ಕ್ಯಾಂಟರ್ ಉರುಳಿ 11 ಸಾವು
ಹೊನ್ನಾಳಿ: ಮದುವೆ ಮುಗಿಸಿ ಸ್ವಗ್ರಾಮಕ್ಕೆ ನೆಂಟರು ಪ್ರಯಾಣಿಸುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದಲ್ಲದೇ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಮೃತಪಟ್ಟ ಘಟನೆ ಸೋಮವಾರ ತಾಲೂಕಿನ ಕೆಂಚಿಕೊಪ್ಪ ತುಗ್ಗಲಹಳ್ಳಿ ಬಳಿ ಕರಡಿಕಲ್ ದೇವಸ್ಥಾನದ ಬಳಿ ಸಂಭವಿಸಿದೆ.
ಉರುಳಿ ಬಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ 6 ಮಂದಿ ಹಾಗೂ ಹೊನ್ನಾಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬ ಮೃತಪಟ್ಟಿದ್ದಾನೆ. ತೀವ್ರವಾಗಿ ಗಾಯಗೊಂಡು ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಮೃತರನ್ನು ಕೆ. ಮಹೇಶ್ವರಪ್ಪ (56), ಮುರಳಿ (9), ಹನುಮಂತ ರೆಡ್ಡಿ (62), ವೀರಭದ್ರಪ್ಪ (55), ಡಿ.ಜಿ.ಮಹದೇವಪ್ಪ ಗೌಡ (60) ಹಾಗೂ ಸಂತೋಷ್ (25) ಎಂದು ಗುರುತಿಸಲಾಗಿದೆ. ಮಾರ್ಗಮಧ್ಯದಲ್ಲಿ ಹಾಗೂ ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟರ ಗುರುತು ಇನ್ನೂ ಪತ್ತೆಯಾಗಿಲ್ಲ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ತಾಲೂಕಿನ ಒಡೆಯರ ಹತ್ತೂರು ಗ್ರಾಮದ ವರ ಹಾಗೂ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ವಧುವಿನ ಮದುವೆ ತಾಲೂಕಿನ ಪವಿತ್ರ ಕ್ಷೇತ್ರ ತೀರ್ಥರಾಮೇಶ್ವರದಲ್ಲಿ ಸೋಮವಾರ ನೆರವೇರಿತು. ಈ ಮದುವೆಗೆಂದು ಕ್ಯಾಂಟರ್ನಲ್ಲಿ ಸುಮಾರು 50ರಿಂದ 55 ಜನ ತೀರ್ಥರಾಮೇಶ್ವರಕ್ಕೆ ಬಂದಿದ್ದರು. ಮದುವೆ ಶಾಸ್ತ್ರ ಹಾಗೂ ಊಟ ಮುಗಿಸಿಕೊಂಡು ತಮ್ಮ ಗ್ರಾಮ ಹರಿಹರ ತಾಲೂಕಿನ ಭಾನುವಳ್ಳಿಗೆ ಹಿಂದಿರುಗುತ್ತಿದ್ದರು. ಕೆಂಚಿಕೊಪ್ಪ ಹಾಗೂ ತುಗ್ಗಲಹಳ್ಳಿ ಮಧ್ಯೆ ಕಡಿಕಲ್ ದೇವಸ್ಥಾನದ ಬಳಿ ಕ್ಯಾಂಟರ್ ಪಲ್ಟಿಯಾಗಿ ಮರಕ್ಕೆ ಅಪ್ಪಳಿಸಿದ್ದರಿಂದ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಕೆಂಚಿಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮದವರು ಹಾಗೂ ಪೊಲೀಸರು ಗಾಯಾಳುಗಳನ್ನು ಹೊನ್ನಾಳಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಸಾಗಿಸಲಾಗಿದೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

