ನಿಟ್ಟುಸಿರು ಬಿಟ್ಟ ಭಟ್ಕಳ
ಕ.ಪ್ರ.ವಾರ್ತೆ , ಕಾರವಾರ , ಆ. 29
ದೇಶದ ಭದ್ರತೆಗೇ ಸವಾಲಾಗಿದ್ದ ಯಾಸೀನ್ ಭಟ್ಕಳ್ ಕಡೆಗೂ ದೇಶದ ಭದ್ರತಾ ಪಡೆಗೆ ಸೆರೆ ಸಿಕ್ಕಿದ್ದಾನೆ. ದೇಶ ದ್ರೋಹಿ ಯಾಸೀನ್ ಬಂಧನದಿಂದ ಆತನ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜನತೆಯೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಯಾಸೀನ್ ಬಂಧನದ ಸುದ್ದಿ ಬಿತ್ತರವಾಗುತ್ತಿದ್ದಂತೆ ಭಟ್ಕಳದಲ್ಲಿ ಒಮ್ಮೆ ಸಂಚಲನ ಮೂಡಿದಂತಾಯಿತು. ಬೆಂಗಳೂರು, ಮುಂಬೈ, ಪುಣೆಯ ಜರ್ಮನ್ ಬೇಕರಿ ಪ್ರಕರಣಗಳ ಸೇರಿದಂತೆ ದೇಶದ ವಿವಿಧೆಡೆ ಬಾಂಬ್ ಸ್ಫೋಟದ ಸದ್ದು ಮೊಳಗುತ್ತಿದ್ದಂತೆ ತನಿಖೆಯ ಜಾಡು ಬಂದು ನಿಲ್ಲುತ್ತಿದ್ದುದು ಭಟ್ಕಳದಲ್ಲಿ. ಸಾಮಾನ್ಯವಾಗಿ ಇಂಥ ಸ್ಫೋಟಕ ಕೃತ್ಯಗಳಲ್ಲಿ ಭಟ್ಕಳ್ ಸಹೋದರರಾದ ಯಾಸೀನ್ ಮತ್ತು ರಿಯಾಜ್ ಹೆಸರು ಕೇಳಿ ಬರುತ್ತಲೇ ಇತ್ತು. ಆದರೆ, ಈ ಭಯೋತ್ಪಾದಕರು ಇದುವರೆಗೂ ಯಾರ ಕಣ್ಣಿಗೂ ಬೀಳದೆ, ಎಲ್ಲಿಯೂ ಯಾವ ಸಾಕ್ಷಿಯನ್ನೂ ಬಿಡದೆ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದರು. ಪೊಲೀಸರು ಬಂದು ತನಿಖೆ ನಡೆಸುತ್ತಿದ್ದರೂ ಇಲ್ಲಿ ಯಾವುದೇ ಮಾಹಿತಿಯೂ ಸಿಗುತ್ತಿರಲಿಲ್ಲ. ಇನ್ನು ಮುಂದಾದರೂ ಊರಿನಲ್ಲಿ ಪೊಲೀಸರ ಬೂಟಿನ ಸಪ್ಪಳ ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿ ಭಟ್ಕಳ ಜನತೆ ಇದೀಗ ನಿರಾಳವಾಗಿದ್ದಾರೆ.
ಮೂಲ ಹೆಸರು ಅಹಮದ್: ಇಡಿ ದೇಶ ಈತನನ್ನು ಯಾಸೀನ್ ಭಟ್ಕಳ್ ಎಂದೇ ಗುರುತಿಸಿದ್ದರೂ ಭಟ್ಕಳದಲ್ಲಿ ಮಾತ್ರ ಅವನ ಹೆಸರು ಅಹಮದ್ ಸಿದ್ದಿಬಾಪಾ. ಈತ ಉಗ್ರಗಾಮಿಯಾಗಿ ದೇಶವನ್ನೇ ನಡುಗಿಸುವ ಕೃತ್ಯಕ್ಕೆ ಇಳಿಯುತ್ತಾನೆ ಎಂದು ಯಾರೂ ನಿರೀಕ್ಷಿಸಿಯೂ ಇರಲಿಲ್ಲ.
1983ರಲ್ಲಿ ಭಟ್ಕಳದಲ್ಲಿ ಹುಟ್ಟಿದ ಅಹಮದ್ ಸಿದ್ದಿಬಾಪಾ 1ನೇ ತರಗತಿಯಿಂದ 10ನೇ ತರಗತಿ ತನಕ ಓದಿದ್ದು ಇಲ್ಲಿಯೇ. ಚುರುಕಾಗಿದ್ದ ಹುಡಗನಿಗೆ ಮುಂದೇನಾಯಿತೋ ಗೊತ್ತಿಲ್ಲ ಎನ್ನುತ್ತಾರೆ ಆತನ ಸ್ನೇಹಿತರು. ಹತ್ತನೇ ತರಗತಿಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಗದ ಅಹಮದ್ 2005ರಲ್ಲಿ ದುಬೈಗೆ ಹೋದ. 'ಜನವರಿ 2007ರಲ್ಲಿ ದುಬೈನಿಂದ ನಾಪತ್ತೆಯಾದ ನಂತರ ನಮಗೂ ಅವನಿಗೂ ಸಂಪರ್ಕವೇ ಇಲ್ಲ. ಮತ್ತೆ ಅವನ ಮುಖವನ್ನು ನೋಡಿಯೂ ಇಲ್ಲ. ದೂರವಾಣಿ ಕರೆಯೂ ಬಂದಿಲ್ಲ' ಎನ್ನುತ್ತಾರೆ ಯಾಸೀನ್ ತಂದೆ ಝರಾರ್ ಸಿದ್ದಿಬಾಪಾ. ಯಾಸೀನ್ ದೆಹಲಿಯಲ್ಲಿ ಅನ್ಯ ಕೋಮಿನ ಯುವತಿಯನ್ನು ಮತಾಂತರಗೊಳಿಸಿ ವಿವಾಹವಾಗಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈತ 2007ರ ನಂತರ ಭಟ್ಕಳಕ್ಕೆ ಭೇಟಿ ನೀಡಿದ್ದನೇ? ಇಲ್ಲಿ ಯಾರೊಂದಿಗಾದರೂ ಸಂಪರ್ಕವಿತ್ತೆ? ಎಂಬ ವಿಷಯಗಳು ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ. ವರ್ಷದ ಹಿಂದೆ ಯಾಸೀನ್ ಭಟ್ಕಳಕ್ಕೆ ಆಗಮಿಸಿದ್ದು, ಬ್ಯಾಂಕ್ ಒಂದರಿಂದ ಹಣವನ್ನೂ ಡ್ರಾ ಮಾಡಿದ್ದ ಎಂಬ ವದಂತಿ ಹಬ್ಬಿತ್ತು. ಇತ್ತೀಚೆಗೆ ತನಿಖಾಧಿಕಾರಿಗಳು ಭಟ್ಕಳಕ್ಕೆ ಆಗಮಿಸಿ ಯಾಸೀನ್ ಭಟ್ಕಳ ಕುಟುಂಬದವರನ್ನೂ ಪ್ರಶ್ನಿಸಿತ್ತು. ಇದೀಗ ಯಾಸೀನ್ ಬಂಧಿತನಾಗಿದ್ದು, ಭಟ್ಕಳಕ್ಕಿರುವ 'ಉಗ್ರರ ನಂಟು' ಎಂಬ ಕುಖ್ಯಾತಿ ಕೊನೆಗೊಳ್ಳುವುದೋ ನೋಡಬೇಕು.
ಯಾಸೀನ್ ಭಟ್ಕಳ್
ಈತ ನಿಷೇಧಿತ ಸಂಘಟನೆ ಇಂಡಿಯನ್ ಮುಜಾಹಿದೀನ್ನ ಸಹ ಸಂಸ್ಥಾಪಕ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಈತನ ಊರು. ದೇಶದ ಪ್ರಮುಖ ತನಿಖಾ ದಳ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈತನನ್ನು 'ಮೋಸ್ಟ್ ವಾಂಟೆಡ್ ಉಗ್ರ' ಎಂದು ಘೋಷಿಸಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಈತನ ಕೈವಾಡ ಇದೆ. ಬಾಂಬ್ ದಾಳಿ ನಡೆಸಿ ಪರಾರಿಯಾಗುವುದರಲ್ಲಿ ಈತ ಸಿದ್ಧಹಸ್ತ.
ಅಸಾದುಲ್ಲಾ ಅಖ್ತರ್
ಯಾಸಿನ್ ಭಟ್ಕಳ್ನ ಪರಮಾಪ್ತ ಈತ. ಉತ್ತರ ಪ್ರದೇಶದ ಆಜಮ್ಗಡಕ್ಕೆ ಸೇರಿದವನಾದ ಈತ ವಾರಾಣಸಿ, ಅಹಮದಾಬಾದ್ ಸ್ಫೋಟ ಸೇರಿದಂತೆ ಪ್ರಮುಖ ಉಗ್ರ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ. ಈತನ ತಂದೆ ಮೂಳೆ ಶಸ್ತ್ರಚಿಕಿತ್ಸಕರಾಗಿದ್ದಾರೆ. ಲಖನೌದಿಂದ ಫಾರ್ಮಸಿಯಲ್ಲಿ ಪದವಿ ಪಡೆದಿದ್ದಾನೆ. ಬಾಂಬ್ ಇರಿಸುವುದರಲ್ಲಿ ಈತ ನಿಷ್ಣಾತನಾಗಿದ್ದಾನೆ.
ನಾನೊಬ್ಬ ಯುನಾನಿ ಡಾಕ್ಟರ್
ಬಿಹಾರ ಪೊಲೀಸರು ಮತ್ತು ಬೇಹುಗಾರಿಕಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆ ವೇಳೆ ಸೆರೆ ಸಿಕ್ಕ ಉಗ್ರ ಯಾಸೀನ್ ಭಟ್ಕಳ್ ಮತ್ತು ಆತನ ಆಪ್ತ ಅಸಾದುಲ್ಲಾ ಅಖ್ತರ್ನ ಬಾಯಿ ಬಿಡಿಸುವುದು ಪೊಲೀಸರಿಗೆ ಆರಂಭದಲ್ಲಿ ಸಾಧ್ಯವಾಗಲೇ ಇಲ್ಲ. ಕಳೆದ ರಾತ್ರಿಯಿಂದ ನಡೆದ ಸತತ ವಿಚಾರಣೆ ವೇಳೆ ಪರಮ ಪಾತಕಿ 'ನಾನೊಬ್ಬ ಎಂಜಿನಿಯರ್. ಯೋಜನೆಯೊಂದಕ್ಕಾಗಿ ನಾನು ನೇಪಾಳದಲ್ಲಿ ಕೆಲಸ ಮಾಡುತ್ತಿದ್ದೇನೆ' 'ಯುನಾನಿ ವೈದ್ಯ' ಹೀಗೆ ಹಲವು ಬಾರಿ ಹೇಳಿಕೆ ಬದಲಾಯಿಸುತ್ತಿದ್ದ. ಆದರೆ ದೇಶಾದ್ಯಂತ ಯಾಸೀನ್ ನಡೆಸಿದ ಕುಕೃತ್ಯಗಳ ಬಗ್ಗೆ ಎಳೆಎಳೆಯಾಗಿ ಪೊಲೀಸರು ಆತನಿಗೆ ವಿವರಿಸಿದ ಬಳಿಕ ಅಂತಿಮವಾಗಿ 'ನಾನು ಯಾಸೀನ್ ಭಟ್ಕಳ್' ಎಂದು ಪೊಲೀಸರ ಮುಂದೆ ಒಪ್ಪಿಕೊಂಡ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ರಹಸ್ಯ ಕಾರ್ಯಾಚರಣೆ: ಭಟ್ಕಳ್ನ ಬಂಧನ ಕಾರ್ಯಾಚರಣೆಯನ್ನು ಅತ್ಯಂತ ರಹಸ್ಯವಾಗಿ ಇರಿಸಲಾಗಿತ್ತು. ಬಿಹಾರಕ್ಕೆ ಹೊಂದಿಕೊಂಡಂತೆ ಇರುವ ನೇಪಾಳ ಗಡಿಯಲ್ಲಿ ಕಳೆದ ಒಂದು ತಿಂಗಳಿಂದ ಕಟ್ಟೆಚ್ಚರ ವಹಿಸಲಾಗಿತ್ತು. ಪೂರ್ವ ಚಂಪಾರಣ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ಬಿಹಾರ ಪೊಲೀಸ್ ಮುಖ್ಯಸ್ಥ ಸೇರಿದಂತೆ ಪ್ರಮುಖರಿಗಷ್ಟೇ ಬಂಧನದ ಬಗ್ಗೆ ಮಾಹಿತಿ ಇತ್ತು.
-ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

