ಪ್ರಧಾನ ಸುದ್ದಿ

2008ರ ನೀತಿಗಳು ಕಾರಣ: ಚಿದು

Published On :

ನವದೆಹಲಿ: 2008ರ ಆರ್ಥಿಕ ಹಿಂಜರಿತ ತಡೆಗಟ್ಟಲು ಕೈಗೆತ್ತಿಕೊಂಡ ನಿರ್ಧಾರಗಳೂ ರುಪಾಯಿ ಮೌಲ್ಯ ಕುಸಿಯಲು ಪ್ರಮುಖ ಕಾರಣಗಳಲ್ಲೊಂದು ಎಂದು ವಿತ್ತ ಸಚಿವ ಪಿ. ಚಿದಂಬರಂ ಒಪ್ಪಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಮಂಗಳವಾರ ಈ ವಿಚಾರ ಪ್ರಸ್ತಾಪಿಸಿದ ಅವರು, ರುಪಾಯಿ ಮೌಲ್ಯ ಕುಸಿತಕ್ಕೆ ಬಾಹ್ಯ ಅಷ್ಟೇ ಅಲ್ಲ ಪ್ರಾದೇಶಿಕ ಕಾರಣಗಳೂ ಇವೆ.
2009- 11ರ ನಡುವೆ ಆರ್ಥಿಕ ಉತ್ತೇಜನಕ್ಕಾಗಿ ಸರ್ಕಾರ ಕೈಗೊಂಡ ಕಾರ್ಯಕ್ರಮಗಳು ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗೆ ಕಾರಣವಾಯಿತು. ಆದರೆ, ಇದು ಹಣಕಾಸು ಮತ್ತು ಆಯಾತ ಮತ್ತು ನಿರ್ಯಾತ ಕೊರತೆಯನ್ನೂ ಸೃಷ್ಟಿಸಿತು ಎಂದು ತಿಳಿಸಿದ್ದಾರೆ. ಈ ವೇಳೆ, ರುಪಾಯಿ ಮತ್ತೆ ತನ್ನ ಮೌಲ್ಯ ಕಂಡುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಇಂದು  ಭಾರತ ಸೇರಿದಂತೆ ಬೆಳೆಯುತ್ತಿರುವ ಎಲ್ಲಾ ಅರ್ಥವ್ಯವಸ್ಥೆಗಳು ಸವಾಲು ಎದುರಿಸುತ್ತಿವೆ ಎಂದು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಮತ್ತೆ ರೇಲ್ವೆ ಸರಕು ಸಾಗಣೆ ದರ ಏರಿಕೆ: ಡೀಸೆಲ್ ದರ ಏರಿಕೆ ಬೆನ್ನಲ್ಲೇ ರೇಲ್ವೆ ದರವೂ ಏರಿಕೆಯಾಗಲಿದೆ ಎಂದು ರೇಲ್ವೆ ಖಾತೆ ರಾಜ್ಯ ಸಚಿವ ಅಧಿರ್ ರಂಜನ್ ಚೌಧರಿ ಮಾಹಿತಿ ನೀಡಿದ್ದಾರೆ. ಇಂಧನ ದರ ಹೊಂದಾಣಿಕೆ ಭಾಗ(ಎಫ್‌ಎಸಿ)ವಾಗಿ ರೇಲ್ವೆ ಸರಕು ಸಾಗಣೆ ದರವನ್ನು ಅಕ್ಟೋಬರ್ ತಿಂಗಳಲ್ಲಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಆದರೆ, ಪ್ರಯಾಣ ದರ ಏರಿಸುವ ಯಾವುದೇ ಉದ್ದೇಶ ಸಚಿವಾಲಯಕ್ಕಿಲ್ಲ ಎಂದು ಸಚಿವ ಮಾಹಿತಿ ನೀಡಿದ್ದಾರೆ.
18 ವರ್ಷಗಳಲ್ಲಿ ಇದೇ ಮೊದಲು: ರುಪಾಯಿ ಮೌಲ್ಯವು ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕುಸಿಯುತ್ತಿರುವುವುದು ಕಳೆದ 18 ವರ್ಷ(1995, ಅಕ್ಟೋಬರ್) ದಲ್ಲಿ ಇದೇ ಮೊದಲು. ಸೋಮವಾರ ದಿನದಾಂತ್ಯಕ್ಕೆ 64.30ರಲ್ಲಿ ಸ್ಥಿರಕಂಡಿತ್ತು. ಆದರೆ, ಮಂಗಳವಾರ 65ರಲ್ಲಿ ವಹಿವಾಟು ಆರಂಭಿಸಿದ ರುಪಾಯಿ ದಿನದ ಅಂತ್ಯದ ವೇಳೆಗೆ 196 ಪೈಸೆ ಕುಸಿದಿದೆ.
ಆಹಾರ ಭದ್ರತೆಗೆ ತೊಂದರೆಯಾಗದು
ಸಾರ್ವಜನಿಕ ಹಣಕಾಸು ಪರಿಸ್ಥಿತಿ ಹದಗೆಟ್ಟಿದ್ದರೂ 1.25 ಲಕ್ಷ ಕೋಟಿ ವೆಚ್ಚದ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಕಾರ್ಯಕ್ರಮಕ್ಕೆ ತೊಂದರೆಯಾಗದು ಎಂದು ಚಿದಂಬರಂ ಭರವಸೆ ನೀಡಿದ್ದಾರೆ. ಬಜೆಟ್‌ನಲ್ಲಿ ನಿರ್ಧರಿಸಿದ ವೆಚ್ಚದ ಮಿತಿಯನ್ನು ದಾಟುವುದಿಲ್ಲ. ಈ ಯೋಜನೆಯಿಂದ 90 ಸಾವಿರ ಕೋಟಿಯ ಸಬ್ಸಿಡಿ ವೆಚ್ಚಕ್ಕೆ ಮತ್ತೆ ಶೇ. 25ರಷ್ಟು ಹೆಚ್ಚು ಹೊರೆ ಬೀಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆಹಾರ ಭದ್ರತಾ ಕಾರ್ಯಕ್ರಮಗಳಂತಹ ಯೋಜನೆಗಳ ಮೂಲಕ ಹೆಚ್ಚುವ ಸಾರ್ವಜನಿಕ ಖರ್ಚುಗಳಿಂದ ಹಣದುಬ್ಬರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಇತ್ತೀಚೆಗಷ್ಟೇ ಆರ್‌ಬಿಐ ಎಚ್ಚರಿಸಿತ್ತು.
ಸಂಸತ್ತಲ್ಲಿ ತರಾಟೆ
ಆರ್ಥಿಕ ದುಸ್ಥಿತಿ ಹಾಗೂ ರುಪಾಯಿ ಮೌಲ್ಯ ಕುಸಿತಕ್ಕೆ ಸಂಬಂಧಿಸಿ ಸರ್ಕಾರ ಸಂಸತ್ತಿನಲ್ಲಿ ಮಂಗಳವಾರ ತೀವ್ರ ತರಾಟೆಗೆ ಒಳಗಾಯಿತು. ವಿತ್ತ ಸಚಿವ ಪಿ. ಚಿದಂಬರಂ ಹಾಗೂ ಪ್ರಧಾನಿ ಮನಮೋಹನ ಸಿಂಗ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷಗಳು, ಕಳೆದೈದು ವರ್ಷಗಳಿಂದ ಸರ್ಕಾರ ದೇಶದ ಆರ್ಥಿಕತೆ ಜತೆ ಆಟವಾಡುತ್ತಿದೆ. ಸರ್ಕಾರದ ತಪ್ಪುನೀತಿಗಳು ಬಹುದೊಡ್ಡ ಆರ್ಥಿಕ ದುರಂತಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಆರೋಪಿಸಿದವು. ದೇಶದ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ. ಯುಪಿಎ ಸರ್ಕಾರ ಅಧಿಕಾರದಿಂದ ಕೆಳಗಿಳಿದರಷ್ಟೇ ಈ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಎಂದು ದೂರಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.