ಪ್ರಧಾನ ಸುದ್ದಿ

ರಾಜ್ಯದ ಅಕ್ಕಿಗೆ ಇಲ್ಲ ಭಾಗ್ಯ!

Published On :

ಕ.ಪ್ರ.ವಾರ್ತೆ ,  ಶಿವಮೊಗ್ಗ ,  ಆ. 29-
ಬಡವರಿಗೆ ಅನ್ನಭಾಗ್ಯ ಕಲ್ಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಕಡಿಮೆ ಬೆಲೆಗೆ ಅಕ್ಕಿ ಸಿಗುವ ಜಾಗ ಬಿಟ್ಟು ಬೇರೆಡೆಗೆ ಕಣ್ಣು ಹಾಯಿಸುತ್ತಿದೆ. ಇದರ ನೇರ ಪರಿಣಾಮ ಅಕ್ಕಿ ಹರಾಜಿನ ಮೇಲಾಗುತ್ತಿದೆ!
ರಾಜ್ಯದ ವ್ಯಾಪಾರಸ್ಥರಿಂದ, ಮಿಲ್ ಮಾಲೀಕರಿಂದ ಅಕ್ಕಿ ಖರೀದಿಸುವಾಗ ಕೆಜಿಗೆ 25ಕ್ಕಿಂತ ಹೆಚ್ಚು ಹಣ ನೀಡಲು ಸಾಧ್ಯವೇ ಇಲ್ಲ ಎನ್ನುತ್ತಿರುವ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಬೇರೆ ರಾಜ್ಯಗಳಿಂದ ಖರೀದಿಸುವಾಗ ಮಾತ್ರ 28 ಆದರೂ ಪರವಾಗಿಲ್ಲ ಎನ್ನುತ್ತಿದೆ. ಸರ್ಕಾರದ ಈ ಧೋರಣೆಯಿಂದ ಅಕ್ಕಿ ಹರಾಜಿನಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದಾಗಿ ರಾಜ್ಯಕ್ಕೆ ತಿಂಗಳಿಗೆ ಅನಾವಶ್ಯಕ 30 ಕೋಟಿ ಹೊರೆಯಾಗುತ್ತಿದೆ.
ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 1,04,562 ಟನ್ ಸಾಮಾನ್ಯ ಅಕ್ಕಿ, 4,412 ಟನ್ ಬಾಲ್ಡ್ ಮಾಡಿದ ಆಕ್ಕಿ(ಕುಚಲಕ್ಕಿ) ಬೇಕು. ಆಹಾರ ಮತ್ತು ನಾಗರಿಕ ಪೂರೈಕೆ ನಿಗಮವು ಅಗತ್ಯ ಅಕ್ಕಿಯನ್ನು ಸರಬರಾಜು ಮಾಡುವ ಹೊಣೆ ಹೊತ್ತಿದೆ. ಅಕ್ಕಿಯನ್ನು ಎನ್‌ಸಿಡಿಇಎಕ್ಸ್ (ಃಛಡ್ಝ್ಟಿಟಿಛಟ ಈ್ಟಟಟ್ಟಜ್ಝಡಿಣ ಉಜ್ಠ್ಝಢಛಡ್ಝಿಢಜಡ ಝ್ಢ್ಛಛಟ್ಜಿಜ ಔ್ಝಟ್ಝಡಿಜಜ) ಮೂಲಕ ಖರೀದಿಸುತ್ತದೆ. ಈ ಹಿನ್ನಲೆಯಲ್ಲಿ ಎನ್‌ಸಿಡಿಇಎಕ್ಸ್ ಸಂಸ್ಥೆಯು ಸೆ.28ರಿಂದ ಆ.5ರವರೆಗೆ ಹರಾಜು ಪ್ರಕ್ರಿಯೆ ನಡೆಸಿತ್ತು. ಆಗ ಇಡೀ ರಾಜ್ಯದಲ್ಲಿ ಮೂರ್ನಾಲ್ಕು ತಾಲೂಕುಗಳನ್ನು ಸೇರಿಸಿ ಒಂದು ಯುನಿಟ್ ಮಾಡಿದ್ದು, 67 ಯುನಿಟ್‌ಗಳು ರೂಪುಗೊಂಡಿದ್ದವು. ಕ್ವಿಂಟಲ್‌ಗೆ 2,300ರಿಂದ 3 ಸಾವಿರ ವರೆಗೆ ಹಣ ನಮೂದಿಸುವುದಕ್ಕೆ ಅವಕಾಶವಿತ್ತು.
ವ್ಯಾಪಾರಸ್ಥರು ಪ್ರತಿ ಯುನಿಟ್‌ಗೆ 2,470ರಿಂದ 2,800ವರೆಗೆ ಬಿಡ್ ಮಾಡಿದ್ದರು. ಆದರೆ, ಹರಾಜು ಒಪ್ಪಿಕೊಳ್ಳುವ ಸಂದರ್ಭದಲ್ಲಿ 2,500ಕ್ಕಿಂತ ಹೆಚ್ಚು ಬಿಡ್ ಮಾಡಿದ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ. ಆಗ 13 ಯುನಿಟ್‌ಗಳಲ್ಲಿ ಮಾತ್ರ ಬಿಡ್ಡುದಾರರು ಸಿಕ್ಕಿದ್ದರು. ನಂತರ ಬೇಡಿಕೆಗೆ ಅನುಗುಣವಾಗಿ ಒಂದು ತಾಲೂಕನ್ನು ಒಂದು ಯೂನಿಟ್ ಎಂದು ಪರಿಗಣಿಸಿ, ಮರು ಟೆಂಡರ್ ಕರೆಯಲಾಯಿತು. ಬಾಕಿ ಉಳಿದಿರುವ ಒಟ್ಟು 146 ಯುನಿಟ್(ಪಾಯಿಂಟ್)ಗಳಲ್ಲಿ ಈ ಹರಾಜು ಪ್ರಕ್ರಿಯೆಯು ಆಗಸ್ಟ್ 26ರಿಂದ ಮರು ಆರಂಭವಾಗಿದ್ದು, ಸೆಪ್ಟಂಬರ್ 2ರವರೆಗೆ ನಡೆಯಲಿದೆ. ಆದರೆ, ಇದೂವರೆಗಿನ ಪ್ರತಿಕ್ರಿಯೆ ಮಾತ್ರ ನೀರಸ!

ಹೀಗಾಗಲು ಕಾರಣಗಳೇನು?: ಸರ್ಕಾರ ಅಕ್ಕಿ ದರವನ್ನು ಕ್ವಿಂಟಲ್‌ಗೆ 2,500ಕ್ಕೆ ನಿಗದಿಪಡಿಸಿದೆ. ಇದು ನೀರಸ ಪ್ರತಿಕ್ರಿಯೆಗೆ ಮೊದಲ ಕಾರಣ. ಏಕೆಂದರೆ ರಾಜ್ಯ ಸರ್ಕಾರ ಭಾರತೀಯ ಆಹಾರ ನಿಗಮದಿಂದ ಕ್ವಿಂಟಲ್‌ಗೆ 2,751ರಂತೆ ಅಕ್ಕಿ ಖರೀದಿಸುತ್ತದೆ. ಸಾಗಣೆ ವೆಚ್ಚ 50 ಸೇರಿದರೆ ಈ ಮೊತ್ತ 2,801 ಆಗುತ್ತದೆ. ಅಲ್ಲದೇ, ಕೆಲವು ದಿನಗಳ ಹಿಂದೆ ಸ್ವತಃ ಆಹಾರ ಸಚಿವ ದಿನೇಶ್ ಗುಂಡೂರಾವ್ ಅವರು ಛತ್ತೀಸ್‌ಗಡದಿಂದ ಕೆಜಿಗೆ 27ರಂತೆ ಅಕ್ಕಿ ಖರೀದಿಸಿದ್ದೇವೆ ಎಂದಿದ್ದರು. ಈ ಅಕ್ಕಿ ರಾಜ್ಯ ತಲುಪುವಷ್ಟರಲ್ಲಿ 28-29 ಆಸುಪಾಸು ತಲುಪಿರುತ್ತದೆ. ಆದರೆ, ರಾಜ್ಯದ ವ್ಯಾಪಾರಸ್ಥರಿಗೆ ಕಿಲೋಗೆ 26 ಕೊಡಿ ಎಂದರೂ ಸರ್ಕಾರ ಮನಸ್ಸು ಮಾಡುತ್ತಿಲ್ಲ!
ಇದಲ್ಲದೇ ಹರಾಜು ನಡೆದಾಗ 10 ದಿನದೊಳಗೆ ಸಂಬಂಧಪಟ್ಟವರಿಗೆ ಕಾರ್ಯಾದೇಶ ಕೊಡಬೇಕಿತ್ತು. ಆದರೆ, ತಿಳಿಸಿದ್ದು 20 ದಿನಗಳ ನಂತರ. ಅಲ್ಲಿಯವರೆಗೆ ಇಎಂಡಿ ಮೊತ್ತ ಅವರಲ್ಲೇ ಉಳಿದಿತ್ತು. ರಾಜ್ಯ ಸರ್ಕಾರ ಉತ್ತಮ ಬೆಲೆ ನೀಡಿ ಅಕ್ಕಿ ಖರೀದಿಸುತ್ತದೆ ಎಂಬ ನಿರೀಕ್ಷೆಯಲ್ಲಿ ಅಕ್ಕಿ ಖರೀದಿಸಿಟ್ಟುಕೊಂಡಿದ್ದವರು ಕೈಸುಟ್ಟುಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ವಿಷಯದಲ್ಲಿ ಸರ್ಕಾರ ನಂಬಿಕೆ ವ್ಯವಹಾರ ಮಾಡುತ್ತಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿದೆ.
ಆಸಕ್ತಿ ಕಳೆದುಕೊಂಡರು: ಇದೆಲ್ಲದರ ಫಲವಾಗಿ ಮರು ಹರಾಜಿನಲ್ಲಿ ಭಾಗವಹಿಸುವ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಮೊದಲ ದಿನ 26ರಂದು 35 ಪಾಯಿಂಟ್‌ನಲ್ಲಿ ಬಿಡ್ಡಿಂಗ್ ಇತ್ತು. 15 ಪಾಯಿಂಟ್‌ಗಳಲ್ಲಿ ಯಾರೂ ಬಿಡ್ ಮಾಡಲಿಲ್ಲ. 13 ಪಾಯಿಂಟ್‌ಗಳಲ್ಲಿ ಮಾತ್ರ ಬಿಡ್ಡಿಂಗ್ ಆಯಿತು. ಇದರಲ್ಲಿ ಬಹುತೇಕ ಕಡೆ 2,500 ಕ್ಕಿಂತ ಹೆಚ್ಚು ಬೆಲೆಯೇ ನಮೂದಾಗಿತ್ತು. ಸರ್ಕಾರದ ಷರತ್ತಿನಂತೆ 7 ಪಾಯಿಂಟ್‌ಗಳಲ್ಲಿ ಮಾತ್ರ ಬಿಡ್ ಆದಂತಾಗಿದೆ. ಇನ್ನು ಆ.28ರಂದು 38 ಪಾಯಿಂಟ್‌ಗಳಲ್ಲಿ ಹರಾಜು ನಡೆದಿದ್ದು, 11 ಪಾಯಿಂಟ್‌ಗಳಲ್ಲಿ ಯಾರೂ ಬಿಡ್ ಮಾಡಲಿಲ್ಲ. 8 ಪಾಯಿಂಟ್‌ಗಳಲ್ಲಿ 2,500 ಮೇಲೆ ಬಿಡ್ ಆಗಿದೆ. 19 ಪಾಯಿಂಟ್‌ಗಳಲ್ಲಿ ಮಾತ್ರ ಸರ್ಕಾರದ ನಿರೀಕ್ಷೆ ಈಡೇರಿದೆ.

ಸರ್ಕಾರಕ್ಕೇ ನಷ್ಟ!

ವ್ಯಾಪಾರಸ್ಥರೊಂದಿಗೆ ಸರ್ಕಾರ ಮಾತುಕತೆ ನಡೆಸಿದರೆ ಕೆಜಿಗೆ 26ರಂತೆ ಅಕ್ಕಿಯನ್ನು ಮಾರಲು ಅವರು ಸಿದ್ಧರಿದ್ದಾರೆ. ತಪ್ಪಿದಲ್ಲಿ ರಾಜ್ಯ ಸರ್ಕಾರವು ಬೇರೆಡೆಯಿಂದ ಅಕ್ಕಿ ಖರೀದಿಸಲೇಬೇಕಾಗುತ್ತದೆ. ಪ್ರತಿ ತಿಂಗಳು ಇದರಿಂದಾಗಿ ಸರ್ಕಾರಕ್ಕೆ 30 ಕೋಟಿ ಹೊರೆಯಾಗುತ್ತದೆ. ವರ್ಷಕ್ಕೆ ಈ ಹೊರೆ 350 ಕೋಟಿಗೂ ಹೆಚ್ಚು. ಸ್ಥಳೀಯ ವ್ಯಾಪಾರಸ್ಥರಿಗಿಂತ ಹೊರರಾಜ್ಯದ ವ್ಯಾಪಾರಸ್ಥರೇ ಸರ್ಕಾರಕ್ಕೆ ಹೆಚ್ಚು ಪ್ರೀತಿ ಎಂದರೆ ಬೇರೆ ಅರ್ಥಗಳಿಗೆ ಕಾರಣವಾಗುತ್ತದೆ.

ಸ್ಥಳೀಯವಾಗಿ ಖರೀದಿಸಿ

ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡಿದರೆ ಪರೋಕ್ಷವಾಗಿ ರೈತರಿಗೆ ಹೆಚ್ಚು ಅನುಕೂಲ. ಪರೋಕ್ಷವಾಗಿ ಅವರು ಬೆಳೆದ ಬತ್ತಕ್ಕೆ ಬೆಲೆ ಸಿಗುತ್ತದೆ. ಕಡಿಮೆ ಬೆಲೆ ಮಾತ್ರ ಖರೀದಿಸುತ್ತೇವೆ ಎಂದು ಸರ್ಕಾರ ಪಟ್ಟು ಹಿಡಿದರೆ ಉತ್ತಮ ಗುಣಮಟ್ಟದ ಅಕ್ಕಿಯ ಬದಲು ರೀಸೈಕಲ್ ಆದ ಅಕ್ಕಿಯೇ ಸಿಗಬಹುದು. ಹಾಗಾಗಿ ಸರ್ಕಾರ ಈ ದಿಕ್ಕಿನಲ್ಲಿ ಚಿಂತನೆ ನಡೆಸಬೇಕಿದೆ.

ಬಿಡ್ಡುದಾರರು ಬರಲಿಲ್ಲ ಎಂಬ ಕಾರಣ ಮುಂದೊಡ್ಡಿ ನೇರ ಖರೀದಿಗೆ ಸರ್ಕಾರ ಮುಂದಾದರೆ ಅವ್ಯವಹಾರ ನಡೆಯುವ ಸಾಧ್ಯತೆ ಇದೆ. ಪ್ರಕ್ರಿಯೆ ತಡವಾದಷ್ಟೂ ಮಾರುಕಟ್ಟೆಗೆ ಅಕ್ಕಿ ಬರುವುದು ತಡವಾಗುತ್ತದೆ. ಹಬ್ಬದ ಸಮಯ ಹತ್ತಿರ ಬರುತ್ತಿದ್ದು, ಈ ವೇಳೆಗೆ ಕಾರ್ಡುದಾರರಿಗೆ ಅಕ್ಕಿ ಸಿಗುವುದು ಕಷ್ಟವಾಗಬಹುದು. ಹಾಗಾಗಿ ಸರ್ಕಾರ ಉತ್ತಮ ಬೆಲೆಗೆ ಉತ್ತಮ ಅಕ್ಕಿ ಖರೀದಿಸಲು ಮುಂದಾಗುವುದು ಸೂಕ್ತ.
- ಖಲೀಲ್ ಅಹ್ಮದ್, ಅಕ್ಕಿ ವ್ಯಾಪಾರಸ್ಥರು

- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.