ಇಂದು ಸಿಗುತ್ತಾ ಲೋಕ ಭಾಗ್ಯ?
ನವದೆಹಲಿ/ಚೆನ್ನೈ: ಲೋಕಪಾಲ ಮಸೂದೆ ಅಂಗೀಕಾರಕ್ಕೆ ಮುಹೂರ್ತ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭ್ರಷ್ಟಾಚಾರ ವಿರುದ್ಧದ ಬಲಿಷ್ಠ ಆಯುಧವಾಗಿರುವ ಲೋಕಪಾಲ ಮಸೂದೆ ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿದೆ.
ಚರ್ಚೆಯಿಲ್ಲದೆಯೂ ಲೋಕಪಾಲ ಮಸೂದೆ ಅಂಗೀಕರಿಸಲು ಸರ್ಕಾರಕ್ಕೆ ಬಿಜೆಪಿ ಬೆಂಬಲ ಸೂಚಿಸಿದ್ದು, ಖಂಡಿತಾ ಮಸೂದೆ ಅಂಗೀಕಾರವಾಗಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಸಮಾಜವಾದಿ ಪಕ್ಷದ ತೀವ್ರ ವಿರೋಧದ ನಡುವೆಯೂ ಮಸೂದೆ ಅಂಗೀಕಾರವಾಗುವ ಎಲ್ಲ ಸಾಧ್ಯತೆಯಿದೆ ಎಂದು ಸಚಿವ ನಾರಾಯಣಸ್ವಾಮಿ ತಿಳಿಸಿದ್ದಾರೆ. 2011ರಲ್ಲಿ ಸಚಿವ ನಾರಾಯಣಸ್ವಾಮಿ ಅವರೇ ಲೋಕಪಾಲ ಮತ್ತು ಲೋಕಾಯುಕ್ತ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.
ಲೋಕಪಾಲ ಮಸೂದೆಗೆ ಸಂಬಂಧಿಸಿ ತನ್ನ ನಿರ್ಧಾರವನ್ನು ಎಸ್ಪಿ ಮರುಪರಿಶೀಲಿಸಲಿ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸಲಹೆ ನೀಡಿದ್ದಾರೆ. ಇದೇ ವೇಳೆ, ಲೋಕಪಾಲಕ್ಕೆ ಸಂಬಂಧಿಸಿ ಒಂದು ವರ್ಷಗಳ ಹಿಂದೆಯೇ ಪಕ್ಷಗಳ ನಡುವೆ ಒಮ್ಮತ ಮೂಡಿತ್ತು. ಆದರೆ, ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ಆಸಕ್ತಿ ವಹಿಸಲಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ನ್ಯಾಯಯುತ ತನಿಖೆ ಅಸಾಧ್ಯ: ಮಸೂದೆಯಲ್ಲಿ ಭ್ರಷ್ಟಾಚಾರದ ತನಿಖೆ ನಡೆಸುವ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿಲ್ಲ. ಜತೆಗೆ, ಲೋಕಪಾಲ ನೇಮಕದ ಅಧಿಕಾರವನ್ನು ರಾಜಕಾರಣಿಗಳಿಗೆ ನೀಡಲಾಗಿದೆ.
ಅಂದರೆ ರಾಜಕಾರಣಿಗಳೇ ತಪ್ಪೆಸಗುವಾಗ ಲೋಕಪಾಲರಿಂದ ನ್ಯಾಯಯುತ ತನಿಖೆಯನ್ನು ನಾವು ನಿರೀಕ್ಷಿಸಲು ಸಾಧ್ಯವೇ ಎಂದು ಎಎಪಿ ನಾಯಕ ಪ್ರಶಾಂತ್ ಭೂಷಣ್ ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಅಣ್ಣಾ ಅಭಿನಂದನೆ, ಕೇಜ್ರಿವಾಲ್ಗೆ ಟಾಂಗ್: ಏತನ್ಮಧ್ಯೆ, ಲೋಕಪಾಲ ಮಸೂದೆಯನ್ನು ಅಂಗೀಕರಿಸಲು ಮುಂದಾಗಿರುವ ಸರ್ಕಾರಕ್ಕೆ ಗಾಂಧಿವಾದಿ ಅಣ್ಣಾ ಹಜಾರೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಸಭೆಯಲ್ಲಿ ಎಷ್ಟೇ ಗದ್ದಲ ನಡೆದರೂ ಮಸೂದೆಯನ್ನು ಅಂಗೀಕರಿಸಲೇಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇದೇ ವೇಳೆ, ಲೋಕಪಾಲ ಮಸೂದೆ ದುರ್ಬಲವಾಗಿದೆ ಎಂಬ ಕೇಜ್ರಿವಾಲ್ ವಾದವನ್ನು ಅಣ್ಣಾ ನಿರಾಕರಿಸಿದ್ದಾರೆ. ನಾನು ಮಸೂದೆಯ ನಿಬಂಧನೆಗಳನ್ನು ಸ್ಪಷ್ಟವಾಗಿ ಓದಿದ್ದೇನೆ.
ನಿಮಗೆ (ಕೇಜ್ರಿವಾಲ್) ಮಸೂದೆಯಲ್ಲಿ ಏನಾದರೂ ಲೋಪ ಕಂಡುಬಂದರೆ, ಆಗ ನೀವು ನಿರಶನ ಕುಳಿತುಕೊಳ್ಳಿ ಎಂದಿದ್ದಾರೆ ಅಣ್ಣಾ. ಮಸೂದೆಯಲ್ಲಿ ನಾವು ಹೇಳಿರುವ ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ಅದಕ್ಕೆ ನಾನು ಸಂತೋಷಪಡುತ್ತೇನೆ.
ಮಸೂದೆ ಅಂಗೀಕಾರವಾಗದ ಹೊರತು ನಿರಶನ ಕೈಬಿಡುವುದಿಲ್ಲ ಎಂದೂ ಅಣ್ಣಾ ನುಡಿದಿದ್ದಾರೆ. ರಾಳೇಗಣ್ಸಿದ್ಧಿಯಲ್ಲಿ ಅಣ್ಣಾ ನಡೆಸುತ್ತಿರುವ ನಿರಶನ ಭಾನುವಾರ 6ನೇ ದಿನ ಪೂರೈಸಿದೆ.
ಲೋಕಪಾಲ: ಎಎಪಿ ತಿರಸ್ಕಾರ
ಲೋಕಪಾಲ ಮಸೂದೆ ಅಂಗೀಕಾರ ನಿರ್ಧಾರವನ್ನು ಗಾಂಧಿವಾದಿ ಅಣ್ಣಾ ಹಜಾರೆ ಸ್ವಾಗತಿಸಿದರೆ, ಆಮ್ ಆದ್ಮಿ ಪಕ್ಷ ಮಸೂದೆಯನ್ನು ತಿರಸ್ಕರಿಸಿದೆ. ಈ ಮೂಲಕ ಲೋಕಪಾಲ ಮಸೂದೆ ವಿಚಾರದಲ್ಲೂ ಕೇಜ್ರಿವಾಲ್ ಹಾಗೂ ಹಜಾರೆ ನಡುವೆ ಭಿನ್ನಮತವಿರುವುದು ಸ್ಪಷ್ಟವಾಗಿದೆ. ಈ ಮಸೂದೆಯು ತೀರಾ ದುರ್ಬಲವಾಗಿದ್ದು, ಇದರಿಂದ ಭ್ರಷ್ಟಾಚಾರ ನಿಗ್ರಹ ಸಾಧ್ಯವಿಲ್ಲ. ಹಾಗಾಗಿ ಇದಕ್ಕೆ ನಮ್ಮ ಬೆಂಬಲವಿಲ್ಲ ಎಂದು ಎಎಪಿ ಮುಖ್ಯಸ್ಥ ಕೇಜ್ರಿವಾಲ್ ತಿಳಿಸಿದ್ದಾರೆ. ಜತೆಗೆ, ಲೋಕಪಾಲ ಅಂಗೀಕಾರವಾದರೆ ನಿರಶನ ಕೈಬಿಡುತ್ತೇನೆ ಎಂಬ ಅಣ್ಣಾ ನಿರ್ಧಾರಕ್ಕೆ ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಪಾಲಕ್ಕೆ ಬೆಂಬಲಿಸುವಂತೆ ಕಾಂಗ್ರೆಸ್ ನಾಯಕರೊಬ್ಬರು (ರಾಹುಲ್ ಗಾಂಧಿ) ವಕಾಲತ್ತು ನಡೆಸಿದ್ದಾರೆ. ಅವರಿಗೆ ತುಡಿತವಿದ್ದಿದ್ದರೆ, ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಲೋಕಾಯುಕ್ತ ಕಾಯ್ದೆಯನ್ನು ಅನುಷ್ಠಾನ ಮಾಡಬೇಕಿತ್ತು.
- ನರೇಂದ್ರ ಮೋದಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ
ಸರ್ಕಾರದ ನಡೆ ಸಂತಸ ತಂದಿದೆ. ನಾನು ಮಸೂದೆಯ ನಿಬಂಧನೆಗಳನ್ನು ಓದಿದ್ದೇನೆ. ನಿಮಗೆ (ಕೇಜ್ರಿವಾಲ್) ಮಸೂದೆಯಲ್ಲಿ ಏನಾದರೂ ಲೋಪ ಕಂಡುಬಂದರೆ, ಆಗ ನೀವು ನಿರಶನ ಕುಳಿತುಕೊಳ್ಳಿ.
- ಅಣ್ಣಾ ಹಜಾರೆ, ಗಾಂಧಿವಾದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

