ಪ್ರಧಾನ ಸುದ್ದಿ

ಹುಲಿಗೆ ನಿಲ್ಲದ ನರಬಲಿ

Published On :

ಗುಂಡ್ಲುಪೇಟೆ: ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ್ದ ಮೈಸೂರು ಹಾಗೂ ಚಾಮರಾಜನಗರ ಸುತ್ತಮುತ್ತ ಹುಲಿಗೆ ನಾಲ್ವರು ಬಲಿಯಾದ ಸುದ್ದಿ ಮಾಸುವ ಮುನ್ನವೇ ಇದೀಗ ಗುಂಡ್ಲುಪೇಟೆಯಲ್ಲಿ ಒಬ್ಬರು ಹುಲಿ ದಾಳಿಗೆ ತುತ್ತಾಗಿದ್ದಾರೆ.
ಮದ್ದೂರು ವಲಯದ ಅರಣ್ಯದ ಬಳಿ ಗಿರಿಜನ ಸಮುದಾಯದ ಜವರಯ್ಯ (60) ಜೀವ ತೆತ್ತಿದ್ದು, ಇಬ್ಬರು ಬಚಾವ್ ಆಗಿದ್ದಾರೆ. ಇದು ಜನರನ್ನು ಮತ್ತಷ್ಟು ಭಯಗೊಳ್ಳುವಂತೆ ಮಾಡಿದ್ದು, ಜನರು ಪ್ರತಿಭಟಿಸಿದರು.
ಏನಾಯಿತು?: ಜವರಯ್ಯ ಎಂದಿನಂತೆ ಶುಕ್ರವಾರವೂ ಬೆಳಗ್ಗೆ ತಮ್ಮ ಜಮೀನಿನಲ್ಲಿ ದನ ಮೇಯಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಜಮೀನಿನ ಸುತ್ತ ಹಾಕಲಾಗಿದ್ದ ಬೇಲಿ ಬಳಿ ಕುಳಿತರು.            


ಹಿಂದಿನಿಂದ ಜವರಾಯನಂತೆ ಬಂದ ಹುಲಿ ಜವರಯ್ಯ ಅವರ ಮೇಲೆರಗಿದೆ. ಬಾಯಿಯಿಂದ ಕಚ್ಚಿಕೊಂಡು ಕಾಡಿನೊಳಗೆ ಎಳೆದೊಯ್ದಿದೆ. ಜವರಯ್ಯ ಅವರ ಜತೆ ಬಂದಿದ್ದ ಮಾರಿಮಾದಯ್ಯ ಹಾಗೂ ಶಿವಯ್ಯ ಇದನ್ನು ಕಂಡಿದ್ದು, ಮದ್ದೂರು ಕಾಲೋನಿಗೆ ಹೋಗಿ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುವ ವೇಳೆ ಹುಲಿ ಜವರಯ್ಯರನ್ನು 1 ಕಿ.ಮೀ. ದೂರದ ನಿಂಗನಹಳ್ಳಿ ಕಾರೇಮಾಳದ ಬಳಿಯ ಪೊದೆ ಬಳಿ ಎಳೆದೊಯ್ದು ಕೊಂದು ಹಾಕಿತ್ತು.
ಜವರಯ್ಯನ ಮುಖದ ಬಲಭಾಗಕ್ಕೆ ಹುಲಿ ಪಾದದಿಂದ ಗಿಬುರಿದ ಗುರುತು ಇದೆ. ಗುಪ್ತಾಂಗ ಮತ್ತು ಎಡಗಾಲಿನ ಪಾದದ ಮೇಲ್ಭಾಗವನ್ನು ತಿಂದು ಹಾಕಿದೆ.
ವಿಷಯ ತಿಳಿದು ಮದ್ದೂರು ಆರ್‌ಎಫ್‌ಒ ಪರಮೇಶ್, ಗುಂಡ್ಲುಪೇಟೆ ಪಿಎಸ್‌ಐ ಎಂ. ನಾಯಕ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜವರಯ್ಯನಿಗೆ ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಘಟನೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಭಯಗೊಂಡಿದ್ದಾರೆ.
ಮಾತಿನ ಚಕಮಕಿ: ಪೊಲೀಸರು ಕೆಲವರ ಸಹಾಯದೊಂದಿಗೆ ಶವವನ್ನು ಸ್ವಲ್ಪ ದೂರ ಹೊತ್ತು ತಂದಿದ್ದಾರೆ. ಈ ಸಂದರ್ಭದಲ್ಲಿ ಇದಕ್ಕೆ ಅಡ್ಡಿಪಡಿಸಿದ ಕೆಲವು ರೈತ ಮುಖಂಡರು ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಶವವನ್ನು ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಚನ್ನೇಶ್ ಶವ ಸಾಗಿಸಲು ಅವಕಾಶ ನೀಡಿ ಎಂದು ಕೇಳಿಕೊಂಡರೂ ಮಣಿಯದೇ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಕೆಲವು ಕಾಲ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪಟ್ಟು ಬಿಡದ ಪೊಲೀಸರು ಶವವನ್ನು ಅರಣ್ಯ ಇಲಾಖೆ ಜೀಪಿನಲ್ಲಿ ಹಾಕಿಕೊಂಡು ಕಾಡಿನ ಬಳಿಯಿರುವ ಸೋಲಾರ್ ತಂತಿ ಬೇಲಿವರೆಗೆ ತರುವಲ್ಲಿ ಸಫಲರಾದರು. ಅಲ್ಲಿ ಸೇರಿದ್ದ ನೂರಾರು ಜನ ನಂತರ ಪ್ರತಿಭಟನೆ ಆರಂಭಿಸಿದರು.
ತಾಪಂ ಸದಸ್ಯ ಕನ್ನೇಗಾಲಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬೇರಂಬಾಡಿ ರಾಜೇಶ್, ಆದಿವಾಸಿ ಜನಾಂಗದ ಮುಖಂಡ ಮುದ್ದಯ್ಯ ಹಾಗೂ ಮೃತನ ಅಳಿಯ ಲೋಕೇಶ್ ಈ ಸಂದರ್ಭದಲ್ಲಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.