ಪ್ರಧಾನ ಸುದ್ದಿ

ಕನ್ನಡದ ತಂದೆ ಹೋದರಲ್ಲ...

Published On :

ಕಿ.ರಂ. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ಸಿದ್ದಲಿಂಗಯ್ಯ ಸೇರಿ ಹಲಸಾಹಿತಿಗಳನ್ನು ಬೆಳೆಸಿದರು. ಅವರು ಅಕಾಡೆಮಿ ಅಧ್ಯಕ್ಷರಾಗಿದ್ದ 3 ವರ್ಷಗಳ ಅವಧಿಯನ್ನು ಕನ್ನಡ ಸಾಹಿತ್ಯದ ಸುವರ್ಣ ಯುಗ ಎಂದೇ ಗುರುತಿಸಲಾಗಿದೆ.
ಎದೆ ತುಂಬಿ ಹಾಡಿ ಕಣ್ಮರೆಯಾದ ಕ್ಷಿತಿಜ ಜಿ.ಎಸ್. ಶಿವರುದ್ರಪ್ಪ. ಸುಮಾರು 30 ವರ್ಷಗಳ ಸ್ನೇಹ ನಮ್ಮದು. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಕನ್ನಡಕ್ಕೆ ಹೊಸ ಶಕ್ತಿಯಾಗಿ ಪರಿಣಮಿಸಿದ್ದರು. ಕನ್ನಡದ ಜ್ಯೋತಿ ಪ್ರಕಾಶಿಸುವಂತೆ ಮಾಡಿದರು. ಕಿ.ರಂ. ನಾಗಾರಾಜ್, ಅಗ್ರಹಾರ ಕೃಷ್ಣಮೂರ್ತಿ, ಸಿದ್ದಲಿಂಗಯ್ಯ ಸೇರಿದಂತೆ ಹಲವಾರು ಸಾಹಿತಿಗಳನ್ನು ಬೆಳೆಸಿದರು. ಅವರು ಅಧ್ಯಕ್ಷರಾಗಿದ್ದ 3 ವರ್ಷಗಳ ಅವಧಿಯನ್ನು ಕನ್ನಡ ಸಾಹಿತ್ಯದ ಸುವರ್ಣ ಯುಗ ಎಂದೇ ಗುರುತಿಸಲಾಗಿದೆ. ಆ ಸಮಯದಲ್ಲಿ ಸಾಕಷ್ಟು ಪುಸ್ತಕ ಬಿಡುಗಡೆ ಮಾಡಿದ್ದಾರೆ. ಭತ್ಯೆ ಇಲ್ಲದೆ ಕರಡು ತಿದ್ದಿ ತೀಡಿ ಪುಸ್ತಕಗಳಿಗೆ ಒಂದು ರೂಪು ನೀಡುತ್ತಿದ್ದ ಬಗೆ ನಿಜಕ್ಕೂ ಶ್ಲಾಘನೀಯ.
ಪ್ರತಿಯೊಬ್ಬ ಸದಸ್ಯರಿಗೂ ಬೆಲೆ ಕೊಡುತ್ತಿದ್ದರು. ಮೈಸೂರಲ್ಲಿ ನಡೆದ 'ಕನ್ನಡ ಪ್ರತಿಭಟನಾ ಸಾಹಿತ್ಯ'ಕ್ಕೆ ಎಸ್.ಎಲ್. ಭೈರಪ್ಪ ಅವರನ್ನು ಉದ್ಘಾಟಕರಾಗಿ ಗುರುತಿಸಿದ್ದರು. ಆಮಂತ್ರಣ ಪತ್ರಿಕೆಯೂ ಸಿದ್ಧಗೊಂಡಿತ್ತು. ಸದಸ್ಯರು ಭೈರಪ್ಪ ಅವರಿಗೂ ಕಾರ್ಯಕ್ರಮದ ಪ್ರಸ್ತಾಪಿತ ವಿಚಾರಕ್ಕೂ ಸಂಬಂಧವಿಲ್ಲ. ಚದುರಂಗರನ್ನು ಉದ್ಘಾಟಕರನ್ನಾಗಿ ಮಾಡುವುದು ಸೂಕ್ತ ಎಂದು ಮನವಿ ಮಾಡಿದಾಗ ಅಷ್ಟೂ ಆಮಂತ್ರಣ ಪತ್ರಿಕೆಗಳನ್ನು ಸುಟ್ಟುಹಾಕಿದರು. ಉದ್ಘಾಟಕರಾಗಿ ಚದುರಂಗರ ಹೆಸರನ್ನೇ ಹಾಕಿ ಆಮಂತ್ರಣ ಪತ್ರಿಕೆ ಮರು ಮುದ್ರಿಸಿದ್ದರು.
ಸಣ್ಣ ಪುಟ್ಟ ಬರಹಗಳಿರಲಿ, ಹೊಸಬರ ಬರಹಗಳೇ ಇರಲಿ... ಓದಿ, ತಿದ್ದಿ, ಸರಿತಪ್ಪುಗಳನ್ನು ವಿಶ್ಲೇಷಿಸಿ ಪ್ರತಿಕ್ರಿಯಿಸುತ್ತಿದ್ದರು. ಶಿವರುದ್ರಪ್ಪರಿಗೆ ಹೊಸ ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂಬ ತುಡಿತವಿತ್ತು. ಪ್ರತಿ ಬರಹಗಳಿಗೂ ಹಾಡು ಬರೆದು ಕಳುಹಿಸುತ್ತಿದ್ದರು. ಇಂಥ ಹಾಡುಗಳು ಯುವ ಬರಹಗಾರರಿಗೆ ಸ್ಫೂರ್ತಿಯಾಗುತ್ತಿತ್ತು.
ಕೋಮಾ ಸ್ಥಿತಿಗೆ ತಲುಪಿದಾಗ ನಿಕಟವರ್ತಿಯಾಗಿದ್ದ ಎಚ್.ಎಸ್. ವೆಂಕಟೇಶಮೂರ್ತಿ ಅವರಲ್ಲಿ ಯುವ ಸಾಹಿತಿಗಳಿಗೆ ಸಾಹಿತ್ಯಪಾಠ ಮಾಡಲಾಗುತ್ತಿಲ್ಲ ಎಂಬ ಅಳಲನ್ನು ತೋಡಿಕೊಳ್ಳುತ್ತಿದ್ದರಂತೆ.
ಕನ್ನಡ ಪ್ರಾಧ್ಯಾಪಕ ಹೇಗಿರಬೇಕು ಎಂಬ ಮಾದರಿಗೆ ಜಿ.ಎಸ್. ಶಿವರುದ್ರಪ್ಪ ಸಾಕ್ಷಿ. ನಿಜಕ್ಕೂ ಇಂದಿನ ಕನ್ನಡ ಪ್ರಾಧ್ಯಾಪಕರು ಶಿವರುದ್ರಪ್ಪ ಅವರ ಜೀವನದಿಂದ ಸಾಕಷ್ಟು ಕಲಿಯುವುದಿದೆ. ಅವರು ಅಘೋಷಿತ ಗುರು. ಕನ್ನಡದ ತಂದೆ. ಅವರ ಅನುಪಸ್ಥಿತಿ ಅನಾಥ ಪ್ರಜ್ಞೆಯಾಗಿ ಕಾಡುತ್ತಿದೆ. ಕರೆದಾಗಲೆಲ್ಲ ಜೊತೆಗೂಡಿ ಪ್ರವಾಸಕ್ಕೆ ಬರುತ್ತಿದ್ದರು. ಆತ್ಮೀಯತೆ, ಪ್ರೀತಿ ತೋರುವಲ್ಲಿ ಜಿಎಸ್ಸೆಸ್ ಉದಾರಿ.
-ಕುಂ. ವೀರಭದ್ರಪ್ಪ ,  ಸಾಹಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.