ಪ್ರಧಾನ ಸುದ್ದಿ

ಬಿಜೆಪಿಗೆ ಬಿಎಸ್‌ಜೈ!

ಬಿಜೆಪಿಗೆ ಬಿಎಸ್‌ಜೈ!
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು. 16-
'ನಾವು ಮಾಡಿದ ತಪ್ಪಿನಿಂದಾಗಿ ಜನ ಅಪೇಕ್ಷೆ ಪಡದೇ ಇದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೀಗ ನಾವು ತಪ್ಪು ತಿದ್ದಿಕೊಂಡಿದ್ದೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಕೇವಲ 7-8 ಸ್ಥಾನಕ್ಕೆ ಇಳಿಸುತ್ತೇವೆ'. ವಿಧಾನಸಭೆಯಲ್ಲಿ ಮಂಗಳವಾರ ಮಾಜಿ ಮುಖ್ಯಮಂತ್ರಿ, ಕೆಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಆಡಿದ ಈ ಮಾತು ಅವರು ಬಿಜೆಪಿ ಜತೆ ಕೈಜೋಡಿಸಲು ಸಿದ್ಧವಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಹಿಂದಿನ ಸರ್ಕಾರದ ವಿರುದ್ಧ ಮಾಡಿದ ಟೀಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಕಾಂಗ್ರೆಸ್‌ಗೆ ಜನಾಭಿಪ್ರಾಯ ಸಿಕ್ಕಿಲ್ಲ. ಬಿಜೆಪಿಯ ಮತಗಳು ಹಂಚಿ ಹೋಗಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಯಿತು ಎಂದು ಹೇಳಿದಾಗ ಆಡಳಿತ ಪಕ್ಷದಿಂದ ಸಚಿವರು ಮತ್ತು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಜಗದೀಶ್ ಶೆಟ್ಟರ್ ಅವರ ಮಾತಿಗೆ ಅಡ್ಡಿಪಡಿಸಿದಾಗ ಯಡಿಯೂರಪ್ಪ ಅವರು ಮಧ್ಯೆ ಪ್ರವೇಶಿಸಿ ಶೆಟ್ಟರ್ ನೆರವಿಗೆ ಬಂದರು.
ನಮ್ಮ ತಪ್ಪಿನಿಂದಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದೀಗ ನಾವು ತಪ್ಪು ತಿದ್ದಿಕೊಂಡಿದ್ದೇವೆ. ಮತ್ತೆ ಕಾಂಗ್ರೆಸ್ ತನ್ನ ಶಕ್ತಿ ಕಳೆದುಕೊಳ್ಳುವಂತೆ ಮಾಡುತ್ತೇವೆ ಎಂದು ಹೇಳಿದ ಯಡಿಯೂರಪ್ಪ ಅವರು, ಮತ್ತೆ ಬಿಜೆಪಿ ಜತೆ ಹೋಗುವ ತಮ್ಮ ಭಾವನೆಯನ್ನು ತೆರೆದಿಟ್ಟರು.
ಯಡಿಯೂರಪ್ಪ ಅವರು ತಾವು ಬಿಜೆಪಿ ಜತೆ ಹೋಗುತ್ತೇನೆ ಎಂಬುದನ್ನು ಸ್ಪಷ್ಟವಾಗಿ ಹೇಳದೇ ಇದ್ದರೂ ಅವರ ಮಾತಿನ ಒಳಾರ್ಥ ಹಾಗೆಯೇ ಇತ್ತು. ಏಕೆಂದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಆ ಪಕ್ಷ ಪಡೆದ ಮತಗಳ ಪ್ರಮಾಣಕ್ಕಿಂತ ಬಿಜೆಪಿ ಮತಗಳು ಒಡೆದು ಹೋಗಿದ್ದೇ ಕಾರಣ ಎಂಬುದನ್ನು ಯಡಿಯೂರಪ್ಪ ಅವರು ಸಾಕಷ್ಟು ಬಾರಿ ಹೇಳಿದ್ದರು. ಈ ಮತಗಳು ಮತ್ತೆ ಒಂದಾದರೆ ಕಾಂಗ್ರೆಸ್ ಶಕ್ತಿ ಕುಸಿಯುವುದು ಖಚಿತ ಎಂಬುದು ಯಡಿಯೂರಪ್ಪ ಅವರ ಮಾತಿನ ಒಳಾರ್ಥ. ಹೀಗಾಗಿ ಕಾಂಗ್ರೆಸ್ ಕುರಿತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಬಿಜೆಪಿ ಜತೆ ತಮ್ಮ ನಂಟು ಮತ್ತೆ ಬೆಸೆಯುವುದನ್ನು ಅವರು ಒತ್ತಿ ಹೇಳಿದರು.

ಶಾಸಕರಿಗೆ ಅಚ್ಚರಿ
ಸದನದಲ್ಲಿ ಯಡಿಯೂರಪ್ಪ ಅವರು ಮಾಡಿದ ಘೋಷಣೆ ಒಂದು ಕ್ಷಣ ಬಿಜೆಪಿ ಶಾಸಕರಲ್ಲೂ ಅಚ್ಚರಿಗೆ ಕಾರಣವಾಯಿತು. ಇದುವರೆಗೆ ನಾನು ಬಿಜೆಪಿಗೆ ಅರ್ಜಿ ಹಾಕುವುದಿಲ್ಲ, ಆ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುವುದೂ ಇಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದ ಯಡಿಯೂರಪ್ಪ ಅವರು ಸದನದಲ್ಲಿ ತಪ್ಪು ತಿದ್ದಿಕೊಂಡಿದ್ದೇವೆ ಎನ್ನುವ ಮೂಲಕ ಬಿಜೆಪಿಗೆ ತಾವು ಸಮೀಪವಾಗುತ್ತಿರುವುದನ್ನು ಬಹಿರಂಗಗೊಳಿಸುತ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಹೀಗಾಗಿ ಬಿಜೆಪಿಯಲ್ಲಿರುವ ಯಡಿಯೂರಪ್ಪ ಅವರ ಆಪ್ತರು ತಮ್ಮ ನಾಯಕನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನ ತೀವ್ರಗೊಳಿಸಲು ದಾರಿ ಸುಗಮವಾಯಿತು ಎನ್ನುತ್ತಿದ್ದಾರೆ. ಅಲ್ಲದೆ, ಶೀಘ್ರವೇ ಈ ಕುರಿತು ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಬಗ್ಗೆಯೂ ಚಿಂತಿಸುತ್ತಿದ್ದಾರೆ.

ನಮ್ಮ ತಪ್ಪಿನಿಂದಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದೀಗ ನಾವು ತಪ್ಪು
ತಿದ್ದಿಕೊಂಡಿದ್ದೇವೆ. ಮತ್ತೆ ಕಾಂಗ್ರೆಸ್ ತನ್ನ ಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತೇವೆ.
- ಯಡಿಯೂರಪ್ಪ, ಕೆಜೆಪಿ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.