ಪ್ರಧಾನ ಸುದ್ದಿ

ರಾಜ್ಯ ನಾಲ್ಕು, ಧ್ವನಿ ಒಂದು

ರಾಜ್ಯ ನಾಲ್ಕು, ಧ್ವನಿ ಒಂದು
Published On :

-ಗೆದ್ದ ಕೇಜ್ರಿವಾಲ, ಆದ್ರೂ ದಿಲ್ಲಿವಾಲ ಹರ್ಷ ವಸುಂಧರೆಯ ತಾಪಕ್ಕೆ ಕರಗಿದ ಅಶೋಕ ಶಿವರಾಜನ ನರ್ತನಕ್ಕೆ ನಡುಗಿದ ಸಿಂಧಿಯಾ ರಮಣನ ಮುಂದೆ ಠುಸ್ಸಾದ ಅಜಿತನ ಸಾಹಸ


ಬಿಜೆಪಿ ಪಾಲಿಗಿದು  ಮರೆಯಲಾಗದ ದಿನ. ನಾಲ್ಕು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎಲ್ಲದರಲ್ಲೂ ಬಿಜೆಪಿಯ ಕಮಲ ಅರಳಿದೆ. ದೆಹಲಿಯಲ್ಲಿ  ಕಮಲ ಪಕ್ಷ 32 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತ್ಯಧಿಕ ಸ್ಥಾನ ಪಡೆದುಕೊಂಡಿದ್ದರೂ ಸಹ, ಸರ್ಕಾರ ರಚಿಸಲು ಬೇಕಾದ ಸ್ಥಾನ ಸಿಕ್ಕಿಲ್ಲ. ಇಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ 28 ಸ್ಥಾನ ಗಳಿಸಿಕೊಳ್ಳುವ ಮೂಲಕ ಮಹತ್ತರ ಸಾಧನೆ ಮಾಡಿದೆ.  ಇಲ್ಲಿ ಕಾಂಗ್ರೆಸ್ 8 ಸ್ಥಾನ ಗಳಿಸಿಕೊಳ್ಳುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಶೀಲಾ ದೀಕ್ಷಿತ್ ಅವರೇ ಕೇಜ್ರಿವಾಲ್ ವಿರುದ್ಧ ಸೋತು ಸುಣ್ಣವಾಗಿ ರಾಜಿನಾಮೆ ಕೊಟ್ಟು ಮನೆಗೆ ನಡೆದಿದ್ದಾರೆ. ಇನ್ನು ಮಧ್ಯ ಪ್ರದೇಶದಲ್ಲಿ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಹ್ಯಾಟ್ರಿಕ್ ಸಾಧಿಸಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ತಂದು ಕೂರಿಸಿದರೂ ಸಹ ಕಾಂಗ್ರೆಸ್‌ಗೆ ಗೆಲ್ಲಲಾಗಲಿಲ್ಲ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ರಾಣಿಯಾಗಿ ಹೊರಹೊಮ್ಮಿದ್ದಾರೆ. 200 ಸ್ಥಾನಗಳ ವಿಧಾನಸಭೆಯಲ್ಲಿ ಹಾಲಿ ಕಾಂಗ್ರೆಸ್ ಸರ್ಕಾರ 21 ಸ್ಥಾನ ಪಡೆಯುವ ಮೂಲಕ ತೀವ್ರ ಮುಖಭಂಗ ಎದುರಿಸಿದೆ. ಇಲ್ಲಂತೂ ವಸುಂಧರಾ ರಾಜೇ ಸಿಎಂ ಆಗುವುದು ಖಚಿತ. ಬಿಜೆಪಿಯ ಆಡಳಿತವಿದ್ದ ಮತ್ತೊಂದು ರಾಜ್ಯ ಛತ್ತೀಸ್‌ಗಡದಲ್ಲೂ ಕಮಲದ್ದೇ ನಗು. ಡಾ.ರಮಣ್ ಸಿಂಗ್ ಅವರು ಭರ್ಜರಿಯಾಗಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದಾರೆ. ನಕ್ಸಲ್ ಸಮಸ್ಯೆ, ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಪರ ವಾತಾವರಣ ಸೃಷ್ಟಿಸಿಲ್ಲ ಎಂಬುದು ಈ ಫಲಿತಾಂಶದಿಂದ ಗೋಚರವಾಗಿದೆ. ನಾಲ್ಕೂ ರಾಜ್ಯಗಳ ಒಟ್ಟಾರೆ ಫಲಿತಾಂಶ ಬಿಜೆಪಿ ಪಾಲಿಗೆ ಹರ್ಷವನ್ನೇ ತಂದಿದೆ. ಜೊತೆಗೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹವಾ ಕೂಡ ಈ ನಾಲ್ಕೂ ರಾಜ್ಯಗಳ ಜಯದಲ್ಲಿ ಕೆಲಸ ಮಾಡಿರುವುದನ್ನು ತಳ್ಳಿಹಾಕಲಾಗದು.

ರಾಜಸ್ಥಾನದಲ್ಲಿನ ಕಾಂಗ್ರೆಸ್ ದುರಾಡಳಿತ ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿಯೇ ಜನ ನಮ್ಮನ್ನು ಆರಿಸಿದ್ದಾರೆ. ಈ ಗೆಲವಲ್ಲಿ ಮೋದಿ ಪ್ರಭಾವವೂ ಮಹತ್ವದ ಪಾತ್ರ ವಹಿಸಿದೆ.
- ವಸುಂಧರಾ ರಾಜೇ

ಕೇಂದ್ರದ ಯುಪಿಎ ಸರ್ಕಾರ ಮಧ್ಯಪ್ರದೇಶದ ಬಗ್ಗೆ ತೋರುತ್ತಿದ್ದ ಮಲತಾಯಿ ಧೋರಣೆಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಸತತ ಮೂರನೇ ಬಾರಿ ಬಿಜೆಪಿ ಕೈಹಿಡಿದಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಗೆಲವು ನಮ್ಮದೇ.
- ಶಿವರಾಜ್ ಸಿಂಗ್ ಚೌಹಾಣ್

ರಾಜ್ಯದಲ್ಲಿ ಬಿಜೆಪಿ ಮಾಡಿದ ಅಭಿವೃದ್ಧಿ ಕೆಲಸಗಳೇ ನಮ್ಮನ್ನು ಗೆಲ್ಲಿಸಿವೆ. ಇದು ಅವರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಮೂರನೇ ಬಾರಿಗೆ ಅಧಿಕಾರ ಕೊಟ್ಟ ಮತದಾರರಿಗೆ ಅಭಿನಂದನೆಗಳು.
- ರಮಣ್  ಸಿಂಗ್

ನನಗೆ ಕುದುರೆ ವ್ಯಾಪಾರದಲ್ಲಿ ನಂಬಿಕೆ ಇಲ್ಲ. ಸರ್ಕಾರ ರಚಿಸಲು ಬೇಕಾದ ಬಹುಮತವಿಲ್ಲ. ಹೀಗಾಗಿ ಸರ್ಕಾರ ರಚನೆಯ ಸಾಹಸಕ್ಕೆ ಇಳಿಯುವುದೇ ಇಲ್ಲ. ಆಮ್ ಆದ್ಮಿ ಪಕ್ಷದ ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ.
-  ಹರ್ಷವರ್ಧನ


ಚುನಾವಣಾ ನೋಟ ರಾಜಸ್ಥಾನದ ರಾಣಿ
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಗೆಲವು ಸಾಧಿಸಿರುವ ಬಿಜೆಪಿ ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ. ವಸುಂಧರಾ ರಾಜೇ ಅವರ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ ಮುಕ್ಕಾಲು ಪ್ರಮಾಣದ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಆಡಳಿತ ವಿರೋಧಿ ಅಲೆಯನ್ನು ಸರಿಯಾಗಿಯೇ ಉಪಯೋಗಿಸಿಕೊಂಡಿರುವ ಅವರು, ಪಕ್ಷವನ್ನು ಮತ್ತೆ ಆಡಳಿತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವನೇ ಮಹಾರಾಜ
ಮಧ್ಯ ಪ್ರದೇಶದಲ್ಲಿ ಮತ್ತೆ ಶಿವರಾಜ್ ಸಿಂಗ್ ಚೌಹಾಣ್ ಅವರೇ ಮಹಾರಾಜ. ಕಾಂಗ್ರೆಸ್ ವಿರುದ್ಧ ಭಾರಿ ಅಂತರದಲ್ಲಿ ಗೆದ್ದಿರುವ ಬಿಜೆಪಿ ಆ ಪಕ್ಷದ ನಾಯಕರ ಬೆವರಿಳಿಸಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾರನ್ನೇ ಮುಂದಾಳಾಗಿ ಬಿಟ್ಟಿದ್ದರೂ ಬಿಜೆಪಿಯ ಅಲೆ ಮುಂದೆ ಏನೂ ಮಾಡಲಾಗಿಲ್ಲ. ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನ ಗೆದ್ದಿರುವ  ಅವರು ಜನರ ಅಚ್ಚುಮೆಚ್ಚಿನ ಸಿಎಂ ಆಗಿ ಮುಂದುವರಿಯಲಿದ್ದಾರೆ.

ಜನರ ಪಾಲಿನ ರಮಣ
ಆಡಳಿತ ವಿರೋಧಿ ಅಲೆ ಇದ್ದರೂ ಸಹ ಸಮರ್ಥವಾಗಿ ಮೆಟ್ಟಿನಿಂತ ಹಾಲಿ ಸಿಎಂ ಡಾ. ರಮಣ್ ಸಿಂಗ್ ಮತ್ತೊಮ್ಮೆ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದ್ದಾರೆ. ಹಲವಾರು ಕಾಂಗ್ರೆಸ್ ನಾಯಕರನ್ನು ನಕ್ಸಲೀಯರು ಹತ್ಯೆ ಮಾಡಿದ ಬಳಿಕ ರಮಣ್ ಸಿಂಗ್ ಅವರಿಗೆ ಗೆಲವು ಕಷ್ಟವಾಗಬಹುದು ಎಂದೇ ಹೇಳಲಾಗಿತ್ತು. ಆದರೂ ಬಿಗಿ ಹೋರಾಟದಲ್ಲಿ ಅವರೇ ಜಯದ ನಗೆ ಬೀರಿದ್ದಾರೆ.

ಗೆಲವಿನ ಹರ್ಷ
ಕ್ಲೀನ್ ಇಮೇಜ್‌ನ ಡಾ. ಹರ್ಷವರ್ಧನ ಅವರಿಗೆ ಇದು ಖುಷಿಯ ದಿನವೂ ಹೌದು, ಬೇಸರದ ದಿನವೂ ಹೌದು. ಅತಿ ದೊಡ್ಡ ಪಕ್ಷವಾಗಲು ಕಾರಣವಾದ ಅವರು, ಸರಳ ಬಹುಮತಕ್ಕೆ ಬೇಕಾದ ಸಂಖ್ಯೆ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕುದುರೆ ವ್ಯಾಪಾರದ ಮೂಲಕ ಅಧಿಕಾರ ಹಿಡಿಯುವುದಿಲ್ಲ ಎಂದಿರುವ ಅವರು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.