ಪ್ರಧಾನ ಸುದ್ದಿ

ಶ್ಶೀ... ಇದೆಂಥಾ ಶಿರಾಡಿ

ಶ್ಶೀ... ಇದೆಂಥಾ ಶಿರಾಡಿ
Published On :

ಶಿರಾಡಿ ಘಾಟಿ ಅದೆಷ್ಟು ಜನರನ್ನು ಬಲಿ ಪಡೆದಿದೆಯೋ ಲೆಕ್ಕವೇ ಇಲ್ಲ. ಇದು ಹೆಸರಿಗೆ ಮಾತ್ರ ಹೆದ್ದಾರಿಯಾಗಿದೆ. ಇಲ್ಲಿ ದಾರಿ ಎಲ್ಲಿ ಎಂದೇ ಹುಡುಕಬೇಕಿದೆ. ಇರುವುದು ಬರೀ 'ಹೆ'ಗ್ಗುಂಡಿ. ಹೆದ್ದಾರಿ ದುರಸ್ತಿ ಹೆಸರಲ್ಲಿ ಅದೆಷ್ಟು ಕೋಟಿಯನ್ನು ನುಂಗಲಾಗಿದೆಯೋ? ರಾಜಕಾರಣಿಗಳು ಕೆಟ್ಟು ಹೋಗಿದ್ದಾರೆ. ಜನರು ಕಂಗಾಲಾಗಿದ್ದಾರೆ. ಆದರೆ ಈ ಹೆದ್ದಾರಿಗೆ ದುರಸ್ತಿ 'ಭಾಗ್ಯ' ಯಾವಾಗ ದೊರಕಲಿದೆಯೋ? ಈ ಎಲ್ಲ ಮಾಹಿತಿ ಬಗ್ಗೆ 'ಕನ್ನಡಿಪ್ರಭ' ಮೂಲಕ ಬೆಳಕು ಚೆಲ್ಲಲಾಗಿದೆ.



ಶಿರಾಡಿ ಹೆದ್ದಾರಿ, ಮೃತ್ಯುವಿಗೆ ರಹದಾರಿ!


ಕ.ಪ್ರ. ವಾರ್ತೆ    ಮಂಗಳೂರು    ಡಿ. 27
ಶಿರಾಡಿ ಘಾಟಿ ಹೆದ್ದಾರಿ ಮೃತ್ಯುಕೂಪಕ್ಕೆ ರಹದಾರಿ. ಇದು ರಾಜಕಾರಣಿಗಳು, ಗುತ್ತಿಗೆದಾರರ ಸಂಪತ್ತಿನ ದಾರಿ...!
ಇಲ್ಲಿ ಬಿದ್ದಿರುವ ಒಂದೊಂದು ಹೊಂಡವು ರಾಜಕಾರಣಿ, ಗುತ್ತಿಗೆದಾರರ ಜೋಳಿಗೆಗಳು. ಇಲ್ಲಿ ಹೊಂಡಕ್ಕೆ ಟಾರ್ ಬೀಳುತ್ತಿದ್ದಂತೆಯೇ ಅಲ್ಲಿ ಜೋಳಿಗೆ ಭರ್ತಿಯಾಗುತ್ತದೆ. ರಸ್ತೆ ಕೆಟ್ಟು ಅಪಘಾತಗಳಾಗಿ ಅನೇಕ ಅಮಾಯಕರು ಸಾಯುತ್ತಾರೆ. ರಾತ್ರಿ ಕೆಟ್ಟು ನಿಂತ ವಾಹನಗಳ ಪ್ರಯಾಣಿಕರ ದರೋಡೆ ನಡೆಯುತ್ತದೆ. ಆದರೆ ಸರ್ಕಾರವೇ ಮುಂದೆ ನಿಂತು ಜನರ ತೆರಿಗೆ ಹಣವನ್ನೇ ಹಗಲು ದರೋಡೆ ಮಾಡುತ್ತಿದೆ.
ಶಿರಾಡಿಗೆ ಸುರಂಗ ಮಾರ್ಗ ಮುಂಗೈಗೆ ಬೆಣ್ಣೆ ತೋರಿಸಿ, ಪದೇ ಪದೇ ತೇಪೆ, ದುರಸ್ತಿ ಮಾಡಿಸಿ ಗುತ್ತಿಗೆದಾರರು ಶ್ರೀಮಂತರಾಗುತ್ತಿದ್ದಾರೆ. ತೆರಿಗೆ ಕಟ್ಟಿ ಸಾಗುವ ಪ್ರಯಾಣಿಕರು, ವಾಹನ ಚಾಲಕರು ಬಡವಾಗುತ್ತಿದ್ದಾರೆ. ದಿನಾ ಸಾಯೋರಿಗೆ ಅಳೋರು ಯಾರು?
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75(ಹಿಂದೆ 48) ಶಿರಾಡಿ ಘಾಟಿ ಹಾದುಹೋಗುತ್ತದೆ. ಈ ಘಾಟಿ ಕೋಟಿ, ಕೋಟಿ ಲೂಟಿ ಹೊಡೆಯುವ ಕಾಮಧೇನು! ಸಾವಿನ ಹೆದ್ದಾರಿಯ ಶಾಶ್ವತ ಪರಿಹಾರಕ್ಕೆ ಸರ್ಕಾರಕ್ಕೆ ಮನಸ್ಸಿಲ್ಲ. ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹೆಲಿಕಾಪ್ಟರ್, ವಿಮಾನದಲ್ಲಿಯೇ ಪ್ರಯಾಣ ಮಾಡುತ್ತಾರೆ. ಮೊದಲಲೆಲ್ಲ ವಾಹನ ಟಯರ್ಗಳು ಹೂತು ಹೋಗುತ್ತಿದ್ದವು. ಸಚಿವ ರಮಾನಾಥ ರೈಗಳಂಥವರೇ ಹೊಂಡದಲ್ಲಿ ಇಳಿಯಬಹುದಾದ ಹೊಂಡಗಳಿವೆ! ಅಷ್ಟೇಕೆ ಅವರ ಇನ್ನೊವಾ ವಾಹನ ಕೂಡಾ ಇಳಿದು ಸಾಗಬಲ್ಲ ಹೊಂಡಗಳು ಸೃಷ್ಟಿಯಾಗಿದೆ.  ರಸ್ತೆ ಪೂರ್ತಿ ಗುಂಡಿ ಆದರೂ ಪರವಾಗಿಲ್ಲ ಆದರೆ ಮಧ್ಯೆ ಉಳಿದುಕೊಂಡಿರುವ ಭರ್ಚಿ, ಈಟಿಗಳಂತೆ ಉಳಿದಿರುವ ಅಲಗುಗಳು ವಾಹನದ ಡೀಸೆಲ್ ಟ್ಯಾಂಕರ್ಗಳನ್ನು, ಟಯರ್ಗಳನ್ನು ಚುಚ್ಚುತ್ತವೆ. ಇಲ್ಲಿರುವ ಎರಡು ಸೇತುವೆಗಳು ಅಸ್ಥಿಪಂಜರದಂತಾಗಿ ಕಾಂಕ್ರಿಟ್ ಕಿತ್ತು ಒಳಗಿನ ಸರಳಿನ ಹಂದರಗಳು ಭರ್ಚಿಯಂತೆ ಹೊರಗೆ ಇಣುಕುತ್ತ ಬಲಿಪಶುವನ್ನು ಇದಿರು ನೋಡುತ್ತವೆ. ಇಲ್ಲಿ ರಾಜ್ಯದಲ್ಲಿಯೇ ನಂ.1 ಆದಾಯದ ಸುಬ್ರಹ್ಮಣ್ಯ ಕ್ಷೇತ್ರ, ಶ್ರೀ ಧರ್ಮಸ್ಥಳ ಕ್ಷೇತ್ರಗಳಿವೆ. ಸಾವಿರಾರು ಪ್ರವಾಸಿಗರು ಬರುತ್ತಾರೆ. 'ಕೇರಳ ಶಬರಿಮಲೆ, ಗುರುವಾಯೂರಲ್ಲಿ ಹೋಗುತ್ತೇವೆ. ಅಲ್ಲಿ ಇಂಥ ರಸ್ತೆ ಎಲ್ಲೂ ನೋಡಿಲ್ಲ. ಒಂದು ವೇಳೆ ರಸ್ತೆ ಹಾಳಾದರೆ ಮಲೆಯಾಳಿಗಳು ನೇರವಾಗಿ ರಾಜಕಾರಣಿ ಮನೆಗೆ ಹೋಗಿ ಧರಣಿ ಹೂಡುತ್ತಾರೆ. ಕೆಲಸ ಮಾಡದಿದ್ದರೆ ಹೊಡೆಯೋದಕ್ಕೂ ಅವರು ಹೇಸೋದಿಲ್ಲ. ಆದರೆ ನಮ್ಮ ಬುದ್ಧಿವಂತರ ಕರ್ನಾಟಕದಲ್ಲಿಯೇ ಸಮಸ್ಯೆ. ಇಲ್ಲಿ ಯಾರೂ ಮುಂದೆ ಬರೋದಿಲ್ಲ. 100 ಸೌಲಭ್ಯ ಸಿಗಬೇಕಾದರೆ 500 ಖರ್ಚು ಮಾಡಬೇಕು ಅಂಥಾ ಸ್ಥಿತಿ ಇದೆ' ಎನ್ನುತ್ತಾರೆ ಪ್ರಯಾಣಿಕ ಅಮರೇಶ್. ಶಿರಾಡಿ ರಸ್ತೆ ಹಾಸನ ಮತ್ತು ಮಂಗಳೂರು ಲೋಕಸಭೆ ಕ್ಷೇತ್ರಕ್ಕೆ, ಸಕಲೇಶಪುರ, ಪುತ್ತೂರು, ಬೆಳ್ತಂಗಡಿ ವಿಧಾನಸಭೆ ಕ್ಷೇತ್ರಕ್ಕೆ ಸೇರಿದೆ. ಚೆನ್ನಾಗಿರುವ ನೈಸ್ ರಸ್ತೆ ಮೇಲೆ ಕಣ್ಣಿಡುವ ದೇವೇಗೌಡರು, ಮಗ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನೆಲಮಂಗಲ, ಹಾಸನ ಹೆದ್ದಾರಿ 'ನೈಸ್' ಮಾಡಿದರು. ಶಿರಾಡಿಯನ್ನು ಕೈ ಬಿಟ್ಟರು! ಮಂಗಳೂರು ಸಂಸದ ನಳಿನ್ ಕುಮಾರ್ ಹೋರಾಟ ಕೇವಲ ಹೇಳಿಕೆಗೆ ಸೀಮಿತ. ಕೇಂದ್ರ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಸುರಂಗ ಮಾರ್ಗ ಆಸೆ ತೋರಿಸುತ್ತಾ ಶಿರಾಡಿ ಘಾಟಿ ತೇಪೆಗೆ ಕೋಟಿಗಟ್ಟಲೆ ಬಿಡುಗಡೆ ಮಾಡುತ್ತಿದ್ದಾರೆ. ಹೆದ್ದಾರಿ ಸರಿ ಮಾಡುವ ಧೀಮಂತ ನಾಯಕ ಬಂದಿಲ್ಲ.
'ರಸ್ತೆ ತೆರಿಗೆ ಹೆಸರಲ್ಲಿ ಕೋಟಿಗಟ್ಟಲೆ ಸರ್ಕಾರ ವಸೂಲಿ ಮಾಡುತ್ತದೆ. ಆದರೆ ಕೇವಲ 40 ಕಿ.ಮೀ. ಹೆದ್ದಾರಿ ಸರಿ ಮಾಡಲು ಮನಸ್ಸಿಲ್ಲ. ಹಿಂದೆಲ್ಲ ಕೇಂದ್ರ ಸರ್ಕಾರ ಸಹಕರಿಸುವುದಿಲ್ಲ ಎಂದು ಹೊಣೆಯಿಂದ ನುಣುಚಿಕೊಳ್ಳುತ್ತಿದ್ದರು. ಆದರೆ ಈಗ ಕೇಂದ್ರದಲ್ಲಿಯೂ ಕಾಂಗ್ರೆಸ್, ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದೆ ಈಗ ಮಾಡಬಹುದಲ್ಲ' ಎಂಬುದು ಪ್ರಯಾಣಿಕ ತಿರುಮಲೇಶ್ ಪ್ರಶ್ನೆ.


ಘಾಟಿಗೆ ಕೋಟಿ ಕೋಟಿ
ಕಳೆದ ವರ್ಷ ತೇಪೆಗೆ 14.5 ಕೋಟಿ ಬಳಸಲಾಗಿತ್ತು. ಈ ಬಾರಿ 4.5 ಕೋಟಿ. ರಸ್ತೆ ಮಾತ್ರ ಪ್ರತಿ ವರ್ಷವೂ ಹಾಗೆಯೇ ಇರುತ್ತದೆ. ಈ ವರ್ಷ 90 ಕೋಟಿ ಬಿಡುಗಡೆಯಾಗಿದೆ. ತೇಪೆ ಕಾರ್ಯ ಮಳೆಗಾಲಕ್ಕೆ ಮುಂಚೆ ಶುರು ಮಾಡುತ್ತಾರೆ. ಹತ್ತೇ ದಿನಗಳಲ್ಲಿ ಡಾಂಬರು ನಾಪತ್ತೆಯಾಗುತ್ತದೆ. ಈ ಬಾರಿ ಸ್ವಲ್ಪ ಮುಂಚಿತವಾಗಿ ಡಿಸೆಂಬರ್ ಕೊನೆಗೆ ಕಾಮಗಾರಿ ಶುರು ಮಾಡಿದ್ದಾರೆ.



ಯುದ್ಧ ಟ್ಯಾಂಕರ್ಗಳು!
ಹೊಂಡ ತಪ್ಪಿಸಲು ಹೋಗಿ ಯಮಧೂತನಂತೆ ರಾಂಗ್ ಸೈಡ್ನಲ್ಲಿ ಟ್ಯಾಂಕರ್ಗಳು ಯುದ್ಧದ ಬುಲೆಟ್ ಟ್ಯಾಂಕರ್ಗಳಂತೆ ಬರುತ್ತವೆ. ಆದರೆ, ಒಮ್ಮೊಮ್ಮೆ ಶಿರಾಡಿ ಘಾಟಿಯಲ್ಲಿ ಸೋತು ಸುಣ್ಣವಾಗಿ ಧರಾಶಾಹಿಯೂ ಆಗುತ್ತವೆ.



ಬ್ರೇಕ್ ಫೇಲ್

ಡೀಸೆಲ್ ಟ್ಯಾಂಕ್ಗೆ ಹಾನಿ. ಬ್ರೇಕ್ ಕೇಬಲ್ಗೂ ಹಾನಿಯಾಗಿ ಆಯಿಲ್ ಸೋರುತ್ತವೆ. ವಾಹನ ಗುಂಡ್ಯಕ್ಕೆ ಬಂದಾಗಲೇ ಗೊತ್ತು. ಕೆಲವೊಮ್ಮೆ ಮಾರ್ಗ ಮಧ್ಯೆಯೇ ಆಯಿಲ್ ಸೋರಿ ವಾಹನ ಬ್ರೇಕ್ ಫೇಲ್ ಆಗಿ ಅಪಘಾತವಾಗುತ್ತದೆ.



ದುರಸ್ತಿಗಾಗಿ ಹೆದ್ದಾರಿ ಬಂದ್ !

ಶಿರಾಡಿಗೆ ಈ ವರ್ಷ 90 ಕೋಟಿ ಮಂಜೂರಾಗಿದೆ ಎಂದು ಸ್ವತಃ ಕೇಂದ್ರ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿಕೆ ನೀಡಿದ್ದಾರೆ. ಅವರ ಮುಂದಿರುವ ಸಮಸ್ಯೆ ಎಂದರೆ ಈಗಿರುವ ರೀತಿಯಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ, ರಸ್ತೆ ದುರಸ್ತಿ ಮಾಡಬೇಕೇ ಅಥವಾ ರಸ್ತೆ ಬಂದ್ ಮಾಡಿ ದುರಸ್ತಿ ಮಾಡಬೇಕೇ ಎಂಬುದು. ಹೆದ್ದಾರಿ ಬಂದ್ ಮಾಡುವ ಕೆಲಸ ಸುಲಭದಲ್ಲಿ ಮಾಡಬಹುದು, ಆದರೆ ಕೆಟ್ಟು ಹೋದ ಹೆದ್ದಾರಿ ದುರಸ್ತಿ ಸಾಧ್ಯವೇ?


ಬಾಯಲ್ಲಿ ಸುರಂಗ, ಖಜಾನೆಯಲ್ಲಿ ತೂತು

ಸುರಂಗ ಮಾರ್ಗ ಹೇಳುತ್ತಲೇ ಇದ್ದಾರೆ. ಸರ್ಕಾರಿ ಖಜಾನೆಗೆ, ಜನರ ಕಿಸೆಗೆ ತೂತು ಬೀಳುತ್ತಲೇ ಇದೆ. ಶಿರಾಡಿ ಘಾಟಿ ರಸ್ತೆಗೆ ಪರ್ಯಾಯಾಗಿ ಸುರಂಗ ಮಾರ್ಗ ನಿರ್ಮಾಣ ಮಾಡುವುದಾಗಿ ಆಸ್ಕರ್ ಫರ್ನಾಂಡಿಸ್ ಈಗಲೂ ಹೇಳಿಕೆಗೆ ಬದ್ಧರಾಗಿದ್ದಾರೆ. ಭಾರತ ಮತ್ತು ಜಪಾನ್ ರಾಯಭಾರಿ ಮಟ್ಟದ ಮಾತುಕತೆ ನಡೆಯುತ್ತಿದ್ದು, ಗಣರಾಜ್ಯೋತ್ಸವದಂದು ಜಪಾನ್ ಪ್ರಧಾನಿ ಜತೆ ಮಾತುಕತೆ ನಡೆಸಲಿದ್ದೇವೆ ಎಂದು ಕೇಂದ್ರ ಹೆದ್ದಾರಿ ಸಚಿವ ಆಸ್ಕರ್ ಹೇಳಿದ್ದಾರೆ.


 ಮೋಕ್ಷ ನೀಡಿ
ಕೆಟ್ಟ ಹೆದ್ದಾರಿಯಿಂದಾಗಿ ಅನೇಕ ಅಮಾಯಕರು ಅಪಘಾತದಿಂದ, ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲಿ ಸುತ್ತಾಡುವ ಪ್ರೇತಗಳಾದರೂ ಹೆದ್ದಾರಿಗೆ ಮೋಕ್ಷ ನೀಡಿ, ಜತೆಗೆ ನಮಗೂ ಮೋಕ್ಷ ನೀಡಿ ಎಂದು ಜನಪ್ರತಿನಿಧಿಗಳ ಹಿಂದೆ ಬೇತಾಳದಂತೆ ಕಾಡಿದರೆ ದುರಸ್ತಿ ಸಾಧ್ಯವೇನೊ? ಏಕೆಂದರೆ ಜೀವಂತ ಇರುವ ಜನರು ಹೋರಾಡುವ ಕೆಚ್ಚೇ ಕಳೆದುಕೊಂಡಿದ್ದಾರೆ.  


ಪೊರಕೆ ಸೇವೆ ಇಲ್ಲ
ಹೆದ್ದಾರಿ ದಾಟುವವರೆಗೆ ಹೀನಾಯಾನ ಬೈಗುಳ, ಸರ್ಕಾರಕ್ಕೆ ಚೀ ಥೂ ಉಗುಳುತ್ತಾರೆ. ಬಳಿಕ ಮರೆತೇ ಬಿಡುತ್ತಾರೆ. ನವೆಂಬರ್ನಲ್ಲಿ ಗುಂಡ್ಯ ಜಂಕ್ಷನ್ನಲ್ಲಿ ಸ್ಥಳೀಯ ಐನ್ನೂರಕ್ಕೂ ಹೆಚ್ಚು ಮಂದಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಂಗಾರ ಅವರನ್ನು ಕರೆಸಿ, ಪ್ರತಿಭಟನೆ ಮಾಡಿದರು. 'ಪ್ರತಿಭಟನೆ ನಡೆಸಿದಾಗ ಹಾಸನ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಮುನಿರಾಜು ಸ್ಥಳಕ್ಕೆ ಭೇಟಿ ನೀಡಿದರು. ಸರ್ಕಾರದ ಅನುದಾನ ಇಲ್ಲದೆ  ಪೂರ್ತಿ ದುರಸ್ತಿ ಮಾಡಲು ಸಾಧ್ಯವಿಲ್ಲ. ತೇಪೆಗೆ 4.53 ಲಕ್ಷ ಇಟ್ಟಿದ್ದೇವೆ. ತುರ್ತು ಕಾಮಗಾರಿ ಶುರು ಮಾಡುತ್ತೇವೆ' ಎಂದು ಭರವಸೆ ನೀಡಿದರು ಎನ್ನುತ್ತಾರೆ ಹೋರಾಟಗಾರ ಕಿಶೋರ್ ಶಿರಾಡಿ. ಇದಾದ ಬಳಿಕ ಎಂಜಿನಿಯರ್ಗಳು ಗುಂಡಿಗಳಿಗೆ ಜಲ್ಲಿ ಕಲ್ಲು ತುಂಬಿದರು. ಈಗ ತೇಪೆ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಜನಸಾಮಾನ್ಯ ದಿಲ್ಲಿಯ ಆಮ್ ಆದ್ಮಿ ರೀತಿಯ ಪೊರಕೆ ಸೇವೆ ಮಾಡುವ ಸಮಯ ಮಾತ್ರ ಬಂದಿಲ್ಲ.



ಕೆಟ್ಟ ರಾಜಕಾರಣಿಗಳು, ಜನ ಕಂಗಾಲು
ಈ ಅಪಾಯಕಾರಿ ರಸ್ತೆಯಲ್ಲಿ ಮೃತ್ಯುವನ್ನೇ ಆಹ್ವಾನಿಸುವ ಕಡಿದಾದ ತಿರುವುಗಳು. ಮಳೆಗಾಲಕ್ಕೆ ಯಾವುದೇ ಕ್ಷಣದಲ್ಲಿ ಕುಸಿದು ಬೀಳಬಹುದಾದ ಮಣ್ಣಿನ ಗುಡ್ಡಗಳು. ನುಂಗಲು ಸದಾ ಸಿದ್ಧವಾಗಿರುವಂತೆ ಕಾಣುವ ಪ್ರಪಾತಗಳು, ಕಂದರಗಳು, ಧುಮ್ಮಿಕ್ಕುವ ಝರಿಗಳು, ನದಿಗಳು. ರುದ್ರ ರಮಣೀಯ, ಸ್ವಲ್ಪ ಎಚ್ಚರ ತಪ್ಪಿದರೇ ಅಯೋವುಯ. ಪ್ರತಿ ದಿನ 3-4 ವಾಹನಗಳು ಮರದ ಕೊಂಬೆ, ರೆಂಬೆ ಕಟ್ಟಿಕೊಂಡು ರಸ್ತೆ ಬದಿ ಹಾಳಾಗಿ ಬಿದ್ದಿರುವ ದೃಶ್ಯ ಸಾಮಾನ್ಯ. ಮಧ್ಯದಲ್ಲಿ ಕೆಟ್ಟು ನಿಂತರೆ ಕಿಲೋಮೀಟರ್ಗಟ್ಟಲೆ ಜಾಮ್. ರಾತ್ರಿ ಹೊತ್ತು ಪ್ರಯಾಣಿಕರನ್ನು ದೇವರೇ ಕಾಪಾಡಬೇಕು. ಮೊಬೈಲ್ ನೆಟ್ವರ್ಕ್ ಇಲ್ಲ. ಘಾಟಿ ಉದ್ದಕ್ಕೂ ಯಾವುದೇ ಹೊಟೇಲ್, ಗ್ಯಾರೇಜ್ ಇಲ್ಲ. ತುತ್ತ ತುದಿಯ ಸಕಲೇಶಪುರಕ್ಕೆ ಅಥವಾ ಇಳಿಜಾರಿನ ಗುಂಡ್ಯಕ್ಕೆ ಬರಬೇಕು. ಆಗಾಗ ಟ್ರಕ್ಕು, ಲಾರಿ ಕಣಿವೆಯಲ್ಲಿ ಬೀಳುತ್ತಿರುತ್ತವೆ. ಇದನ್ನು ಎತ್ತಲು ಈಗ ಕ್ರೇನ್ಗಳ ಬಾಡಿಗೆ ಉದ್ಯಮ ಆರಂಭವಾಗಿದೆ. 2006ರಲ್ಲಿ ಗುಂಡ್ಯದಲ್ಲಿ ಕ್ರೇನ್ ಬಾಡಿಗೆ ಉದ್ಯಮ ಆರಂಭವಾಗಿದೆ. ಈಗ ಉದ್ಯಮ ಚೆನ್ನಾಗಿದೆ. ಅಪಾಯಕಾರಿ ತಿರುವುಗಳ ಬಗ್ಗೆ ಬೋರ್ಡ್ಗಳೇ ಇಲ್ಲ. ಬೋರ್ಡ್ ಇರಬೇಕಾದ ಕಡೆ ಕೇವಲ ಕಂಬಗಳ ಅಸ್ಥಿಪಂಜರಗಳಿವೆ. ಕಾಯಿಲೆ ಬಂದರೆ, ಅಪಘಾತವಾದರೆ ಆ್ಯಂಬುಲೆನ್ಸ್ ಬರುವ ಹೊತ್ತಿಗೆ ಪ್ರಾಣ ಹೋದ ಅನೇಕ ನಿದರ್ಶನಗಳಿವೆ. ಹೀಗಾಗಿ ಪ್ರವಾಸಿಗರು ದಾರಿ ಬದಲಾಯಿಸಿದ್ದಾರೆ, ಕೆಲವರು ಈ ಭಾಗಕ್ಕೆ ಬರುವುದನ್ನೇ ಬಿಟ್ಟಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ ಪ್ರವಾಸಿಗರನ್ನೇ ನಂಬಿದ ಹೊಟೇಲ್ ಮಾಲೀಕರು, ಅಂಗಡಿ ಮಾಲೀಕರು ನಷ್ಟದಲ್ಲಿದ್ದಾರೆ.

ಇಲ್ಲೇ ಬಂದು ನೋಡಿ, ವಿದೇಶ ಅಧ್ಯಯನ ಏಕೆ?
ಜನಪ್ರತಿನಿಧಿಗಳು ಈ ಜನರ ಕಷ್ಟಗಳಿಗೆ ಏಕೆ ಕಿವುಡಾಗುತ್ತಿದ್ದಾರೆ? ಅವರು ಇಲ್ಲಿನ ಜನರ ಸಮಸ್ಯೆ ನಿವಾರಣೆಗೆ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಶಿರಾಡಿ ಘಾಟಿಗೆ ಒಮ್ಮೆ ಬಂದು ನೋಡಿದರೆ ಸಾಕು. ಅಧ್ಯಯನ ದ ಅಗತ್ಯವೂ ಇಲ್ಲ. ಅಗ್ಗದ ಜನಪ್ರಿಯ ಘೋಷಣೆ ಮಾಡುತ್ತಾರೆ. ಆದರೆ ಈ ಹಗ್ಗದ ಮೇಲಿನ ಬದುಕಿಗೆ ಪರಿಹಾರ ನೀಡುವುದಿಲ್ಲ. ]]


- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.