಲ್ಲ.
ಸಚಿವರೇ ನಿಮ್ಮ ಉತ್ತರವೇನು?
ಯಾವುದೇ ಕಾಲೇಜು ಅಧಿಕ ಶುಲ್ಕ ಪಡೆಯುವಂತಿಲ್ಲ. ಹೆಚ್ಚುವರಿ ಶುಲ್ಕ ಪಡೆದಿರುವುದು ಗಮನಕ್ಕೆ ಬಂದರೆ ಮಾನ್ಯತೆ ರದ್ದು ಮಾಡಲು ಶಿಫಾರಸು ಮಾಡುತ್ತೇವೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದ್ದರು. ಒಂದೆಡೆ ಸಚಿವರ ಆದೇಶಕ್ಕೆ ಹೆಚ್ಚಿನ ಕಾಲೇಜುಗಳು ಕ್ಯಾರೆ ಎಂದಿಲ್ಲ. ಮಾಹಿತಿ ಪ್ರಕಟಿಸಿರುವ ಕೆಲ ಕಾಲೇಜುಗಳು ಹೆಚ್ಚುವರಿ ಶುಲ್ಕ ಪಡೆದಿರುವುದನ್ನು ಒಪ್ಪಿಕೊಂಡಿವೆ. ಸಚಿವರು ಈಗಲೂ ತಮ್ಮ ಹೇಳಿಕೆಗೆ ತಕ್ಕಂತೆ ವರ್ತಿಸುವರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
-ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

