ಸಿಇಟಿ ಶುಲ್ಕ, ಬೇಕಿಲ್ಲ ಭಯ...
ಸಿಎಂ ಸಿದ್ದರಾಮಯ್ಯ ಅವರ ಘೋಷಣೆಯಂತೆ ಮುಂದಿನ ವರ್ಷವೇ ಸಿಇಟಿ ಶುಲ್ಕ ನಿಗದಿ ಕುರಿತ ಕಾಯ್ದೆ ಜಾರಿಗೆ ಬರಲಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತೆ ಎಂಬುದು ಒಂದು ವಾದವಾದರೆ, ಅನುಕೂಲವಾಗುತ್ತೆ ಎಂಬುದು ಇನ್ನೊಂದು ವಾದ. ಕಾಯ್ದೆಯೊಳಗೇನಿದೆ ಎಂಬ ಬಗ್ಗೆ ಒಂದು ನೋಟ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.17-
ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಗಿರುವ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯಿದೆ ಕುರಿತಂತೆ ಸಾಕಷ್ಟು ವಾದ- ಪ್ರತಿವಾದ ಕೇಳಿ ಬರುತ್ತಿದೆ.
ಕಾಯಿದೆಯಿಂದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಗಗನ ಕುಸುಮವಾಗಲಿದೆ ಎಂಬ ಆರೋಪ ಒಂದೆಡೆಯಾದರೆ, ಗುಣಮಟ್ಟ ಹೆಚ್ಚಾಗಲಿದೆ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಇದು ಪೂರಕ. ಬಡವರ ಹಿತವನ್ನು ಸರ್ಕಾರ ಕಾಪಾಡಲಿದೆ ಎಂಬ ಮಾತು ಮತ್ತೊಂದೆಡೆ ಕೇಳಿ ಬರುತ್ತಿದೆ.
ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯಿದೆ- 2006ರಲ್ಲಿ ಏನಿದೆ. ಸೀಟು ಹಂಚಿಕೆ, ಶುಲ್ಕ ಹೇಗೆ ನಿಗದಿಯಾಗುತ್ತದೆ, ಎರಡೂ ಸಮಿತಿಗಳು ಹೇಗೆ ಕಾರ್ಯನಿರ್ವಹಿಸಲಿವೆ. ರಾಜ್ಯ ಸರ್ಕಾರದ ಪಾತ್ರ ಇದರಲ್ಲಿ ಏನಿರಲಿದೆ ಎಂಬುದರ ಸಂಪೂರ್ಣ ಚಿತ್ರಣವನ್ನು 'ಕನ್ನಡಪ್ರಭ' ನೀಡುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ 2006ರಲ್ಲಿ ರೂಪಿಸಿ ರಾಜ್ಯದ ವಿಧಾನಮಂಡಲ ಒಪ್ಪಿಗೆ ನೀಡಿರುವ ಕಾಯಿದೆಯಿದು. ಆದರೆ ಖಾಸಗಿ ಕಾಲೇಜುಗಳ ವಿರೋಧದ ಕಾರಣದಿಂದ ಈ ಕಾಯಿದೆ ಸತತ 7 ವರ್ಷಗಳ ಕಾಲ ಅನುಷ್ಠಾನಕ್ಕೆ ಬಂದಿರಲಿಲ್ಲ.
ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಶೇ.50 ಸೀಟುಗಳು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಿರಲಿದೆ. ಉಳಿದ ಶೇ.50ರಷ್ಟು ಸೀಟುಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪಡೆಯಬಹುದು. ಅನುದಾನ ರಹಿತ ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.50ರಷ್ಟು ಸೀಟುಗಳು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಹಾಗೂ ಉಳಿದ ಶೇ.50 ಸೀಟುಗಳಲ್ಲಿ ಶೇ.15ರಷ್ಟು ಅನಿವಾಸಿ ಭಾರತೀಯರಿಗೆ ಮೀಸಲಿರುತ್ತವೆ. ಉಳಿದೆಲ್ಲ ಸೀಟುಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಲಭಿಸಲಿವೆ. ಇನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಶೇ.66ರಷ್ಟು ಸೀಟನ್ನು ಮಾನ್ಯತೆ ಪಡೆದ ರಾಜ್ಯದ ಅಲ್ಪಸಂಖ್ಯಾತರಿಗೆ ನೀಡಬೇಕು. ಆ ಸೀಟುಗಳು ಭರ್ತಿಯಾಗದಿದ್ದರೇ ಸಾಮಾನ್ಯ ಸೀಟುಗಳಾಗಿ ಪರಿವರ್ತನೆಯಾಗುತ್ತವೆ. ಹಳೆಯ ನಿಯಮದ ಪ್ರಕಾರ ಕೇವಲ ಶೇ.50ರಷ್ಟು ಸೀಟುಗಳು ಮಾತ್ರ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಕ್ಕೆ ಸಿಗುತ್ತಿತ್ತು. ಇನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಂದ ಕೇವಲ ಶೇ.25ರಷ್ಟು ಸೀಟುಗಳು ದೊರೆಯುತ್ತಿದ್ದವು. ಇದರಲ್ಲಿಯೇ ಮೀಸಲು ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಸೇರಿರುತ್ತಿದ್ದರು. ಆದರೆ ಈ ಕಾಯಿದೆ ಪ್ರಕಾರ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ದುಪ್ಪಟ್ಟು ಸೀಟುಗಳು ಸಿಗಲಿವೆ. ಮತ್ತೊಂದೆಡೆ ಈ ಹಿಂದೆ ಅಭ್ಯಾಸದಲ್ಲಿರುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಸರ್ಕಾರವೇ ತುಂಬಿಕೊಡಲಿದೆ. ಇದೇ ನಿಯಮ ಸ್ನಾತಕೋತ್ತರ ಕೋರ್ಸ್ಗಳಿಗೂ ಅನ್ವಯವಾಗಲಿವೆ. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕರ್ನಾಟಕದ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಸೇರಲು ಅವಕಾಶವೂ ಇರುವುದಿಲ್ಲ. ಇದರಿಂದ ಸೀಟ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಬೀಳಲಿದೆ.
ಪ್ರವೇಶ ಮೇಲ್ವಿಚಾರಣೆ ಸಮಿತಿ
ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಂದ ನಾಮ ನಿರ್ದೇಶನವಾದ ನಿವೃತ್ತ ನ್ಯಾಯಮೂರ್ತಿಯೊಬ್ಬರು ಪ್ರವೇಶ ಮೇಲ್ವಿಚಾರಣೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳು, ವೈದ್ಯಕೀಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ಒಬ್ಬ ಎಂಜಿನಿಯರ್ ಹಾಗೂ ವೈದ್ಯ ಮತ್ತು ಸರ್ಕಾರದಿಂದ ನಾಮನಿರ್ದೇಶನವಾದ ಒಬ್ಬ ಶಿಕ್ಷಣ ತಜ್ಞ ಸಮಿತಿಯಲ್ಲಿರುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ಯಾವುದೇ ವ್ಯಕ್ತಿಯನ್ನು ಈ ಸಮಿತಿಗೆ ಸೇರಿಸಿಕೊಳ್ಳುವಂತಿಲ್ಲ. ಪ್ರಸ್ತುತ ನ್ಯಾ.ವಿ. ಜಗನ್ನಾಥನ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯು ಸರ್ಕಾರದ ಸಿಇಟಿಯನ್ನು ಮಾತ್ರವಲ್ಲದೇ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ನಡೆಸುವ ಸಿಇಟಿಯನ್ನು ಮೇಲುಸ್ತುವಾರಿ ಮಾಡಬಹುದು. ಇದಲ್ಲದೇ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ಯಾವುದೆ ದೂರುಗಳು ಬಂದರೂ ಆಲಿಸಬೇಕಾಗುತ್ತದೆ. ಯಾವುದೇ ಪ್ರವೇಶಕ್ಕೆ ಸಂಬಂಧಿಸಿ ಸಂಶಯ ಬಂದರೆ ಕಾಲೇಜಿನ ಪ್ರವೇಶ ಪ್ರಕ್ರಿಯೆಯ ಎಲ್ಲ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಈ ಸಮಿತಿಗಿದೆ.
ಸಾಮಾನ್ಯ ಪ್ರವೇಶ ಪರೀಕ್ಷೆ ಸಮಿತಿ
ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳ ಅಧ್ಯಕ್ಷತೆಯಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ. ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ಐಎಸ್ಎಂಎಚ್ನ ನಿರ್ದೇಶಕರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿ ಪ್ರವೇಶ ಪರೀಕ್ಷೆ ನಡೆಸಲಿದ್ದು, ಎಲ್ಲ ಸರ್ಕಾರಿ ಸೀಟುಗಳಿಗೆ ಇದೇ ಪ್ರವೇಶ ಪರೀಕ್ಷೆ ನಡೆಯಲಿದೆ. ಒಂದೊಮ್ಮೆ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಒಪ್ಪಿದರೆ ಖಾಸಗಿ ಕಾಲೇಜುಗಳಲ್ಲಿನ ಸೀಟುಗಳಿಗೂ ಇದೇ ಪ್ರವೇಶ ಪರೀಕ್ಷೆ ಆಧಾರವಾಗಲಿದೆ.
ಶುಲ್ಕ ನಿಗದಿ ಹೇಗೆ?
ವೃತ್ತಿಪರ ಶಿಕ್ಷಣ ಸಂಸ್ಥೆಗಳಿರುವ ಪ್ರದೇಶ, ಕೋರ್ಸ್ನ ಲಕ್ಷಣ, ಲಭ್ಯವಿರುವ ಮೂಲಸೌಕರ್ಯ, ಆಡಳಿತ ಹಾಗೂ ನಿರ್ವಹಣಾ ವೆಚ್ಚ, ಸಂಸ್ಥೆಯ ಅಭಿವೃದ್ಧಿ ವೆಚ್ಚವನ್ನು ಆಧರಿಸಿ ಶುಲ್ಕ ನಿಗದಿಮಾಡಲಾಗುತ್ತದೆ. ಕಾಲೇಜಿನಿಂದ ಕಾಲೇಜಿಗೆ ಶುಲ್ಕ ವಿಭಿನ್ನವಾಗಿರಬಹುದು. ಇದಲ್ಲದೆ ಆಯಾ ಕಾಲೇಜಿನಲ್ಲೇ ಕೋರ್ಸ್ನಿಂದ ಕೋರ್ಸ್ಗೆ ಪ್ರತ್ಯೇಕ ಶುಲ್ಕವಿರುವ ಸಾಧ್ಯತೆಯಿರುತ್ತದೆ. ಇನ್ನುಮುಂದೆ ಯಾವುದೇ ಶಿಕ್ಷಣ ಸಂಸ್ಥೆಗಳು ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಾಗಿ ಒಂದು ಪೈಸೆಯೂ ಶುಲ್ಕ ಪಡೆಯುವಂತಿಲ್ಲ. ಇನ್ನು ಅನಿವಾಸಿ ಭಾರತೀಯರಿಂದ ಪಡೆಯುವ ಶುಲ್ಕಕ್ಕೂ ರಾಜ್ಯ ಸರ್ಕಾರದ ಮಾನದಂಡ ರೂಪಿಸಲು ಅವಕಾಶವಿದೆ. ಇವರಿಂದ ಪಡೆಯುವ ಹೆಚ್ಚುವರಿ ಶುಲ್ಕವನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕ ಕಡಿಮೆ ಮಾಡಲು ಬಳಸಿಕೊಳ್ಳಬಹುದು. ಈ ನಿಯಮವನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಮಾಡುವ ಹಾಗೂ 10 ಲಕ್ಷ ದಂಡ ವಸೂಲಿ ಮಾಡುವ ಅಧಿಕಾರ ಸಮಿತಿಗಿದೆ.
ನಿಯಂತ್ರಣ ಸಮಿತಿ
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಇದರ ಅಧ್ಯಕ್ಷರಾಗುತ್ತಾರೆ. ಎಂಸಿಐ, ಎಐಸಿಟಿಇ, ಲೆಕ್ಕ ಪರಿಶೋಧಕ, ಅಧ್ಯಕ್ಷರಿಂದ ಒಬ್ಬ ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಯಾವುದೆ ಸದಸ್ಯರೂ ಖಾಸಗಿ ಆಡಳಿತ ಮಂಡಳಿಯೊಂದಿಗೆ ಸಂಬಂಧ ಹೊಂದಿರಬಾರದು. ಪ್ರತಿ 3 ವರ್ಷಕ್ಕೊಮ್ಮೆ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಶುಲ್ಕ ಪರಿಷ್ಕರಣೆ ವರ್ಷದ ಡಿ.31ರೊಳಗೆ ಎಲ್ಲ ಕಾಲೇಜುಗಳು ತಮ್ಮ ಪ್ರಸ್ತಾವನೆಯನ್ನು ಸಮಿತಿಗೆ ಸಲ್ಲಿಸಬೇಕು. ಸಮಿತಿಯು ವಿಚಾರಣೆ ನಡೆಸಿ ಶುಲ್ಕ ನಿಗದಿಮಾಡಲಿದೆ. ಸುಳ್ಳು ದಾಖಲೆಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ಈ ಸಮಿತಿಗಿದೆ. ಪ್ರಸ್ತುತ ನ್ಯಾ.ಅಜಿತ್ ಗುಂಜಾಳ್ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಕಾಯಿದೆಯನ್ನು ಓದದೇ ಬಾಯಿಗೆ ಬಂದಂತೆ ಕೆಲವರು ಮಾತನಾಡುತ್ತಿದ್ದಾರೆ. ರಾಜ್ಯದ ಯಾವುದೇ ವಿದ್ಯಾರ್ಥಿಗೆ ಇದರಿಂದ ಅನ್ಯಾಯವಾಗುವುದಿಲ್ಲ. ಕಾಯಿದೆ ಅನುಷ್ಠಾನ ಮಾಡದೇ ಖಾಸಗಿ ಪರ ಲಾಬಿ ಮಾಡುತ್ತಿದ್ದಾರೆ ಎಂದು ಸರ್ಕಾರವನ್ನು ಟೀಕಿಸಿದವರೇ ಇಂದು ಮತ್ತೆ ಟೀಕಿಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಹೆಚ್ಚಿನ ಸೀಟು ಸಿಗಲಿದೆ ಹಾಗೂ ಅವರ ಶುಲ್ಕವನ್ನು ಎಂದಿನಂತೆ ಸರ್ಕಾರವೇ ಭರಿಸಲಿದೆ.
- ಶರಣ ಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ
- ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

