ಜೀಪುಗಳ ರೋಮಾಂಚಕ ಸಫಾರಿ
ಕನ್ನಡಪ್ರಭ ವಾರ್ತೆ, ಮಡಿಕೇರಿ, ಆ.17
ಕೊಡಗಿನ ಮಳೆನಾಡು ಖ್ಯಾತಿಯ ಮಲ್ಲಳ್ಳಿ ಜಲಧಾರೆಯ ತವರೂರಲ್ಲಿ ಜೀಪುಗಳ ಸಾಹಸಮಯ ಪಯಣಕ್ಕೆ ನಿಸರ್ಗ ಸೌಂದರ್ಯದ ಸೋಪಾನ. ಅಲ್ಲಲ್ಲಿ ಎದುರಾಗುವ ನದಿ ತೊರೆಗಳಲ್ಲಿ ಜೀಪುಗಳ ತ್ರಾಸದಾಯಕ ಚಾಲನೆ. 42 ಕಿ.ಮೀ.ಗಳ ಪ್ರಯಾಣಕ್ಕೆ ತಗುಲಿದ್ದು ಬರೋಬ್ಬರಿ 8 ಗಂಟೆಗಳು.
ಈ ರೀತಿ ಸೋಮವಾರಪೇಟೆ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಜರುಗಿದ ಜೀಪ್ ರ್ಯಾಲಿ ಚಾಲಕರಿಗೆ ಸವಾಲಿನ ಪ್ರಯಾಣಕ್ಕೆ ಕಾರಣವಾದರೆ ನೋಡುಗರಿಗೆ ಜೀಪುಗಳ ಮೆರವಣಿಗೆ ಕುತೂಹಲ ಕೆರಳಿಸಿತ್ತು.
ಕಿಂಗ್ ಫಿಶರ್ ಬ್ಲೂ ಮತ್ತು ಸೋಮವಾರಪೇಟೆಯ ಪಯೋನೀರ್ ಕ್ಲಬ್ ಆಶ್ರಯದಲ್ಲಿ ಶನಿವಾರ ಜರುಗಿದ 4-4 ಜೀಪು ರ್ಯಾಲಿ ರಾಜ್ಯದ ವಿವಿಧೆಡೆಗಳ ಚಾಲಕರಿಗೆ ಸವಾಲೊಡ್ಡಿತು. 7ನೇ ವರ್ಷದ ರ್ಯಾಲಿಯಲ್ಲಿ ಕೊಡಗು, ಮೈಸೂರು, ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು, ಹಾಸನ, ಸಕಲೇಶಪುರದಿಂದ ಆಗಮಿಸಿದ 72 ಸಾಹಸಪ್ರಿಯ ಚಾಲಕರು ಪಾಲ್ಗೊಂಡಿದ್ದರು. ಶಾಂತಳ್ಳಿ, ಬೀದಳ್ಳಿ, ಬಾಚನಹಳ್ಳಿ, ಕುಂದಳ್ಳಿ, ಮಲ್ಲಳ್ಳಿ, ಕೊಟ್ಟಿಗೆ ಕಲ್ಲು ಮತ್ತಿತರ ಗ್ರಾಮಗಳಲ್ಲಿ ಜೀಪುಗಳು ಭರ್ರನೆ ಶಬ್ದ ಮಾಡುತ್ತಾ ಸಾಗಿದವು.
ಕೆಸರುಮಯ ಕಡಿದಾದ ಕಚ್ಚಾ ರಸ್ತೆ, ಚಾಲಕರಿಗೆ ಸವಲಾಗಿ ನಿಂತ ಮಳೆ- ಮಂಜು ಹೀಗೆ ಹತ್ತು ಹಲವು ವಿಶೇಷಗಳೊಂದಿಗೆ ಸಾಗಿದ ಜೀಪುಗಳಿಗೆ ಅಲ್ಲಲ್ಲಿ ಕೆಸರಿನ ರಸ್ತೆಗಳು ಸವಾಲೊಡ್ಡಿದ್ದವು.
ಮಹಿಳಾ ಸಾರಥಿಯರು: ಮಹೇಂದ್ರ ಜೀಪ್ಗಳು ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಜಿಪ್ಸಿ, ಕಮಾಂಡರ್, ಪಜೆರೋ ಜೀಪುಗಳೂ ಕಚ್ಚಾ ರಸ್ತೆಯಲ್ಲಿ ತಮ್ಮ ಕ್ಷಮತೆ ನಿರೂಪಿಸಿದವು. ನಾಲ್ಕು ಜೀಪುಗಳಲ್ಲಿ ಮಹಿಳಾ ಚಾಲಕಿಯರೇ ಸಾಹಸದ ಚಾಲನೆ ಮಾಡಿದರೆ, ಬಹುತೇಕ ಜೀಪುಗಳಲ್ಲಿ ಚಾಲಕರ ಪತ್ನಿಯರು ಸವಾರಿಯಲ್ಲಿ ಸಾಥ್ ನೀಡಿದರು.
ಆಗಿಂದಾಗ್ಗೆ ಸುರಿಯುತ್ತಿದ್ದ ಮಳೆಯಂತೂ ಚಾಲಕರ ಸಹನೆ ಪರೀಕ್ಷಿಸುತ್ತಲೇ ಇತ್ತು. ಚಾಕಚಕ್ಯತೆ, ಕೌಶಲ್ಯಮಯ ಚಾಲನೆ ಮೂಲಕ ತಮಗೆ ಎದುರಾಗಿದ್ದ ಸವಾಲನ್ನು ಸಮರ್ಥವಾಗಿ ಎದುರಿಸಿದ ಚಾಲಕರು ಕೆಸರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜೀಪುಗಳನ್ನು ಹಾಗೂ ಹೀಗೂ ಕೆಸರಿನಿಂದ ಮೇಲೆತ್ತಿ ಅಂತಿಮ ಗುರಿ ಮುಟ್ಟಿಸಲು ಪ್ರಯಾಸ ಪಟ್ಟರು. ಮಲ್ಲಳ್ಳಿ ಬಳಿಯ ಕೆಸರುಮಯ ಕಚ್ಚಾ ರಸ್ತೆಯಲ್ಲಿ ಹಲವಾರು ವಾಹನಗಳು ಸಿಲುಕಿ ಹಾಕಿಕೊಂಡು ಸುಮಾರು 2 ಗಂಟೆಗಳ ಕಾಲ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜೀಪುಗಳು ತಡೆಹಿಡಿಯಲ್ಪಟ್ಟವು. ಹರಸಾಹಸಪಟ್ಟು ಕೆಸರಿನಿಂದ ವಾಹನಗಳನ್ನು ಮೇಲೆತ್ತಿ ಮುಂದಿನ ಗುರಿಯತ್ತ ಚಾಲಕರು ಬೆವರು ಸುರಿಸುತ್ತಾ ಮುಂದೋಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಯಾಸ ಪ್ರಯಾಣ: ಮಲ್ಲಳ್ಳಿಯ ಬಳಿಯ ಕಲ್ಲು ಮಣ್ಣಿನ ಕೆಸರು ತುಂಬಿದ ಏರು ಹಾದಿಯನ್ನು ಆರಂಭಿಕ 10 ರಿಂದ 15 ಜೀಪ್ಗಳು ಸಲೀಸಾಗಿ ದಾಟಿದರೆ ಮುಂದೆ ಸಾಗಿದ ಜೀಪುಗಳಿಂದ ಗ್ರಾಮೀಣ ಪ್ರದೇಶದ ಕಚ್ಚಾ ರಸ್ತೆ ಮತ್ತಷ್ಟು ಕೆಸರು ಮಯವಾಗಿ ಹಿಂದೆ ಬಂದ ವಾಹನಗಳು ಈ ಕೆಸರಿನಲ್ಲಿ ಸಿಲುಕಿಕೊಂಡು ಮುಂದೆ ಸಾಗಲಾಗದೆ ಸಮಸ್ಯೆ ಎದುರಾಯಿತು. ಈ ರೀತಿ ಕೆಸರಿನಲ್ಲಿ ಸಿಲುಕಿಕೊಂಡ ಜೀಪುಗಳನ್ನು ಮೇಲೆತ್ತಲು ಅಲ್ಲಲ್ಲಿ ಟ್ಯಾಕ್ಟರ್ಗಳು, ಕ್ರೇನ್ಗಳನ್ನು ಇರಿಸಲಾಗಿತ್ತು.
ಅಪ್ಪಚ್ಚು ಸ್ಫೂರ್ತಿ
ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಹಚಾಲಕರಾಗಿ ಜೀಪೊಂದರಲ್ಲಿ ಕೂತು ರ್ಯಾಲಿಯುದ್ದಕ್ಕೂ ಸಾಗಿ ಇತರರಿಗೆ ಸ್ಪೂರ್ತಿಯಾದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಿದಾದ ರಸ್ತೆಗಳಲ್ಲಿ ವಾಹನ ಚಾಲಾಯಿಸುವುದು ಸವಾಲಿನ ಕೆಲಸ. ಇಂಥ ಸವಾಲನ್ನು ಸ್ವೀಕರಿಸಿದ ಚಾಲಕರ ಸ್ಥೈರ್ಯ ಮೆಚ್ಚತಕ್ಕದ್ದು ಎಂದರು.
ಅನಿಲ್ ಎಚ್.ಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

